ಶುಕ್ರವಾರ, ಮೇ 14, 2021
32 °C

ಕನಿಷ್ಠ ನಗದು ಬಹುಮಾನವನ್ನು ತಿರಸ್ಕರಿಸಿದ ಹಾಕಿ ಆಟಗಾರರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಏಷ್ಯನ್ ಟ್ರೋಫಿ ಗೆದ್ದ  ಭಾರತೀಯ ಹಾಕಿ ತಂಡವು ತಮಗೆ ನೀಡಿದ್ದ ಅತ್ಯಂತ ಕನಿಷ್ಠ ನಗದು ಬಹುಮಾನವನ್ನು  ತಿರಸ್ಕರಿಸಿದೆ. ಆಟಗಾರರಿಗೆ ನೀಡಲಾಗಿದ್ದ ತಲಾ 25 ಸಾವಿರ ರೂಗಳ ನಗದು ಬಹುಮಾನವನ್ನು ಸಾರಾಸಗಟಾಗಿ ತಿರಸ್ಕರಿಸಿರುವ ಭಾರತೀಯ ಹಾಕಿ ತಂಡದ ಆಟಗಾರರು ಸರ್ಕಾರದ ಧೋರಣೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಂತರ ಎಚ್ಚೆತ್ತ ಕ್ರೀಡಾ ಸಚಿವಾಲಯ ಎಲ್ಲಾ ಆಟಗಾರರಿಗೆ ತಲಾ ಒಂದುವರೆ ಲಕ್ಷ ಬಹುಮಾನ ಘೋಷಿಸಿದೆ.ಇದಕ್ಕೂ ಮುಂಚೆ ಮಂಗಳವಾರ ಸಂಜೆ ಇಲ್ಲಿನ ಮೇಜರ್ ಧ್ಯಾನ್‌ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ನೀಡಲಾಗಿದ್ದ 25 ಸಾವಿರ ರೂ ನಗದು ಬಹುಮಾನವನ್ನು ಎಲ್ಲಾ ಆಟಗಾರರು ತಿರಸ್ಕರಿಸಿದರು.~ನಮ್ಮ ಸಾಧನೆಗೆ ಹೋಲಿಸಿದರೆ 25 ಸಾವಿರ ರೂ ತೀರಾ ಅತ್ಯಲ್ಪ ಪ್ರಮಾಣದ ಹಣ. ಆದುದರಿಂದ ನಾವು ಅದನ್ನು ತಿರಸ್ಕರಿಸಿದ್ದೇವೆ~ ಎಂದು ತಂಡದ ಹಿರಿಯ ಆಟಗಾರ ಗುರ್ಬಜ್ ಸಿಂಗ್ ತಿಳಿಸಿದ್ದಾರೆ.ರಾಷ್ಟ್ರೀಯ ಕ್ರೀಡೆ ಆಗಿರುವ ಹಾಕಿಯಲ್ಲಿ ತಮ್ಮ ತಂಡ ಅಭೂತಪೂರ್ವ ಸಾಧನೆ ಮಾಡಿದೆ. ಕುಸಿದು ಹೋಗಿದ್ದ ಭಾರತೀಯ ಹಾಕಿಯ ಪ್ರತಿಷ್ಠೆಯನ್ನು ಏಷ್ಯನ್ ಟ್ರೋಫಿ ಗೆಲ್ಲುವ ಮೂಲಕ ಮತ್ತೆ ಗಳಿಸಿಕೊಟ್ಟ ತಮ್ಮ ತಂಡಕ್ಕೆ ಇಷ್ಟೊಂದು ತೀರಾ ಕಡಿಮೆ ಪ್ರಮಾಣದ ಬಹುಮಾನ ಲಭ್ಯವಾಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ ಎಂದಿರುವ ಆಟಗಾರರು ಪ್ರಸ್ತುತ ಯುವಜನತೆ ಕ್ರಿಕೆಟ್ ಹಾಗೂ ಬೇರೆ ಕ್ರೀಡೆಗಳಲ್ಲಿ ಆಸಕ್ತಿ ಹೊಂದಿದ್ದು, ಹಾಕಿಯಿಂದ ವಿಮುಖರಾಗುತ್ತಿರುವ ಈ ಹೊತ್ತಿನಲ್ಲಿ ಸರ್ಕಾರ ಸಾಧನೆ ಮಾಡಿರುವ ತಂಡಕ್ಕೆ ನೀಡಿರುವ ಬಹುಮಾನ ಏನೇನೂ ಸಾಲದು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಇದೇನೂ ಹೊಸದಲ್ಲ ತಮ್ಮನ್ನು ಮಲತಾಯಿ ಮಕ್ಕಳಂತೆ ಸರ್ಕಾರ ನೋಡುತ್ತಿದೆ ಎಂದೂ ಬಹುತೇಕ ಆಟಗಾರರು ಅಳಲು ತೋಡಿಕೊಂಡಿದ್ದಾರೆ.ಭಾರತೀಯ ಹಾಕಿ ಆಟಗಾರರಿಗೆ 25 ಸಾವಿರ ಬಹುಮಾನ ನೀಡಿರುವುದು ಸರ್ಕಾರವಲ್ಲ ಎಂದಿರುವ ಕ್ರೀಡಾ ಸಚಿವ ಅಜಯ್ ಮಾಕನ್ ಅವರು ಹಾಕಿ ಇಂಡಿಯಾವು ಈ ನಗದನ್ನು ನೀಡಲು ಮುಂದಾಗಿತ್ತು ಎಂದಿದ್ದಾರೆ. ಆದರೆ ಸರ್ಕಾರವು ತರಬೇತಿ ಹಾಗೂ ವಿದೇಶದಲ್ಲಿ ಆಟಗಾರರು ಇರುವುದಕ್ಕೆ ಬೇಕಾದ ಖರ್ಚುವೆಚ್ಚಗಳನ್ನು ನೋಡಿಕೊಂಡಿದೆ ಎಂದು ಸಮಜಾಯಿಷಿ ನೀಡಿದ್ದಾರೆ. ಸರ್ಕಾರ ಕಳೆದ ಆರು ತಿಂಗಳಲ್ಲಿ 7.81 ಕೋಟಿ ರೂಗಳನ್ನು ಹಾಕಿ ತಂಡಕ್ಕಾಗಿ ಖರ್ಚು ಮಾಡಿದೆ ಎಂದು ವಿವರ ನೀಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.