ಶುಕ್ರವಾರ, ಫೆಬ್ರವರಿ 26, 2021
22 °C

ಐಸಿಸ್ ಅಭಯದ ಟೆಂಪಲ್ ಆಫ್ ಫಿಲೇ

ಡಿ.ಜಿ. ಮಲ್ಲಿಕಾರ್ಜುನ Updated:

ಅಕ್ಷರ ಗಾತ್ರ : | |

ಐಸಿಸ್ ಅಭಯದ ಟೆಂಪಲ್ ಆಫ್ ಫಿಲೇ

‘ಐಸಿಸ್‌’ ಎನ್ನುವ ಪದ ವಿಭಿನ್ನ ಭಾವನೆಗಳನ್ನು ಮೂಡಿಸುತ್ತದೆ. ಒಂದೆಡೆ ‘ಐಸಿಸ್‌’ ಎಂಬ ಪದ ಕೋಪ, ನೋವು, ಭಯ, ಆಕ್ರೋಶವನ್ನು ಉಂಟುಮಾಡುತ್ತದೆ. ಮತ್ತೊಂದೆಡೆ ‘ಐಸಿಸ್‌’ ಎಂಬ ಮಾತೃದೇವತೆ, ಜೀವದಾಯಿನಿಯ ರೂಪದಲ್ಲಿ ಪೊರೆಯುವ, ಸಲಹುವ, ಕಣ್ಣೊರೆಸುವ, ಅನ್ನಪೂರ್ಣೆಯಾಗಿದ್ದಾಳೆ. ಇದು ಮಮತಾ ಮೂರ್ತಿ ಐಸಿಸ್ ದೇವತೆಯ ನೆಲೆ ಫಿಲೇ ಕಥನ.ಗ್ರೀಕ್‌ನ ‘ಫಿಲೇ’ ಹಾಗೂ ಪುರಾತನ ಈಜಿಪ್ಷಿಯನ್ನರಲ್ಲಿ ಬಳಕೆಯಲ್ಲಿದ್ದ ‘ಪಿಲಾಕ್‌’– ಈ ಎರಡೂ ಪದಗಳಿಗೆ ಆದಿ, ಅಂತ್ಯ ಎಂಬ ಎರಡೂ ಅರ್ಥಗಳಿವೆ. ಈಜಿಪ್ಟ್‌ ಸಾಮಾಜ್ಯದ ತುದಿ ಅಥವಾ ಅಂತ್ಯ ಎಂಬ ಅರ್ಥದಲ್ಲಿ ಈ ಹೆಸರು ಬಂದಿದೆ. ಆದರೆ ಐತಿಹಾಸಿಕವಾದ ಈ ತಾಣದಲ್ಲಿ ಸೃಷ್ಟಿ ಮತ್ತು ಅಂತ್ಯ ಎಂಬ ಎರಡು ವಿರುದ್ಧಾರ್ಥಕ ಪದಗಳ ಅರ್ಥವನ್ನೂ ‘ಫಿಲೇ’ ಧ್ವನಿಸುತ್ತದೆ. 

‘ನೈಲ್‌ ನದಿಯ ಆಭರಣ’ ಎಂದೇ ಹೆಸರಾದ, ಈಜಿಪ್ಟ್‌ನ ಸೌಂದರ್ಯ ಮತ್ತು ಭವ್ಯತೆಯನ್ನು ಪ್ರತಿಬಿಂಬಿಸುವ ಫಿಲೇ–  ಫೆರೋಗಳ ಇತಿಹಾಸ, ರೋಮನ್ನರ ಆಡಳಿತ, ಆಶ್ರಿತರಾಗಿ ಬಂದ ಕ್ರಿಶ್ಚಿಯನ್ನರು ಹಾಗೂ ದಂಡೆತ್ತಿ ಬಂದ ಅರಬ್ಬರ ಕತೆಯನ್ನು ಹೇಳುತ್ತದೆ.ಈಜಿಪ್ಟ್‌ ದೇಶದ ಆಸ್ವಾನ್‌ ನಗರದ ದಂಡೆಯಿಂದ ಪುಟ್ಟ ದೋಣಿಯಲ್ಲಿ ನಡುಗಡ್ಡೆಗಳ ಮೇಲೆ ನಿಂತ ಅದ್ಭುತ ದೇವಾಲಯಗಳನ್ನು ನೋಡಲು ದೋಣಿಗಳಲ್ಲಿ ಹೋಗಬೇಕು. ನೈಲ್ ನದಿಯ ದಂಡೆಯಲ್ಲಿರುವ ಐಸಿಸ್ ದೇವತೆಯ ಈ ದೇವಸ್ಥಾನ ಸುಂದರವಾದುದು ಮತ್ತು ಬಹಳ ದೊಡ್ಡದಾದುದು. ದೋಣಿ ಇಳಿಯುತ್ತಿದ್ದಂತೆಯೇ ನುಬಿಯನ್ ಜನರು ವಿವಿಧ ಅಲಂಕಾರಿಕ ಸಾಮಗ್ರಿಗಳನ್ನು ಮಾರಾಟಕ್ಕಿಟ್ಟಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತಾರೆ. ವಿವಿಧ ಟೊಪ್ಪಿಗಳು, ಮರದ ಗೊಂಬೆಗಳು, ಸರ–ಓಲೆ, ಮುಖವಾಡಗಳು, ಮುಂತಾದ ವೈವಿಧ್ಯಮಯ ವಸ್ತುಗಳನ್ನು ಮಾರಾಟಕ್ಕಿಟ್ಟಿರುತ್ತಾರೆ.ನೆಲದ ಮೇಲೆ ಬಟ್ಟೆಯನ್ನು ಹಾಸಿ ಅದರ ಮೇಲೆ ಸಾಲು ಸಾಲಾಗಿ ಅವನ್ನೆಲ್ಲಾ ಜೋಡಿಸಿಟ್ಟು, ‘ವ್ಯಾಪಾರ ಮಾಡಿ’ ಎಂದು ಪುಸಲಾಯಿಸುತ್ತಾರೆ. ವಾಪಸಾಗುವಾಗ ದೋಣಿಯಲ್ಲಿಯೇ ಒಂದಿಬ್ಬರು ನುಬಿಯನ್ನರು ಬಂದು ಸರಗಳನ್ನು ಕೈತುಂಬಾ ಹಾಕಿಕೊಂಡು ಬಂದು ಅದರ ವರ್ಣನೆ ಮಾಡುತ್ತಾರೆ.ಐಸಿಸ್‌ ದೇವತೆಯ ಆರಾಧನೆ

ಫಿಲೇ ದೇವಾಲಯಗಳ ನಿರ್ಮಾಣ ಎರಡನೇ ಟಾಲೆಮಿಯಿಂದ ಪ್ರಾರಂಭಗೊಂಡು ಮುಂದೆ ರೋಮನ್‌ ಚಕ್ರವರ್ತಿಗಳಿಂದ ಪೂರ್ಣಗೊಂಡಿತು. ಪೂರ್ಣಗೊಳ್ಳಲು ತೆಗೆದುಕೊಂಡ ಅವಧಿ 800 ವರ್ಷಗಳು. ಈಜಿಫ್ಟ್‌ನವರು ಮಾತೃದೇವತೆಯಾಗಿ ಐಸಿಸ್‌ಳನ್ನು ಪೂಜಿಸಿದ್ದು, ಗ್ರೀಕ್‌, ರೋಮನ್ನರ ಕಾಲದಲ್ಲೂ ಮುಂದುವರೆಯಿತು. ಐಸಿಸ್‌ ದೇವತೆಗಾಗಿ ಗ್ರೀಕರು ಮತ್ತು ರೋಮನ್ನರು ಹಲವೆಡೆ ದೇವಾಲಯಗಳನ್ನು ಕಟ್ಟಿದ್ದಾರೆ. ಅವುಗಳಲ್ಲಿ ಪ್ರಧಾನವಾದದ್ದು ಫಿಲೇ ದೇವಾಲಯ.ಒಂದನೇ ಶತಮಾನದಲ್ಲಿ ಫಿಲೇಗೆ ಭೇಟಿ ನೀಡಿದ್ದ ರೋಮನ್‌ ಲೇಖಕ ಡಿಯೋಡೋರಸ್‌ ಸಿಕ್ಯುಲಸ್‌, ಐಸಿಸ್‌ ದೇವತೆಯ ಆರಾಧನೆ ಉತ್ತುಂಗದಲ್ಲಿದ್ದುದಾಗಿ ತಿಳಿಸಿದ್ದಾನೆ. ಇಡೀ ಈಜಿಪ್ಟ್‌ಗೆ ಐಸಿಸ್‌ ದೇವತೆ ಮಾತೃದೇವತೆಯಾಗಿ ಪ್ರಸಿದ್ಧಿ ಪಡೆದಿದ್ದು, ಆಕೆಯ ದೇಗುಲ ಅತ್ಯಂತ ಪವಿತ್ರವೆಂದು ಪರಿಗಣಿಸಲ್ಪಟ್ಟಿತ್ತು. ಫಿಲೇಗೆ ಬಂದು ಐಸಿಸ್‌ ದೇವತೆಯನ್ನು ಪೂಜಿಸಿದರೆ ಆರೋಗ್ಯ, ನೆಮ್ಮದಿ ಮತ್ತು ಐಶ್ವರ್ಯ ವೃದ್ಧಿಸುವುದೆಂಬ ನಂಬಿಕೆ ದೇಶವಾಸಿಗಳದ್ದಾಗಿತ್ತು.ಕ್ರಿ.ಶ. 460 ರ ಸುಮಾರಿಗೆ ಈ ಪವಿತ್ರ ಕ್ಷೇತ್ರದಲ್ಲಿನ ಆಚರಣೆಗಳಿಗೆ ತೆರೆಬಿತ್ತು. ಕ್ರಿಶ್ಚಿಯನ್ನರ ಆಗಮನದಿಂದ ದೇವಾಲಯಗಳು ಕ್ರಮೇಣ ಚರ್ಚ್‌ಗಳಾಗಿ ರೂಪಾಂತರಗೊಂಡವು. ಸುಮಾರು 12ನೇ ಶತಮಾನದಲ್ಲಿ ಸಲಾದ್ದೀನ್‌ ನೇತೃತ್ವದಲ್ಲಿ ಆಗಮಿಸಿದ ಅರಬ್ಬರು ಸ್ಥಳೀಯರನ್ನು ಸಂಪೂರ್ಣವಾಗಿ ಇಸ್ಲಾಮೀಕರಣಗೊಳಿಸಿದರು. 1799ರಲ್ಲಿ ನೆಪೋಲಿಯನ್‌ ತನ್ನ ಸೇನೆಯೊಂದಿಗೆ ಬಂದಾಗಲೂ ಫಿಲೇ ತನ್ನ ಅಂತಃಸತ್ವವನ್ನು ಉಳಿಸಿಕೊಂಡಿರುವುದು ದಾಖಲಾಗಿದೆ. ಮುಳುಗಿದ್ದ ದೇವಾಲಯ

ನಲವತ್ತು ವರ್ಷಗಳ ಹಿಂದೆ ‘ಟೆಂಪಲ್ ಆಫ್ ಫಿಲೇ’ ನೋಡಲು ಫಿಲೇ ದ್ವೀಪಕ್ಕೆ ದೋಣಿಯಲ್ಲೇ ಹೋದರೂ ನೀರಿನಲ್ಲಿ ಅರ್ಧಕ್ಕರ್ಧ ಮುಳುಗಿದ್ದ ದೇವಾಲಯ ಸಮುಚ್ಛಯವನ್ನು ನೋಡಿ ಹಿಂದಿರುಗಬೇಕಾಗಿತ್ತು. ಅದಕ್ಕೆ ಕಾರಣ 19ನೇ ಶತಮಾನದಲ್ಲಿ ನಿರ್ಮಾಣವಾದ ಆಸ್ವಾನ್‌ ಅಣೆಕಟ್ಟು.ಆಸ್ವಾನ್‌ನಲ್ಲಿ ಅಣೆಕಟ್ಟನ್ನು ನಿರ್ಮಿಸಲು ತೀರ್ಮಾನಿಸಿದಾಗ ಫಿಲೇ ಮುಳುಗಡೆಯ ಭೀತಿಯನ್ನು ಎದುರಿಸಿತು. ದೇವಾಲಯವನ್ನು ಸ್ಥಳಾಂತರಿಸಲು ಸಾಕಷ್ಟು ಚರ್ಚೆ ನಡೆದು ಕಡೆಗೆ ಯಥಾಸ್ಥಿತಿಯಲ್ಲಿ ಉಳಿಸಲಾಯಿತು. ಆದರೆ ಡ್ಯಾಂನಿಂದಾಗಿ ನೀರಿನ ಮಟ್ಟ ಏರುವುದರಿಂದ ವರ್ಷಕ್ಕೆ ಆರು ತಿಂಗಳು ದೇವಾಲಯವು ನೈಲ್‌ ನೀರಿನಲ್ಲಿ ಮುಳುಗಿರುವಂತಾಯಿತು. ಮುಂದೆ ಎರಡು ಬಾರಿ ಆಸ್ವಾನ್‌ ಅಣೆಕಟ್ಟನ್ನು ಎತ್ತರಿಸಿದ್ದರಿಂದ ‘ಟೆಂಪಲ್ ಆಫ್ ಫಿಲೇ’ ಸಂಪೂರ್ಣ ನೀರಿನಲ್ಲಿ ಮುಳುಗಿಹೋಯಿತು. ಆಗ ದೇವಾಲಯವನ್ನು ಸ್ಥಳಾಂತರಿಸದೆ ಅನ್ಯ ಮಾರ್ಗವಿರಲಿಲ್ಲ.1972ರಲ್ಲಿ ಅಗಿಲ್‌ಖಿಯ್ಯಾ ಎಂಬ ದ್ವೀಪಕ್ಕೆ ಫಿಲೇ ದೇವಾಲಯ ಸಮುಚ್ಚಯದ ಸ್ಥಳಾಂತರ ಕಾರ್ಯ ಪ್ರಾರಂಭವಾಯಿತು. ಸುಮಾರು ಎರಡೂವರೆ ವರ್ಷಗಳ ಕಾಲ ದೇವಾಲಯದ ಕಟ್ಟಡವನ್ನು 40 ಸಾವಿರ ತುಂಡುಗಳನ್ನಾಗಿಸಿ ದೋಣಿಗಳಲ್ಲಿ ಸಾಗಿಸಲಾಯಿತು. ಯುನೆಸ್ಕೋ ಮತ್ತು ಈಜಿಫ್ಷಿಯನ್‌ ಸರ್ಕಾರ ಜಂಟಿಯಾಗಿ ಸುಮಾರು ಹತ್ತು ವರ್ಷಗಳ ಕಾಲ ಶ್ರಮವಹಿಸಿ ದೇವಾಲಯದ ಪುನರ್‌ ನಿರ್ಮಾಣ ಕಾರ್ಯದ ಸಾಹಸವನ್ನು ನಡೆಸಿದವು.ಐಸಿಸ್‌ ದೇವತೆ

‘ರಾ’ ಎಂದು ಕರೆಯಲಾಗುವ ಸೂರ್ಯದೇವ ಈಜಿಪ್ಟ್‌ನ ಪ್ರಧಾನ ದೇವತೆ. ‘ರಾ’ನ ಮಕ್ಕಳಾದ ಷು ಮತ್ತು ಟೆಫ್ನುತ್ ದಾಂಪತ್ಯದ ಫಲವಾಗಿ ಭೂಮಿಯ ದೇವತೆ ‘ಸೆಬ್’ ಹಾಗೂ ಆಕಾಶದ ದೇವಿ ‘ನುತ್’ ಜನಿಸಿದರು. ಬೆಳೆದ ನಂತರ ಇವರ ದಾಂಪತ್ಯದಿಂದ ಈಜಿಪ್ಟ್‌ನ ಪ್ರಧಾನ ದೇವತೆಗಳು– ಗಂಡು ಮಕ್ಕಳಾದ ಒಸೈರಿಸ್ ಹಾಗೂ ಸೆತ್, ಹೆಣ್ಣುಮಕ್ಕಳಾದ ಐಸಿಸ್ ಮತ್ತು ನೆಫ್ತಿಸ್– ಹುಟ್ಟಿದರು. ಒಸೈರಿಸ್ ಐಸಿಸ್‌ಳನ್ನು ಮದುವೆಯಾದರೆ, ಸೆತ್ ನೆಫ್ತಿಸ್‌ಳನ್ನು ಮದುವೆಯಾದ. ಒಸೈರಿಸ್ ಮತ್ತು ಐಸಿಸ್‌ರ ಮಗನೇ ‘ಹೋರಸ್’.ಒಸೈರಿಸ್ ಸಿಂಹಾಸನವನ್ನು ಅಲಂಕರಿಸಿದ. ಜ್ಞಾನಿ ಮತ್ತು ಪ್ರಜಾನುರಾಗಿಯಾಗಿದ್ದ ಒಸೈರಿಸ್ ಬಗ್ಗೆ ಪ್ರಜೆಗಳು ಅತೀವ ಪ್ರೀತಿ ವಿಶ್ವಾಸವನ್ನು ಹೊಂದಿದ್ದರು. ಆದರೆ ಐಸಿಸ್‌ಳ ಸೋದರ ಸೆತ್ ಅಸೂಯಾಪರನಾಗಿದ್ದು ಸಿಂಹಾಸನವನ್ನು ದಕ್ಕಿಸಿಕೊಳ್ಳಲು ಸಂಚೊಂದನ್ನು ರೂಪಿಸಿದ. ಒಸೈರಿಸ್‌ನನ್ನು ಶವಪೆಟ್ಟಿಗೆಯಲ್ಲಿ ಮಲಗುವಂತೆ ಮಾಡಿ ಇತರ ಸಂಚುಕೋರರ ಸಹಾಯದಿಂದ ಅದರ ಮುಚ್ಚಳ ಹಾಕಿದ. ಬಲವಾದ ಮೊಳೆಗಳಿಂದ ಮುಚ್ಚಳವನ್ನು ಭದ್ರಪಡಿಸಿದ. ಉಸಿರಾಡಲು ಸಾಧ್ಯವಾಗದೆ ಒಸೈರಿಸ್ ಪ್ರಾಣ ಬಿಟ್ಟ. ನಂತರ ಸೆತ್ ಈ ಪೆಟ್ಟಿಗೆಯನ್ನು ತೆಗೆದುಕೊಂಡು ಹೋಗಿ ನೈಲ್ ನದಿಯಲ್ಲಿ ಎಸೆದ.ಗಂಡನ ಕೊಲೆಯ ವಿಷಯ ತಿಳಿದು ಐಸಿಸ್ ದುಃಖದಿಂದ ನೈಲ್ ನದಿಯಲ್ಲಿ ತೇಲಿಬಿಟ್ಟ ಶವದ ಪೆಟ್ಟಿಗೆಯನ್ನು ಹುಡುಕುತ್ತಾ ಹೊರಟಳು. ಐಸಿಸ್‌ಳಿಗೆ ಸಹಾಯಕಳಾಗಿ ಅವಳ ತಂಗಿ ನೆಫ್ತಿಸ್ ಬಂದಳು. ತನ್ನ ಗಂಡ ಸೆತ್ ಮಾಡಿದ್ದ ದುಷ್ಕೃತ್ಯ ಅವಳಿಗೆ ಹಿಡಿಸಿರಲಿಲ್ಲ. ಅಲ್ಲದೆ ನೆಫ್ತಿಸ್‌ಗೆ ಒಸೈರಿಸ್ ವಿಷಯದಲ್ಲಿ ಪ್ರೇಮವಿದ್ದು ಅವನಿಂದ ಅನೂಬಿಸ್ ಎಂಬ ಮಗನನ್ನೂ ಪಡೆದಿರುತ್ತಾಳೆ. ಆದರೆ ಸೆತ್‌ನ ಭಯದಿಂದ ಆ ಮಗುವನ್ನು ಬೇರೆಡೆ ಬಿಟ್ಟಿರುತ್ತಾಳೆ.ಐಸಿಸ್ ಮತ್ತು ನೆಫ್ತಿಸ್ ಒಸೈರಿಸ್ ಇರುವ ಶವದ ಪೆಟ್ಟಿಗೆಯನ್ನು ಪತ್ತೆ ಹಚ್ಚುತ್ತಾರೆ. ಪೆಟ್ಟಿಗೆಯನ್ನು ತೆರೆದು ಒಸೈರಿಸ್‌ನ ಮೃತದೇಹವನ್ನು ಕಂಡು ದುಃಖಿಸುತ್ತಾರೆ. ಇಬ್ಬರೂ ದೇವತೆಗಳಾದ್ದರಿಂದ ಮಂತ್ರಶಕ್ತಿಯಿಂದ ಒಸೈರಿಸ್‌ಗೆ ಜೀವ ಬರೆಸಲು ಪ್ರಯತ್ನಿಸುತ್ತಾರೆ. ಇವರಿಬ್ಬರ ಪ್ರಯತ್ನದಿಂದ ಒಸೈರಿಸ್‌ಗೆ ಕೆಲವು ಕ್ಷಣಗಳು ಮಾತ್ರ ಜೀವ ಬರುತ್ತದೆ. ಜೀವ ಪಡೆದ ಒಸೈರಿಸ್‌ನ ದೇಹದ ಸುತ್ತ ಐಸಿಸ್ ಸಂತೋಷದಿಂದ ಪಕ್ಷಿಯಾಗಿ ಹಾರಾಡುತ್ತಾಳೆ. ಒಸೈರಿಸ್ ಮತ್ತು ಐಸಿಸ್‌ರ ಅಂದಿನ ಸಂಗಮದ ಫಲವಾಗಿ ಐಸಿಸ್ ಗರ್ಭವತಿಯಾಗುತ್ತಾಳೆ. ಅವಳು ಹುಟ್ಟಿದ ತನ್ನ ಮಗನಿಗೆ ‘ಹೋರಸ್’ ಎಂದು ಹೆಸರಿಡುತ್ತಾಳೆ.ಇತ್ತ ಸೆತ್, ಒಸೈರಿಸ್‌ನ ದೇಹವನ್ನು ಹದಿನಾಲ್ಕು ತುಂಡುಗಳನ್ನಾಗಿ ಮಾಡಿ ಈಜಿಪ್ಟ್ ತುಂಬಾ ಹರಡುತ್ತಾನೆ. ಕೆಲವನ್ನು ನೈಲ್ ನದಿಯಲ್ಲಿ ಮುಳುಗಿಸುತ್ತಾನೆ. ಈ ವಿಷಯ ತಿಳಿದ ಐಸಿಸ್ ತನ್ನ ಮಗ ಹೋರಸ್, ತಂಗಿಯ ಮಗ ಅನೂಬಿಸ್ ಮತ್ತು ಥೋಥ್‌ರ ಸಹಾಯ ಪಡೆದು ತನ್ನ ಗಂಡನ ದೇಹದ ಭಾಗಗಳನ್ನು ಹುಡುಕಿ ಒಂದುಗೂಡಿಸುವಲ್ಲಿ ಯಶಸ್ವಿಯಾಗುತ್ತಾಳೆ. ಆದರೆ ಅವಳ ಮಂತ್ರಶಕ್ತಿಯ ಬಲದಿಂದ ಈ ಬಾರಿ ಒಸೈರಿಸ್‌ಗೆ ಜೀವ ಬರುವುದಿಲ್ಲ. ಶವಲೇಪನ ಕ್ರಿಯೆಯಿಂದ ಒಸೈರಿಸ್‌ನ ದೇಹವನ್ನು ಕಾಪಿಡಲಾಗುತ್ತದೆ.ಬೆಳೆದ ಹೋರಸ್‌, ಸೆತ್ ಮೇಲೆ ಯುದ್ಧ ಸಾರುತ್ತಾನೆ. ಘನಘೋರ ಯುದ್ಧ ನಡೆಯುತ್ತದೆ. ಮೊಸಳೆ ವೇಷ ಧರಿಸಿದ್ದ ಸೆತ್‌ನನ್ನು ತುಳಿದು ಅವನ ಕಣ್ಣುಗಳನ್ನು ಕೀಳುತ್ತಾನೆ. ಆ ಕಣ್ಣುಗಳನ್ನು ತೆಗೆದುಕೊಂಡು ಬಂದು ಶವಲೇಪನ ಕ್ರಿಯೆಯಿಂದ ಕಾಪಿಟ್ಟಿದ್ದ ಒಸೈರಿಸ್‌ನ ದೇಹದ ಬಾಯಿಯಲ್ಲಿ ಹಾಕುತ್ತಾನೆ. ಆಗ ಒಸೈರಿಸ್‌ಗೆ ಜೀವ ಬರುತ್ತದೆ!ಜೀವ ಬಂದ ಒಸೈರಿಸ್ ‘ಸತ್ತವರ ಲೋಕ’ದ ಒಡೆಯನಾಗುತ್ತಾನೆ. ಅಲ್ಲಿಯ ಧರ್ಮದೇವತೆಯಾಗುತ್ತಾನೆ. ಸಿಂಹಾಸನದ ಮೇಲೆ ಕುಳಿತು ಪ್ರತಿಯೊಂದು ಆತ್ಮದ ಶಿಕ್ಷೆಯನ್ನು ನಿಗದಿಪಡಿಸುವವನಾಗುತ್ತಾನೆ. ಅವನ ಅಕ್ಕಪಕ್ಕದಲ್ಲಿ ಅನೂಬಿಸ್ ಮತ್ತು ಹೋರಸ್ ನಿಲ್ಲುತ್ತಾರೆ. ಧರ್ಮಪೀಠದ ಮೇಲೆ ಕುಳಿತ ಒಸೈರಿಸ್‌ನ ಹಿಂದೆ ಐಸಿಸ್ ಹಾಗೂ ನೆಫ್ತಿಸ್ ನಿಂತಿರುತ್ತಾರೆ.ಉಚ್ಛ್ರಾಯ ಸ್ಥಿತಿ

ಟಾಲೆಮಿಗಳ ಕಾಲದಲ್ಲಿ ತನ್ನ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಫಿಲೇ, ಮೆಡಿಟರೇನಿಯನ್‌ ಜಲಾನಯನ ಪ್ರದೇಶದ ಯಾತ್ರಿಕರ ಆಕರ್ಷಣೀಯ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕ್ಷೇತ್ರವಾಗಿತ್ತು. ಕ್ರಿಶ್ಚಿಯನ್‌ ಯುಗದಲ್ಲೂ ಈ ಐಸಿಸ್‌ ದೇವಾಲಯ ಉಳಿಯಲು ಆಕೆಯ ಭಕ್ತವೃಂದವೇ ಕಾರಣ. ಕ್ರಿ.ಶ. 550 ರ ನಂತರ ಕ್ರಿಶ್ಚಿಯನ್ನರು ದೇವಾಲಯದ ಕೆಲ ಭಾಗಗಳನ್ನು ಚರ್ಚ್‌ ಆಗಿ ಮಾರ್ಪಡಿಸಿದರೂ ಮುಂದೆ ಅದು ಉಳಿಯಲಿಲ್ಲ.ದೋಣಿಯನ್ನಿಳಿದು ಪ್ರವೇಶಿಸುತ್ತಿದ್ದಂತೆಯೇ ಮೊದಲು ಸಿಗುವ ದೇವಾಲಯ ದಾಟುತ್ತಿದ್ದಂತೆಯೇ ವಿಶಾಲವಾದ ಹಾದಿ ಎದುರಾಗುತ್ತದೆ. ಒಂದು ಬದಿಯಲ್ಲಿ ಎತ್ತರದ ಕಲ್ಲಿನ ಸಾಲು ಕಂಬಗಳಿವೆ. ಮುಂದೆ ಸಾಗಿದಂತೆ ಮಹಾದ್ವಾರವು ಎದುರಾಗುತ್ತದೆ. ಅದುವೇ ಐಸಿಸ್‌ ದೇವಾಲಯ. ಹನ್ನೆರಡನೇ ಟಾಲೆಮಿ ನಿರ್ಮಿಸಿದ್ದ ಈ ಮಹಾದ್ವಾರದ ಮೇಲೆ ರಾಜನು ಶತ್ರುಗಳನ್ನು ನಾಶ ಮಾಡಿದ ಚಿತ್ರಣಗಳಿವೆ. ಆನಂತರ ಸಿಗುವ ಆವರಣದ ಸುತ್ತ ಬೃಹತ್‌ ಕಂಬಗಳಿವೆ. ಹಿಂಬದಿಯ ಗೋಡೆಯಲ್ಲಿ ಐಸಿಸ್‌ ದೇವತೆ ಹೋರಸ್‌ಗೆ ಜನ್ಮ ನೀಡುವ ಸಾಕಿ ಸಲಹುವ ಚಿತ್ರಣಗಳಿವೆ. ಕೆಲವೆಡೆ ದಾಳಿಕೋರರಿಂದ ಕೆತ್ತನೆಯು ಮುಕ್ಕಾಗಿದೆ. ಮುಂದೆ ಇನ್ನೊಂದು ದ್ವಾರವಿದ್ದು, ಅದನ್ನು ದಾಟಿದಾಗ ಮುಖ್ಯ ದೇವಾಲಯ ಸಿಗುತ್ತದೆ. ಅದನ್ನು ಮೂರನೇ ಟಾಲೆಮಿ (ಕ್ರಿ.ಪೂ 246– 221) ನಿರ್ಮಿಸಿದನೆನ್ನಲಾಗಿದೆ.ಈ ದೇವಾಲಯ ಸಮುಚ್ಛಯದಲ್ಲಿ ಹಾಥೋರ್‌ ದೇವತೆಯ ದೇವಾಲಯ, ರೋಮನ್‌ ದೊರೆ ಟ್ರಾಜನ್‌ ನಿರ್ಮಿಸಿದ ವಿಶಿಷ್ಟ ಆಕೃತಿಯ ದೇವಾಲಯ ಕೂಡ ಇವೆ.ಸೂರ್ಯಾಸ್ತದ ಸಮಯದಲ್ಲಿ ನೈಲ್‌ ನದಿಯನ್ನು ಸುತ್ತುವರಿದ ‘ಟೆಂಪಲ್ ಆಫ್ ಫಿಲೇ’ ನೋಡಲು ಬಲು ಸುಂದರ, ಅದಕ್ಕಾಗಿಯೇ ಇದನ್ನು ‘ಜ್ಯುವೆಲ್‌ ಆಫ್‌ ದಿ ನೈಲ್‌’ ಎಂದು ಕರೆದಿರಬೇಕು. ಸೂರ್ಯ ಮುಳುಗಿದ ಮೇಲೆ ಸೌಂಡ್‌ ಅಂಡ್‌ ಲೈಟ್‌ ಶೋ ನೋಡುವುದು ಇನ್ನೊಂದು ಅವಿಸ್ಮರಣೀಯ ಅನುಭವ. ನೆರಳು ಬೆಳಕಿನಲ್ಲಿ ಸಂಗೀತದೊಡನೆ ಇತಿಹಾಸ ಕಥನ ಸೇರಿ ಕಾಲಗತಿಯಲ್ಲಿ ಗ್ರೀಕ್‌ ರೋಮನ್ನರ ಕಾಲದಲ್ಲಿ ಚಲಿಸಿದಂತಹ ಅನುಭವವಾಗುತ್ತದೆ. ಕೆಲ ಸಹಸ್ರಮಾನಗಳ ಕಾಲ ದಂಡಯಾತ್ರೆಗಳನ್ನು, ಸೈನಿಕರನ್ನು, ಶಿಲ್ಪಿಗಳನ್ನು, ಅಣೆಕಟ್ಟನ್ನು ನಿರ್ಮಿಸುವವರನ್ನು ಕಂಡ ನೆಲದಲ್ಲಿ ಈಗ ನೂರಾರು, ಸಾವಿರಾರು ಪ್ರವಾಸಿಗರು ಕಂಡುಬರುತ್ತಾರೆ. ನಿಸರ್ಗದ ಸೌಂದರ್ಯದೊಂದಿಗೆ ಇಲ್ಲಿನ ಅಸಂಖ್ಯ ಸ್ಮಾರಕಗಳನ್ನು ಬೆರಗುಗಣ್ಣಿನಿಂದ ನೋಡುತ್ತಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.