ಸೋಮವಾರ, ಏಪ್ರಿಲ್ 12, 2021
25 °C

ಓದುಗರ ಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಭಿಮಾನದ ವಿಧಗಳು...

ಮಾರ್ಚ್ 13ರ ಸಾಪ್ತಾಹಿಕ ಪುರವಣಿಯಲ್ಲಿ ಜಯಂತ ಕಾಯ್ಕಿಣಿ ಅವರ ‘ಚೋಹೋ ಚೋ...’ ಹಾಡು ಪ್ರಕಟವಾಗಿದೆ. ಅದೇ ಪುರವಣಿಯಲ್ಲಿ ಡಾ.ರಹಮತ್ ತರೀಕೆರೆಯವರು ‘ಶ್ರೀ ನುಡಿಗೆ 100 ವರುಷ’ ಲೇಖನದಲ್ಲಿ ಕನ್ನಡದ ‘ಉಗ್ರಾಭಿಮಾನ’ ಹಾಗೂ ‘ಲಾಭಾಭಿಮಾನ’ಗಳ ಬಗ್ಗೆ ಮಾತನಾಡುತ್ತಾರೆ. (‘ಲಾಭಾಭಿಮಾನ’ ರಹಮತ್ ತರೀಕೆರೆ ಟಂಕಿಸಿದ ಸುಂದರ ಸಮಯೋಚಿತ ಪದಪುಂಜ). ಜಯಂತ ಕಾಯ್ಕಿಣಿ ಅವರ ಹಾಡು ಉಗ್ರಾಭಿಮಾನ ಅಲ್ಲ. ಹಾಗೆಯೇ ಲಾಭಾಭಿಮಾನದ ಸೂಚಿಯೂ ಅಲ್ಲ. ಅದು ಸರಳವಾದೊಂದು ಭಾವಾಭಿಮಾನ ಎನ್ನಬಹುದೇನೋ.ಜಂಗಂ ಜಕ್ಕಂ ಉತ್ತರಕನ್ನಡ ಜಿಲ್ಲೆಯ ಹಾಲಕ್ಕಿ ಒಕ್ಕಲಿಗರ ಸುಗ್ಗಿ ಕುಣಿತದ ಹಾಡು. ಈ ಹಾಡು ಓದಿದಾಗ ಉತ್ತರಕನ್ನಡ ಜಿಲ್ಲೆಯವರೇ ಆದ ವಿಷ್ಣುನಾಯಕರು ಬರೆದ ‘ಜಂಗಂ ಜಕ್ಕಂ’ ಕಾದಂಬರಿ ನೆನಪಾಯಿತು. ಅದರಲ್ಲಿ ಸ್ವಾತಂತ್ರ್ಯ ಹೋರಾಟ, ಭಾಷಾಭಿಮಾನ, ಸ್ಥಳೀಯ ಪ್ರೀತಿ ಎಲ್ಲವೂ ಸೇರಿದ ಪರ್ಯಾಯ ಚಿಂತನೆಯ ಪ್ರಯತ್ನ ಇದೆ. ರಹಮತ್ ತರೀಕೆರೆಯವರು ಲಾಭಾಭಿಮಾನ ಹಾಗೂ ಉಗ್ರಾಭಿಮಾನ ಎರಡಕ್ಕೂ ಹೊರತಾದ ಕನ್ನಡ ಅಭಿಮಾನ ಇರುವ, ಸಾಂಸ್ಕೃತಿಕ ಹಾಗೂ ವ್ಯಾವಹಾರಿಕ ಎರಡೂ ನೆಲೆಗಳಲ್ಲಿ ಯಶಸ್ವಿಯಾಗಬಲ್ಲ ಪರ್ಯಾಯ ಯಾವುದು ಎಂದು ಯೋಚಿಸುತ್ತಾರೆ. ಶ್ರೀಯವರಲ್ಲಿನ ಪ್ರಭುನಿಷ್ಠೆ ಜನತೆಯ ಭಾಷೆಗೂ ಸಾಹಿತ್ಯಕ್ಕೂ ಅನ್ಯಾಯ ಎಸಗಲಿಲ್ಲ ಎಂದಾಗ, ಪರ್ಯಾಯ ಯಾವುದೆಂದು ಹುಡುಕುವ ಪ್ರಯತ್ನ ಸ್ಪಷ್ಟವಿದೆ.ವಿಷ್ಣು ನಾಯ್ಕರ ‘ಜಂಗಂ ಜಕ್ಕಂ’ ಕಾದಂಬರಿಯಲ್ಲಿ ಕೊನೆಗೆ ನಾಯಕ ಹೇಳುವುದು- ಜಗಳ ಸಾಕು ಮಾಡುವ ಹಿನ್ನೆಲೆಯಲ್ಲಿ- ಈ ಅರಳಿ ಮರದ ಬೇರುಗಳೆಲ್ಲಾ ಮೇಲೆದ್ದಿದೆ. ಬೇರಿನ ಮೇಲೆ ಅದಕ್ಕೊಂದು ಕಟ್ಟೆ ಕಟ್ಟಿ ಮರ ಜೋಪಾನ ಮಾಡಿ, ಹಾಗೆಯೇ ಎಲ್ಲಾ ಸಮುದಾಯದವರಿಗೆ ಕೂತು ಸಹವಾಸಕ್ಕೂ ನೆರಳಿನ ಒಂದು ಜಾಗವಾಗುತ್ತದೆ. ಸಾಂಕೇತಿಕವಾಗಿ ಬಹಳ ಮಹತ್ವವುಳ್ಳ ಆ ಸೂಚನೆ ಸಮಚಿತ್ತದಲ್ಲಿ ಪರ್ಯಾಯ ಹುಡುಕುವ ಪ್ರಾರಂಭವೇನೋ.‘ರಾಷ್ಟ್ರ’, ‘ರಾಜ್ಯ’ ಎರಡೂ ಇರಬೇಕಾದ ನೆಲೆ ನಮ್ಮದು. ಅದನ್ನು ಕುವೆಂಪು ಅವರು ನಾಡಗೀತೆಯಲ್ಲೇ ಸೂಚಿಸಿದ್ದಾರೆ. ‘ಜಯ್’ ಭಾರತ ಜನನಿಯ ತನುಜಾತೆ ಎಂದಾಗ, ಭಾರತ ಮಾತೆಯ ಸಂದರ್ಭದಲ್ಲಿ ಹಿಂದಿ ಮೂಲದ ‘ಜಯ್’, ಜಯ್‌ಹಿಂದ್, ಜಯ್ ಭಾರತಮಾತಾ ಎನ್ನುವ ‘ಜಯ್’, ಮುಂದಿನ ಸಾಲಿನಲ್ಲಿ ಕರ್ನಾಟಕ ಮಾತೆಯ ಸಂದರ್ಭದಲ್ಲಿ ನಮ್ಮ ಕನ್ನಡದ್ದಾದ ಪದ ‘ಜಯ’. ಹಿಂದಿಯ ‘ಜಯ್’ ಮತ್ತು ನಮ್ಮ ‘ಜಯ’ ಒಟ್ಟಿಗೆ. ‘ರಾಷ್ಟ್ರ’ - ‘ರಾಜ್ಯ’ ಒಟ್ಟಿಗೆ ಇದ್ದೂ ನಾವು ಕನ್ನಡಿಗರಾಗಬೇಕಾದ ಪರ್ಯಾಯ ಚಿಂತನೆ.ಇತ್ತೀಚೆಗೆ ಸಾಪ್ತಾಹಿಕ ಪುರವಣಿ ಬಹಳ ಚೆನ್ನಾಗಿ ಬರುತ್ತಿದೆ. ಅಪರೂಪದ ಪುಸ್ತಕಗಳ ಮಾಹಿತಿಯೂ ಇದೆ. ಅಭಿನಂದನೆಗಳು.

 -ಎಸ್.ಆರ್. ವಿಜಯಶಂಕರ, ಬೆಂಗಳೂರುಆತ್ಮಾವಲೋಕನದ ಕಾಲ

ನಾಗೇಶ ಹೆಗಡೆ ಅವರ ‘ಫುಕುಶಿಮಾ ಈಗ ಹಿರೊಶಿಮಾ’ ಲೇಖನ (ಮಾ.20, ಸಾ.ಪು.) ಅಣುವಿದ್ಯುತ್ ಸ್ಥಾವರಗಳ ಕರಾಳಮುಖದ ಚಿತ್ರಣದ ಜತೆಗೆ ನಮ್ಮ ದೇಶದ ಅಣುವಿದ್ಯುತ್ ಸ್ಥಾವರಗಳ ಸುರಕ್ಷತೆಯ ಬಗೆಗೆ ಚಿಂತನೆಗೆ ಪ್ರೇರಣೆ ನೀಡುತ್ತದೆ. ನಮ್ಮ ಜೀವ ಹೋದರೂ ಸರಿಅನಾಹುತಕ್ಕೊಳಗಾಗಿರುವ ಅಣುಸ್ಥಾವರಗಳನ್ನು ದುರಸ್ಥಿಪಡಿಸಿಯೇ ತೀರುತ್ತೇವೆ ಎಂಬ ಮನೋಸ್ಥೈರ್ಯ ನಮ್ಮಲ್ಲಿದೆಯೇ ಎಂಬುದನ್ನು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ತಾಂತ್ರಿಕವಾಗಿ ಉತ್ತುಂಗದಲ್ಲಿರುವ ಜಪಾನೀಯರು ನಿಯಂತ್ರಿಸಲಾಗದ ದುರಂತಗಳನ್ನು ನಾವು ನಿಯಂತ್ರಿಸಬಲ್ಲೆವೆಂದು ಹೇಳುವುದು ಬೊಗಳೆಯೇ ಸರಿ.ಪಾಶ್ಚಾತ್ಯ ಜೀವನ ಶೈಲಿ ಅನುಕರಿಸುತ್ತಾ ಇಂಧನ ಬೇಡಿಕೆಯನ್ನು ಏರಿಸುತ್ತಲೇ ಸಾಗಿರುವ, ಪ್ರತಿಯೊಂದಕ್ಕೂ ಸನಾತನ ಧರ್ಮದಲ್ಲೇ ಉತ್ತರ ಕಂಡುಕೊಳ್ಳಲು ಯತ್ನಿಸುವ ನಮ್ಮವರಿಗೆ ಅದೇ ಋಷಿಮುನಿಗಳು ನಡೆಸಿದ ಸರಳ ಬದುಕು ಪಥ್ಯವಾಗುವುದಿಲ್ಲ. ಐಟಿ-ಬಿಟಿಯಷ್ಟೇ ಅಭಿವೃದ್ಧಿ ಎಂದು ಭ್ರಮಾಲೋಕದಲ್ಲಿರುವ ನಾವು ಇತರೆ ಜ್ಞಾನ ಕ್ಷೇತ್ರಗಳನ್ನು ಕಡೆಗಣಿಸಿದ್ದೇವೆ. ಮುಂದುವರೆದ ರಾಷ್ಟ್ರಗಳು ತಾವು ಅಣುವಿದ್ಯುತ್ ಸ್ಥಾವರ ಕಟ್ಟುವುದನ್ನು ನಿಲ್ಲಿಸಿ, ಹಳಸಲು ತಂತ್ರಜ್ಞಾನವನ್ನು ನಮ್ಮಂತಹ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಮಾರುತ್ತಿರುವುದರ ಹಿಂದಿನ ಹುನ್ನಾರವನ್ನು ನಾವು ಅರ್ಥಮಾಡಿಕೊಳ್ಳುತ್ತಿಲ್ಲ. ಫುಕುಶಿಮಾದಂತಹ ದುರ್ಘಟನೆ ನಮ್ಮಲ್ಲಿ ಸಂಭವಿಸಿದ್ದಲ್ಲಿ ಆಗುತ್ತಿದ್ದ ಅನಾಹುತ ಊಹಾತೀತ. 

 -ಸಿದ್ದರಾಜು,  ವಿಜ್ಞಾನ ಮತ್ತು ಪರಿಸರ ಶಿಕ್ಷಣ ಅಕಾಡೆಮಿ ಅಧ್ಯಕ್ಷರು, ಮಂಡ್ಯಚಿಂತನಾರ್ಹ ಲೇಖನ

‘ದಣಿವು ಪಥಿಕರಿಗೆ ಹೊರತು ಪಥಕ್ಕಲ್ಲ’ ರಹಮತ್ ತರಿಕೆರೆಯವರ ಲೇಖನ (ಮಾರ್ಚ್ 20) ಪ್ರವಾಸಿಗಳ ವಿಭಿನ್ನ ಆಯಾಮಗಳನ್ನು ತೆರೆದಿದೆ. ತಿರುಗಾಟವನ್ನು ಯಾರು ಯಾಕಾಗಿ ಮಾಡುತ್ತಾರೆ ಎಂಬುದರ ಮೇಲೆ ಅದರ ಮೌಲ್ಯ ನಿರ್ಣಯವಾಗುತ್ತದೆ. ನಾಡಿನ ಬದುಕನ್ನು ಅರಿಯುವ ಒಂದು ಅಪೂರ್ವ ವಿಧಾನಗಳಲ್ಲಿ ಒಂದು ಎಂಬ ಲೇಖಕರ ಮಾತು ಚಿಂತನಾರ್ಹ. ಈ ಲೇಖನ ಓದಿದಾಗ ನನಗೆ ತುಮಕೂರಿನ ಓರ್ವ ನಿವೃತ್ತ ಶಿಕ್ಷಕ, ಗಾಂಧಿವಾದಿ, ಸರ್ವೋದಯ ಕಾರ್ಯಕರ್ತ ಕೆ.ಸಿ.ಲಕ್ಷ್ಮೀನರಸಿಂಹಯ್ಯನವರ ನೆನಪಾಗುತ್ತದೆ. ಇತ್ತೀಚೆಗೆ ಅಗಲಿದ ಈ ವ್ಯಕ್ತಿ ಪಾದಚಾರಿಯಾಗಿ 14.1.1993ರಿಂದ 4.5.95ರವರೆಗೆ 850 ದಿನ, 13,500 ಕಿ.ಮೀ. ಸಂಚರಿಸಿ ಭಾರತದ ದರ್ಶನ ಮಾಡಿದರು. ತಮ್ಮ ಅಪೂರ್ವ ಅನುಭವಗಳನ್ನು ‘ನಾ ಕಂಡ ಭಾರತ’ ಪುಸ್ತಕದಲ್ಲಿ ದಾಖಲಿಸಿದರು. ಸದುದ್ದೇಶದ ಇಂಥ ಸಾಧಕರಿಗೆ ದಣಿವಾಗುವುದಿಲ್ಲ. 

 - ಸಂಗನಾಳಮಠ ಯು.ಎನ್, ಹೊನ್ನಾಳಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.