ಶುಕ್ರವಾರ, ಮಾರ್ಚ್ 5, 2021
30 °C

ಓದಿ ಓದಿ, ಹೆಚ್ಚು ಬದುಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಓದಿ ಓದಿ, ಹೆಚ್ಚು ಬದುಕಿ

‘ಓದಿ ಓದಿ ಮರುಳಾದ ಕೂಚಂಭಟ್ಟ’ – ಎಂಬ ಗಾದೆಯೊಂದು ಪ್ರಚಲಿತದಲ್ಲಿದೆ. ಬರೀ ಪುಸ್ತಕಗಳನ್ನು ಓದುವುದರಿಂದ ಪ್ರಯೋಜನವಿಲ್ಲ ಎಂಬುದು ಇದರ ಸಾರಾಂಶ.ಏನನ್ನೂ ಓದದೆಯೇ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಹೀಗೆಂದು ಹೇಳಬಹುದೇನೋ! ಆದರೆ ಓದು ನಮ್ಮ ಶಿಕ್ಷಣಪದ್ಧತಿಯಲ್ಲಿ  ಮುಖ್ಯವಾಗುತ್ತಿದೆಯಲ್ಲವೆ? ಇದರ ನಡುವೆಯೇ ಟಿವಿ, ಮೊಬೈಲ್‌ಗಳು ಬಂದಮೇಲೆ ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಆತಂಕದ ಮಾತುಗಳು ಆಗಾಗ ಕೇಳಿಬರುತ್ತಿರುತ್ತವೆ.ಸಾಹಿತ್ಯದ ಓದು ಕಡಿಮೆಯಾಗಿರಬಹುದು; ಆದರೆ ಪರೀಕ್ಷೆಗಾಗಿ ಓದುವವರ ಸಂಖ್ಯೆ ಹೆಚ್ಚುತ್ತಿದೆಯೆನ್ನಿ. ಆಧುನಿಕ ಕಾಲ ಶಿಕ್ಷಣಪದ್ಧತಿಯಲ್ಲಿ  ಓದೇ ‘ಅನ್ನ’ವಾಗಿದೆ ಎಂದರೆ ತಪ್ಪಾಗದು.ಅತಿಯಾಗಿ ಓದುವವರನ್ನು ‘ಪುಸ್ತಕದ ಹುಳು’ ಎಂದು ಹಂಗಿಸುವುದುಂಟು. ಇಂಥ ಪುಸ್ತಕದ ಹುಳುಗಳ ಪಾಲಿಗೆ ಸಂತಸದ ಸುದ್ದಿಯೊಂದು ಹೊರಬಿದ್ದಿದೆ. ಹೆಚ್ಚು ಓದುವವರು ಹೆಚ್ಚು ವರ್ಷಗಳ ಕಾಲ ಬದುಕುತ್ತಾರಂತೆ! ಇಂಥ ವರದಿಯೊಂದನ್ನು ಅಮೆರಿಕೆಯ ಯೇಲ್ ವಿಶ್ವವಿದ್ಯಾಲಯದ ಸಂಶೋಧಕರು ಇತ್ತೀಚೆಗಷ್ಟೆ ಪ್ರಕಟಿಸಿದ್ದಾರೆ.ಐವತ್ತು ವರ್ಷಕ್ಕಿಂತ ಹೆಚ್ಚು ವಯಸ್ಸಾದ 3635 ಜನರನ್ನು ಈ ಅಧ್ಯಯನಕ್ಕೆಂದು ಬಳಸಿಕೊಳ್ಳಲಾಗಿತ್ತಂತೆ. ಇವರನ್ನು ಮೂರು ಗುಂಪುಗಳಲ್ಲಿ ವಿಂಗಡಿಸಲಾಗಿತ್ತು. ಮೊದಲನೆಯ ಗುಂಪಿನಲ್ಲಿ – ಪುಸ್ತಕಗಳನ್ನೇ ಓದದವರಿದ್ದರು. ಎರಡನೆಯ ಗುಂಪಿನಲ್ಲಿ – ವಾರಕ್ಕೆ ಮೂರೂವರೆ ಗಂಟೆಗಳಷ್ಟು ಓದುವವರನ್ನು ಸೇರಿಸಲಾಗಿತ್ತು.ಮೂರೂವರೆ ಗಂಟೆಗಿಂತಲೂ ಹೆಚ್ಚಿನ ಸಮಯ ಓದುವವರು ಮೂರನೆಯ ಗುಂಪಿನಲ್ಲಿದ್ದರು. ಸ್ವಾರಸ್ಯ ಎಂದರೆ, ಹೆಚ್ಚು ಓದುವವರಲ್ಲಿ ಸ್ತ್ರೀಯರದ್ದೇ ಮೇಲುಗೈ. ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಗಳ ಫಲಿತಾಂಶ ಗಮನಿಸಿರುವವರಿಗೆ ಇದೇನೂ ಹೊಸ ಸುದ್ದಿಯಲ್ಲವಷ್ಟೆ! ಪುಸ್ತಕ ಓದುವವರು ಓದದವರಿಗಿಂತಲೂ ಸರಾಸರಿ ಎರಡು ವರ್ಷಗಳಷ್ಟು ಹೆಚ್ಚು ಕಾಲ ಜೀವಿಸುವರಂತೆ. ಈ ಸಂಶೋಧನೆಯ ವಿವರಗಳು ‘ಸೋಷಿಯಲ್‌ ಸೈನ್ಸ್‌ ಅ್ಯಂಡ್‌ ಮೆಡಿಸನ್‌’ ಪತ್ರಿಕೆಯಲ್ಲಿ ಪ್ರಕಟವಾಗಿವೆ.ಹೆಚ್ಚು ಕಾಲ ಬದುಕುವ ಆಸೆಯಿರುವವರು ಇನ್ನು ಮುಂದೆ ಹೆಚ್ಚೆಚ್ಚು ಓದಬಹುದೇನೋ! ಆದರೆ ಜನರು ಓದುವಂಥ ಸಾಹಿತ್ಯವನ್ನೂ ನಮ್ಮ ಸಾಹಿತಿಗಳು, ಲೇಖಕರು ಬರೆಯಬೇಕಲ್ಲವೆ?

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.