ಒಡೆದ ಸೇತುವೆಯಿಂದ ಜೀವಕ್ಕೆ ಕುತ್ತು

ಭಾನುವಾರ, ಮೇ 26, 2019
26 °C

ಒಡೆದ ಸೇತುವೆಯಿಂದ ಜೀವಕ್ಕೆ ಕುತ್ತು

Published:
Updated:

ಲಿಂಗಸುಗೂರ: ಪ್ರತಿ ವರ್ಷ ಕೃಷ್ಣಾ ನದಿ ಪ್ರವಾಹ ಬಂದಾಗ ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳ ಸಂಪರ್ಕಕ್ಕೆ ಹಂಚಿನಾಳ, ಯಳಗುಂದಿ, ಯರಗೋಡಿ, ಕಡದರಗಡ್ಡಿ ಜನತೆ ಪರದಾಡುತ್ತಿದ್ದರು. ಕಳೆದ ತಿಂಗಳವಷ್ಟೆ ಸಂಚಾರಕ್ಕೆ ಸಮರ್ಪಣೆಗೊಂಡಿದ್ದ ಶೀಲಹಳ್ಳಿ-ಹಂಚಿನಾಳ ಸೇತುವೆ ಕೃಷ್ಣಾ ಪ್ರವಾಹದಿಂದ ಭಾಗಶಃ ಹಾನಿಗೊಳಗಾಗುವ ಮೂಲಕ ಕಳಪೆತನವನ್ನು ಪ್ರದರ್ಶಿಸಿದೆ.ನಾರಾಯಣಪುರ ಅಣೆಕಟ್ಟೆಯಿಂದ ಈಗ್ಗೆ ಮೂರ‌್ನಾಲ್ಕು ದಿನಗಳಿಂದ 3ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಹರಿಬಿಡಲಾಗಿತ್ತು. ಪಿಲ್ಲರ್ ಮೇಲ್ಭಾಗದ ಪೂರ್ವ ದಿಕ್ಕಿನ ಅಂದಾಜು 3-4 ಅಡಿಯಷ್ಟು ಸ್ಲ್ಯಾಬ್ ಪಿಲ್ಲರ್‌ಗಳಿಂದ ದೂರ ಸರಿದು ತೂಗುಯ್ಯಾಲೆ ಸ್ಥಿತಿಯಲ್ಲಿದೆ. ಇನ್ನೂ ಹಲವೆಡೆ ಸ್ಲ್ಯಾಬ್‌ನಲ್ಲಿ ಭಾರಿ ಬೋಂಗಾಗಳು ಕಾಣಿಸಿಕೊಂಡಿದ್ದು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.2007-08ರ ಅವಧಿಯಲ್ಲಿ ನೈಸರ್ಗಿಕ ವಿಕೋಪ ಪರಿಹಾರ ನಿಧಿಯಡಿ ರೂ. 53ಲಕ್ಷದಲ್ಲಿ ಪಿಲ್ಲರ ನಿರ್ಮಿಸಲಾಗಿತ್ತು. 2010-11ನೇ ಸಾಲಿನಲ್ಲಿ ನಬಾರ್ಡ್ ನೆರವಿನಡಿ ರೂ. 42ಲಕ್ಷ ವೆಚ್ಚದಲ್ಲಿ ಸ್ಲ್ಯಾಬ್ ಹಾಕುವ ಮೂಲಕ ಕಳೆದ ತಿಂಗಳು ಸಂಚಾರಕ್ಕೆ ಅನುವುಮಾಡಿಕೊಡಲಾಗಿತ್ತು. ರೂ. 95ಲಕ್ಷ ವೆಚ್ಚದ ಸೇತುವೆ ಸಮರ್ಪಣೆಗೊಂಡ ತಿಂಗಳಲ್ಲಿಯೆ ಬಿರುಕು, ಕುಸಿತ ಕಾಣಿಸಿಕೊಂಡಿರುವುದಕ್ಕೆ ಕಳಪೆ ಕಾಮಗಾರಿಯೆ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.ಭೇಟಿ:
ಶೀಲಹಳ್ಳಿ-ಹಂಚಿನಾಳ ಸೇತುವೆ ಭಾಗಶಃ ಹಾನಿಗೊಳಗಾದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ್ದ ತಹಸೀಲ್ದಾರ ಶೇಖರಪ್ಪ ಸಿಮಾಲ್ ಪರಿಶೀಲನೆ ನಡೆಸಿದರು. ಸೇತುವೆ ಸ್ಥಿತಿಗತಿ, ಜನತೆಗೆ ಆಗುವ ತೊಂದರೆ ಕುರಿತಂತೆ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿ ತುರ್ತು ಕ್ರಮಕ್ಕೆ ಕೋರಲಾಗುವುದು ಎಂದರು. ಜನಸಮಾನ್ಯರು ಯೋಗ್ಯವಲ್ಲದ ಸೇತುವೆ ಬಳಸಿ ಸಂಚರಿಸದಂತೆ ನದಿ ಪಾತ್ರದ ಜನತೆಯಲ್ಲಿ ಮನವಿ ಮಾಡಿದ್ದಾರೆ.ಕಳಪೆ ಕಾಮಗಾರಿ:
ಕಳಪೆ ಮಟ್ಟದ ಕಾಮಗಾರಿಗಳು ತಾಲ್ಲೂಕಿನಾದ್ಯಂತ ನಡೆಯುತ್ತಲೆ ಬಂದಿವೆ ಎಂಬುದಕ್ಕೆ ಶೀಲಹಳ್ಳಿ ಹಂಚಿನಾಳ ಸೇತುವೆ ನಿದರ್ಶನವಾಗಿದೆ. ಸೇತುವೆ ಹಾನಿಗೆ ಸಂಬಂಧಿಸಿ ಸಮಗ್ರ ತನಿಖೆ ನಡೆಸುವಂತೆ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪಾಮಯ್ಯ ಮುರಾರಿ ಆಗ್ರಹಪಡಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry