ಮಂಗಳವಾರ, ಆಗಸ್ಟ್ 11, 2020
26 °C
ಸ್ನೊಡೆನ್ ವಿವಾದ: ಮತ್ತಷ್ಟು ಹಳಸಿದ ಸಂಬಂಧ

ಒಬಾಮ-ಪುಟಿನ್ ಭೇಟಿ ರದ್ದು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಒಬಾಮ-ಪುಟಿನ್ ಭೇಟಿ ರದ್ದು?

ವಾಷಿಂಗ್ಟನ್ (ಪಿಟಿಐ): ಮಾಹಿತಿ ಸೋರಿಕೆ ಆರೋಪಕ್ಕೆ ಗುರಿಯಾಗಿರುವ ರಾಷ್ಟ್ರೀಯ ಭದ್ರತಾ ಸಂಸ್ಥೆ ಮಾಜಿ ಗುತ್ತಿಗೆದಾರ ಎಡ್ವರ್ಡ್ ಸ್ನೊಡೆನ್ ವಿಷಯದಲ್ಲಿ ಉಭಯ ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರು ಮಾಸ್ಕೊ ಪ್ರವಾಸ ರದ್ದು ಮಾಡುವ ಸಾಧ್ಯತೆ ಇದೆ.`ಒಂದು ವೇಳೆ ಹೀಗಾದಲ್ಲಿ ಪುಟಿನ್ ತೀವ್ರ ಮುಖಭಂಗ ಎದುರಿಸಿದಂತಾಗುತ್ತದೆ' ಎಂದು ದಿ ನ್ಯೂಯಾರ್ಕ್ ಟೈಮ್ಸ ವರದಿ ಮಾಡಿದೆ.ಆದರೆ ಈ ಸಂಬಂಧ ಶ್ವೇತಭವನದಿಂದ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಮಾಧ್ಯಮಗಳಲ್ಲಿ ಮಾತ್ರ ಇದು ಹೆಚ್ಚು ಸುದ್ದಿಯಾಗಿದೆ.  `ಅಮೆರಿಕ ಸರ್ಕಾರವು ಒಬಾಮ-ಪುಟಿನ್ ಭೇಟಿ ರದ್ದು ಮಾಡುವ ಬಗ್ಗೆ ಚಿಂತಿಸುತ್ತಿದೆ' ಎಂದು ಗುರುವಾರ ಮಾಧ್ಯಮಗಳು ವರದಿ ಮಾಡಿವೆ. ರಷ್ಯಾದ ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ನಡೆಯಲಿರುವ ಜಿ-20 ಶೃಂಗಸಭೆಯಲ್ಲಿ ಭಾಗವಹಿಸಲು ಸೆಪ್ಟೆಂಬರ್‌ನಲ್ಲಿ ಒಬಾಮ ರಷ್ಯಾಗೆ ತೆರಳಬೇಕಿದೆ.ಸ್ನೊಡೆಲ್, ರಷ್ಯಾದಲ್ಲಿ ಆಶ್ರಯ ಕೇಳಿರುವ ಹಿನ್ನೆಲೆಯಲ್ಲಿ ಉಭಯ ದೇಶಗಳ ನಡುವೆ ಬಿಗುವಿನ ವಾತಾವರಣ ಉಂಟಾಗಿದೆ. ಸ್ನೊಡೆನ್ ಅವರನ್ನು ಅಮೆರಿಕಕ್ಕೆ ಮರಳಿ ಕಳಿಸುವಂತೆ ಒಬಾಮ ಆಡಳಿತ ರಷ್ಯಾ ಸರ್ಕಾರವನ್ನು ಆಗ್ರಹಿಸುತ್ತಲೇ ಇದೆ. ಸ್ನೊಡೆನ್ ವಿವಾದ ಮಾತ್ರವಲ್ಲ; ಸಿರಿಯಾ ಸಂಘರ್ಷ, ಅಣ್ವಸ್ತ್ರ ಹಾಗೂ ಭಿನ್ನಮತೀಯರನ್ನು ನಡೆಸಿಕೊಳ್ಳುತ್ತಿರುವ ಪುಟಿನ್ ಸರ್ಕಾರದ ನೀತಿ ವಿಷಯದಲ್ಲಿಯೂ ಇತ್ತೀಚಿನ ದಿನಗಳಲ್ಲಿ ಅಮೆರಿಕ-ರಷ್ಯಾ ಸಂಬಂಧ ಹಳಸಿದೆ.ಒಬಾಮ-ಪುಟಿನ್ ಭೇಟಿ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೇ ಕಾರ್ನಿ ಹಾರಿಕೆಯ ಉತ್ತರ ನೀಡಿದ್ದಾರೆ.ಕಳೆದ ವರ್ಷ ಕೂಡ ಉಭಯ ನಾಯಕರ ಉದ್ದೇಶಿತ ಭೇಟಿ ರದ್ದಾಗಿತ್ತು. ಕ್ಯಾಂಪ್ ಡೇವಿಡ್‌ನಲ್ಲಿ ನಡೆದ ಜಿ-8 ಶೃಂಗ ಸಭೆಗೆ ಪುಟಿನ್ ಆಗಮಿಸಿರಲಿಲ್ಲ. ತಮ್ಮ ನೂತನ ಸಂಪುಟ ರಚನೆ ಒತ್ತಡದಿಂದಾಗಿ ಸಭೆಗೆ ಬರುತ್ತಿಲ್ಲ ಎಂದು ಸಬೂಬು ಹೇಳಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.