ಭಾನುವಾರ, ಮೇ 9, 2021
28 °C

ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿಯ ಗರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿಯ ಗರಿ

ಬೆಂಗಳೂರು: ಕನ್ನಡದ ಹಿರಿಯ ಕವಿ, ನಾಟಕಕಾರ ಚಂದ್ರಶೇಖರ ಕಂಬಾರ ಅವರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ಇವರ ಸಮಗ್ರ ಸಾಹಿತ್ಯಕ್ಕೆ ಈ ಗೌರವ ನೀಡಲಾಗಿದೆ.  ಸರಿ ಸುಮಾರು ದಶಕದ ನಂತರ ಕಂಬಾರ ಮೂಲಕ ಕನ್ನಡಕ್ಕೆ ಮತ್ತೊಂದು ಜ್ಞಾನಪೀಠ ಕಿರೀಟ ದೊರೆತಿದೆ.  ಕನ್ನಡದಲ್ಲಿ ಜ್ಞಾನಪೀಠ ಪಡೆದವರ  ಸಂಖ್ಯೆ ಎಂಟಕ್ಕೇರಿದೆ. 

 

ಜನಪದ ಸೊಗಡನ್ನು ತಮ್ಮ ಬರವಣಿಗೆಯಲ್ಲಿ ತಂದ ಇವರು ಕೇವಲ ಕವಿ ಮಾತ್ರವಲ್ಲ ನಾಟಕಕಾರ, ಸಂಗೀತ ನಿರ್ದೇಶಕ, ಚಲನಚಿತ್ರ ನಿರ್ದೇಶಕ, ಜಾನಪದ ತಜ್ಞ.

 ಮುಖ್ಯವಾಗಿ ಕವಿ, ನಾಟಕಕಾರರಾಗಿ ಇವರು ಜನಪ್ರಿಯರು. ಇವರು ಬರೆದ ಕೃತಿಗಳು ಹಲವು ಹತ್ತು. ಅದರಲ್ಲಿ ಹೇಳತೇನ ಕೇಳ, ತಕರಾರಿನವರು, ಸಾವಿರದ ನೆರಳು, ಬೆಳ್ಳಿ ಮೀನು ಮುಖ್ಯ ಕವನಸಂಕಲನಗಳು. ಜೋಕುಮಾರಸ್ವಾಮಿ ಇವರ ಸುಪ್ರಸಿದ್ಧ ನಾಟಕ.  ಅಲ್ಲದೆ ಋಷ್ಯಶೃಂಗ, ಕಾಡುಕುದುರೆ, ಹರಕೆಯ ಕುರಿ, ಅಂಗಿ ಮ್ಯಾಲಂಗಿ, ಬೆಪ್ಪುತಕ್ಕಡಿ ಬೋಳೆ, ಸಿರಿ ಸಂಪಿಗೆ, ಶಿಖರ ಸೂರ್ಯ ಇವರ ಇನ್ನಿತರ ಮುಖ್ಯ ನಾಟಕಗಳು.

ಕಾದಂಬರಿಕಾರರಾಗಿಯೂ ಹೆಸರು ಮಾಡಿರುವ ಇವರು ಜಿ.ಕೆ. ಮಾಸ್ತರರ ಪ್ರಣಯ ಪ್ರಸಂಗ, ಸಿಂಗಾರೆವ್ವ ಮತ್ತು ಅರಮನೆ ಕಾದಂಬರಿಗಳನ್ನು ಬರೆದಿದ್ದಾರೆ.

ತಮ್ಮ ಸಿರಿ ಸಂಪಿಗೆ ನಾಟಕಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಇವರು ಪಡೆದುಕೊಂಡಿದ್ದಾರೆ. ಕಬೀರ್ ಸಮ್ಮಾನ್ ಪ್ರಶಸ್ತಿಯನ್ನು ಇವರು ಮುಡಿಗೇರಿಸಿಕೊಂಡಿದ್ದಾರೆ.

ಇಲ್ಲಿಯವರೆಗೆ ಕನ್ನಡದಲ್ಲಿ ಕುವೆಂಪು, ದ.ರಾ. ಬೇಂದ್ರೆ, ಶಿವರಾಮಕಾರಂತ, ಮಾಸ್ತಿವೆಂಕಟೇಶ ಅಯ್ಯಂಗಾರ್, ವಿ.ಕೃ. ಗೋಕಾಕ್, ಯು.ಆರ್. ಅನಂತಮೂರ್ತಿ, ಗಿರೀಶ ಕಾರ್ನಾಡ ಅವರಿಗೆ ಈ ಪ್ರತಿಷ್ಠಿತ ಪ್ರಶಸ್ತಿ ಲಭಿಸಿತ್ತು. ಇದೀಗ ಕಂಬಾರರೂ ಕೂಡ ಈ ಸಾಲಿಗೆ ಸೇರಿದಂತಾಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.