ಸೋಮವಾರ, ಮಾರ್ಚ್ 8, 2021
31 °C

ಕಡಲ್ಕೊರೆತ: ಶಾಶ್ವತ ಪರಿಹಾರ-ಭರವಸೆ ಮಾತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಡಲ್ಕೊರೆತ: ಶಾಶ್ವತ ಪರಿಹಾರ-ಭರವಸೆ ಮಾತ್ರ

ಉಡುಪಿ: ದಶಕಗಳಿಂದ  ರೈತರಿಗೆ, ಮೀನುಗಾರರಿಗೆ ಕಂಟಕಪ್ರಾಯವಾಗಿದ್ದ ಕಡಲ್ಕೊರೆತ ಈ ಬಾರಿ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಮತ್ತೆ ಕಾಣಿಸಿಕೊಂಡಿದೆ. ಜಿಲ್ಲೆಯ 91 ಕಿ.ಮೀ ಕಡಲಿನುದ್ದಕ್ಕೂ ಅಲ್ಲಲ್ಲಿ ಅಲೆಗಳು ಕಿನಾರೆಯನ್ನು ನುಂಗಿಹಾಕುತ್ತಿವೆ.ಈಡೇರದ ಭರವಸೆ: ‘ಕಡಲ್ಕೊರೆತ ನಿವಾರಿಸಲು ಶಾಶ್ವತ ತಡೆಗೋಡೆ ನಿರ್ಮಿಸಲಾಗುತ್ತದೆ. ಈ ಭಾಗದ 300 ಕಿ.ಮೀ ಕರಾವಳಿಯ ಸಮೀಕ್ಷೆ ಪೂರ್ಣಗೊಂಡಿದೆ. ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ರೂಪಿಸುವ ನಿಟ್ಟಿನಲ್ಲಿ ಉಳ್ಳಾಲದಿಂದ ಕಾರವಾರದವರೆಗೆ  ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜಂಟಿ ಯೋಜನೆ ಅಡಿಯಲ್ಲಿ ರೂ 700 ಕೋಟಿ ವೆಚ್ಚದಲ್ಲಿ ಸಮಗ್ರ ಯೋಜನೆ ರೂಪಿಸಲಾಗಿದೆ’ಎಂದು ಮಲ್ಪೆ ಬಂದರಿಗೆ ಕಳೆದ ವರ್ಷ ಇದೇ ಅವಧಿಯಲ್ಲಿ ಭೇಟಿ ನೀಡಿದ್ದ ಬಂದರು ಹಾಗೂ ಪರಿಸರ ಖಾತೆ ಸಚಿವ ಕೃಷ್ಣ ಪಾಲೆಮಾರ್ ತಿಳಿಸಿದ್ದರು.ಆದರೆ ಯೋಜನೆಯ ಕಾಮಗಾರಿ ಇನ್ನೂ ಅನುಷ್ಠಾನಗೊಂಡಿಲ್ಲ. ಕೆಲವೆಡೆ ಪ್ರಗತಿ ಸಣ್ಣ ಪುಟ್ಟ ಕಾಮಗಾರಿ ನಡೆದಿದೆಯಾದರೂ ಜಿಲ್ಲೆಯ ಬಹುತೇಕ ಕಡೆ ಕಡಲ್ಕೊರೆತ ಸಮಸ್ಯೆಗೆ ಯಾವ ಪರಿಹಾರದ ಯತ್ನವೂ ಆಗಿಲ್ಲ.ಎಲ್ಲೆಲ್ಲಿ ಸಮಸ್ಯೆ?: ಜಿಲ್ಲೆಯಲ್ಲಿ ವಿಶೇಷವಾಗಿ ಕಾಪು, ಮಟ್ಟು, ಮೂಳುರು, ಕೈಕುಂಜಾಲು, ಪಡುಬಿದ್ರಿಯ ಎರ್ಮಾಳು, ಮಲ್ಪೆಯ ಹೂಡೆ, ಕೋಡಿ ಬೆಂಗ್ರೆ, ಪಡುತೋನ್ಸೆ ಗಳಲ್ಲಿ ಪ್ರತಿ ವರ್ಷ ಕಡಲ್ಕೊರೆತ ಕಾಣಿಸಿಕೊಳ್ಳುತ್ತದೆ.ಬಹಳಷ್ಟು ಕಡೆಗಳಲ್ಲಿ ಮೀನುಗಾರಿಕಾ ರಸ್ತೆಗಳೂ ಸಮುದ್ರಪಾಲಾಗಿವೆ. ಈಗಾಗಲೇ ಹೂಡೆ, ಪಡುಕೆರೆ, ಬೆಂಗ್ರೆಗಳಲ್ಲಿ ಕಡಲ್ಕೊರೆತ ಕಾಣಿಸಿಕೊಂಡಿದ್ದು, ಕೆಲವೆಡೆ ಭಾರಿ ಅಲೆಗಳು ಕಲ್ಲಿನ ತಡೆಗೋಡೆಗೆ ಅಪ್ಪಳಿಸುತ್ತಿವೆ. ಜಿಲ್ಲಾಧಿಕಾರಿಗೆ ವರದಿ: ಕಡಲ್ಕೊರೆತವಿರುವ ಪ್ರದೇಶಗಳಲ್ಲಿ ನಡೆಸಿರುವ ಸಮೀಕ್ಷೆ  ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಇಲಾಖೆಯ ಕಾರ್ಯ ನಿರ್ವಾಹಕ ಎಂಜಿನಿಯರ್ ನಾರಾಯಣ ಖಾರ್ವಿ, ‘ಕಡಲ್ಕೊರೆತ ಇನ್ನೂ ದೊಡ್ಡ ಪ್ರಮಾಣದಲ್ಲಿ ಪ್ರಾರಂಭವಾಗಿಲ್ಲ.ಮಲ್ಪೆ ಪಡುಕೆರೆ, ಹೂಡೆ. ಕೋಡಿಬೆಂಗ್ರೆಗಳಲ್ಲಿ ಸ್ವಲ್ಪ ಆಗಿದೆ. ಕುಂದಾಪುರ ತಾಲ್ಲೂಕು ವ್ಯಾಪ್ತಿಯಲ್ಲಿ ಪಡುವರಿ, ಸೋಮೇಶ್ವರಗಳಲ್ಲಿ ಒಂದೆರಡು ಕಡೆ ಈ ಸಮಸ್ಯೆ ಪ್ರಾರಂಭವಾಗಿದೆ. ಸ್ಥಳಕ್ಕೆ ಭೇಟಿ ನೀಡಿ, ಜಿಲ್ಲಾಧಿಕಾರಿಗೆ ವರದಿ ನೀಡಲಾಗಿದೆ’ ಎಂದರು.ಹೆಚ್ಚಿನ ಕಡೆಗಳಲ್ಲಿ ಸಮುದ್ರ ಕೊರೆತ ತಡೆ ಕಾಮಗಾರಿ ಇನ್ನಷ್ಟೇ ಆರಂಭವಾಗಬೇಕಿದೆ. ಕೆಲವೆಡೆ ಟೆಂಡರ್ ಆಗಿ ನಾಲ್ಕಾರು ವರ್ಷಗಳು ಕಳೆದರೂ ಕಾಮಗಾರಿ ಆಗಿಲ್ಲ ಎಂಬ ದೂರಿದೆ. ಈ ಬಗ್ಗೆ ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಸಭೆಯಲ್ಲಿ  ಸಾಕಷ್ಟು ಸಲ ಚರ್ಚೆ ನಡೆದಿದೆ. ಆದರೆ ಪರಿಹಾರ ಮಾತ್ರ ಮರೀಚಿಕೆ.‘ಸ್ಥಳೀಯ ರಾಜಕಾರಣಿಗಳು ಮಾತ್ರ ಕಡಲ್ಕೊರೆತದ ಬಗ್ಗೆ ಕೇವಲ ಆಶ್ವಾಸನೆ ನೀಡುತ್ತಾರೆಯೇ ಹೊರತು, ಯಾವುದೇ ಕ್ರಮ ಕೈಗೊಳ್ಳುವುದಿಲ್ಲ’ ಎನ್ನುವುದು ಮೀನುಗಾರರ ಆರೋಪ.ಬಹಳಷ್ಟು ಕಡೆ ಕಡಲ್ಕೊರೆತದ ನೆಪದಲ್ಲಿ ಲಾರಿಗಟ್ಟಲೆ ಕಲ್ಲು ಸುರಿಯಲಾಗಿದೆ.ಕೆಲವೆಡೆ ಮರಳು ಚೀಲದ ತಾತ್ಕಾಲಿಕ ತಡೆಗೋಡೆಗಳನ್ನು ನಿರ್ಮಿಸಲಾಗಿದೆ. ಆದರೆ ಮಳೆಗಾಲ ಮುಗಿಯುವ ಹೊತ್ತಿಗೆ ಕಲ್ಲು ಹಾಗೂ ಮರಳಿನ ಚೀಲಗಳು ಸಮುದ್ರ ಕೊರೆತಕ್ಕೆ ಸಿಕ್ಕಿ ಚೆಲ್ಲಾಪಿಲ್ಲಿಯಾಗಿ ಹೋಗಿರುತ್ತವೆ. ಇದರಿಂದ ಲಕ್ಷಾಂತರ ರೂಪಾಯಿ ಪೋಲಾಗುತ್ತದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು’  ಎಂಬುದು ಸ್ಥಳೀಯರ ಅನಿಸಿಕೆ.ಜಿಲ್ಲೆಯಲ್ಲಿ ಕಡಲ್ಕೊರೆತಗಳನ್ನು ತಡೆ ಬಗ್ಗೆ ಜಿ.ಪಂ.ಸದಸ್ಯರು ದನಿ ಎತ್ತಿದರೂ ಜಿ.ಪಂ.ನಲ್ಲಿ ಕಡಲ್ಕೊರೆತ ತಡೆಗೆ ಪ್ರತ್ಯೇಕ ಕ್ರಿಯಾಯೋಜನೆ ಸಿದ್ಧಪಡಿಸುವುದಿಲ್ಲ. ಏನಿದ್ದರೂ ಸರ್ಕಾರವೇ ನೇರವಾಗಿ ಪರಿಹಾರ ಕಂಡುಹಿಡಿಯಬೇಕು ಎಂಬುದು ಜನಪ್ರತಿನಿಧೀಗಳ ಅಳಲು.‘ಕಡಲ್ಕೊರೆತ ಶಾಶ್ವತವಾಗಿ ಬಗೆಹರಿಸುವ ಕಾಳಜಿ ಇದೆ.  ಆದರೆ ಜಿ.ಪಂ.ಅದಕ್ಕಾಗಿ ಪ್ರತ್ಯೇಕ ಕ್ರಿಯಾಯೋಜನೆ ಸಿದ್ಧಪಡಿಸುವುದಿಲ್ಲ. ಅದಕ್ಕೆ ಅನುದಾನವೂ ಇಲ್ಲ. ನಷ್ಟ ಸಂಭವಿಸಿದಾಗ ಜಿ.ಪಂ. ಎಂಜಿನಿಯರಿಂಗ್ ವಿಭಾಗ ಪರಿಶೀಲನೆ ಮಾಡುತ್ತದೆ.ಲೋಕೋಪಯೋಗಿ ಇಲಾಖೆ ಜತೆ ಕೈಜೋಡಿಸಿ ಹಾನಿ ಸರಿಪಡಿಸುವ ಕೆಲಸ ಮಾಡುತ್ತೇವೆ’ ಎಂದು ಜಿ.ಪಂ. ಅಧ್ಯಕ್ಷ ಕಟಪಾಡಿ ಶಂಕರ ಪೂಜಾರಿ ‘ಪ್ರಜಾವಾಣಿ’ಗೆ ತಿಳಿಸಿದರು.ಬಂದರು ಇಲಾಖೆಗೂ ಅನುದಾನದ ಸಮಸ್ಯೆ: ‘ಕಡಲ್ಕೊರೆತ ತಡೆಗೆ ಕಳೆದ ವರ್ಷದ 55 ಲಕ್ಷ ರೂಪಾಯಿ ಖರ್ಚು ಮಾಡಿದ್ದ ಬಂದರು ಮತ್ತು ಮೀನುಗಾರಿಕಾ ಇಲಾಖೆಗೆ ಜಿಲ್ಲಾಡಳಿತ ಇನ್ನೂ ಹಣ ಪಾವತಿಸಿಲ್ಲ. ಹಾಗಾಗಿ ಈ ವರ್ಷ ಕಡಲ್ಕೊರೆತ ತಡೆ ಕಾಮಗಾರಿ ಕೈಗೆತ್ತಿಕೊಳ್ಳಲು ಗುತ್ತಿಗೆದಾರರು ಹಿಂದೇಟು ಹಾಕುತ್ತಿದ್ದಾರೆ.ಜಿಲ್ಲಾಧಿಕಾರಿ ಬಳಿ ಈ ಬಗ್ಗೆ ಚರ್ಚಿಸಿದ್ದು ಆ ಹಣವನ್ನು ಮಂಜೂರು ಮಾಡುವ ಭರವಸೆ ನೀಡಿದ್ದಾರೆ’ ಎಂದು ಇಲಾಖೆ ಮೂಲಗಳು ತಿಳಿಸಿವೆ.‘ಮಳೆಯ ಆರ್ಭಟ ಹೆಚ್ಚಾದಂತೆ ಕಡಲ್ಕೊರೆತ ಹಾವಳಿ ಮತ್ತಷ್ಟು ಉಲ್ಬಣಿಸಲಿದೆ.ಆಗ ಜಿಲ್ಲಾಡಳಿತ, ಸಚಿವರು, ಶಾಸಕರು, ಜನಪ್ರತಿನಿಧಿಗಳ ದಂಡು ಸ್ಥಳಕ್ಕೆ ಭೇಟಿ ನೀಡಿ ಭರವಸೆಯ ಮಹಾಪೂರ ಹರಿಸುತ್ತದೆ. ಶಾಶ್ವತ ಪರಿಹಾರ ಮಾತ್ರ ಮರೀಚಿಕೆ’ ಎನ್ನುವುದು ಕಡಲತಡಿಯ ಜನರ ಅನಿಸಿಕೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.