ಶನಿವಾರ, ಜನವರಿ 18, 2020
19 °C

ಒತ್ತಡ ನಿವಾರಣೆಗೆ ವಿರಾಮದ ಮದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪರ್ತ್: ಸೋತು... ಸೋತು... ದಣಿದಿದ್ದಾರೆ! ಅದಕ್ಕೇ ವಿಶ್ರಾಂತಿ ಬೇಕು. ಹೌದು; ಭಾರತ ತಂಡದವರು ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಟೆಸ್ಟ್‌ಗಾಗಿ ಅಭ್ಯಾಸ ಆರಂಭಿಸುವುದಕ್ಕೆ ಮುನ್ನ ಮೂರು ದಿನ ವಿರಾಮ ಪಡೆಯಲಿದ್ದಾರೆ.ಸೋಲಿನ ಸಂಕಷ್ಟಗಳಿಂದಾಗಿ ಹೆಚ್ಚಿದ ಒತ್ತಡ ನಿವಾರಣೆಗೆ ವಿರಾಮವೇ ಮದ್ದು ಎಂದು ತಂಡದ ಆಡಳಿತ ನಿರ್ಧರಿಸಿದೆ. ಆದ್ದರಿಂದ ಅಭ್ಯಾಸದ ಯೋಚನೆ ಬದಿಗಿಟ್ಟು ಪಬ್, ನೈಟ್‌ಕ್ಲಬ್, ಅಮ್ಯೂಸ್‌ಮೆಂಟ್ ಪಾರ್ಕ್‌ನಲ್ಲಿ ಕಾಲ ಕಳೆಯುವ ಕಡೆಗೆ ಈಗ ಆಟಗಾರರ ಗಮನ. ಗೆಲ್ಲಬೇಕು ಎನ್ನುವ ಆತುರ ಇದ್ದಾಗ ಕಠಿಣ ಅಭ್ಯಾಸ ಮಾಡುವುದು ಸರಿಯಾದ ಮಾರ್ಗವೆಂದು ಭಾವಿಸದಿರುವಂಥ ಈ ಯೋಚನೆ ಅಚ್ಚರಿಗೆ ಕಾರಣವಾಗಿದೆ.ಜನವರಿ 24ರಿಂದ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಆರಂಭವಾಗಲಿದೆ. ಮೂರನೇ ಪಂದ್ಯವು ಎರಡೂವರೆ ದಿನದಲ್ಲಿಯೇ ಮುಗಿದಿದ್ದರಿಂದ ಸಾಕಷ್ಟು ವಿರಾಮ ಸಿಕ್ಕಿದೆ. ಆದ್ದರಿಂದ ಆತುರದಲ್ಲಿ ಮತ್ತೆ ನೆಟ್ಸ್‌ನಲ್ಲಿ ಬೆವರು ಸುರಿಸುವ ಬದಲು ಮಾನಸಿಕವಾಗಿ ಹಾಗೂ ದೈಹಿಕವಾಗಿ ವಿಶ್ರಾಂತಿ ಪಡೆಯುವುದು ಸೂಕ್ತವೆಂದು ಇಂಥದೊಂದು ನಿರ್ಧಾರಕ್ಕೆ ಬರಲಾಗಿದೆ.ಭಾರತ ತಂಡದವರು ಅಭ್ಯಾಸವನ್ನು ತಪ್ಪಿಸಿಕೊಳ್ಳಲು ದಾರಿ ಹುಡುಕುತ್ತಾರೆಂದು ಮಾಜಿ ನಾಯಕ ಸುನಿಲ್ ಗಾವಸ್ಕರ್ ಇತ್ತೀಚೆಗಷ್ಟೇ ದೂರಿದ್ದರು. ಅದರ ಬೆನ್ನಲ್ಲಿಯೇ ಭಾರತ ಮೂರನೇ ಟೆಸ್ಟ್‌ನಲ್ಲಿ ಹೀನಾಯವಾಗಿ ಸೋಲನುಭವಿಸಿತು. ಈಗ ಮತ್ತೆ ನೆಟ್ಸ್‌ನಲ್ಲಿ ತಾಲೀಮು ನಡೆಸುವ ಬದಲು ಮೂರು ದಿನಗಳ ಕಾಲ ತಣ್ಣಗಿರಲು ತೀರ್ಮಾನ ಕೈಗೊಂಡಿದೆ.ಮುಂದಿನ ಪಂದ್ಯದಲ್ಲಿ ಮಾನ ಕಾಪಾಡಿಕೊಳ್ಳಲು ತಕ್ಕ ಸಿದ್ಧತೆ ಮಾಡಿಕೊಳ್ಳುವುದು ಅಗತ್ಯವಾಗಿದೆ. ಆದರೆ ಪ್ರಬಲ ಆಸ್ಟ್ರೇಲಿಯಾವನ್ನು ದಿಟ್ಟತನದಿಂದ ಎದುರಿಸಿ ಕೊನೆಯ ಟೆಸ್ಟ್ ಗೆಲ್ಲಬೇಕು ಎನ್ನುವ ಚಿಂತೆ ಬಿಟ್ಟು, ನಿಶ್ಚಿಂತೆಯಿಂದ ಕಾಲ ಹರಣ ಮಾಡುವುದು ಎಷ್ಟು ಸೂಕ್ತ? ಈ ಪ್ರಶ್ನೆಗೆ ಸರಿಯಾದ ಉತ್ತರವಂತೂ ತಂಡದಿಂದ ಸಿಕ್ಕಿಲ್ಲ.ಭಾರತವು 0-3ರಲ್ಲಿ ಸರಣಿಯಲ್ಲಿ ಹಿನ್ನಡೆ ಅನುಭವಿಸಿದೆ. ಅಷ್ಟೇ ಅಲ್ಲ ಏಳು ತಿಂಗಳ ಅವಧಿಯಲ್ಲಿ ಮತ್ತೊಂದು 0-4ರ ಸರಣಿ ಸೋಲಿನ ಅಪಾಯ ಎದುರಾಗಿದೆ. ಇಂಥ ಪರಿಸ್ಥಿತಿಯಲ್ಲಿಯೂ `ತಂಡದಲ್ಲಿ ಉತ್ಸಾಹದ ವಾತಾವರಣ ಇದೆ~ ಎಂದು ಆರಂಭಿಕ ಆಟಗಾರ ಗೌತಮ್ ಗಂಭೀರ್ ಹೇಳಿದ್ದು ಅಚ್ಚರಿ ಮೂಡಿಸಿದೆ.`ತಂಡದೊಳಗೆ ಎಲ್ಲವೂ ಸರಿಯಾಗಿದೆ. ಅಡಿಲೇಡ್ ಟೆಸ್ಟ್‌ನಲ್ಲಿ ಚೆನ್ನಾಗಿ ಆಡುವ ಭರವಸೆ ಹೊಂದಿದ್ದೇವೆ. ಆ ಪಂದ್ಯದಲ್ಲಿ ಯಶಸ್ಸು ಪಡೆದು, ಮುಂಬರುವ ಏಕದಿನ ಪಂದ್ಯಗಳ ತ್ರಿಕೋನ ಸರಣಿ (ಭಾರತ, ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ)ಗೆ ಸಜ್ಜಾಗುತ್ತೇವೆ~ ಎಂದು ಗೌತಮ್ ಅವರು ಗಂಭೀರವಾಗಿ ನುಡಿದಿದ್ದಾರೆ.ಪರ್ತ್ ಟೆಸ್ಟ್‌ನಲ್ಲಿನ ಓವರ್ ಮಂದಗತಿಯ ಕಾರಣ ಒಂದು ಪಂದ್ಯದ ಮಟ್ಟಿಗೆ ನಿಷೇಧಕ್ಕೊಳಗಾಗಿರುವ ಮಹೇಂದ್ರ ಸಿಂಗ್ ದೋನಿ ಬದಲಿಗೆ ನಾಲ್ಕನೇ ಟೆಸ್ಟ್‌ನಲ್ಲಿ ವೀರೇಂದ್ರ ಸೆಹ್ವಾಗ್ ತಂಡವನ್ನು ಮುನ್ನಡೆಸಲಿದ್ದಾರೆ. `ವೀರೂ~ ಕೊನೆಯ ಪಂದ್ಯದಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ ಎನ್ನುವುದು ಗಂಭೀರ್ ಆಶಯ.`ಸೆಹ್ವಾಗ್ ಸಹಜವಾಗಿಯೇ ಆಕ್ರಮಣಕಾರಿ ಆಟವಾಡುತ್ತಾರೆ. ನಾಯಕ ಹಾಗೂ ತಂಡ ಒಟ್ಟಿಗೇ ಸಮರ್ಥವಾಗಿ ಆಡಬೇಕು. ಕೇವಲ ವೀರೂ ಮಾತ್ರವಲ್ಲ ಎಲ್ಲರೂ ಚೆನ್ನಾಗಿ ಆಡಿದರೆ ತಂಡದ ಒಟ್ಟಾರೆ ಪ್ರದರ್ಶನ ಮಟ್ಟ ಉತ್ತಮವಾಗುತ್ತದೆ~ ಎಂದರು.

ಪ್ರತಿಕ್ರಿಯಿಸಿ (+)