ಶನಿವಾರ, ಮೇ 15, 2021
25 °C

ಓದುವ ವಯಸ್ಸಿನಲ್ಲಿ ಸಂಸಾರದ ಸಂಕೋಲೆ

ಪ್ರಜಾವಾಣಿ ವಾರ್ತೆ/ವಿಶೇಷ ವರದಿ Updated:

ಅಕ್ಷರ ಗಾತ್ರ : | |

ರಾಮನಗರ:  ಜಿಲ್ಲಾ ಕೇಂದ್ರ ರಾಮನಗರದಿಂದ ಕೇವಲ ಐದಾರು ಕಿ.ಮೀ ದೂರದ ರಾಂಪುರದಲ್ಲಿ ಬಾಲ್ಯ ವಿವಾಹವಾಗಿರುವ ಘಟನೆ ತಡವಾಗಿ ಬಯಲಿಗೆ ಬಂದಿದೆ.



ಹೀಗೆ ಬಾಲ್ಯ ವಿವಾಹವಾಗಿರುವ ಬಾಲಕಿಯ ವಯಸ್ಸು 11 ಆಗಿದ್ದರೆ, ಬಾಲಕನ ವಯಸ್ಸು 17 !



ರಾಮನಗರ ತಾಲ್ಲೂಕಿನ ಕಸಬಾ ಹೋಬಳಿಯ ಮಾಯಗಾನಹಳ್ಳಿ ಕ್ಲಸ್ಟರ್‌ನ ರಾಂಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ವರ್ಷ ಮೂರನೇ ತರಗತಿ ಪಾಸಾಗಿ, ಈ ವರ್ಷ ನಾಲ್ಕನೇ ತರಗತಿಗೆ ಪ್ರವೇಶ ಪಡೆಯಬೇಕಿದ್ದ ಬಾಲಕಿ ಈಗ ಸಂಸಾರದ ಸಂಕೋಲೆಯ ಬಂಧನಕ್ಕೆ ಒಳಗಾಗಿದ್ದಾಳೆ.



ರಾಂಪುರದಿಂದ ಒಂದೂವರೆ ಕಿ.ಮೀ ದೂರದಲ್ಲಿ ಇರುವ ಪೂಜಾರಿ ಕಾಲೊನಿಯ ಇರುಳಿಗರ ಸಮುದಾಯದ ಚಿಕ್ಕೋನಯ್ಯ ಅವರ ಮಗಳಾದ ಈ ಬಾಲಕಿಯನ್ನು ಅಪ್ರಾಪ್ತ ಬಾಲಕನ ಜತೆಗೆ ವಿವಾಹ ಮಾಡಿಸಲಾಗಿದೆ. ಈ ವಿವಾಹ ಶಾಲೆಯ ಬೇಸಿಗೆ ರಜೆ ಸಂದರ್ಭದಲ್ಲಿ ಜರುಗಿದೆ. ಈ ಕುರಿತು ರಾಂಪುರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ನರಸಿಂಹಯ್ಯ ಹಾಗೂ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ನಿಂಗರಾಜು ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರಿಗೆ ದೂರು ನೀಡಿದ್ದಾರೆ.



ಪತ್ತೆಯಾದದ್ದು ಹೇಗೆ ?: `ಬೇಸಿಗೆ ರಜೆಯ ಅವಧಿಯಲ್ಲಿ ಬರಗಾಲದ ಬಿಸಿಯೂಟ ಕಾರ್ಯ ಶಾಲೆಯಲ್ಲಿ ಚಾಲ್ತಿಯಲ್ಲಿತ್ತು. ಆರಂಭದ ಕೆಲ ದಿನ ಬಿಸಿಯೂಟಕ್ಕೆ ಹಾಜರಾದ ಬಾಲಕಿ ನಂತರ ಗೈರಾದಳು. ಈ ಬಗ್ಗೆ ವಿಚಾರಿಸಿದಾಗ ತೋಟ ಕಾಯಲು ಹೋಗುತ್ತಿದ್ದಾಳೆ ಎಂದು ಗೊತ್ತಾಯಿತು. ನಂತರ ಶಾಲೆ ಆರಂಭವಾಗಿ ಕೆಲ ದಿನಗಳಾದರೂ ಬಾಲಕಿ ಶಾಲೆಗೆ ಬಾರದಿದ್ದಾಗ ಇತರ ಮಕ್ಕಳಲ್ಲಿ ವಿಚಾರಿಸಿದಾಗ ಆ ಬಾಲಕಿಗೆ ಮದುವೆ ಆಗಿರುವುದು ತಿಳಿದು ಬಂದಿತು. ಈ ಕುರಿತು ಪರಿಶೀಲನೆ ನಡೆಸಿದಾಗ ಅದು ಖಚಿತ ಎಂದು ಗೊತ್ತಾಯಿತು' ಎಂದು ಶಾಲೆಯ ಮುಖ್ಯಶಿಕ್ಷಕ ನರಸಿಂಹಯ್ಯ ಅವರು `ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದರು.



ಶಾಲಾ ದಾಖಲಾತಿಗಳ ಪ್ರಕಾರ ಬಾಲಕಿ 2002ರ ಮೇ 10ರಂದು ಜನಿಸಿದ್ದು, ಆಕೆಗೀಗ 11 ವರ್ಷ. ಅಲ್ಲದೆ ಬಾಲಕನಿಗೆ 17 ವರ್ಷವಾಗಿದೆ ಎಂದು ಅವರು ಮಾಹಿತಿ ನೀಡಿದರು. ಈ ಕುರಿತು ಕೂಡಲೇ ನಾನು ಸಂಬಂಧಿಸಿದ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇನೆ ಎಂದು ಅವರು ಹೇಳಿದರು.



ಕೆಲ ವರ್ಷಗಳ ಹಿಂದೆ ರಾಮನಗರದಲ್ಲಿ ಸಾಮೂಹಿಕ ವಿವಾಹ ನಡೆದ ಸಂದರ್ಭದಲ್ಲಿ ಇಲ್ಲಿನ ಇಬ್ಬರು ಅಪ್ರಾಪ್ತ ಬಾಲಕಿಯರಿಗೆ ವಿವಾಹ ಮಾಡಿಸಲಾಗಿತ್ತು. ಆಗ ನಾನು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೆ. ಅಲ್ಲದೆ ಬಾಲ್ಯ ವಿವಾಹದಿಂದ ಆಗುವು ದುಷ್ಪರಿಣಾಮಗಳ ಕುರಿತು ಆಗಾಗ ಶಾಲೆಯ ಸುತ್ತಮುತ್ತಲ ಗ್ರಾಮಗಳ ಜನರಲ್ಲಿ ಅರಿವು ಮೂಡಿಸುವ ಕಾರ್ಯವನ್ನೂ ಮಾಡುತ್ತಿದ್ದೇನೆ. ಆದರೂ ನಮಗೆ ಗೊತ್ತಾಗದೆ ಬಾಲ್ಯ ವಿವಾಹಗಳು ನಡೆಯುತ್ತಿರುವುದು ಬೇಸರ ಮೂಡಿಸಿದೆ ಎಂದು ಅವರು ಪ್ರತಿಕ್ರಿಯಿಸಿದರು.



ಪೂಜಾರ ಕಾಲೊನಿಯಲ್ಲಿ ಇರುವ ಇರುಳಿಗರ ಸಮುದಾಯದವರು ಹೆಚ್ಚಿನ ಜನಕ್ಕೆ ತಿಳಿಸದೆ ದೇವಾಲಯಕ್ಕೆ ತೆರಳಿ ಮದುವೆ ಕಾರ್ಯ ಮಾಡುತ್ತಾರೆ. ಶಾಲೆಗೆ ಬೇಸಿಗೆ ರಜೆ ಇದ್ದಾಗ ಕೆಲವರು ಸೇರಿ ಈ ಇಬ್ಬರು ಅಪ್ರಾಪ್ತರಿಗೆ  ಮದುವೆ ಮಾಡಿಸಿದ್ದಾರೆ. ಅದು ನನ್ನ ಗಮನಕ್ಕೆ ಬಂದ ಕೂಡಲೇ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿರುವೆ ಎಂದು ಅವರು ತಿಳಿಸಿದರು.



ಠಾಣೆಯಲ್ಲಿ ದೂರು ದಾಖಲು:ಅಪ್ರಾಪ್ತ ಬಾಲಕ ಮತ್ತು ಬಾಲಕಿಯ ನಡುವೆ ಬಾಲ್ಯ ವಿವಾಹ ಆಗಿರುವ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗುವುದು ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಕೆ.ರಾಧಾ `ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದರು.



ಬಾಲ್ಯ ವಿಹಾಹ ಪದ್ಧತಿ ಅಪರಾಧವಾಗಿದ್ದು ವಿವಾಹ ನಡೆಸಲು ಕಾರಣಕರ್ತರಾದವರ ವಿರುದ್ಧ ದೂರು ನೀಡಲಾಗುವುದು ಎಂದ ಅವರು, ಈ ಪ್ರಕರಣದಲ್ಲಿ ವಿವಾಹವಾಗಿರುವ ಬಾಲಕ ಅಪ್ರಾಪ್ತನಾದ್ದರಿಂದ ಬಾಲ ನ್ಯಾಯಮಂಡಳಿ ಮುಂದೆ ಹಾಜರುಪಡಿಸಲು ಕ್ರಮ ತೆಗೆದುಕೊಳ್ಳುವುದು ಎಂದರು.



ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಘಟಕದ ಸಿಬ್ಬಂದಿ ಜಂಟಿಯಾಗಿ ಠಾಣೆಗೆ ಹೋಗಿ ಶುಕ್ರವಾರ ದೂರು ದಾಖಲಿಸುವರು ಎಂದು ಅವರು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.