ಭಾನುವಾರ, ಜುಲೈ 25, 2021
21 °C

ಕನ್ನಡವೇ ಸತ್ಯ-ಅಶ್ವತ್ಥ್ ನಿತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಾಡಿನ ಖ್ಯಾತ ಸುಗಮ ಸಂಗೀತ ಗಾಯಕರಾಗಿದ್ದ ಸಿ.ಅಶ್ವತ್ಥ್ ಅವರ ಸವಿನೆನಪಿಗಾಗಿ ಡಿ. 29ರಂದು ನಗರದ ಬಸವನಗುಡಿಯ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ‘ಕನ್ನಡವೇ ಸತ್ಯ-ಅಶ್ವತ್ಥ್ ನಿತ್ಯ’ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು  ಕಾರ್ಯಕ್ರಮವನ್ನು ಸಂಘಟಿಸಿರುವ ಆದರ್ಶ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್‌ನ ಅಧ್ಯಕ್ಷ ಕಿಕ್ಕೇರಿ ಕೃಷ್ಣಮೂರ್ತಿ ಹೇಳಿದರು.‘ಕಾರ್ಯಕ್ರಮದ ವೇದಿಕೆಯಲ್ಲಿ 3,000ಕ್ಕೂ ಹೆಚ್ಚು ಕಲಾವಿದರು ಪಾಲ್ಗೊಳ್ಳುತ್ತಿರುವುದು ಕನ್ನಡದ ಮಟ್ಟಿಗೆ ದಾಖಲೆ’ ಎಂದು ಹೇಳಿದರು. ಈ ಕಾರ್ಯಕ್ರಮಕ್ಕೆ ಅದಮ್ಯ ಚೇತನ, ನಿರ್ಮಾಣ್ ಶೆಲ್ಟರ್ಸ್‌, ಕನ್ನಡ-ಸಂಸ್ಕೃತಿ ಇಲಾಖೆ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಹಯೋಗವೂ ಇದೆ.ನಗರದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸುಗಮ ಸಂಗೀತವನ್ನು ಉತ್ತುಂಗ ಸ್ಥಿತಿಗೆ ಕೊಂಡೊಯ್ದ ಅಶ್ವತ್ಥ್ ಅವರು ಜನಿಸಿದ್ದು ಹಾಗೂ ಅಸ್ತಂಗತರಾದ ದಿನ ಡಿ.29. ಹಾಗಾಗಿ ಅಂದೇ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ’ ಎಂದು ನುಡಿದರು.‘ಈ ದಿನದ ಮತ್ತೊಂದು ವಿಶೇಷವೆಂದರೆ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನ ಸಹ ಆಗಿದೆ. ಸಂಗೀತ ಕಾರ್ಯಕ್ರಮದಲ್ಲಿ ಕುವೆಂಪು ಅವರ ಕವನಗಳನ್ನು ಹಾಡುವ ಮೂಲಕ ಅವರಿಗೂ ಗೌರವ ಸಲ್ಲಿಸಲಾಗುವುದು’ ಎಂದು ಅವರು ತಿಳಿಸಿದರು.‘ಕಾರ್ಯಕ್ರಮಕ್ಕೆ ಹಲವು ಕನ್ನಡ ಸಂಘಟನೆಗಳು ಹಣಕಾಸಿನ ನೆರವು ನೀಡಿವೆ. ಕಲಾವಿದರಿಗೆ ಊಟದ ವ್ಯವಸ್ಥೆಯನ್ನು ಅದಮ್ಯ ಚೇತನ ಸಂಘಟನೆ ಮಾಡಿದೆ. ಕಲಾವಿದರ ಸಹಕಾರವೂ ಅದ್ಭುತವಾಗಿ ದೊರೆತಿದೆ. ಎಸ್.ಪಿ. ಬಾಲಸುಬ್ರಮಣ್ಯಂ, ಶಿವಮೊಗ್ಗ ಸುಬ್ಬಣ್ಣ, ರತ್ನಮಾಲ ಪ್ರಕಾಶ್ ಸೇರಿದಂತೆ ಹಲವು ಖ್ಯಾತ ಗಾಯಕರು ಸಹ ನಮ್ಮ ಜೊತೆಗೂಡಿದ್ದಾರೆ’ ಎಂದು ಅವರು ತಿಳಿಸಿದರು.‘ಪೇಜಾವರ ಮಠಾಧೀಶರಾದ ವಿಶ್ವೇಶತೀರ್ಥ ಸ್ವಾಮೀಜಿ, ಕೊಳದ ಮಠದ ಡಾ.ಶಾಂತವೀರ ಸ್ವಾಮೀಜಿ, ಡಾ.ಜಿ.ಎಸ್. ಶಿವರುದ್ರಪ್ಪ, ಸಂಸದ ಅನಂತ್ ಕುಮಾರ್, ಸಚಿವರಾದ ಆರ್. ಅಶೋಕ್, ಗೋವಿಂದ ಕಾರಜೋಳ ಹಾಗೂ ಇತರ ಗಣ್ಯರು ಭಾಗವಹಿಸಲಿದ್ದಾರೆ’ ಎಂದು ಅವರು ನುಡಿದರು.‘ಅಮೆರಿಕದ ‘ಅಕ್ಕ’, ನಾವಿಕ ಸಂಘಟನೆ, ಆಸ್ಟ್ರೇಲಿಯಾದ ಕನ್ನಡ ಸಂಘ, ಐಫಾ ಸಂಸ್ಥೆ, ದುಬೈ ಕನ್ನಡ ಸಂಘ, ಕುವೈತ್ ಕನ್ನಡ ಸಂಘ, ಬಹರೇನ್ ಕನ್ನಡ ಸಂಘ, ಅಬುದಾಬಿ ಕನ್ನಡ ಸಂಘ, ಮಸ್ಕತ್ ಕನ್ನಡ ಸಂಘ ಹಾಗೂ ಇತರ ಸಂಘದ ಸದಸ್ಯರು ಭಾಗವಹಿಸುವರು. ಇವರ ಜೊತೆ ಚೆನ್ನೈ, ಮುಂಬೈ, ದೆಹಲಿ ಕನ್ನಡ ಸಂಘಗಳು, ಕೇರಳ ಕನ್ನಡ ಸಂಘದ ಸದಸ್ಯರು ಪಾಲ್ಗೊಳ್ಳಲಿದ್ದಾರೆ’ ಎಂದು ಅವರು ತಿಳಿಸಿದರು.ಉಚಿತ ಪ್ರವೇಶ: ಕಾರ್ಯಕ್ರಮವನ್ನು ವೀಕ್ಷಿಸಲು ಬಯಸುವವರಿಗೆ ಉಚಿತವಾಗಿ ಪಾಸ್‌ಗಳನ್ನು ನೀಡುವ ವ್ಯವಸ್ಥೆ ಮಾಡಲಾಗಿದೆ. ಆಸಕ್ತರು 9480000245, 9900366711 ಇಲ್ಲಿಗೆ ಸಂಪರ್ಕಿಸಿ, ಉಚಿತ ಪಾಸ್‌ಗಳನ್ನು ಪಡೆಯಬಹುದು. ಸುಮಾರು 25 ಸಾವಿರ ಜನರಿಗೆ ಸ್ಥಳಾವಕಾಶ ಮಾಡಲಾಗಿದೆ’ ಎಂದು ಅವರು ಹೇಳಿದರು.ವೇದಿಕೆಯ ನಿರ್ಮಾಣ ಹಾಗೂ ಬೆಳಕು ಸಂಯೋಜನೆಯ ಜವಾಬ್ದಾರಿಯನ್ನು ರಂಗಕರ್ಮಿ ಶ್ರೀನಿವಾಸ್ ಜಿ.ಕಪ್ಪಣ್ಣ ಹೊತ್ತುಕೊಂಡಿದ್ದಾರೆ. ಲಹರಿ ಆಡಿಯೊ ಸಂಸ್ಥೆಯ ಮಾಲೀಕರಾದ ವೇಲು, ಕವಿ ಎಚ್.ಎಸ್.ವೆಂಕಟೇಶಮೂರ್ತಿ, ಆದರ್ಶ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್‌ನ ಸಂಚಾಲಕ ಬಿ.ಸುದರ್ಶನ್, ಖಜಾಂಚಿ ವೃಂದಾ ಎಸ್. ರಾವ್ ಹಾಗೂ ಎನ್.ಎಸ್.ಪ್ರಸಾದ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.