ಗುರುವಾರ , ಮೇ 19, 2022
20 °C

ಒತ್ತಡದಿಂದ ಮಾನಸಿಕ ರೋಗ ಹೆಚ್ಚು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಒತ್ತಡದ ಜಗತ್ತಿನಲ್ಲಿ ಜೀವಿಸುತ್ತಿರುವ ನಾವೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಮಾನಸಿಕ ರೋಗಿಗಳಾಗಿದ್ದೇವೆ. ಒತ್ತಡದ ಜೀವನ ಶೈಲಿಯಿಂದ ಮಾನಸಿಕ ಖಿನ್ನತೆ, ಆತಂಕ ಬಹುತೇಕರಲ್ಲಿ ಹೆಚ್ಚಾಗುತ್ತಿದೆ. ಇದರಿಂದ ದಿನೇ ದಿನೇ ಮಾನಸಿಕ ರೋಗಿಗಳ ಸಂಖ್ಯೆ ಹೆಚ್ಚಳವಾಗುತ್ತದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎನ್. ರುದ್ರಮುನಿ ತಿಳಿಸಿದರು.ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ನಗರದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ `ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ~ ಉದ್ಘಾಟಿಸಿ ಅವರು ಮಾತನಾಡಿದರು.ಕಾರಾಗೃಹಗಲ್ಲಿ ಇರುವ ಕೈದಿಗಳು ಹಾಗೂ ವಿಚಾರಣಾಧೀನ ಕೈದಿಗಳಲ್ಲಿ ಬಹುತೇಕರು ಹಲವು ಬಗೆಯ ಮಾನಸಿಕ ರೋಗಗಳಿಗೆ ಒಳಗಾಗಿರುತ್ತಾರೆ. ನಿಮ್ಹಾನ್ಸ್ ವೈದ್ಯರ ಅಧ್ಯಯನದ ಪ್ರಕಾರ ಕಾರಾಗೃಹದಲ್ಲಿ ಇರುವ ಶೇ 85ರಷ್ಟು ಕೈದಿಗಳು ಮಾನಸಿಕ ಕಾಯಿಲೆಗಳಿಗೆ ಒಳಗಾಗಿ ಅಪರಾಧ ಎಸಗಿದ್ದಾರೆ ಎಂದು ಅವರು ಮಾಹಿತಿ ನೀಡಿದರು.ಒತ್ತಡ, ಖಿನ್ನತೆ, ಕೆಟ್ಟ ಅಭ್ಯಾಸಗಳು ಮಾನಸಿಕ ರೋಗದ ಲಕ್ಷಣಗಳಾಗಿವೆ. ಇದಕ್ಕೆ ಸೂಕ್ತ ಚಿಕಿತ್ಸೆಯಿದ್ದು, ಸಂಬಂಧಿಸಿದವರು ಅದನ್ನು ಪಡೆದರೆ ಸಾಮಾನ್ಯ ವ್ಯಕ್ತಿಗಳಂತೆ ಜೀವಿಸಬಹುದು ಎಂದು ಅವರು ಅಭಿಪ್ರಾಯಪಟ್ಟರು.ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಪ್ರಕಾರ ಎಲ್ಲ ಜಿಲ್ಲೆಗಳಲ್ಲಿಯೂ ತಿಂಗಳಿಗೊಮ್ಮೆ ಮಾನಸಿಕ ರೋಗಿಗಳ ಚಿಕಿತ್ಸಾ ಶಿಬಿರ ಆಯೋಜಿಸಬೇಕು. ಆದರೆ ರಾಮನಗರ ಜಿಲ್ಲೆ ಹೊರತು ಪಡಿಸಿ ರಾಜ್ಯದ ಯಾವುದೇ ಜಿಲ್ಲೆಗಳಲ್ಲಿ ಶಿಬಿರ ನಡೆಯುತ್ತಿಲ್ಲ ಎಂದು ಅವರು ತಿಳಿಸಿದರು.ನಿಮ್ಹಾನ್ಸ್‌ನ ಪ್ರಸಿದ್ಧ ಮನೋವೈದ್ಯರುಗಳಾದ ಡಾ. ಸಿ.ಆರ್.ಚಂದ್ರಶೇಖರ್, ಡಾ. ರಜಿನಿ, ಡಾ. ನವೀನ್ ಮೊದಲಾದವರು ತಿಂಗಳಿಗೊಮ್ಮೆ ಜಿಲ್ಲೆಯಲ್ಲಿ ನಡೆಯುವ ಶಿಬಿರದಲ್ಲಿ ಪಾಲ್ಗೊಂಡು ಮನೋ ರೋಗಿಗಳಿಗೆ ಅಗತ್ಯ ಚಿಕಿತ್ಸೆ ಮತ್ತು ಆಪ್ತ ಸಲಹೆ ಮಾಡುತ್ತಿದ್ದಾರೆ ಎಂದು ಅವರು ವಿವರಿಸಿದರು.ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಕಾನೂನಿನ ನೆರವು ಅಗತ್ಯವಿದ್ದರೆ ಅವರಿಗೆ ಕಾನೂನು ಸೇವಾ ಪ್ರಾಧಿಕಾರದ ಕಡೆಯಿಂದ ಉಚಿತವಾಗಿ ಕಾನೂನು ನೆರವು ಒದಗಿಸಿಕೊಡಲಾಗುವುದು. ಅಲ್ಲದೆ ಅವರಿಗೆ ದೊರೆಯಬೇಕಿರುವ ಪಿಂಚಣಿ ಹಾಗೂ ಇತರ ಸವಲತ್ತುಗಳನ್ನು ದೊರಕಿಸಿಕೊಡಲು ಪ್ರಾಧಿಕಾರ ನೆರವು ನೀಡುತ್ತದೆ ಎಂದು ತಿಳಿಸಿದರು.ಮನೋವೈದ್ಯೆ ಡಾ. ರಜಿನಿ ಮಾತನಾಡಿ, ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಸ್ವಾಸ್ಥ್ಯ ಚೆನ್ನಾಗಿದ್ದರೆ ನಾವೆಲ್ಲ ಆರೋಗ್ಯವಂತರಾಗಿ ಇರಬಹುದು. ಈ ಮೂರರಲ್ಲಿ ಒಂದರ ಸ್ವಾಸ್ಥ್ಯ ಕೆಟ್ಟರೂ ಆರೋಗ್ಯವಾಗಿ ಇರಲಾಗದು ಎಂದರು.

ಪ್ರಸ್ತುತ ದೇಶದಲ್ಲಿ ಶೇ 40ರಷ್ಟು ಜನತೆಗೆ ಮಾನಸಿಕ ಖಿನ್ನತೆಯಿಂದ ನರಳುತ್ತಿದ್ದಾರೆ. ಚಿತ್ತ ವಿಕಲತೆ, ಆತಂಕದ ಕಾಯಿಲೆ, ಗೀಳಿನ ಕಾಯಿಲೆ, ಮಾದಕ ವಸ್ತು ಮತ್ತು ಮದ್ಯಪಾನ ದುಶ್ಚಟ, ಮರುವಿನಿ ಕಾಯಿಲೆಗಳು ಪ್ರಮುಖವಾಗಿ ಮನೋರೋಗಿಗಳನ್ನು ಕಾಡುತ್ತದೆ ಎಂದು ತಿಳಿಸಿದರು.ದೇಶದಲ್ಲಿ ಶೇ 10ರಿಮದ 12ರಷ್ಟು ಜನ ವಿವಿಧ ರೀತಿಯ ಮಾನಸಿಕ ಕಾಯಿಲೆಗೆ ತುತ್ತಾಗಿದ್ದಾರೆ. ಕಾರಾಗೃಹಗಳ ಕೈದಿಗಳ ಬಗ್ಗೆ ಎರಡು ವರ್ಷ ಅಧ್ಯಯನ ನಡೆಸಿದ ನಂತರ ತಿಳಿದುಕೊಂಡ ಸತ್ಯ ಎಂದರೆ ಶೇ 60ರಿಂದ 85ರಷ್ಟು ಕೈದಿಗಳು ಮಾನಸಿಕ ಕಾಯಿಲೆಗೆ ಒಳಗಾಗಿದ್ದಾರೆ ಎಂದು ಅವರು ವಿವರಿಸಿದರು.ಮೆದುಳಿನಲ್ಲಿ ರಾಸಾಯನಿಕಗಳು ಸೇರ್ಪಡೆಯಾದಾಗ, ವಂಶ ಪಾರಂಪರ್ಯದಿಂದ, ಮಾದಕ ವಸ್ತು ಮತ್ತು ಮದ್ಯ ಸೇವನೆಯಿಂದ, ಕೌಟುಂಬಿಕ ವಾತಾವರಣ ಹಾಳಾಗಿದ್ದರೆ, ಬಾಲ್ಯಾವಸ್ಥೆಯಲ್ಲಿ ಕೆಟ್ಟ ಅಥವಾ ಕಹಿ ಘಟನೆಗಳನ್ನು ನೋಡಿದ್ದರೆ ಮನೋರೋಗಗಳು ಬರುತ್ತವೆ. ಇವುಗಳಿಗೆ ಚಿಕಿತ್ಸೆ ಇದೆ. ಔಷಧ, ಆಪ್ತ ಸಮಾಲೋಚನೆ ಮತ್ತು ವಿದ್ಯುತ್ ಶಾಕ್ ಚಿಕಿತ್ಸೆಗಳಿಂದ ಈ ಕಾಯಿಲೆಗಳನ್ನು ಗುಣಪಡಿಸಬಹುದು ಎಂದರು.ನ್ಯಾಯಾಧೀಶ ಕೆ. ನಾರಾಯಣ ಪ್ರಸಾದ್ ಮಾತನಾಡಿ, ನೆಮ್ಮದಿ ಮತ್ತು ಶಾಂತಿಯ ವಾತಾವರಣ ಇಂದು ಇಲ್ಲವಾಗಿದೆ. ಸಂಪಾದನೆ ಹೆಚ್ಚಾಗಿ ನೆಮ್ಮದಿ ಕಡಿಮೆಯಾಗಿದೆ. ಹಾಗಾಗಿ ಮಾನಸಿಕ ರೋಗಗಳು ಆವರಿಸಿಕೊಳ್ಳುತ್ತಿವೆ. ಆದ್ದರಿಂದ ನೆಮ್ಮದಿ ಮತ್ತು ಶಾಂತಿಯ ವಾತಾವರಣ ನಿರ್ಮಾಣವಾಗಬೇಕು ಎಂದು ಅವರು ಹೇಳಿದರು.ರಿಚ್ಮಂಡ್ ಫೆಲೋಶಿಪ್ ಸೊಸೈಟಿಯ ಉಪಾಧ್ಯಕ್ಷ ಬಿ.ಕೆ.ಕೃಷ್ಣಮೂರ್ತಿ, ಜಿಲ್ಲಾ ಸರ್ಕಾರಿ ವಕೀಲ ಎಚ್.ವಿ.ಶೇಷಾದ್ರಿ ಅಯ್ಯರ್, ವಕೀಲ ಲೋಕೇಶ್, ಕಿಮಾಸ ತರಬೇತಿ ಶಾಲೆಯ ಪ್ರಾಚಾರ್ಯ ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.