ಶುಕ್ರವಾರ, ಮೇ 7, 2021
27 °C
ಮಲ್ಲೇಶ್ವರದ ಆಘಾತಕಾರಿ ಪ್ರಕರಣದ ಬೆನ್ನಲ್ಲೇ ಮತ್ತೊಂದು ಘಟನೆ

ಒಂದೂವರೆ ವರ್ಷದಿಂದ ತಂದೆ ಕಾಲಿಗೆ ಕೋಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಒಂದೂವರೆ ವರ್ಷದಿಂದ ತಂದೆ ಕಾಲಿಗೆ ಕೋಳ

ಬೆಂಗಳೂರು: ಮಲ್ಲೇಶ್ವರದಲ್ಲಿ ಯುವತಿ ಹೇಮಾವತಿ ಎಂಬುವರನ್ನು ನಾಲ್ಕು ವರ್ಷಗಳಿಂದ ಗೃಹಬಂಧನದಲ್ಲಿರಿಸಿದ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಅಂತಹುದೇ ಮತ್ತೊಂದು ಆಘಾತಕಾರಿ ಘಟನೆ ಜೆ.ಪಿ.ನಗರದಲ್ಲಿ ಬಹಿರಂಗಗೊಂಡಿದೆ. ಒಂದೂವರೆ ವರ್ಷದಿಂದ ಮಗ- ಸೊಸೆಯಿಂದ ಗೃಹಬಂಧನಕ್ಕೆ ಒಳಗಾಗಿದ್ದ ಅನಂತಯ್ಯ ಶೆಟ್ಟಿ (93) ಎಂಬುವರನ್ನು ಪೊಲೀಸರು ಬುಧವಾರ ರಕ್ಷಿಸಿದ್ದಾರೆ.ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ ಬುಧವಾರ ಬೆಳಿಗ್ಗೆ ಈ ಬಗ್ಗೆ ವರದಿ ಪ್ರಸಾರವಾಗುತ್ತಿದ್ದಂತೆ, ದಕ್ಷಿಣ ವಿಭಾಗದ ಡಿಸಿಪಿ ಎಚ್.ಎಸ್.ರೇವಣ್ಣ ನೇತೃತ್ವದಲ್ಲಿ ಸಿಬ್ಬಂದಿ ಜೆ.ಪಿ.ನಗರ ಸಮೀಪದ ಶಾಕಾಂಬರಿನಗರದಲ್ಲಿರುವ ಮನೆಗೆ ತೆರಳಿದರು. ಮೊದಲು ಮಗ-ಸೊಸೆಯ ಹೇಳಿಕೆ ಪಡೆದ ಸಿಬ್ಬಂದಿ, ನಂತರ ಅನಂತಯ್ಯಶೆಟ್ಟಿ ಅವರನ್ನು ಅಂಬುಲೆನ್ಸ್‌ನಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋದರು. ಬಳಿಕ ಅವರನ್ನು ಜಯನಗರದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಯಿತು.`ಮೂಲತಃ ಕನಕಪುರದ ಮರಳವಾಡಿ ಗ್ರಾಮದವರಾದ ಅನಂತಯ್ಯ ಅವರಿಗೆ ನಾಲ್ವರು ಪುತ್ರರು ಮತ್ತು ಇಬ್ಬರು ಪುತ್ರಿಯರು ಇದ್ದಾರೆ. ಈಗ ಮೂರನೇ ಪುತ್ರ ಸುರೇಶ್ ಮತ್ತು ಸೊಸೆ ಕಲ್ಪನಾ ಜೊತೆ ನೆಲೆಸಿದ್ದಾರೆ. `ಮನೆಯೊಳಗೆ ಮಲಮೂತ್ರ ಮಾಡುತ್ತಾರೆ, ಎಲ್ಲೆಂದರಲ್ಲಿ ಉಗುಳುತ್ತಾರೆ' ಎಂಬ ಕಾರಣದಿಂದ ಮಗ- ಸೊಸೆ ಅವರನ್ನು ಮಹಡಿಯಲ್ಲಿರುವ ನೀರಿನ ಟ್ಯಾಂಕರ್ ಕೆಳಗೆ ಶೆಡ್ ನಿರ್ಮಿಸಿ ಸರಪಳಿಯಿಂದ ಕಟ್ಟಿ ಹಾಕಿದ್ದಾರೆ. ಹಳೆಯ ಹಾಸಿಗೆ, ತೂತು ಬಿದ್ದಿರುವ ಹೊದಿಕೆ, ಪ್ರತ್ಯೇಕ ತಟ್ಟೆ ಬಿಟ್ಟರೆ ಈಗ ಅವರ ಪಾಲಿಗೆ ಏನೂ ಇಲ್ಲ' ಎಂದು ಸ್ಥಳೀಯರು ಮರುಕ ವ್ಯಕ್ತಪಡಿಸಿದರು.`35 ವರ್ಷಗಳ ಹಿಂದೆ ನಗರಕ್ಕೆ ಬಂದ ಅನಂತಯ್ಯ ಅವರು ಶಾಕಾಂಬರಿನಗರದಲ್ಲಿ ನಿವೇಶನ ಖರೀದಿಸಿ, ಮನೆ ಕಟ್ಟಿಸಿದರು. ನಂತರ ಕಲಾಸಿಪಾಳ್ಯದಲ್ಲಿ ದಿನಸಿ ಅಂಗಡಿ ತೆರೆದ ಅವರಿಗೆ ಉತ್ತಮ ಆದಾಯ ಬರುತ್ತಿತ್ತು. ಪುತ್ರಿಯರನ್ನು ಮದುವೆ ಮಾಡಿದ ನಂತರ ಮನೆ ಸಮೀಪವೇ ಎಸ್‌ಎಲ್‌ವಿ ಸ್ಟೋರ್ಸ್‌ ಎಂಬ ಹೆಸರಿನಲ್ಲಿ ಮತ್ತೊಂದು ದಿನಸಿ ಅಂಗಡಿ ತೆರೆದರು. ಬಳಿಕ ಈ ಅಂಗಡಿಯ ಜವಾಬ್ದಾರಿಯನ್ನು ಮಗ ಸುರೇಶ್‌ಗೆ ವಹಿಸಿದ್ದರು.

2005ರಲ್ಲಿ ಪತ್ನಿ ನಾಗರತ್ನ ಸಾವನ್ನಪ್ಪಿದ ನಂತರ ಖಿನ್ನತೆಗೆ ಒಳಗಾದ ಅನಂತಯ್ಯಶೆಟ್ಟಿ, ಬೀದಿ ಬೀದಿ ಅಲೆದು ಊಟ ಮತ್ತು ಔಷಧದ ಖರ್ಚಿಗಾಗಿ ಭಿಕ್ಷೆ ಬೇಡುತ್ತಿದ್ದರು' ಎಂದು ಸ್ಥಳೀಯರಾದ ಕೃಷ್ಣಪ್ಪ ಮತ್ತು ನಾಗರತ್ನ ದಂಪತಿ ತಿಳಿಸಿದರು.`ಅನಂತಯ್ಯ ಅವರ ಪರಿಸ್ಥಿತಿಯನ್ನು ಕಂಡು ಸಮೀಪದ ಬ್ಯಾಂಕ್ ಕಾಲೊನಿ ನಿವಾಸಿಗಳು, ಮಗ-ಸೊಸೆಯ ಒಪ್ಪಿಗೆ ಪಡೆದು ಅವರನ್ನು ವೃದ್ಧಾಶ್ರಮಕ್ಕೆ ಸೇರಿಸಲು ನಿರ್ಧರಿಸಿದ್ದರು. ಆದರೆ, `ತಂದೆ ನಮ್ಮ ಗೌರವಕ್ಕೆ ಧಕ್ಕೆ ತರುತ್ತಿದ್ದಾರೆ' ಎಂದು ಭಾವಿಸಿದ ಸುರೇಶ್, ಮಹಡಿಯಲ್ಲಿ ಅವರನ್ನು ಸರಪಳಿಯಿಂದ ಕಟ್ಟಿ ಹಾಕಿದ್ದರು. ನಂತರ ಅವರಿಗೆ ಸರಿಯಾದ ಸಮಯಕ್ಕೆ ಊಟ, ಔಷಧ ನೀಡದೆ ಅಮಾನವೀಯವಾಗಿ ನೋಡಿಕೊಂಡಿದ್ದಾರೆ' ಎಂದು ಅವರು ಆರೋಪಿಸಿದರು.`ಸರಪಳಿ ಕಟ್ಟಿದ್ದರಿಂದ ಅವರ ಕಾಲು ಸ್ವಾಸ್ಥ್ಯ ಕಳೆದುಕೊಂಡಿದ್ದು, ರಕ್ತ ಹೆಪ್ಪುಗಟ್ಟಿದೆ. ಅವರ ಮೇಲೆ ಯಾವುದೇ ರೀತಿಯ ಹಲ್ಲೆ ನಡೆದಿಲ್ಲ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ರಕ್ತದ ಒತ್ತಡ ಸಹಜ ಸ್ಥಿತಿಯಲ್ಲಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ಅವರನ್ನು ಪೊಲೀಸರೇ ಆಸ್ಪತ್ರೆಗೆ ದಾಖಲಿಸಿದ್ದು, ಈವರೆಗೂ ಅವರ ಮಕ್ಕಳಾಗಲೀ, ಸಂಬಂಧಿಕರಾಗಲೀ ಆಸ್ಪತ್ರೆ ಬಳಿ ಬಂದಿಲ್ಲ' ಎಂದು ಜಯನಗರದ ಸರ್ಕಾರಿ ಆಸ್ಪತ್ರೆಯ ವೈದ್ಯರು ಹೇಳಿದರು.`1990ರಿಂದಲೇ ಪತ್ನಿ ಮತ್ತು ಮಕ್ಕಳೊಂದಿಗೆ ಪ್ರತ್ಯೇಕ ಮನೆಯಲ್ಲಿ ವಾಸವಾಗಿದ್ದೇನೆ. ಆರಂಭದಲ್ಲಿ ಮನೆಗೆ ಬರುತ್ತಿದ್ದ ತಂದೆ, ತಮ್ಮನ ಒತ್ತಡದಿಂದ ಮನೆಗೆ ಬರುವುದನ್ನು ನಿಲ್ಲಿಸಿದರು. ತಮ್ಮ ಇಷ್ಟೊಂದು ಅಮಾನವೀಯವಾಗಿ ತಂದೆಯನ್ನು ನೋಡಿಕೊಳ್ಳುತ್ತಾನೆ ಎಂದು ಭಾವಿಸಿರಲಿಲ್ಲ. ಈ ಬಗ್ಗೆ ಸಹೋದರಿಯರೊಂದಿಗೆ ಚರ್ಚಿಸಿ ತಂದೆಯ ಆರೈಕೆಯ ಬಗ್ಗೆ ನಿರ್ಧರಿಸುತ್ತೇವೆ' ಎಂದು ಅನಂತಯ್ಯಶೆಟ್ಟಿ ಅವರ ಮೊದಲ ಪುತ್ರ ವೆಂಕಟೇಶ್ ತಿಳಿಸಿದರು.

ಮಗ-ಸೊಸೆ ಬಂಧನ, ಬಿಡುಗಡೆ

`ವೃದ್ಧರೊಬ್ಬರನ್ನು ಗೃಹಬಂಧನದಲ್ಲಿಟ್ಟಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂತು. ಮಧ್ಯಾಹ್ನ 12.30ರ ಸುಮಾರಿಗೆ ಆ ಮನೆಗೆ ತೆರಳಿದಾಗ ಅನಂತಯ್ಯಶೆಟ್ಟಿ ಅವರ ಕಾಲಿಗೆ ಸರಪಳಿ ಹಾಕಿದ್ದರು. ಸರಪಳಿ ತೆಗೆದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.ಗೃಹಬಂಧನದಲ್ಲಿರಿಸಿದ ಆರೋಪದ ಮೇಲೆ (ಐಪಿಸಿ 342) ಅನಂತಯ್ಯಶೆಟ್ಟಿ ಅವರ ಮಗ ಸುರೇಶ್ ಮತ್ತು ಸೊಸೆ ಕಲ್ಪನಾ ಅವರನ್ನು ಬಂಧಿಸಿ ಐದನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನಂತರ ಅವರು ಜಾಮೀನಿನ ಮೇಲೆ ಬಿಡುಗಡೆಯಾದರು.

- ಎಚ್.ಎಸ್.ರೇವಣ್ಣ,  ಡಿಸಿಪಿ, ದಕ್ಷಿಣ ವಿಭಾಗ .

ಊರಿಗೆ ವಾಪಸ್ ಹೋಗುತ್ತೇನೆ

ನನಗೆ ವೆಂಕಟೇಶ್ ಗುಪ್ತ, ಸನತ್‌ಕುಮಾರ್, ಸುರೇಶ್ ಕುಮಾರ್, ಗಿರೀಶ್ ಎಂಬ ನಾಲ್ವರು ಗಂಡು ಮಕ್ಕಳು ಹಾಗೂ ಗಿರಿಜಾ ಮತ್ತು ಅನಿತಾ ಎಂಬ ಹೆಣ್ಣುಮಕ್ಕಳಿದ್ದಾರೆ. ಮದುವೆಯಾದ ಬಳಿಕ ಪ್ರತಿಯೊಬ್ಬರು ಪ್ರತ್ಯೇಕ ಮನೆ ಮಾಡಿಕೊಂಡು ವಾಸವಾಗಿದ್ದಾರೆ. ನಾನು, ಮಗ ಸುರೇಶ್ ಮತ್ತು ಸೊಸೆ ಕಲ್ಪನಾ ಜತೆ ಇದ್ದೇನೆ.

ಮಹಡಿಯಲ್ಲಿರುವ ನೀರಿನ ಟ್ಯಾಂಕರ್ ಕೆಳಗೆ ಕಾಲಿಗೆ ಸರಪಳಿ ಹಾಕಿ ಕಟ್ಟಿ ಹಾಕುತ್ತಿದ್ದ ದಂಪತಿ, ಮಳೆ ಬಂದಾಗ ಮನೆಯೊಳಗೆ ಕರೆದುಕೊಂಡು ಹೋಗುತ್ತಿದ್ದರು. ನಾನು ಗುಣಮುಖನಾದ ಬಳಿಕ ಮತ್ತೆ ಮರಳವಾಡಿಗೆ ವಾಪಸ್ ಹೋಗುತ್ತೇನೆ.

- ಅನಂತಯ್ಯಶೆಟ್ಟಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.