ಶುಕ್ರವಾರ, ಜನವರಿ 24, 2020
22 °C
ಇಂದು ಬ್ಯಾಂಕ್‌ಗಳ ಮಹತ್ವದ ಸಭೆ

ಒಂದೇ ಸ್ಥಳದಲ್ಲಿ ಬಹು ಬ್ಯಾಂಕ್‌ ಎಟಿಎಂ?

ಪ್ರಜಾವಾಣಿ ವಾರ್ತೆ / ವಿಶೇಷ ವರದಿ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಕಾರ್ಪೊರೇಷನ್‌ ವೃತ್ತದ ಎಟಿಎಂನಲ್ಲಿ ಮಹಿಳೆಯೊಬ್ಬರ ಮೇಲಿನ ಹಲ್ಲೆ ಪ್ರಕರಣ ಹಾಗೂ ಸರ್ಕಾರ ಚಾಟಿ ಬೀಸಿದ ಬಳಿಕ ಬ್ಯಾಂಕ್‌ಗಳು ಸುರಕ್ಷತಾ ಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡಲು ಮುಂದಾಗಿವೆ. ಸುರಕ್ಷತೆ ಹಾಗೂ ಕಡಿಮೆ  ಖರ್ಚಿನಲ್ಲಿ ಸೇವೆ ಒದಗಿಸಲು ಒಂದೇ ಸ್ಥಳದಲ್ಲಿ ಹಲವು ಬ್ಯಾಂಕ್‌ಗಳ ಎಟಿಎಂಗಳನ್ನು ಒಂದೇ ಸ್ಥಳದಲ್ಲಿ ಸ್ಥಾಪಿಸಲು ಮುಂದಾಗಿವೆ.ನಗರದಲ್ಲಿರುವ ಎಲ್ಲ ಎಟಿಎಂಗಳಿಗೆ ತರಬೇತಿ ಪಡೆದ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸುವುದು ಬ್ಯಾಂಕ್‌ಗಳಿಗೆ ಸವಾಲಾಗಿದೆ. ಒಂದು ಕಡೆಯಲ್ಲಿ ಸಿಬ್ಬಂದಿ ಸಿಗುತ್ತಿಲ್ಲ. ಮತ್ತೊಂದೆಡೆ ತರಬೇತಿ ಕೊರತೆಯ ಸಮಸ್ಯೆ. ಜೊತೆಗೆ ದುಬಾರಿ ಬಾಡಿಗೆ. ಈ  ಹಿನ್ನೆಲೆಯಲ್ಲಿ ಒಂದೇ ಸ್ಥಳದಲ್ಲಿ ಬಹು ಬ್ಯಾಂಕ್‌ಗಳ ಎಟಿಎಂಗಳು ಇದ್ದರೆ ಗ್ರಾಹಕರಿಗೂ ಲಾಭ ಆಗುತ್ತದೆ.‘ಗ್ರಾಹಕರಿಗೆ ಹೆಚ್ಚಿನ ಭದ್ರತೆ ಒದಗಿಸಲು ಮತ್ತು ಈಗಿರುವ ಭದ್ರತಾ ಸಿಬ್ಬಂದಿ­ಗಳನ್ನೇ ಸಮರ್ಥವಾಗಿ ಬಳಸಿಕೊಳ್ಳಲು ಬ್ಯಾಂಕುಗಳ ನಡುವೆ ಮಾತುಕತೆ ನಡೆ­ಯುತ್ತಿದೆ. ಈ ಸಾಧ್ಯತೆ ಬಗ್ಗೆ ಪರಿಶೀಲಿಸಲು ಬ್ಯಾಂಕುಗಳ ಪ್ರತಿನಿ­ಧಿಗಳು ಡಿ. 2ಕೆ ಸಭೆ ನಡೆಸಲಿ­ದ್ದಾರೆ’ ಎಂದು ಸ್ಟೇಟ್‌ ಬ್ಯಾಂಕ್‌ ಮೈಸೂರಿನ ಪ್ರಧಾನ ವ್ಯವಸ್ಥಾಪಕ  ಎನ್‌.ಪಾರ್ಥ­ಸಾರಥಿ ಹೇಳಿದರು.‘ವೆಚ್ಚ ತಗ್ಗಿಸುವ ನಿಟ್ಟಿನಲ್ಲಿ ಯೋಚಿಸುವುದಾದರೆ 2–3 ಬ್ಯಾಂಕ್‌ಗಳು ಜತೆ­ಗೂಡಿ ಒಂದೇ ಜಾಗದಲ್ಲಿ ಎಟಿಎಂ ಯಂತ್ರಗಳನ್ನು ಅಳವಡಿಸಬಹುದು. ಇದರಿಂದ ಜಾಗದ ಬಾಡಿಗೆ, ವಿದ್ಯುತ್‌, ಎ.ಸಿ, ಸ್ವಚ್ಛತೆ, ಭದ್ರತೆ, ನಿರ್ವಹಣೆ ಎಲ್ಲದರ ಮೇಲಿನ ವೆಚ್ಚವೂ ಹಂಚಿಕೆಯಾಗುತ್ತದೆ. ಆದರೆ, ಬ್ಯಾಂಕ್‌ಗಳ ನಡುವೆಯೂ ಸ್ಪರ್ಧೆ ಇರುವುದರಿಂದ ಈ ವಿಚಾರದಲ್ಲಿ ಸಹಮತ ವ್ಯಕ್ತವಾಗುತ್ತಿಲ್ಲ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.ಸಿಸಿಟಿವಿಗೆ ಪ್ರತ್ಯೇಕ ಟೆಂಡರ್‌: ಬ್ಯಾಂಕ್‌ ಸೂಚಿಸಿದ ಜಾಗದಲ್ಲಿ ‘ಎಟಿಎಂ’ ಅಳ­ವಡಿಸುವ ಜವಾಬ್ದಾರಿ ಯಂತ್ರ ಪೂರೈಸಿದ ಕಂಪೆನಿಯದೇ ಆಗಿರುತ್ತದೆ. ಯಂತ್ರದ ಅಳವಡಿಕೆಗೆ ಸರಾಸರಿ ₨50 ಸಾವಿರದವರೆಗೂ ವೆಚ್ಚವಾ­ಗುತ್ತದೆ. ಸಿಸಿಟಿವಿ  ಕ್ಯಾಮೆರಾ, ಅಲಾರಂ ಅಳವಡಿಕೆ ಸೇರಿ ಹೆಚ್ಚಿನ ಭದ್ರತೆ ಒದಗಿಸಲು ಮತ್ತು ನಿರ್ವ­ಹಣೆಗೆ ಹೆಚ್ಚುವರಿ ಮೊತ್ತ ಭರಿಸಬೇಕಾ­ಗುತ್ತದೆ. ಇದಕ್ಕೆ ಪ್ರತ್ಯೇಕ ಟೆಂಡರ್‌ ಕರೆಯ­ಬೇಕಾಗುತ್ತದೆ. ‘ಎಟಿಎಂ’ ಸ್ಥಾಪನೆ  ಮತ್ತು ನಿರ್ವಹಣೆಯನ್ನು ಖಾಸಗಿ ಸಂಸ್ಥೆಗಳಿಗೆ ನೀಡಲಾಗುತ್ತದೆ’ ಎಂದು ಎನ್‌.ಪಾರ್ಥ­ಸಾರಥಿ ವಿವರಿಸಿದರು.‘ಪ್ರಸಕ್ತ ಸಾಲಿನ ಜುಲೈ 30ರವರೆಗಿನ ಅಂಕಿ ಅಂಶಗಳ ಪ್ರಕಾರ, ದೇಶದಾದ್ಯಂತ ಸ್ಟೇಟ್‌ ಬ್ಯಾಂಕ್‌ ಸಮೂಹ (ಎಸ್‌ಬಿಐ) ಒಟ್ಟು 31,750 ‘ಎಟಿಎಂ’ಗಳನ್ನು ಹೊಂದಿದೆ. ಇದರಲ್ಲಿ  859 ‘ಎಟಿಎಂ’­ಗಳು ‘ಎಸ್‌ಬಿಎಂ’­ಗೆ ಸೇರಿವೆ. ಕಾಲೇಜು ಶುಲ್ಕ ಪಾವತಿ, ಸ್ಪರ್ಧಾತ್ಮಕ ಪರೀಕ್ಷೆಯ ಅರ್ಜಿ ಶುಲ್ಕ ಸ್ವೀಕಾರ, ಕಾರ್ಡ್‌ ಬಳಸಿ ಖಾತೆಗೆ ಹಣ ವರ್ಗಾವಣೆ (ಸಿ2ಎ), ಮೊಬೈಲ್‌ ರಿಚಾರ್ಜ್‌ ಸೇರಿದಂತೆ ಇನ್ನೂ ಹಲವು ಮೌಲ್ಯವರ್ಧಿತ ಸೇವೆಗ­ಳನ್ನೂ ‘ಎಟಿಎಂ’ ಘಟಕಗಳ ಮೂಲಕ ಒದಗಿಸುತ್ತಿದ್ದೇವೆ’ ಎನ್ನುತ್ತಾರೆ ಅವರು.

ಎಟಿಎಂ ಇತಿಹಾಸ

ವಿಶ್ವದ ಮೊದಲ ‘ಎಟಿಎಂ’ (ಆಟೊ­ಮ್ಯಾಟಿಕ್ ಟೆಲ್ಲರ್ ಮೆಷಿನ್) ಲಂಡ­ನ್‌ನ ಎನ್‌ಫೀಲ್ಡ್‌ನಲ್ಲಿ 1967ರಲ್ಲಿ ಸ್ಥಾಪನೆಗೊಂಡಿತು. ಬ್ಯಾಂಕ್ ಗ್ರಾಹಕರಿಗೆ ಯಾವುದೇ ಸಮಯದಲ್ಲಿ ಹಣ ತೆಗೆದುಕೊಳ್ಳಲು, ಖಾತೆಯಲ್ಲಿ­ರುವ ಬಾಕಿ ಮೊತ್ತ ನೋಡಿಕೊಳ್ಳಲು ಈ ಎಲೆಕ್ಟ್ರಾನಿಕ್ ಯಂತ್ರ ಅವಕಾಶ ಕಲ್ಪಿಸುತ್ತದೆ. ಒಂದು ಅಧ್ಯಯನದಂತೆ ಸದ್ಯ ಪ್ರಪಂಚದಾದ್ಯಂತ 22 ಲಕ್ಷ ‘ಎಟಿಎಂ’ಗಳು ಬಳಕೆಯಲ್ಲಿವೆ.

ಮೂರು ಸಾವಿರ ಜನರಿಗೆ ಒಂದು ‘ಎಟಿಎಂ’ನಂತೆ ಸೇವೆ ಲಭಿಸುತ್ತಿದೆ. ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) 1985ರಲ್ಲಿ ಜೆಮ್‌ಷೆಡ್‌ಪುರದಲ್ಲಿ ದೇಶದ ಮೊದಲ ‘ಎಟಿಎಂ’ ಸ್ಥಾಪಿಸಿತು. ನಂತರ ‘ಎಚ್‌ಎಸ್‌ಬಿಸಿ’ ಬ್ಯಾಂಕ್‌ 1987ರಲ್ಲಿ ಮುಂಬೈನಲ್ಲಿ ‘ಎಟಿಎಂ’ ತೆರೆಯಿತು. ಹೆಚ್ಚಿನ ‘ಎಟಿಎಂ’­ಗಳು ಮೈಕ್ರೊಸಾಫ್ಟ್‌ ವಿಂಡೋಸ್‌ ಕಾರ್ಯನಿರ್ವಹಣೆ ವ್ಯವಸ್ಥೆ ಹೊಂದಿದೆ.ಪ್ರವರ್ಧಮಾನಕ್ಕೆ ಬರುತ್ತಿರುವ ಇತರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ‘ಡೆಬಿಟ್ ಕಾರ್ಡ್’ ಬಳಕೆ ಕಡಿಮೆ. ಆದರೆ ಹೊಸ ಎಟಿಎಂ ಘಟಕಗಳ ಸ್ಥಾಪನೆ ಮಾತ್ರ ವಾರ್ಷಿಕ ಶೇ 25ರಷ್ಟು ಹೆಚ್ಚುತ್ತಿದೆ ಎನ್ನುತ್ತದೆ ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಸಮೀಕ್ಷೆ. ಡೆಬಿಟ್ ಕಾರ್ಡ್ ಬಳಕೆ ಹೆಚ್ಚಿಸಲು ಗ್ರಾಮೀಣ ಪ್ರದೇಶಗಳಲ್ಲಿ ವೈಟ್ ಲೇಬಲ್ ಎಟಿಎಂ ಘಟಕ ಸ್ಥಾಪಿಸಲು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ (ಎನ್‌ಬಿಎಫ್‌ಸಿ) ಅನುಮತಿ ನೀಡಲಾಗಿದೆ. 50 ಸಾವಿರಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಮೂರು ಮತ್ತು ನಾಲ್ಕನೇ ಹಂತದ ನಗರಗಳಲ್ಲಿ ಬ್ಯಾಂಕ್‌ಗಳು ಎಟಿಎಂ ಘಟಕ ಸ್ಥಾಪಿಸುವುದನ್ನು ‘ಆರ್‌ಬಿಐ’ ಕಡ್ಡಾಯ­ಗೊಳಿಸಿದೆ.

ಎಟಿಎಂ ಸ್ಥಾಪನೆಗೆ ಬೇಕಿದೆ ₨3.5 ಲಕ್ಷ

ಒಂದು ‘ಸ್ವಯಂಚಾಲಿತ ಹಣ ವಿತರಣೆ ಯಂತ್ರ’ (ಎಟಿಎಂ) ಸ್ಥಾಪನೆಗೆ ಕನಿಷ್ಠ ₨3.50 ಲಕ್ಷ ವೆಚ್ಚವಾಗುತ್ತದೆ ಎನ್ನುತ್ತಾರೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಅಧಿಕಾರಿಗಳು. ಒಂದು ‘ಎಟಿಎಂ’ ಯಂತ್ರದ ಬೆಲೆ ₨2.60 ಲಕ್ಷದವರೆಗೂ ಇದೆ. ಎನ್‌ಸಿಆರ್‌, ಡೈಬೋಲ್ಡ್‌ ಸೇರಿದಂತೆ ವಿವಿಧ ಕಂಪೆನಿಗಳು ಎಟಿಎಂ ಯಂತ್ರ ಪೂರೈಸುತ್ತಿವೆ. ಎಟಿಎಂ ಯಂತ್ರ ಪೂರೈಕೆ ಮತ್ತು ಅಳವಡಿಕೆ ಜವಾಬ್ದಾರಿಯನ್ನು  ಟೆಂಡರ್‌ ಮೂಲಕವೇ ವಹಿಸಿಕೊಡಲಾಗುತ್ತದೆ.

ಇದಕ್ಕೆ ಹೊರತಾಗಿ ‘ಎಟಿಎಂ’ ಘಟಕದ ಒಳಾಂಗಣ ವಿನ್ಯಾಸ ಮತ್ತು ಹವಾನಿಯಂತ್ರಣ ವ್ಯವಸ್ಥೆಗಾಗಿ ಕನಿಷ್ಠ ₨60 ಸಾವಿರದವರೆಗೂ ವೆಚ್ಚವಾಗುತ್ತದೆ ಎಂದು ಅವರು ವಿವರಿಸಿದರು. ಒಂದು ಎಟಿಎಂ ಯಂತ್ರ ಅಳವಡಿಸಿ ಖಾತೆದಾರರಿಗೆ ಅನುಕೂಲವಾಗುವಂತೆ ಸೇವೆ ಒದಗಿಸಲು ಕನಿಷ್ಠ 8x8 ಅಡಿ ಉದ್ದಗಲದ ಜಾಗ ಅಗತ್ಯವಿದೆ. ಇಷ್ಟು ಚಿಕ್ಕ ಜಾಗಕ್ಕೂ ಬೆಂಗಳೂರಿನ ಕೆಲವು ಬಡಾವಣೆಗಳಲ್ಲಿ ₨5000ದಿಂದ ₨10,000ದವರೆಗೂ ಮಳಿಗೆ ಬಾಡಿಗೆ ನೀಡಬೇಕಿದೆ. ನಗರದ ಹೃದಯ ಭಾಗದಲ್ಲಾದರೆ ಬಾಡಿಗೆ ಬಹಳ ಹೆಚ್ಚೇ ಇದೆ ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)