ಮಂಗಳವಾರ, ಮೇ 11, 2021
25 °C

ಕನ್ನಡದ ಮೊದಲ ನಾಟಕ `ಮಿತ್ರವಿಂದಾ ಗೋವಿಂದ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಮಾನ ಸಿಕ್ಕ ಮೇಲೆ ಅದರ ಪ್ರಾಚೀನತೆಯ ಕುರಿತಾಗಿ ಒಂದಿಷ್ಟು ಸಂಶೋಧನೆ ನಡೆಸಬೇಕಿದೆ. ಕನ್ನಡ ಭಾಷೆ ಸಾಹಿತ್ಯಿಕವಾಗಿ ಎಷ್ಟೊಂದು ಶ್ರೀಮಂತವಾಗಿತ್ತು ಎನ್ನುವುದರ ಬಗ್ಗೆ ವಚನ ಸಾಹಿತ್ಯವೇ ಸಾಕ್ಷಿ. ಅಂತೆಯೇ ಕನ್ನಡ ಕಾವ್ಯದಲ್ಲಿ ಪಂಪ ಮಹಾಕವಿ, ಆದಿ ಕವಿ ಎಂದು ಪ್ರಖ್ಯಾತನಾಗಿದ್ದಾನೆ.ಕನ್ನಡ ಸಾಮಾಜಿಕ ನಾಟಕದ ಇತಿಹಾಸದಲ್ಲಿ ಸೂರಿ ವೆಂಕಟರಮಣ ಶಾಸ್ತ್ರಿಯವರ `ಇಗ್ಗಪ್ಪ ಹೆಗಡೆಯ ವಿವಾಹ ಪ್ರಹಸನ' ಮೊದಲ ನಾಟಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹಾಗಾದರೆ ಆ ಮೊದಲು ಕನ್ನಡದಲ್ಲಿ ನಾಟಕ ರಚನೆ ಆಗಲೇ ಇಲ್ಲವೇ ಎನ್ನುವಾಗ ನಮಗೆ 17ನೇ ಶತಮಾನದಲ್ಲಿ ಪ್ರಕಟಿತಗೊಂಡ ಸಿಂಗರಾರ್ಯ ಎಂಬ ನಾಟಕಕಾರನ ಪೌರಾಣಿಕ ನಾಟಕ `ಮಿತ್ರವಿಂದಾ ಗೋವಿಂದ' ನಾಟಕದ ಸಂಶೋಧನೆಯಾಗಿದ್ದು ಗೊತ್ತಾಗುತ್ತದೆ.ಡಾ.ಟಿ.ವಿ. ವೆಂಕಟಾಚಲಶಾಸ್ತ್ರಿಯವರು ಅದರ ಒಂದು ಪ್ರತಿಯನ್ನು `ಉದ್ಧಾಮ ಪಂಡಿತರೂ ವಿದ್ವಾಂಸರೂ ನಾಟಕಕಾರರೂ ಆದ ಆಸ್ಥಾನ ವಿದ್ವಾನ್ ನಂಜನಗೂಡು ಶ್ರೀಕಂಠಶಾಸ್ತ್ರಿಗಳ ಸ್ವಂತ ಪುಸ್ತಕ ಭಂಡಾರದಲ್ಲಿದ್ದು ಅವರ ಪೌತ್ರರೂ ವೆಂಕಟಾಚಲಶಾಸ್ತ್ರಿಯವರ ಶಿಷ್ಯಮಿತ್ರರೂ ಆದ ಎನ್.ಎಸ್. ತಾರಾನಾಥ ಅವರ ವಿಶ್ವಾಸದಿಂದ ನನಗೆ ದೊರೆಯಿತು' ಎಂದು ಡಾ ವೆಂಕಟಾಚಲಶಾಸ್ತ್ರಿಯವರು ದಾಖಲಿಸುತ್ತಾರೆ.ಹಲವು ವರ್ಷಗಳ ಹಿಂದೆ ಓದಿದ್ದ  `ಮಿತ್ರವಿಂದಾ ಗೋವಿಂದ'ವನ್ನು ಮತ್ತೆ ಓದಿ ಮೆಚ್ಚಿಕೊಂಡು, ಸಾಮಾನ್ಯ ವಾಚಕರಿಗೂ ಗ್ರಾಹ್ಯವಾಗುವಂತೆ  ಹೊಸಗನ್ನಡರೂಪಕ್ಕೆ ಪರಿವರ್ತಿಸಿಕೊಟ್ಟರು. `ಈ ನಾಟಕದ ಅನುವಾದಕ್ಕೆ ಶ್ರೀಯುತರಾದ ಎಸ್.ಜಿ. ನರಸಿಂಹಾಚಾರ್, ಎಂ.ಎ.ರಾಮಾನುಜಯ್ಯಂಗಾರ್ ಇವರ ಸಂಯುಕ್ತ ಸಂಪಾದಕತ್ವದಲ್ಲಿ ಪರಿಷ್ಕೃತಗೊಂಡು ಮೈಸೂರಿನ ಕರ್ನಾಟಕ ಕಾವ್ಯ ಮಂಜರಿ ಕಛೇರಿಯಿಂದ 1893ರಲ್ಲಿ ಪ್ರಕಟವಾದ `ಮಿತ್ರವಿಂದಾ ಗೋವಿಂದ' ಪ್ರಥಮ ಪರಿಷ್ಕರಣವನ್ನು ಮೂಲವಾಗಿಟ್ಟುಕೊಂಡಿದೆ' ಎಂದು ವೆಂಕಟಾಚಲಶಾಸ್ತ್ರಿಯವರು ತಮ್ಮ `ಪ್ರಥಮ ಮುದ್ರಣದ ಅರಿಕೆ' ಯಲ್ಲಿ ಬರೆಯುತ್ತಾರೆ. ಅದರ ದ್ವಿತೀಯ ಪರಿಷ್ಕರಣ 1920ರಲ್ಲಿ ಆಗಿದ್ದು ಅದನ್ನು ಬಳಸಲು ಸಾಧ್ಯವಾಗದೇ ಹೋದದ್ದಕ್ಕೆ ವಿಷಾದ ವ್ಯಕ್ತಪಡಿಸುತ್ತಾರೆ.`ಮಿತ್ರವಿಂದಾ ಗೋವಿಂದ' ಎಂಬ ನಾಟಕವನ್ನು ರಚಿಸಿದ ಕವಿ ಸಿಂಗರಾರ್ಯ. ಈತನ ವೈಯಕ್ತಿಕ ಚರಿತ್ರೆಯ ಕೆಲವು ಸಂಗತಿಗಳನ್ನು ಆ ನಾಟಕದ ಪ್ರಥಮಾಂಕದ ಪ್ರಸ್ತಾವನೆಯ ಭಾಗದಿಂದಲೂ ಇನ್ನು ಕೆಲವು ಸಂಗತಿಗಳನ್ನು ಈತನ ಅಣ್ಣ ತಿರುಮಲಾಚಾರ್ಯನ ಕೃತಿಗಳಿಂದಲೂ ತಿಳಿಯಬಹುದಾಗಿದೆ. ಈ ಮೂಲಗಳಿಂದ ಸಂಗ್ರಹಿಸಬಹುದಾದ ವಿಷಯಗಳು ಈ ರೀತಿಯಾಗಿವೆ:

ಸಿಂಗರಾರ್ಯ ಶ್ರೀ ವೈಷ್ಣವ ಬ್ರಾಹ್ಮಣ; ಕೌಶಿಕ ಗೋತ್ರಕ್ಕೆ ಸೇರಿದವನು.ಈತನ ತಂದೆ ಸೌಮ್ಯನಸಿಂಹ ಸೂರಿ; ಅಳಹಿಯ ಸಿಂಗರಾರ್ಯ (ಅಳಸಿಂಗರಾರ್ಯ) ಎಂಬ ರೂಢಿಯ ಹೆಸರಿನಲ್ಲಿ ಪರಿಚಿತನಾಗಿದ್ದಾನೆ. ಈತ ಮೈಸೂರು ದೊರೆ ದೊಡ್ಡ ದೇವರಾಜನ (1659-72) ಆಸ್ಥಾನದಲ್ಲಿ ಪೌರಾಣಿಕನಾಗಿದ್ದನು. ಈತನ ಖ್ಯಾತಿ ಮನ್ನಣೆ ಮತ್ತು ವಿದ್ವತ್ತುಗಳನ್ನು ಕುರಿತು ತಿರುಮಲಾರ್ಯನು ತನ್ನ `ಚಿಕ್ಕದೇವರಾಯ ವಂಶಾವಳಿ' ಎಂಬ ಗದ್ಯಕಾವ್ಯದಲ್ಲಿ ವಿಸ್ತಾರವಾಗಿ ನಿರೂಪಿಸಿದ್ದಾನೆ. ಪ್ರಾಯಶಃ ಈತನೇ ಸಂಚಿಯ ಹೊನ್ನಮ್ಮನ ಉಪಾಧ್ಯಾಯ, ಪ್ರೋತ್ಸಾಹಕ ಎಂದು ತೋರುತ್ತದೆ. ಕವಿ ಚರಿತೆಕಾರರು ಮೊದಲುಗೊಂಡು ಅನೇಕರು `ಮಿತ್ರವಿಂದಾ ಗೋವಿಂದ'ದ ಕರ್ತ ಸಿಂಗರಾರ್ಯನೇ ಹೊನ್ನಮ್ಮನ ವಿದ್ಯಾಗುರುವಿರಬೇಕೆಂದು ಭಾವಿಸುವರು. ಸಿ. ಹಯವದನರಾಯರು ಸಿಂಗರಾರ್ಯ-ತಿರುಮಲಾರ್ಯರರ ತಂದೆ ಅಳಸಿಂಗರಾರ್ಯನು ಹೊನ್ನಮ್ಮನ ಗುರುವೆಂದು ಸಾಧಾರಣವಾಗಿ ಗುರುತಿಸುತ್ತಾರೆ.ಇನ್ನು ಸಿಂಗರಾರ್ಯನ ತಾಯಿ ಸಿಂಗಮ್ಮ ಮೈಸೂರು ದೊರೆ ಕಂಠೀರವ ನರಸರಾಜನ (1638-59) ಪ್ರಧಾನಿ ಗೋವಿಂದರಾಜಯ್ಯ (ಅಪ್ಪಾಜಯ್ಯ) ಎಂಬವನ ಮಗಳು. ಕವಿಯ ಅಣ್ಣ ತಿರುಮಲಾಚಾರ್ಯ (1645-1706), ತನ್ನ ಕಾಲದ ಕವಿಗಳಲ್ಲೆಲ್ಲ ಪ್ರಾಯಶಃ ಅಗ್ರಗಣ್ಯನಾದವನು; `ಆಪ್ರತಿಮ ವೀರಚರಿತ' `ಚಿಕದೇವರಾಜವಿಜಯ' ಮುಂತಾದ ಕೃತಿಗಳನ್ನು ರಚಿಸಿ ವಿಖ್ಯಾತನಾದನು.`ಮಿತ್ರವಿಂದಾ ಗೋವಿಂದ'ದಲ್ಲಿ ನಾಲ್ಕು ಅಂಕಗಳಿವೆ. ಈ ನಾಟಕ ಪ್ರಾಚೀನ ಪ್ರಸಿದ್ಧ ಸಂಸ್ಕೃತ ನಾಟಕಗಳಂತೆ ಗದ್ಯಪದ್ಯ ಸಮ್ಮಿಶ್ರವಾಗಿದೆ. ಹರಡಿಕೊಂಡ ಗದ್ಯಭಾಗಗಳ ನಡುನಡುವೆ ನೂರೊಂದು ಪದ್ಯಗಳು ಹಾಸುಹೊಕ್ಕಾಗಿ ಬಂದಿವೆ. ಈ ಪದ್ಯಗಳು ಹಳಗನ್ನಡ ಚಂಪೂಕಾವ್ಯಗಳಲ್ಲಿ ಸುಪರಿಚಿತವಾದ ವೃತ್ತಕಂದಗಳೇ ಆಗಿವೆ. ಈ ಗದ್ಯಪದ್ಯಗಳ ಶಬ್ದಭಂಡಾರ, ಶೈಲಿಯ ಪ್ರೌಢಿಮೆ ಇವು ಈ ಕವಿ ಒಬ್ಬ ಪಂಡಿತ ಕವಿ ಎನ್ನುವುದನ್ನು ಸಾರುವಂತಿದೆ.ವಾಸುದೇವ-ಮಿತ್ರವಿಂದೆಯರ ಪರಿಣಯದ ಕಥೆ

ಕೃಷ್ಣನ ಅಷ್ಟಮಹಿಷಿಯರಲ್ಲಿ ಮಿತ್ರವಿಂದೆಯೂ ಒಬ್ಬಳು. ಪೂರ್ವಾಪರ ವಿವರಗಳಿಂದ ಕೂಡಿದ ಕಥಾಭಾಗ ಹೀಗಿದೆ: `ಮಿತ್ರವಿಂದೆ ಅವಂತೀದೇಶದ ದೊರೆ ಜಯತ್ಸೇನನಿಗೆ ರಾಜಾಧಿದೇವಿ ಎಂಬವಳಲ್ಲಿ ಜನಿಸಿದ ರಾಜಪುತ್ರಿ. ರಾಜಾಧಿದೇವಿ ಕೃಷ್ಣನ ತಂದೆ ವಸುದೇವನಿಗೆ ತಂಗಿಯೇ ಆದ್ದರಿಂದ, ಮಿತ್ರವಿಂದೆ ಯಾದವರ ಬಂಧುವರ್ಗಕ್ಕೆ ಸೇರಿದವಳು.ಈಕೆಗೆ ವಿಂದ, ಅನುವಿಂದ ಎಂಬ ಇಬ್ಬರು ಸಹೋದರರು. ಇವರು ದುರ್ಯೋಧನನಿಗೆ ಬೇಕಾದವರು, ವಶವರ್ತಿಗಳು. ಮಿತ್ರವಿಂದೆಗೆ ಸ್ವಯಂವರ ಏರ್ಪಾಡು ನಡೆಯಲು ಅಲ್ಲಿ ಆಕೆ ಕೃಷ್ಣನನ್ನು ವರಿಸಲು ಅಪೇಕ್ಷಿಸಿದಳು; ಆದರೆ ಸೋದರರು ಅದನ್ನು ಒಪ್ಪದೇ ಅಡ್ಡಿಪಡಿಸಿದರು. ಆಗ ಕೃಷ್ಣನು ಇವರನ್ನು ಲಕ್ಷ್ಯಮಾಡದೇ, ನೆರೆದ ರಾಜಪುತ್ರರನ್ನೆಲ್ಲಾ ಸೋಲಿಸಿ, ಆಕೆಯನ್ನು ದ್ವಾರಾವತಿಗೆ ಅಪಹರಿಸಿಕೊಂಡು ಹೋದನು.'ಪ್ರಸ್ತುತ ಸಿಂಗರಾರ್ಯನ ನಾಟಕದ ವಸ್ತು ವಾಸುದೇವ. ಮಿತ್ರವಿಂದೆಯರ ಪರಿಣಯ ಭಾಗಕ್ಕೆ ಸೀಮಿತವಾಗಿದೆ. ಈ ಭಾಗವು `ರತ್ನಾವಲಿ'ಯ ಕಥಾಭಾಗದೊಂದಿಗೆ ಬೆಸೆದುಕೊಂಡು, ಯುಕ್ತಿ, ಸಾಹಸ, ಸಂಕಟ, ಸಂಭ್ರಮ, ಆಕಸ್ಮಿಕಗಳ ಘಟನಾವಳಿಯಿಂದ ಪ್ರಚೋದಿತವಾಗಿ ಚೇತೋಹಾರಿಯಾಗಿದೆ.ಸಿಂಗರಾರ್ಯನ'ಮಿತ್ರವಿಂದಾ ಗೋವಿಂದ' ಹರ್ಷನ `ರತ್ನಾವಲಿ'ಯೆಂಬ ಸಂಸ್ಕೃತನಾಟಿಕೆಯ ಭಾಷಾಂತರವೆಂದೋ ರೂಪಾಂತರವೆಂದೋ ಆ ಕನ್ನಡ ನಾಟಕದ ಯಾವುದೇ ಭಾಗದಲ್ಲಿ ಉಕ್ತವಾಗಿಲ್ಲ. ಹಾಗೆ ಉಕ್ತವಾಗಿಲ್ಲದಿದ್ದರೂ ಹರ್ಷನ ನಾಟಿಕೆಯನ್ನು ಬಲ್ಲವರು, ಸಿಂಗರಾರ್ಯನ  ನಾಟಕ ಅದಕ್ಕೆ ಋಣಿಯೆಂಬುದನ್ನು  ಸುಲಭವಾಗಿ ಗುರ್ತಿಸಬಲ್ಲರು; ಅಲ್ಲಿಯ ಗದ್ಯಪದ್ಯಗಳ  ಅನುವಾದವನ್ನೇ ಇಲ್ಲಿ ಓದುತ್ತಿರುವ ಅನುಭವವಾಗಿ, ಅದೇ ಇದರ ಮಾತಕೆಯೆಂದು ಗೊತ್ತುಮಾಡಬಲ್ಲರು.`ರತ್ನಾವಲಿ'ಯ ವಸ್ತು, ಕೌಶಾಂಬಿಯ ದೊರೆ ಉದಯನನು ಸಿಂಹಳದ ದೊರೆ ವಿಕ್ರಮಬಾಹು ಎಂಬವನ ಮಗಳು ರತ್ನಾವಲಿಯನ್ನು  ಮದುವೆಯಾದ ಕಥೆಯನ್ನು ಒಳಗೊಂಡಿದೆ.  ಸಿಂಗರಾರ್ಯನಿಗೆ  `ರತ್ನಾವಲಿ'ಯೇ ಕಥಾ ದೃಷ್ಟಿಯಿಂದ ಮುಖ್ಯವಾದ ಮಾತೃಕೆ. ಆದರೆ ಆತ ಆ ನಾಟಕವನ್ನು ಯಥಾವತ್ತಾಗಿ ಅನುವಾದಿಸಲು ಹೋಗಿಲ್ಲ. ಪ್ರತಿಯಾಗಿ ಆತನಿಗೆ ಪ್ರಿಯವಾಗಿದ್ದಿರಬಹುದಾದ ಭಾಗವತ ಪುರಾಣದ ಮಿತ್ರವಿಂದೆಯ ವಿವಾಹದ ಕಥಾಸಂದರ್ಭವನ್ನು ಎತ್ತಿಕೊಂಡು `ರತ್ನಾವಲಿ'ಗೆ ಅದನ್ನು ಹೊಂದಿಸಿಕೊಂಡಿದ್ದಾನೆ.ಭಾಗವತದಲ್ಲಿ ಕೃಷ್ಣ-ಮಿತ್ರವಿಂದೆಯರ ಪರಿಣಯದ ಪ್ರಸಂಗಕ್ಕೆ ಸಂಬಂಧಿಸಿದ ಗಣ್ಯಘಟನೆಗಳು ಯಾವವೂ ಇಲ್ಲವೆಂಬುದನ್ನು ಗಮನಿಸಬೇಕು. ಹೀಗಿದ್ದರೂ ಆ ಪ್ರಸಂಗವನ್ನು `ರತ್ನಾವಲಿ'ಗೆ ಹೊಂದಿಸಲು ಈ ಕವಿಗೆ ಹೇಗೆ ಸಾಧ್ಯವಾಯಿತು? ರತ್ನಾವಲಿಯು ಉದಯನನ ಪತ್ನಿ ವಾಸವದತ್ತೆಯ ಬಂಧುವರ್ಗಕ್ಕೆ ಸೇರಿದವಳು ಎಂಬುದೂ ಮಿತ್ರವಿಂದೆ, ಕೃಷ್ಣನ ಬಂಧು ವರ್ಗಕ್ಕೆ ಸೇರಿದವಳು ಎಂಬುದೂ ಗೌಣವಾದ ಸಮಾನ ಕಥಾಂಶಗಳು. ಇಷ್ಟರ ಹೊರತು, ಮಿತ್ರವಿಂದೆಯ ಕಥೆಗೆ ಸಂಬಂಧಿಸಿದ ಸ್ವಯಂವರಸಂದರ್ಭ, ಕನ್ಯಾಪಹರಣ ಮುಂತಾದ ಯಾವ ಸಂಗತಿಗಳೂ `ರತ್ನಾವಲಿ'ಯಲ್ಲಿ ಬರುವುದಿಲ್ಲ. ಹಾಗೆ ನೋಡಿದರೆ, `ರತ್ನಾವಲಿ'ಯ ಕಥೆಗೂ `ಮಿತ್ರವಿಂದಾ ಗೋವಿಂದ' ಕಥೆಗೂ ಯಾವ ಹೋಲಿಕೆಯೂ ಇಲ್ಲವೆಂದು ಒಟ್ಟಿನಲ್ಲಿ ಹೇಳಿಬಿಡಬಹುದು. ಭಾಗವತದಲ್ಲಿ ಕೃಷ್ಣ-ಮಿತ್ರವಿಂದೆಯರ ವಿವಾಹ ನಡೆಯುವ ರೀತಿಯನ್ನು ಕೈಬಿಟ್ಟು `ರತ್ನಾವಲಿ'ಯಲ್ಲಿ ಉದಯನ-ರತ್ನಾವಲಿಯರ ವಿವಾಹ ನಡೆಯುವ ರೀತಿಯಲ್ಲಿ ಅದನ್ನು ಸಿಂಗರಾರ್ಯ ನಿರ್ವಹಿಸಿ, ವಸ್ತುನಿರ್ವಹಣೆಯಲ್ಲಿ ಹೊಸತನವನ್ನು ಮೆರೆದಿದ್ದಾನೆ.ಭಾಗವತದ ಕಥಾಂಶವನ್ನೇ ಬಳಸಿ, ವಿಸ್ತಾರಗೊಳಿಸಿ, ಸ್ವತಂತ್ರವಾಗಿ `ಮಿತ್ರವಿಂದಾ ಗೋವಿಂದ' ನಾಟಕವನ್ನು ಸಿಂಗರಾರ್ಯ ರಚಿಸಬಹುದಾಗಿತ್ತು. ಆದರೆ ಹರ್ಷನ `ರತ್ನಾವಲಿ'ಯ ವಸ್ತು ವಿನ್ಯಾಸ, ಧ್ವನ್ಯರ್ಥಗಳ ಸೊಗಸು ಅವನ ಮನಸ್ಸನ್ನು ಹಿಡಿದಿತ್ತೆಂದು ತೋರುತ್ತದೆ. ಭಾಗವತದ ಪಾತ್ರಗಳನ್ನೂ, `ರತ್ನಾವಲಿ'ಯ ಸಂವಾದಗಳನ್ನೂ ಒಗ್ಗೂಡಿಸುವ ಒಂದು ನವೀನ ತಂತ್ರವನ್ನು ಅವನು ಬಳಸಿದನು. ಹಳೆಯ ಪಾತ್ರಗಳನ್ನು ಇಟ್ಟುಕೊಂಡು, ಕೆಲವು ಹೊಸ ಪಾತ್ರಗಳನ್ನು ಕಟ್ಟಿಕೊಂಡು. ಪರಿಣಯದ ಈ ಕಥೆಗೆ ಆತ ಭಾಗವತದ ಜಾಡು ಬಿಟ್ಟು, `ರತ್ನಾವಲಿ'ಯ ಜಾಡು ಹಿಡಿದನು. `ರತ್ನಾವಲಿ'ಯ ಕಥೆಯನ್ನು ಯಥಾರೀತಿಯಾಗಿ ಒಪ್ಪಿದರೂ ಕೃಷ್ಣನ ವ್ಯಕ್ತಿತ್ವಕ್ಕೆ ಅದು ಹೊಂದಿಕೊಳ್ಳಬಲ್ಲದು ಎಂದು ಅವನು ಪ್ರಾಯಶಃ ಭಾವಿಸಿರಬೇಕು. ಉಳಿದ ಕಥಾಸಂಗತಿಗಳೆಲ್ಲ ಅವನಿಗೆ ಗೌಣವಾದವು. ಅವನ್ನು ಮುಖ್ಯ ಕಥೆಗೆ ಹೊಂದಿಸುವುದರಿಂದ ಆಭಾಸವೇನೂ ಆಗದು ಎಂದು ತಿಳಿಯಲು ಪ್ರಾಚೀನ ನಾಟಕಕಕಾರರ ಮಾದರಿಗಳನ್ನು ಅವನು ಹೇಗೂ ಬಲ್ಲವನಾಗಿದ್ದನು.ಸಿಂಗರಾರ್ಯ ವ್ಯಕ್ತವಾಗಿ ಹೇಳಿರದಿದ್ದರೂ, ತನ್ನ ಕನ್ನಡ ನಾಟಕ `ಮಿತ್ರವಿಂದಾ ಗೋವಿಂದ'ಕ್ಕೆ ಹರ್ಷನ ಸಂಸ್ಕೃತ ನಾಟಕ 'ರತ್ನಾವಲಿನಾಟಿಕೆ'ಯನ್ನು ಮೂಲವಾಗಿಟ್ಟುಕೊಂಡಿದ್ದಾನೆ. ಹೊಸದೊಂದು ಬಗೆಯ ನಾಟಕ ರಚನೆಯ ವಿಧಾನವನ್ನು ಅನುಸರಿಸಿದ್ದಾನೆ. ಕೃತಿಯು ಏಕಕಾಲದಲ್ಲಿ ಭಾಷಾಂತರವೂ ರೂಪಾಂತರವೂ ಆಗಿರುವಂತೆ ಮಾಡುವುದೇ ಹೊಸ ವಿಧಾನ.ಭಾಗವತ ಪುರಾಣದ ಕೃಷ್ಣ-ಮಿತ್ರವಿಂದೆಯರ ಪರಿಣಯದ ಸರಳ ಸಾಮಾನ್ಯ ಕಥಾಂಶವನ್ನು ದೊರೆತಷ್ಟು ಪ್ರಮಾಣದಲ್ಲಿಯೇ ಸ್ವೀಕರಿಸಿ. ಕೃಷ್ಣ ಚರಿತೆಯ ವಿವಿಧ ಮೂಲಗಳ ಸಹಾಯವನ್ನು ಅಗತ್ಯವೆನಿಸುವಷ್ಟು ಪಡೆದು `ರತ್ನಾವಲಿ'ಯ ಸಮಗ್ರ ಕಥೆಯೊಂದಿಗೆ ಅವನ್ನು ಬೆಸುಗೆಹಾಕಿರುವುದು ಇಲ್ಲಿ ಕಾಣುತ್ತದೆ. ಹೀಗೆ ಎರಡು ಕಥೆಗಳನ್ನು ಬೆಸೆಯಲು, ಸಿಂಗರಾರ್ಯ ಆ ಎರಡನ್ನೂ ಚೆನ್ನಾಗಿ ಬಲ್ಲವನಾಗಿರುವುದು, ತಕ್ಕ ಕೌಶಲ ಉಳ್ಳವನಾಗಿರುವುದು ಎರಡೂ ಕೆಲಸಕ್ಕೆ ಬಂದಿವೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.