ಮಂಗಳವಾರ, ಜೂನ್ 22, 2021
29 °C

ಕಡಿಮೆ ಖರ್ಚಿನಲ್ಲಿ ವೃತ್ತಿಪರ ಶಿಕ್ಷಣ ಸಿಗುವಂತಾಗಬೇಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೂ ಎಂಜಿನಿಯರಿಂಗ್, ವೈದ್ಯಕೀಯ ಮೊದಲಾದ ವೃತ್ತಿಪರ ಕೋರ್ಸ್‌ಗಳ ಶಿಕ್ಷಣ ಕಡಿಮೆ ಖರ್ಚಿನಲ್ಲಿ ದೊರೆಯುವಂತೆ ಆಗಬೇಕು ಎಂದು ಕೇಂದ್ರ ಕಾರ್ಮಿಕ ಸಚಿವ ಎಂ. ಮಲ್ಲಿಕಾರ್ಜುನ ಖರ್ಗೆ ಆಶಿಸಿದರು.ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಬಾಪೂಜಿ ಸುವರ್ಣ ಮಹೋತ್ಸವದಲ್ಲಿ `ಸುವರ್ಣ ಬಾಪೂಜಿ~ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.ದೇಶದಲ್ಲಿ 2011ರ ಜನಗಣತಿ ಪ್ರಕಾರ ಸಾಕ್ಷರತೆಯ ಪ್ರಮಾಣ ಶೇ. 74ರಷ್ಟಿದೆ. ಹಿಂದುಳಿದ ಗ್ರಾಮೀಣ ಪ್ರದೇಶಗಳಲ್ಲಿ ಈ ಪ್ರಮಾಣ ಇನ್ನೂ ಕಡಿಮೆ ಇದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಶಿಕ್ಷಣಕ್ಕೆ ಒತ್ತು ನೀಡಿದೆ. ಶಿಕ್ಷಣ ಹಕ್ಕು ಕಾಯ್ದೆ ಜಾರಿಗೊಳಿಸಿ, ಕೋಟ್ಯಂತರ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುತ್ತಿದೆ.

 

ಪ್ರಾಥಮಿಕ ಹಂತದಿಂದ 12ನೇ ತರಗತಿವರೆಗೆ ಎಲ್ಲರಿಗೂ ಶಿಕ್ಷಣ ಕಲ್ಪಿಸಲು ರೂ 21 ಸಾವಿರ ಕೋಟಿ ಖರ್ಚು ಮಾಡಲಾಗುತ್ತಿದೆ. ಮಧ್ಯಾಹ್ನದ ಬಿಸಿಯೂಟ ಯೋಜನೆಗಾಗಿ ರೂ 11 ಸಾವಿರ ಕೋಟಿ ವ್ಯಯಿಸಲಾಗುತ್ತಿದೆ. ಪ್ರಪಂಚದಲ್ಲಿ ಅತ್ಯಂತ ಕಡಿಮೆ ವೆಚ್ಚದಲ್ಲಿಶಿಕ್ಷಣ ಸೌಲಭ್ಯ ದೊರೆಯುತ್ತಿದ್ದರೆ ಅದು ಭಾರತದಲ್ಲಿ ಮಾತ್ರ ಎಂದು ತಿಳಿಸಿದರು.ಹಳ್ಳಿಗಳ ಮಕ್ಕಳು, ಹೆಣ್ಣು ಮಕ್ಕಳು ಶಾಲೆಗೆ ಬರುವಂತಹ ವಾತಾವರಣ ನಿರ್ಮಾಣ ಆಗಬೇಕು. ಬಡವರ ಮಕ್ಕಳು ಹೆಚ್ಚು ಹೆಚ್ಚು  ಓದಬೇಕು.  ಇಂದಿನ  ದಿನಗಳಲ್ಲಿ  ಕೌಶಲ  ಅಭಿವೃದ್ಧಿ  ಬಹಳ ಮುಖ್ಯ. ಕೌಶಲವಿದ್ದ ೆ ಖಂಡಿತ ಕೆಲಸ  ಸಿಗುತ್ತದೆ.  ಸಾಮಾನ್ಯ  ಪದವಿಗಳು,  ಪ್ರಾಥಮಿಕ  ಜ್ಞಾನಕ್ಕೆ ಇಂದು  ಬೆಲೆ ಇಲ್ಲ.  ವೃತ್ತಿಪರ  ಕೋರ್ಸ್‌ಗಳನ್ನು ತೆಗೆದುಕೊಳ್ಳಬೇಕು. ಇದಕ್ಕಾಗಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು, ಕೌಶಲ ಅಭಿವೃದ್ಧಿ ಮಂಡಳಿ ಸ್ಥಾಪಿಸಿದ್ದಾರೆ. 11 ವರ್ಷದವರೆಗೆ 50 ಕೋಟಿ ಮಕ್ಕಳಿಗೆ ತರಬೇತಿ ನೀಡಿ ಪ್ರಬಲ ದೇಶವಾಗಿಸಲು ಹೆಜ್ಜೆ ಇಟ್ಟಿದ್ದಾರೆ ಎಂದು ಹೇಳಿದರು.50 ವರ್ಷ ಪೂರೈಸಿರುವ ಬಾಪೂಜಿ ವಿದ್ಯಾಸಂಸ್ಥೆ ಹಳ್ಳಿ ಮಕ್ಕಳಿಗೆ ಉಚಿತ ಶಿಕ್ಷಣ ಒದಗಿಸಲಿ. ತಾಲ್ಲೂಕು ಕೇಂದ್ರಗಳಲ್ಲಿ ಐಟಿಐ, ಎಟಿಐ, ತರಬೇತಿ ಕೇಂದ್ರಗಳು ಹಾಗೂ ಉದ್ಯೋಗ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಿ. ವೃತ್ತಿ ಆಧಾರಿತ ಕೋರ್ಸ್‌ಗಳನ್ನು ನೀಡಲಿ ಎಂದು ಆಶಿಸಿದರು.ಸಂಸ್ಥೆಗಳನ್ನು ಹುಟ್ಟು ಹಾಕುವುದು ಸುಲಭ. ಅದನ್ನು ಸತತ ಯಶಸ್ವಿಯಾಗಿ, ಜನರ ಪ್ರೀತಿಗೆ ಪಾತ್ರರಾಗಿ ನಡೆಸಿಕೊಂಡು ಹೋಗುವುದು ಬಹಳ ಮುಖ್ಯ. ಈ ಕೆಲಸವನ್ನು ಬಾಪೂಜಿ ವಿದ್ಯಾಸಂಸ್ಥೆ ಮಾಡಿದೆ. ಹಿಂದೆ, ಜವಳಿ ಕಾರ್ಖಾನೆಗಳಿಗೆ ಹೆಸರಾಗಿದ್ದ ದಾವಣಗೆರೆ ಈಗ ಪ್ರಪಂಚದ ನಕ್ಷೆಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿಯೂ ಹೆಸರು ಗಳಿಸಿ, `ಶಿಕ್ಷಣ ಕಾಶಿ~ ಎನಿಸಿದೆ. ತಿಂಗಳ ಹಿಂದೆ, ಅಮೆರಿಕಾಕ್ಕೆ ಹೋಗಿದ್ದೆ. ಅಲ್ಲಿನ ಟೆಕ್ಸಾಸ್ ವಿವಿಯ ಬಹುತೇಕ ವಿದ್ಯಾರ್ಥಿಗಳು ತಾವು ಓದಿದ್ದು ದಾವಣಗೆರೆಯಲ್ಲಿ ಎಂದು ನೆನೆದರು.ದಾವಣಗೆರೆ ತಮ್ಮ ಪ್ರೀತಿಪಾತ್ರವಾದ ನಗರ ಎಂದರು. ಇದೇ ಅನುಭವ ಇಂಗ್ಲೆಂಡ್‌ನಲ್ಲಿಯೂ ಆಯಿತು. ದಾವಣಗೆರೆಯಲ್ಲಿ ವೈದ್ಯಕೀಯ, ಎಂಜಿನಿಯರಿಂಗ್ ಸೀಟು ಕೊಡಿಸಿ ಎಂದು ಆಗಾಗ ಹಲವರು ತಮ್ಮನ್ನು ಕೇಳುತ್ತಾರೆ. ಈ ಖ್ಯಾತಿಯ ಹಿಂದೆ ಶಾಮನೂರು ಶಿವಶಂಕರಪ್ಪ ಮತ್ತು ತಂಡದವರ ಶ್ರಮವಿದೆ ಎಂದು ಶ್ಲಾಘಿಸಿದರು.ಬಡವರ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಸಂಗ ಮಾಡಬೇಕು. ದೇಶದ ಹಾಗೂ ವೈಯಕ್ತಿಕ ಅಭಿವೃದ್ಧಿಗೆ ಶಿಕ್ಷಣ ಬಹಳ ಮುಖ್ಯ. ವಿವಿಧ ಕ್ಷೇತ್ರದ ಶಿಕ್ಷಣ ನೀಡುತ್ತಿರುವ ಬಾಪೂಜಿ ಸಂಸ್ಥೆ  ಕಾರ್ಯ ಶ್ಲಾಘನೀಯ ಎಂದರು.ಸಂಸತ್ ಸದಸ್ಯ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಬಾಪೂಜಿ ವಿದ್ಯಾಸಂಸ್ಥೆ ರಾಜ್ಯ, ದೇಶದಲ್ಲಿ ಮಾತ್ರವಲ್ಲ ಅಂತಾರಾಷ್ಟ್ರೀಯಮಟ್ಟದಲ್ಲಿ ಹೆಸರು ಗಳಿಸಿದೆ. ಶಾಮನೂರು ಶಿವಶಂಕರಪ್ಪ `ದಾವಣಗೆರೆಯ ಶಿಕ್ಷಣ ಕ್ಷೇತ್ರದ ಪಿತಾಮಹ~ ಎಂದು ಬಣ್ಣಿಸಿದರು. ಅವರ ಮಾರ್ಗದರ್ಶನ ಜಿಲ್ಲೆಗೆ ಅವಶ್ಯವಾಗಿದೆ. ಬೇರೆ ಬೇರೆ ಜಿಲ್ಲೆಗಳಿಗೂ ಸಂಸ್ಥೆಯ ಶಿಕ್ಷಣ ಸೇವೆ ವಿಸ್ತರಿಸಲಿ ಎಂದು ಆಶಿಸಿದರು.ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಕಾರ್ಯದರ್ಶಿ ಶಾಮನೂರು ಶಿವಶಂಕರಪ್ಪ ಮಾತನಾಡಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಸಂಸ್ಥೆಯ ಧ್ಯೇಯವಾಗಿದೆ ಎಂದು ತಿಳಿಸಿದರು.

ಮಾತನಾಡಿದ ಎಲ್ಲ ಗಣ್ಯರು ಶಾಸಕ ಶಾಮನೂರು ಶಿವಶಂಕರಪ್ಪ ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಪಕ್ಕದಲ್ಲಿ ಕುಳಿತಿದ್ದ ಅಬ್ದುಲ್ ಕಲಾಂ ಅವರು ಶಾಮನೂರು ಶಿವಶಂಕರಪ್ಪ ಅವರನ್ನು ಅಚ್ಚರಿಯಿಂದ ನೋಡುತ್ತಿದ್ದುದು ವಿಶೇಷವಾಗಿತ್ತು!

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.