ಬುಧವಾರ, ಜೂನ್ 23, 2021
24 °C

ಐವತ್ತು ಕಲಾವಿದೆಯರ ಕಲಾ ಪ್ರದರ್ಶನ ‘ಆಕಾಂಕ್ಷ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುಂದರವಾದುದನ್ನು ಮಾಡಬೇಕೆನ್ನುವುದು ಮಾನವ ಸಹಜ  ಹಂಬಲ. ಇಲ್ಲಿ ಸ್ತ್ರೀ ಪುರುಷರೆನ್ನುವ ಭೇದವಿಲ್ಲ. ಈ ಹಂಬಲವೇ ಎಲ್ಲ ಸಾಧನೆಗಳಿಗೆ ಮೊದಲ ಹೆಜ್ಜೆ.ಮಹಿಳೆಯರ ಕರ್ತವ್ಯಗಳನ್ನು ನಿಭಾಯಿಸುವುದಷ್ಟೇ ನಮ್ಮ ಜೀವನವಲ್ಲ. ಅದರಕ್ಕಿಂತ ಹೆಚ್ಚಿನದ್ದೇನನ್ನಾದರೂ ಸಾಧಿಸಬೇಕು ಎನ್ನುವ ಆಕಾಂಕ್ಷೆ, ಬಯಕೆ ಎಲ್ಲ ಮಹಿಳೆಯರಲ್ಲೂ ಇದೆ. ಅದರಿಂದಾಗಿಯೇ ಅವರು ತಮ್ಮ ಶಕ್ತಿಯನ್ನೂ ಮೀರಿ ಏನನ್ನಾದರೂ ಸಾಧಿಸಬೇಕೆನ್ನುವ ಹಂಬಲ ಹೊತ್ತು ತಮ್ಮ ಕನಸುಗಳ ಕಡೆಗೆ ಹೆಜ್ಜೆ ಹಾಕುತ್ತಿರುತ್ತಾರೆ.ಮಹಿಳೆಯರು ತಮ್ಮ ಹಲವಾರು ಜವಾಬ್ದಾರಿಗಳ ನಿರ್ವಹಣೆಯ ಮಧ್ಯೆ ತಮ್ಮ ಕನಸುಗಳನ್ನು ಸಾಕಾರಗೊಳಿಸುವ ದಾರಿಯಲ್ಲಿ ಹೆಜ್ಜೆ ಹಾಕುವುದು ಸುಲಭದ ಕೆಲಸವಲ್ಲ. ಸಾಧನೆಯ ಕಡೆಗೆ ಹೆಜ್ಜೆ ಹಾಕುವಾಗ ಅವರ ನಮ್ರತೆ, ಸಹನೆ ಹಾಗೂ ದೈಹಿಕ ಶಕ್ತಿಯ ಮೇಲೆ ತುಂಬಾ ಒತ್ತಡ ಬೀಳುತ್ತದೆ. ಅವಸರದಿಂದ ಏನನ್ನಾದರೂ ಸಾಧಿಸುವುದು ಸಾಧ್ಯವಿಲ್ಲವಾದುದರಿಂದ ಆತ್ಮವಿಶ್ವಾಸವನ್ನು ಜಾಗೃತಗೊಳಿಸಿ ತಮ್ಮ ಕನಸಿನ ಕಡೆಗೆ ಪ್ರಯಾಣಿಸುವ ಸಾಧ್ಯತೆಯ ಪ್ರಯತ್ನವನ್ನು ಇಲ್ಲಿ ಕಾಣಬಹುದು.ಸ್ತ್ರೀ ಸಂವೇದನೆಯ ಹಿಂದೆ ಅಳೆಯಲಾಗದಷ್ಟು ಶಾಂತಿ ಮತ್ತು ಶಕ್ತಿಯ ಒರತೆ ಇದೆ. ಇದು ಮಹಿಳೆಯರಿಗೆ ದೈವದತ್ತವಾಗಿ ಬಂದಿರುವ ಶಕ್ತಿ. ಸಮಾಜವನ್ನು ಬದಲಾಯಿಸುವಲ್ಲಿ ಮಹಿಳೆಯರು ಬಹಳ ಸಕ್ರಿಯರಾಗಿದ್ದಾರೆ. ಸಾಹಿತ್ಯ, ಸಂಗೀತ, ನಾಟ್ಯ, ವೈದ್ಯಕೀಯ, ಕ್ರೀಡೆ, ಸಮಾಜ ಸೇವೆ ಮತ್ತು ಕಲೆ ಎಲ್ಲಾ ಕ್ಷೇತ್ರಗಳಲ್ಲೂ ಅವರ ಕೊಡುಗೆ ಅಪಾರವಾಗಿದೆ ಎನ್ನುವುದನ್ನು ಸುತ್ತಲೂ ನೋಡಬಹುದು.ಕಳೆದ ಅಕ್ಟೋಬರ್‌ ತಿಂಗಳಲ್ಲಿ ಒಂದು ಸಾಮೂಹಿಕ ಪ್ರದರ್ಶನದ ಸಂದರ್ಭದಲ್ಲಿ ಈಗಷ್ಟೇ ಬೆಳಕಿಗೆ ಬರುತ್ತಿರುವ ಹಾಗೂ ಕಲಾ ಪ್ರಪಂಚದಲ್ಲಿ ತಮ್ಮ ಮೊದಲ ಹೆಜ್ಜೆ ಇಡುವಾಗ ಬಹಳಷ್ಟು ತೊಂದರೆ, ಕಷ್ಟ ನಷ್ಟ ನೋವುಗಳನ್ನು ಅನುಭವಿಸಿರುವ ಶ್ಯಾಮಲಾ ರಮಾನಂದ, ಕವಿತಾ ಪ್ರಸನ್ನ ಮತ್ತು ಕೆ. ಉಷಾ ಪಿ. ರೈ ಈ ಮೂವರು ಕಲಾವಿದೆಯರ ಮನದಲ್ಲಿ ಮೂಡಿ ಸಾಕಾರಗೊಂಡಿರುವ ಕನಸು ‘ಆಕಾಂಕ್ಷ’, ತಮ್ಮಂತೇ ವರ್ಣಮಯ ಕನಸುಗಳನ್ನು ಹೊತ್ತ ಕಲಾಸಕ್ತ ಮಹಿಳೆಯರು ನಮ್ಮ ಮಧ್ಯೆ ಬಹಳಷ್ಟು ಸಂಖ್ಯೆಯಲ್ಲಿ ಇದ್ದಾರೆ.ಅವರು ತಮ್ಮ ಸಂತೋಷಕ್ಕೆ ಚಿತ್ರಗಳನ್ನು  ಬಿಡಿಸುತ್ತಿದ್ದಾರೆಯೇ ವಿನಹ ತಮ್ಮ ಕನಸುಗಳನ್ನು ಬೇರೆಯವರೊಡನೆ ಹಂಚಿಕೊಳ್ಳುವ ವೇದಿಕೆ ಸಿಗದೆ ಅನಾಮಧೇಯರಾಗಿಯೇ ಉಳಿದಿದ್ದಾರೆ. ಅಂಥ ಅಭಿಜಾತ ಕಲಾವಿದೆಯರನ್ನು ಹುಡುಕಿ, ಗುರುತಿಸಿ ಅವರೆಲ್ಲರನ್ನೂ ಒಂದೇ ವೇದಿಕೆಯಲ್ಲಿ ಸೇರಿಸುವ ಹಂಬಲದಿಂದ ಹುಟ್ಟು ಹಾಕಿದ ಕನಸಿನ ಕೂಸು ‘ಆಕಾಂಕ್ಷ’.ಅನಾಮದೇಯರಾಗಿರುವ ಐವತ್ತು ಜನ ಹಿರಿಯ ಕಿರಿಯ ಕಲಾವಿದೆಯರ ಕನಸು ಆಸೆ, ಆಕಾಂಕ್ಷೆಯನ್ನು ಗುರುತಿಸಿ ಅವರೆಲ್ಲರ ಶ್ರೀಮಂತ, ವರ್ಣಮಯ, ಸಹಜ ಸುಂದರ, ಕಲಾಭಿವ್ಯಕ್ತಿಯನ್ನು ಒಂದೇ ಕಡೆ ನೋಡಲು ಸಿಗುವಂತೆ ಮಾಡಿರುವುದು ‘ಆಕಾಂಕ್ಷ’ದ ಮೊದಲ ಪ್ರಯತ್ನ. ಇದು ಬೆಂಗಳೂರಿನಲ್ಲಿ ಮೊದಲನೇ ಬಾರಿಗೆ ನಡೆಯುತ್ತಿರುವ ಅಪರೂಪದ ಚಿತ್ರಕಲಾ ಪ್ರದರ್ಶನ.ಎಪ್ಪತ್ತು, ಎಂಭತ್ತು ವಯಸ್ಸಿನ ಹಿರಿಯ ಮಹಿಳೆಯರೂ ಇಲ್ಲಿ ಭಾಗವಹಿಸುತ್ತಿದ್ದಾರೆ ಎನ್ನುವುದು ‘ಆಕಾಂಕ್ಷ’ದ ಹೆಗ್ಗಳಿಕೆ. ಮಾ.8ರಂದು ಮಧ್ಯಾಹ್ನ 3ಕ್ಕೆ  ಡಾ.ಚೂಡಾಮಣಿ ನಂದಗೋಪಾಲ್‌ ಆಕಾಂಕ್ಷವನ್ನು ಉದ್ಘಾಟಿಸುವರು. ಅತಿಥಿಗಳಾಗಿ ಪುಷ್ಪಾ ದ್ರಾವಿಡ್‌, ಡಾ.ಜಯಾ ನರೇಂದ್ರ, ಶಶಿ ದೇಶಪಾಂಡೆ, ಅಶ್ವಿನಿ ನಾಚಪ್ಪ, ಸ್ಮಿತಾ ಚೆಲ್ಲೂರು ಭಾಗವಹಿಸುವರು.

ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು. ಸಮಯ: ಬೆಳಿಗ್ಗೆ 10.30ರಿಂದ ಸಂಜೆ 7.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.