ಭಾನುವಾರ, ಮೇ 16, 2021
28 °C
ಲಕ್ಷಾಂತರ ನಾಗರಿಕರ ದೂರವಾಣಿ ಮಾಹಿತಿ ಸಂಗ್ರಹ

ಒಬಾಮ ಆಡಳಿತಕ್ಕೆ ಮುಜುಗರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್/ವಾಷಿಂಗ್ಟನ್ (ಪಿಟಿಐ):  ಅಮೆರಿಕ ಸರ್ಕಾರ ಅಲ್ಲಿನ ಪ್ರಮುಖ ದೂರವಾಣಿ ಕಂಪೆನಿಯಾದ ವೆರಿಝೋನ್‌ನ ಲಕ್ಷಾಂತರ ಗ್ರಾಹಕರ ದೂರವಾಣಿ ದಾಖಲೆಗಳನ್ನು ನಿತ್ಯವೂ ಸಂಗ್ರಹಿಸುತ್ತಿದೆ ಎಂಬ ಸತ್ಯ ಈಗ ಬಯಲಾಗಿದ್ದು, ಒಬಾಮ ಆಡಳಿತದ ಈ ಕ್ರಮದ ವಿರುದ್ಧ  ವ್ಯಾಪಕ ಟೀಕೆ ವ್ಯಕ್ತವಾಗಿದೆ.ಅಮೆರಿಕದ ಉನ್ನತ ನ್ಯಾಯಾಲಯವೊಂದರ ಆದೇಶದ ಅನ್ವಯ ಎಫ್‌ಬಿಐ ಏಪ್ರಿಲ್‌ನಿಂದ ಲಕ್ಷಾಂತರ ಜನರ ದೂರವಾಣಿ ವಿವರ ಕಲೆ ಹಾಕುತ್ತಿದೆ. ಈ ಕುರಿತ ವರದಿ ಬ್ರಿಟನ್‌ನ `ಗಾರ್ಡಿಯನ್' ಪತ್ರಿಕೆಯಲ್ಲಿ ಗುರುವಾರ ಪ್ರಕಟಗೊಂಡಿದ್ದು, ಅಮೆರಿಕದಲ್ಲಿ ಕೋಲಾಹಲ ಸೃಷ್ಟಿಸಿದೆ.

ಅಮೆರಿಕದ ವಿದೇಶಿ ಬೇಹುಗಾರಿಕಾ ಕೋರ್ಟ್ (ಎಫ್‌ಐಎಸ್‌ಎ) ಏಪ್ರಿಲ್ 25ರಂದು ಎಫ್‌ಬಿಐಗೆ ದೂರವಾಣಿ ದಾಖಲೆ ಸಂಗ್ರಹಿಸುವಂತೆ ಆದೇಶ ನೀಡಿತ್ತು. ಜುಲೈ 19ರವರೆಗೆ ಮೂರು ತಿಂಗಳ ಕಾಲ ಎಲ್ಲ ದೂರವಾಣಿಗಳ ಕರೆಗಳ ಮಾಹಿತಿ ಪಡೆಯುವಂತೆ ಸೂಚಿಸಿತ್ತು.ವೆರಿಝೋ, ತನ್ನ ಎಲ್ಲ ದೂರವಾಣಿ ಗ್ರಾಹಕರು ಅಮೆರಿಕದೊಳಗೆ ಮಾಡಿದ ಕರೆಗಳು ಹಾಗೂ ಅಮೆರಿಕದಿಂದ ಬೇರೆ ದೇಶಗಳಿಗೆ ಮಾಡಿದ ದೂರವಾಣಿ ಕರೆಗಳ ವಿವರಗಳನ್ನು ಎಫ್‌ಬಿಐಗೆ ನೀಡಬೇಕು. ಸಂಭಾಷಣೆಯ ವಿವರದ ಹೊರತಾಗಿ, ಎರಡೂ ಬದಿಯ ದೂರವಾಣಿ ಸಂಖ್ಯೆಗಳು, ಕರೆ ಮಾಡಲು ತೆಗೆದುಕೊಂಡ ಅವಧಿ ಮತ್ತು ಸಮಯವನ್ನು ಅದು ಎಫ್‌ಬಿಐಗೆ ತಿಳಿಸಬೇಕು ಎಂದು ಕೋರ್ಟ್ ಆದೇಶದಲ್ಲಿ ಹೇಳಲಾಗಿತ್ತು.ರಹಸ್ಯ ಸರ್ಕಾರಿ ಮಾಹಿತಿಗಳ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿ ಅಸೋಸಿಯೇಟೆಡ್ ಪ್ರೆಸ್‌ನ ವರದಿಗಾರರು ಮತ್ತು ಸಂಪಾದಕರ ಎರಡು ತಿಂಗಳ ದೂರವಾಣಿ ದಾಖಲೆಗಳನ್ನು ನ್ಯಾಯಾಂಗ ಇಲಾಖೆ ಸಂಗ್ರಹಿಸಿತ್ತು.  ಈ ಬಗ್ಗೆ ಒಬಾಮ ಆಡಳಿತದ ವಿರುದ್ಧ ಭಾರಿ ಟೀಕೆ ಕೇಳಿಬರುತ್ತಿದ್ದ ಸಂದರ್ಭದಲ್ಲೇ ಈ ಹೊಸ ಪ್ರಕರಣ ಬಹಿರಂಗಗೊಂಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.