ಬುಧವಾರ, ಏಪ್ರಿಲ್ 21, 2021
30 °C

ಕನಕಾಚಲನಿಗಿನ್ನು ಸಿಸಿ ಕ್ಯಾಮೆರಾ ಹದ್ದಿನಗಣ್ಣು

ಪ್ರಜಾವಾಣಿ ವಾರ್ತೆ/ Updated:

ಅಕ್ಷರ ಗಾತ್ರ : | |

ಗಂಗಾವತಿ: ಐತಿಹಾಸಿಕ ಕನಕಗಿರಿಯ ಆರಾಧ್ಯದೈವ, ನೂರಾರು ವರ್ಷಗಳಿಂದ ಕೋಟ್ಯಂತರ ಭಕ್ತರ ಅಭೀಷ್ಟಗಳನ್ನು ಪೂರೈಸುತ್ತಿರುವ ಸುವರ್ಣಗಿರಿಯ ಒಡೆಯ ಕನಕಾಚಲಪತಿ ಇನ್ನು ಮುಂದೆ ಸಿಸಿ ಕ್ಯಾಮೆರಾ ಕಣ್ಗಾವಲಿನಲ್ಲಿ ಬಂಧಿಯಾಗಲಿದ್ದಾನೆ.ಕನಕಚಾಲ ತಾನು ಮಾಡಿದ ಯಾವುದೋ ತಪ್ಪಿಗಾಗಿ ಬಂಧನದ ಭೀತಿ ಎದುರಿಸುತ್ತಿಲ್ಲ, ಬದಲಿಗೆ ಆತನಿಗೆ ಹೆಚ್ಚಿನ ಭದ್ರತೆ ಮತ್ತು ಭಕ್ತರಿಗೆ ಸುರಕ್ಷತೆ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಮುಜರಾಯಿ ಇಲಾಖೆ ದೇವಸ್ಥಾನಕ್ಕೆ ಸಿಸಿ ಕ್ಯಾಮೆರಾ ಅಳವಡಿಸುವ ಚಿಂತನೆ ನಡೆಸಿದೆ.ದೇವಸ್ಥಾನದ ಆವರಣದಲ್ಲಿನ ವಿವಿಧ ಭಾಗದಲ್ಲಿ ಸುಮಾರು ಹತ್ತು ಸಿ.ಸಿ. ಕ್ಯಾಮರಗಳನ್ನು ಅಳವಡಿಸುವ ಕಾಮಗಾರಿಗೆ ಈಗಾಗಲೆ ಟೆಂಡರ್ ಕಾರ್ಯ ಪೂರ್ಣಗೊಂಡಿದೆ. ಕಡತ ಜಿಲ್ಲಾಧಿಕಾರಿಗಳ ಅನುಮೋದನೆಗಾಗಿ ಕಾಯ್ದು ಕುಳಿತಿದೆ.ಎರಡನೆ ದೇವಸ್ಥಾನ: ಧಾರ್ಮಿಕ ಕ್ಷೇತ್ರ, ದೇವಸ್ಥಾನ, ಪ್ರಾರ್ಥನಾ ಮಂದಿರ ಗುಡಿ, ಗುಂಡಾರಗಳಲ್ಲಿ ಇತ್ತೀಚಿನ ದಿನಗಳಲ್ಲಿ ಗಣನೀಯವಾಗಿ ಹೆಚ್ಚುತ್ತಿರುವ ಕಳ್ಳತನ, ವಿಗ್ರಹ ಧ್ವಂಸ ಮತ್ತಿತರ ಅಹಿತಕರ ಘಟನೆ ತಡೆಯುವ ಉದ್ದೇಶಕ್ಕೆ ಮುಜರಾಯಿ ಇಲಾಖೆ ಮುಂದಾಗಿದೆ.ಈ ಹಿನ್ನೆಲೆ ಇಲಾಖೆಯ ವ್ಯಾಪ್ತಿಗೆ ಬರುವ ಹಾಗೂ ಸ್ವಂತ ಆದಾಯದ ಮೂಲದಿಂದ ಅಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಲು ಶಕ್ತ ಇರುವ ದೇವಸ್ಥಾನಗಳು ಸಿಸಿ ಕ್ಯಾಮರ ಅಳವಡಿಸಿಕೊಳ್ಳುವಂತೆ ಧಾರ್ಮಿಕ ಮತ್ತು ದತ್ತಿ ಇಲಾಖೆ ಆದೇಶ ನೀಡಿದೆ.ಈ ಹಿನ್ನೆಲೆ ಗಂಗಾವತಿ ತಹಸೀಲ್ದಾರರು ಕನಕಗಿರಿಯ ಕನಕಾಚಲಪತಿ ದೇವಸ್ಥಾನಕ್ಕೆ ಸಿಸಿ ಕ್ಯಾಮರ ಅಳವಡಿಸುವ ಚಿಂತನೆ ನಡೆಸಿ ಕಾರ್ಯ ಪ್ರವೃತ್ತರಾಗಿದ್ದಾರೆ. ಕೊಪ್ಪಳದ ಹುಲಿಗಿ ಬಳಿಕ ಸಿಸಿ ಕ್ಯಾಮರ ಅಳವಡಿಸಿಕೊಳ್ಳುತ್ತಿರುವ ಕೊಪ್ಪಳ ಜಿಲ್ಲೆಯ ಎರಡನೇ ದೇವಸ್ಥಾನ ಕನಕಗಿರಿ.ಹತ್ತು ಸಿ.ಸಿ. ಕ್ಯಾಮರ: ದೇವಾಲಯದ ಮುಖ್ಯದ್ವಾರ, ದೇವರ ಗರ್ಭಗುಡಿ, ಹುಂಡಿ ಸ್ಥಳ, ದರ್ಶನಕ್ಕೆ ಬರುವ ಭಕ್ತರು ಸಾಲು, ದೇವಸ್ಥಾನದ ಹೊರನೋಟ, ಸೇವಾ ಚೀಟಿ, ದಾಸೋಹ ಶಾಲೆ ಹೀಗೆ ನಾನಾ ಭಾಗಗಳು ಸ್ಪಷ್ಟವಾಗಿ ಕಾಣುವಂತೆ ಸಿಸಿ ಕ್ಯಾಮರ ಅಳವಡಿಸುವ ಯೋಜನೆ ಸಿದ್ಧಪಡಿಸಲಾಗಿದೆ.ಹುಂಡಿ ಮತ್ತು ಗರ್ಭಗುಡಿ ರಾತ್ರಿಯೂ ಕಾಣುವಂತೆ ಇನ್ಪ್ರಾರೆಡ್ ತಂತ್ರಜ್ಞಾನದ ವಿಡಿಯೋ ರೆಕಾರ್ಡಿಂಗ್ ಸೌಲಭ್ಯ ಹೊಂದಿ ಆಡಳಿತಾಧಿಕಾರಿ/ಮೇಲ್ವಿಚಾರಕರ ಕೊಠಡಿಯಲ್ಲಿ ಈ ಎಲ್ಲವನ್ನು ವೀಕ್ಷಿಸಲು ಎಲ್‌ಇಡಿ ಟಿ.ವಿ. ಸ್ಥಾಪಿಸುವ ಯೋಜನೆ ಇದೆ.ಕಾರಟಗಿಯ ವೆಂಕಟೇಶ್ವರ, ಆನೆಗೊಂದಿಯ ರಂಗನಾಥ, ಪಂಪಾಸರೋವರದ ಜಯಲಕ್ಷ್ಮಿ, ನವಲಿಯ ಭೋಗಾಪುರೇಶ, ಹಿರೇಜಂತಕಲ್ ಪಂಪಾಪತಿಗೂ ಸಿ.ಸಿ. ಕ್ಯಾಮರದ ಯೋಗವಿತ್ತು. ಆದರೆ ಆರ್ಥಿಕವಾಗಿ ಸಬಲರಲ್ಲ ಎಂಬ ಕಾರಣಕ್ಕೆ ಕ್ಯಾಮರದ ಕಣ್ಣಿನಿಂದ ತಪ್ಪಿಸಿಕೊಂಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.