ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದಲ್ಲಿ ಮತ್ತೆ ಶುರುವಾದ ಡಬ್ಬಿಂಗ್

‘ಕೊಚಾಡಿಯನ್’ ಮೊದಲ ಚಿತ್ರ
Last Updated 19 ಜನವರಿ 2016, 19:32 IST
ಅಕ್ಷರ ಗಾತ್ರ

ಬೆಂಗಳೂರು: ಕಾನೂನಿನಲ್ಲಿ ಡಬ್ಬಿಂಗ್‌ಗೆ ಅವಕಾಶವಿದ್ದರೂ ಈವರೆಗೆ ಸ್ವಯಂ ನಿಯಂತ್ರಣ ಹೇರಿಕೊಂಡಿದ್ದ ಕನ್ನಡ ಚಿತ್ರೋದ್ಯಮ ಡಬ್ಬಿಂಗ್‌ಗೆ ತೆರೆದುಕೊಳ್ಳುವ ಮೊದಲ ಪ್ರಯತ್ನಕ್ಕೆ ಕೈ ಹಾಕಿದೆ. ರಜನಿಕಾಂತ್ ಅಭಿನಯದ ತಮಿಳಿನ ‘ಕೊಚಾಡಿಯನ್’ ಚಿತ್ರವನ್ನು ಡಬ್ ಮಾಡುವ ಮೂಲಕ ಡಬ್ಬಿಂಗ್‌ಗೆ ಜೀವ ನೀಡಲು ‘ಡಬ್ಬಿಂಗ್ ವಾಣಿಜ್ಯ ಮಂಡಳಿ’ ಮುಂದಾಗಿದೆ.

ಡಬ್ಬಿಂಗ್ ಪರ ಹೋರಾಟದಲ್ಲಿ ಭಾಗಿಯಾಗಿರುವ ಪ್ರಶಾಂತ್ ಎಂಬುವವರು ‘ಕೊಚಾಡಿಯನ್’ ಡಬ್ಬಿಂಗ್ ಹಕ್ಕು ಪಡೆದಿದ್ದಾರೆ. ‘ಡಬ್ಬಿಂಗ್ ವಾಣಿಜ್ಯ ಮಂಡಳಿ’ ಅಧ್ಯಕ್ಷ ಕೃಷ್ಣೇಗೌಡ ಬಂಡವಾಳ ಹೂಡಿದ್ದಾರೆ. ಸದ್ಯ ಸ್ಕ್ರಿಪ್ಟ್ ಕೆಲಸ ಮುಗಿದಿದ್ದು, ಕೆಲವೇ ದಿನಗಳಲ್ಲಿ ಧ್ವನಿ ಜೋಡಣೆ ಕೆಲಸವೂ ಆರಂಭವಾಗಲಿದೆ. ಫೆಬ್ರುವರಿ ಕೊನೆಯ ವಾರದಲ್ಲಿ ‘ಕೊಚಾಡಿಯನ್’ ಕನ್ನಡ ಅವತರಣಿಕೆ ಚಿತ್ರಮಂದಿರಗಳಲ್ಲಿ ಲಭ್ಯ.

‘ಕೊಚಾಡಿಯನ್’ ಅನಿಮೇಷನ್ ಚಿತ್ರವಾದ ಕಾರಣ ಕನ್ನಡೀಕರಣ ಸುಲಭವಾಗಬಹುದು, ಅದರಲ್ಲಿನ ಕಲಾವಿದರಾದ ರಜನಿಕಾಂತ್, ದೀಪಿಕಾ ಪಡುಕೋಣೆ ಕನ್ನಡಿಗರಿಗೆ ಹತ್ತಿರದವರು ಎಂಬ ಕಾರಣಕ್ಕೆ ಆರಂಭದಲ್ಲಿ ಇದೇ ಚಿತ್ರ ಡಬ್ ಮಾಡಲು ಕೃಷ್ಣೇಗೌಡ ಅವರು ಮುಂದಾಗಿದ್ದಾರೆ. ಈ ಸಿನಿಮಾ ಆಯ್ಕೆ ಹಿಂದೆ ಚಿತ್ರಮಂದಿರಗಳ ಕೊರತೆ ಎದುರಾಗಬಾರದು ಎಂಬ ಉದ್ದೇಶವೂ ಇದೆ.

‘ಸಿನಿಮಾಕ್ಕೆ ಒಳ್ಳೆಯ ಗುಣಮಟ್ಟವೇ ಸಿಗಬೇಕೆಂಬುದು ನನ್ನ ಆಶಯ. ಅದಕ್ಕಾಗಿಯೇ ಮೂಲ ಗಾಯಕರಿಂದಲೇ ಕನ್ನಡದಲ್ಲೂ ಹಾಡಿಸುವ ಯೋಜನೆ ಇದೆ. ತುಟಿ ಚಲನೆ ಮತ್ತು ಸಂಭಾಷಣೆ ನಡುವೆ ಹೊಂದಾಣಿಕೆ ಆಗುವಂತೆ ಸಂಭಾಷಣೆ ಬರೆದಿದ್ದೇವೆ’ ಎಂದು ಕೃಷ್ಣೇಗೌಡ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಡಬ್ಬಿಂಗ್ ಹಕ್ಕು ಖರೀದಿ ಹೊರತಾಗಿ ಈ ಚಿತ್ರಕ್ಕೆ ₹ 70 ಲಕ್ಷ ಖರ್ಚು ತಗುಲುವ ಅಂದಾಜು ಕೃಷ್ಣೇಗೌಡ ಅವರಿಗಿದೆ.  ‘ಒಂದು ಡಬ್ಬಿಂಗ್ ಚಿತ್ರ ಬಿಡುಗಡೆ ಆಗಿಬಿಡಲಿ ಎಂದು ಕಾಯುತ್ತಿರುವ ನಿರ್ಮಾಪಕರ ಸಂಖ್ಯೆ ದೊಡ್ಡದಿದೆ. ಈಗಾಗಲೇ ಹಲವು ಚಿತ್ರಗಳು ಸಿದ್ಧವಾಗಿ ಕಾಯುತ್ತಿವೆ. ಬೆಕ್ಕಿಗೆ ಗಂಟೆ ಕಟ್ಟುವವರಾರು ಎಂಬುದಷ್ಟೇ ಇದ್ದ ಸಮಸ್ಯೆ’ ಎಂದು ಅವರು ಹೇಳಿದರು.

ಪರ್ಯಾಯ ಸಿನಿಮಾ ಸಿದ್ಧ: ‘ಕೊಚಾಡಿಯನ್’ ಚಿತ್ರಕ್ಕೆ ತೀವ್ರ ವಿರೋಧ ವ್ಯಕ್ತವಾಗಿ ಅನಿವಾರ್ಯ ಕಾರಣಗಳಿಂದ ಕೊನೆಯ ಹಂತದಲ್ಲಿ ಪ್ರದರ್ಶನ ಕೈಬಿಡಬೇಕಾಗಿ ಬಂದರೆ ಅದಕ್ಕೆ ಪರ್ಯಾಯವಾಗಿ ಮತ್ತೊಂದು ಹಿಂದಿ ಸಿನಿಮಾವನ್ನೂ ನಿರ್ಮಾಪಕರು ಸಿದ್ಧ ಮಾಡಿ
ಕೊಂಡಿದ್ದಾರೆ. ಯಾವುದೇ ತೊಂದರೆ ಎದುರಾಗದಿದ್ದರೆ ಎರಡೂ ಚಿತ್ರಗಳು ಒಮ್ಮೆಲೇ ಬಿಡುಗಡೆಯಾಗುತ್ತವೆ. ಆದರೆ ಹಿಂದಿ ಚಿತ್ರ ಯಾವುದು ಎಂಬುದನ್ನು ಅವರು ಬಹಿರಂಗಗೊಳಿಸಿಲ್ಲ. ಒಟ್ಟಿನಲ್ಲಿ ಡಬ್ಬಿಂಗ್ ಸಿನಿಮಾ ಬಿಡುಗಡೆಗೆ ಸಿದ್ಧತೆ ನಡೆದಿದೆ.

ಕನ್ನಡ ಕಾಳಜಿ: ಡಬ್ಬಿಂಗ್ ಕೂಡ ಕನ್ನಡ ಪರ ಕಾಳಜಿಯೇ ಎಂಬುದು ಕೃಷ್ಣೇಗೌಡ ಅವರ ನಿಲುವು. ‘ರಾಜ್ಯದಾದ್ಯಂತ ಮುನ್ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪರಭಾಷಾ ಚಿತ್ರಗಳು ತೆರೆಕಾಣುತ್ತಿವೆ. ಅಂದರೆ ನಮ್ಮ ಜನ ಬೇರೆ ಭಾಷೆಯ ಚಿತ್ರಗಳನ್ನು ಅದೇ ಭಾಷೆ
ಯಲ್ಲೇ ನೋಡುತ್ತಾರೆ. ಡಬ್ಬಿಂಗ್ ಬಂದರೆ ಆ ಚಿತ್ರಗಳನ್ನೂ ಕನ್ನಡದಲ್ಲೇ ನೋಡಬಹುದು. ಆಗ ಕನ್ನಡಕ್ಕೆ ಪ್ರಾಧಾನ್ಯ ಸಿಕ್ಕಿದಂತಾಗುತ್ತದೆ’ ಎಂಬುದು ಅವರ ವಾದ.

ವಾಣಿಜ್ಯ ಮಂಡಳಿ ವಿರುದ್ಧ ಕಿಡಿ:  ‘ಕನ್ನಡದ ನಿರ್ಮಾಪಕರು ವಾಣಿಜ್ಯ ಮಂಡಳಿಯಲ್ಲಿ ₹ 50 ಸಾವಿರ ಪಾವತಿಸಿ ಸದಸ್ಯರಾಗಬೇಕು.
ಆದರೆ ಒಳ್ಳೆಯ ಗಳಿಕೆ ಮಾಡುತ್ತಿದ್ದ ಕನ್ನಡ ಚಿತ್ರಕ್ಕೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಪ್ರದರ್ಶನಕ್ಕೆ ಅವಕಾಶ ಕೊಡಿಸಲು ವಾಣಿಜ್ಯ ಮಂಡಳಿಗೆ ಸಾಧ್ಯವಾಗುತ್ತಿಲ್ಲ. ಅಂಥ ಮಂಡಳಿಯಿಂದ ಏನು ಪ್ರಯೋಜನ. ಅದನ್ನು ಮುಚ್ಚಬಹುದಲ್ಲ. ಕನ್ನಡ ಚಿತ್ರಗಳ ಬಗ್ಗೆ ಕಾಳಜಿ ಇರುವವರು ಯಾರೂ ವಾಣಿಜ್ಯ ಮಂಡಳಿ ಅಧ್ಯಕ್ಷರಾಗುತ್ತಿಲ್ಲ. ಎಲ್ಲರಿಗೂ ಒಂದು ವರ್ಷದ ಅಧಿಕಾರ ಬೇಕಷ್ಟೇ’ ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ವಿರುದ್ಧ ಕೃಷ್ಣೇಗೌಡ ಕಿಡಿ ಕಾರಿದರು.

ಸಾ.ರಾ. ಗೋವಿಂದು ಮೌನ:  ಆರಂಭದಿಂದಲೂ ಡಬ್ಬಿಂಗ್ ವಿರೋಧಿಸಿದ್ದ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು ಅವರು, ‘ಡಬ್ಬಿಂಗ್ ವಿಚಾರ ನ್ಯಾಯಾಲಯದಲ್ಲಿರುವುದರಿಂದ ಈ ಸಂಬಂಧ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT