ಸೋಮವಾರ, ಮೇ 23, 2022
20 °C

ಒತ್ತುವರಿಗೆ ನಲುಗಿದ ಉಕ್ಕಿನ ಕೋಟೆ

ಸಚ್ಚಿದಾನಂದ ಕುರಗುಂದ Updated:

ಅಕ್ಷರ ಗಾತ್ರ : | |

 ಚಿತ್ರದುರ್ಗದ ಏಳು ಸುತ್ತಿನ ಕೋಟೆ ಕರ್ನಾಟಕದ ಪ್ರಮುಖ ಕೋಟೆಗಳಲ್ಲಿ ಒಂದು. ಮುಗಿಲಿಗೆ ಮುತ್ತಿಡುತ್ತಿವೆಯೇನೋ ಎಂಬಂತೆ ನೋಡುಗರಿಗೆ ಭಾಸವಾಗುವ ಮನಮೋಹಕ ಬತೇರಿಗಳನ್ನು ಹೊತ್ತು ತಣ್ಣಗೆ ಮಲಗಿರುವ ಈ ಉಕ್ಕಿನ ಕೋಟೆ ರಾಜ್ಯದ ಪ್ರವಾಸಿಗಳ ಅಚ್ಚುಮೆಚ್ಚಿನ ತಾಣ. ಇತಿಹಾಸದ ಅನೇಕ ಕುರುಹುಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿರುವ ಈ ಕೋಟೆ ಇಂದಿಗೂ ಹಲವು ನಿಗೂಢಗಳನ್ನು ಉಳಿಸಿಕೊಂಡಿದೆ.ಚಿತ್ರದುರ್ಗ ಪಟ್ಟಣಕ್ಕೆ ಹೊಂದಿಕೊಂಡಿರುವ ಕೋಟೆ ಅನೇಕ ರಾಜರುಗಳ ಶೌರ್ಯ ಪರಾಕ್ರಮಗಳ ಪ್ರತೀಕವಾಗಿದೆ. ದೇಶದ ಅತಿದೊಡ್ಡ ‘ಬಯಲು ವಸ್ತು ಸಂಗ್ರಹಾಲಯ’ ಎಂದೇ ಖ್ಯಾತಿ ಪಡೆದಿರುವ ಪಾಳೇಗಾರರ ಕಾಲದ ಈ ಐತಿಹಾಸಿಕ ಕೋಟೆ ತನ್ನ ಹಿರಿಮೆಯನ್ನು ಹಿಗ್ಗಿಸಿಕೊಳ್ಳಲು ಯತ್ನಿಸುತ್ತಿದ್ದರೂ, ಒತ್ತುವರಿಗೆ ತುತ್ತಾಗಿ ತನ್ನ ಅಸ್ತಿತ್ವ ಕಾಪಾಡಿಕೊಳ್ಳಲು ಹೆಣಗಾಡುತ್ತಿದೆ. ದಿನೇ ದಿನೇ ಕೋಟೆಯ ಸುತ್ತ ಬೃಹದಾಕಾರದ ಕಾಂಕ್ರೀಟ್ ಕಟ್ಟಡಗಳು ತಲೆ ಎತ್ತುತ್ತಿವೆ. ಇವು ಕೋಟೆಯ ಸೌಂದರ್ಯಕ್ಕೆ ಮಾರಕವಾಗಿವೆ. ಕೋಟೆಯ ಸಹಜ ಸೌಂದರ್ಯವನ್ನು ಹಾಳು ಮಾಡುತ್ತಿರುವ ಒತ್ತುವರಿ ಹಾಗೂ ಅಕ್ರಮ ಕಟ್ಟಡಗಳ ನಿರ್ಮಾಣವನ್ನು ತಡೆಗಟ್ಟಿ ಎಂಬ ದುರ್ಗದ ಜನರ ಕೂಗು ಸರ್ಕಾರದ ಕಿವಿ ತಲುಪಿಲ್ಲ!ಕೋಟೆ ಇತಿಹಾಸ

ಚಿತ್ರದುರ್ಗದ ಕೋಟೆಗೆ ಸುದೀರ್ಘ ಇತಿಹಾಸವಿದೆ. ಕ್ರಿ.ಶ. 1568ರಿಂದ 1779ರವರೆಗೆ (ಸುಮಾರು 211 ವರ್ಷಗಳ ಕಾಲ) ಚಿತ್ರದುರ್ಗ ಪಾಳೆಯಪಟ್ಟನ್ನು ಹದಿನಾಲ್ಕು ಮಂದಿ ಪಾಳೇಗಾರರು ಆಳಿದ್ದಾರೆ. ಪಾಳೇಗಾರರ ವಂಶದ ಮೂಲಪುರುಷ ಹಾಗೂ ಮೊದಲ ದೊರೆ ಚಿತ್ರನಾಯಕರು. ಕೊನೆಯ ದೊರೆ ರಾಜಾ ವೀರ ಮದಕರಿ ನಾಯಕರು.ಇವರಲ್ಲಿ ಭರಮಣ್ಣ ನಾಯಕರು, ರಾಜಾ ಮದಕರಿ ನಾಯಕರು ಅಗ್ರಗಣ್ಯರು. ಏಳು ಸುತ್ತಿನ ಈ ಕೋಟೆ ಒಂದು ಸಾವಿರ ಎಕರೆಗೂ ಹೆಚ್ಚಿನ ವಿಸ್ತಾರದ ಪ್ರದೇಶದಲ್ಲಿತ್ತು. ಕೋಟೆಯ ಸುತ್ತಲಿನ ಪ್ರದೇಶ ನಿಧಾನವಾಗಿ ಒತ್ತುವರಿಯಾಗುತ್ತ ಈಗ ಕೇವಲ 300 ಎಕರೆ ಪ್ರದೇಶಕ್ಕೆ ಇಳಿದಿದೆ. ಭೂ ಒತ್ತುವರಿ, ಅಕ್ರಮ ಕಟ್ಟಡ ನಿರ್ಮಾಣ ತಡೆಯದಿದ್ದರೆ ಕೋಟೆ ಇನ್ನು ಕೆಲವೇ ವರ್ಷಗಳಲ್ಲಿ ತನ್ನ ವೈಭವದ ಕುರುಹುಗಳನ್ನೆಲ್ಲ ಕಳೆದುಕೊಂಡು ನೆಪ ಮಾತ್ರದ ಕೋಟೆಯಾದೀತು.ಕೋಟೆ ಆವರಣದಲ್ಲಿರುವ ಜನವಸತಿಯನ್ನು ತೆರವುಗೊಳಿಸಲು ಜಿಲ್ಲಾಡಳಿತದ ಜತೆಯಲ್ಲಿ ಭಾರತೀಯ ಪುರಾತತ್ವ ಇಲಾಖೆ ಹಲವು ವರ್ಷಗಳಿಂದ ಪ್ರಯತ್ನಿಸುತ್ತಿದೆ. ಕೋಟೆಯನ್ನು ಯಾರೂ ಭೇದಿಸದಂತೆ ಸುತ್ತಲೂ (80 ಲಕ್ಷ ರೂಪಾಯಿ ವೆಚ್ಚದಲ್ಲಿ) ರಕ್ಷಣಾ ಗೋಡೆ ನಿರ್ಮಿಸಲಾಗಿದೆ. ಆದರೆ, ಇನ್ನೂ ಒಳಗೇ ಉಳಿದುಕೊಂಡಿರುವವರನ್ನು ಪೂರ್ಣವಾಗಿ ತೆರವುಗೊಳಿಸಿ ಅವರಿಗೆ ಪುನರ್ವಸತಿ ಕಲ್ಪಿಸಲು ಸಾಧ್ಯವಾಗಿಲ್ಲ! ಕೋಟೆ ಆವರಣದಲ್ಲಿ ವಾಸಿಸುತ್ತಿದ್ದ 135 ಕುಟುಂಬಗಳ ಪೈಕಿ ಇನ್ನೂ 15 ಕುಟುಂಬಗಳು ಅಲ್ಲೇ ಉಳಿದಿವೆ. ಈ ಕುಟುಂಬಗಳ ಪುನರ್ವಸತಿಗೆ ಭಾರತೀಯ ಪುರಾತತ್ವ ಇಲಾಖೆ ಜಿಲ್ಲಾಡಳಿತಕ್ಕೆ 23.5 ಲಕ್ಷ ರೂಪಾಯಿ ಸಂದಾಯ ಮಾಡಿದೆ. ಜಿಲ್ಲಾಡಳಿತದ ಉದಾಸೀನದ ಧೋರಣೆಯಿಂದಾಗಿ ಪುನರ್ವಸತಿ ಕಾರ್ಯ ವಿಳಂಬವಾಗಿದೆ.ರಾಷ್ಟ್ರೀಯ ಸಂರಕ್ಷಿತ ಸ್ಮಾರಕಗಳ ಸುತ್ತ ಸಾರ್ವಜನಿಕ ಯೋಜನೆಗಳು ಸೇರಿದಂತೆ ಯಾವುದೇ ರೀತಿಯ ನಿರ್ಮಾಣ ಚಟುವಟಿಕೆಗಳನ್ನು ನಿರ್ಬಂಧಿಸುವ ನಿಟ್ಟಿನಲ್ಲಿ ‘ಪ್ರಾಚೀನ ಸ್ಮಾರಕ ಮತ್ತು ಪುರಾತತ್ವ ಸ್ಥಳ ಹಾಗೂ ಅವಶೇಷಗಳ ಅಧಿನಿಯಮ’ವನ್ನು ಕೇಂದ್ರ ಸರ್ಕಾರ 2010ರ ಮಾರ್ಚ್ 30ರಂದು ಜಾರಿಗೊಳಿಸಿದೆ. ಈ ಅಧಿನಿಯಮದ ಅನ್ವಯ ಸಂರಕ್ಷಿತ ಪ್ರದೇಶದ ಪರಿಮಿತಿಯಿಂದ ಎಲ್ಲ ದಿಕ್ಕುಗಳಲ್ಲಿ 100 ಮೀಟರ್‌ವರೆಗಿನ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಮತ್ತು ಅದರಿಂದಾಚೆಗೆ ಎಲ್ಲ ದಿಕ್ಕುಗಳಲ್ಲಿ 200 ಮೀಟರ್‌ವರೆಗಿನ ಪ್ರದೇಶವನ್ನು ನಿಯಂತ್ರಿತ ಪ್ರದೇಶ ಎಂದು ಘೋಷಿಸಿದೆ.ಈ ಕಾಯ್ದೆ ಜಾರಿಯಾದ ನಂತರ ಐತಿಹಾಸಿಕ ಕೋಟೆಯ ಸಂಪೂರ್ಣ ಸಮೀಕ್ಷೆ ಕಾರ್ಯ ಪೂರೈಸಿರುವ ಭಾರತೀಯ ಪುರಾತತ್ವ ಇಲಾಖೆ, 100 ಮೀಟರ್ ಮತ್ತು 200 ಮೀಟರ್ ವ್ಯಾಪ್ತಿಯಲ್ಲಿರುವ 27 ಕಟ್ಟಡಗಳ ಮಾಲೀಕರಿಗೆ ನೋಟಿಸ್ ನೀಡಿದೆ. ಹೊಸದಾಗಿ ಯಾವುದೇ ಬಗೆಯ ಕಟ್ಟಡ ನಿರ್ಮಾಣದ ಚಟುವಟಿಕೆಗಳನ್ನು ಕೈಗೊಳ್ಳದಂತೆ ಸೂಚಿಸಿದೆ.‘ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ಕೇಂದ್ರೀಯ ಸ್ಮಾರಕಗಳ ಪ್ರಾಧಿಕಾರ ಕ್ರಮ ಕೈಗೊಳ್ಳುತ್ತದೆ. ಯಾವುದಾದರೂ ಕಟ್ಟಡಗಳನ್ನು ಕೆಡವಬೇಕು ಂದಾದರೆ ಆ ಬಗ್ಗೆ ಕೇಂದ್ರ ಸರ್ಕಾರದ ಪದನಿಮಿತ್ತ ಅಧಿಕಾರಿಗಳೇ ನಿರ್ಣಯ ಕೈಗೊಳ್ಳುತ್ತಾರೆ’ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.

ಕಾಣದ ಬೆಳಕು, ಕೇಳದ ಧ್ವನಿ!

ಕೋಟೆಗೆ ಕಾಯಕಲ್ಪ ನೀಡುವ ನಿಟ್ಟಿನಲ್ಲಿ ರೂಪಿಸಿದ್ದ ಕೆಲವು ಯೋಜನೆಗಳು, ಸಮೀಕ್ಷೆಗಳು ನೆನೆಗುದಿಗೆ ಬಿದ್ದಿವೆ. ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಧ್ವನಿ ಮತ್ತು ಬೆಳಕಿನ ವ್ಯವಸ್ಥೆ ಇನ್ನೂ ಜಾರಿಯಾಗಿಲ್ಲ. ಈ ಯೋಜನೆಗಾಗಿ ಪ್ರವಾಸೋದ್ಯಮ ಇಲಾಖೆ ಈಗಾಗಲೇ ಒಂದು ಕೋಟಿ ರೂಪಾಯಿಗಳನ್ನು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮಕ್ಕೆ ನೀಡಿದೆ.ಕೋಟೆ ವೀಕ್ಷಿಸಲು ಬರುವ ಪ್ರವಾಸಿಗರಿಗೆ ಸುಗಮವಾದ ರಸ್ತೆಯೇ ಇಲ್ಲ. ಪಟ್ಟಣದ ಇಕ್ಕಟ್ಟಾದ ರಸ್ತೆಗಳಲ್ಲಿ ವಾಹನಗಳು ತೆವಳುತ್ತಾ ಸಾಗಬೇಕು. ಈ ಹಿಂದೆ ರಾಷ್ಟ್ರೀಯ ಹೆದ್ದಾರಿ 4ರಿಂದ ಕೋಟೆವರೆಗೆ ನೇರ ರಸ್ತೆ ಸಂಪರ್ಕ ಕಲ್ಪಿಸುವ ಬಗ್ಗೆ ಸಮೀಕ್ಷೆ ನಡೆಸಲಾಗಿತ್ತು. ಅದು ಕಾರ್ಯರೂಪಕ್ಕೆ ಬರಲಿಲ್ಲ. ಚಿತ್ರದುರ್ಗ ಕಲ್ಲಿನ ಕೋಟೆಯ ಸೌಂದರ್ಯಕ್ಕೆ ಕಾಂಕ್ರೀಟ್ ಕಟ್ಟಡಗಳಿಂದಾಗಿ ಧಕ್ಕೆ ಒದಗಿದೆ ಎಂಬುದು ಇತಿಹಾಸ ಪ್ರೇಮಿಗಳ ಅಳಲು.

ಚಿತ್ರಗಳು: ಭವಾನಿ ಮಂಜು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.