ಗುರುವಾರ , ಮೇ 19, 2022
20 °C

ಕನ್ನಡೀಕರಣ: ಆಗಿರುವುದೇನು? ಆಗಬೇಕಿರುವುದೇನು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನ್ನಡದ ಲಿಪಿಯನ್ನು ಬೆರಳಚ್ಚಿಸಿ ಬಳಸಿದ ಮಾತ್ರಕ್ಕೆ ಕಂಪ್ಯೂಟರ್ ಅನ್ನು ಕನ್ನಡ ಭಾಷೆಯಲ್ಲಿ ಬಳಸುತ್ತಿದ್ದೇವೆ ಎನ್ನಲಾಗದು. ತನ್ನ ಬಳಕೆದಾರರೊಂದಿಗೆ ಕಂಪ್ಯೂಟರ್ ಮಾತನಾಡುತ್ತದೆ. ಹೀಗಾಗಿ, ಸಂವಹನವೂ ಕನ್ನಡವೇ ಆದಾಗಷ್ಟೇ ಕಂಪ್ಯೂಟರ್ ಅನ್ನು ಕನ್ನಡದಲ್ಲಿಯೇ ಬಳಸುವ ಪರಿಪೂರ್ಣ ಅನುಭವವಾಗುತ್ತದೆ. ಫೈಲ್, ಓಪನ್, ಕ್ಲೋಸ್, ಎಕ್ಸಿಟ್ ಇವುಗಳು ಬಳಕೆದಾರನು ಕ್ಲಿಕ್‌ಮಾಡಿ ಆಯ್ದುಕೊಳ್ಳುವ ಮೆನು ವಿವರಗಳು. ಇವು ಕ್ರಮವಾಗಿ- ಕಡತ, ತೆರೆ, ಮುಚ್ಚು, ನಿರ್ಗಮಿಸು ಎಂದು ಕನ್ನಡ ಲಿಪಿಯಲ್ಲೇ ಇರಬೇಕು. ‘ನೀವು ಕಡತದಲ್ಲಿ ಬದಲಾವಣೆಯನ್ನು ಮಾಡಿದ್ದೀರಿ, ಇದನ್ನು ಉಳಿಸಲೇ’ (ಸೇವ್ ಮಾಡಲೇ?) ಎಂದು ಕಂಪ್ಯೂಟರ್ ಕೇಳಬೇಕು, ಅದಕ್ಕೆ ಬಳಕೆದಾರನು ‘ಹೌದು’ ಅಥವಾ ‘ಇಲ್ಲ’ ಎನ್ನುವ ಒತ್ತುಗುಂಡಿ ಕ್ಲಿಕ್‌ಮಾಡಿ ತನ್ನ ಪ್ರತಿಕ್ರಿಯೆ ನೀಡಬೇಕು. ಇಂಥ ವ್ಯವಸ್ಥೆಯನ್ನೇ ‘ಕನ್ನಡದ ಬಳಕೆದಾರ ಇಂಟರ್‌ಫೇಸ್’ (ಯೂಸರ್ ಇಂಟರ್ ಫೇಸ್) ಎನ್ನಲಾಗುತ್ತದೆ.ಕನ್ನಡದ ಉಚಿತ ಲಿಪಿತಂತ್ರಾಂಶಗಳಾದ ‘ಬರಹ’, ‘ನುಡಿ’ ಮತ್ತು ‘ಕುವೆಂಪು ತಂತ್ರಾಂಶ’ಗಳಲ್ಲಿರುವ ಎಡಿಟರ್‌ಗಳು ಇಂತಹ ಕನ್ನಡ ಇಂಟರ್‌ಫೇಸ್ ಹೊಂದಿವೆ. ಕನ್ನಡ ಲಿಪಿಯನ್ನು ಕಂಪ್ಯೂಟರಿನಲ್ಲಿ ಮೂಡಿಸಲು ಮಾತ್ರವೇ ಈ ತಂತ್ರಾಂಶಗಳನ್ನು ಬಳಸಲಾಗುತ್ತಿದೆಯೇ ಹೊರತು, ಕನ್ನಡದ ಬಳಕೆದಾರರ ಇಂಟರ್‌ಫೇಸ್ ಹೊಂದಿರುವ ಅವುಗಳ ಎಡಿಟರ್‌ಗಳನ್ನು ಹೆಚ್ಚಾಗಿ ಬಳಕೆಮಾಡುತ್ತಿಲ್ಲ.ಕನ್ನಡ ಇಂಟರ್‌ಫೇಸ್ ಆನ್ವಯಿಕಗಳು

ಕಚೇರಿ ಬಳಕೆಗಾಗಿ ಇರುವ ವರ್ಡ್, ಎಕ್ಸೆಲ್, ಪವರ್‌ಪಾಯಿಂಟ್ ಇತ್ಯಾದಿ ಆನ್ವಯಿಕ ತಂತ್ರಾಂಶಗಳು; ಅಂತರಜಾಲ ಬ್ರೌಸರ್‌ಗಳು, ಇ-ಮೇಲ್ ತಂತ್ರಾಂಶಗಳು; ಡಿ.ಟಿ.ಪಿ.ಗಾಗಿ ಬಳಸುವ ಪೇಜ್‌ಮೇಕರ್, ಕೋರಲ್‌ಡ್ರಾ, ಚಿತ್ರಸಂಸ್ಕರಣೆಗಾಗಿರುವ ಫೋಟೋಶಾಪ್ ಇತ್ಯಾದಿಗಳು ಪ್ರಸ್ತುತ ಬಳಕೆಯಲ್ಲಿರುವ ಬಹುಬೇಡಿಕೆ ಆನ್ವಯಿಕ ತಂತ್ರಾಂಶಗಳು. ಇಂತಹ ತಂತ್ರಾಂಶಗಳಲ್ಲಿ ನುಡಿ, ಬರಹ ಉಚಿತ ತಂತ್ರಾಂಶಗಳು ಮತ್ತು ಮಾರುಕಟ್ಟೆಯಲ್ಲಿ ಲಭ್ಯವಿರುವ ಇತರೆ ಕನ್ನಡದ ಲಿಪಿ ತಂತ್ರಾಂಶಗಳನ್ನು ಅಳವಡಿಸಿಕೊಂಡು, ಆನ್ವಯಿಕ ತಂತ್ರಾಂಶಗಳನ್ನು ಬಳಸಲಾಗುತ್ತಿದೆ.ಮೈಕ್ರೋಸಾಫ್ಟ್ ಕಾರ್ಪೊರೇಷನ್ ಕಂಪನಿಯು ತನ್ನ ವಿಂಡೋಸ್-ಎಕ್ಸ್‌ಪಿ ಕಾರ್ಯಾಚರಣೆ ವ್ಯವಸ್ಥೆಯನ್ನು ಕನ್ನಡೀಕರಿಸುವ ಪ್ರಯತ್ನವಾಗಿ, ‘ಲಾಂಗ್ವೇಜ್ ಇಂಟರ್‌ಫೇಸ್ ಪ್ಯಾಕ್’ (ಎಲ್‌ಐಪಿ) ಹೆಸರಿನ ಒಂದು ಕನ್ನಡದ ಹೊದಿಕೆಯನ್ನು ನೀಡಿದೆ. ಇದನ್ನು ಸಾಮಾನ್ಯ ವಿಂಡೋಸ್-ಎಕ್ಸ್‌ಪಿ ಕಾರ್ಯಾಚರಣೆ ವ್ಯವಸ್ಥೆಯ ಜೊತೆಗೆ ಅನುಸ್ಥಾಪಿಸಿಕೊಂಡರೆ, ಯೂಸರ್ ಇಂಟರ್‌ಫೇಸ್ ಕನ್ನಡಕ್ಕೆ ಪರಿವರ್ತನೆಗೊಳ್ಳುತ್ತದೆ. ಬಹುತೇಕ ಪಠ್ಯ ಸಂವಾದಗಳು (ಟೆಕ್ಸ್ಟ್ ಡಯಲಾಗ್‌ಗಳು), ದೋಷ ಸಂದೇಶಗಳು (ಎರರ್ ಮೆಸೇಜ್‌ಗಳು), ಮೆನುಗಳು ಇತ್ಯಾದಿಗಳು ಕನ್ನಡದಲ್ಲಿಯೇ ಪ್ರಕಟಗೊಳ್ಳುತ್ತವೆ.ಇದೇ ರೀತಿಯ ‘ಎಲ್‌ಐಪಿ’ ಎಂಬ ಹೆಸರಿನಿಂದ ಕರೆಯಲಾಗುವ ಕನ್ನಡ ಭಾಷಾ ಹೊದಿಕೆಯನ್ನು ಕಚೇರಿ ಕೆಲಸಕಾರ್ಯಗಳಿಗೆ ಬಳಸಲಾಗುವ ತಂತ್ರಾಂಶ ಗುಚ್ಛವಾದ ಎಂ.ಎಸ್. ಆಫೀಸ್‌ಗೆ ಸಹ ನೀಡಲಾಗಿದೆ. ಇದರಿಂದಾಗಿ ಎಂ.ಎಸ್.ವರ್ಡ್, ಎಂ.ಎಸ್.ಎಕ್ಸೆಲ್, ಎಂ.ಎಸ್. ಪವರ್‌ಪಾಯಿಂಟ್, ಎಂ.ಎಸ್. ಔಟ್‌ಲುಕ್ ಇತ್ಯಾದಿಗಳು ಕನ್ನಡೀಕರಣಗೊಂಡಿವೆ. ಲೆಕ್ಕಪತ್ರ ನಿರ್ವಹಣೆಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಳಕೆಯಲ್ಲಿರುವ ‘ಟ್ಯಾಲಿ’ ತಂತ್ರಾಂಶವು ಕನ್ನಡದ ಇಂಟರ್‌ಫೇಸ್‌ನೊಂದಿಗೆ ಲಭ್ಯವಿದೆ. ಕನ್ನಡದಲ್ಲಿಯೇ ಈಗ ಲೆಕ್ಕಪತ್ರಗಳನ್ನು ಕಂಪ್ಯೂಟರ್ ಬಳಸಿ ನಿರ್ವಹಿಸಬಹುದಾಗಿದೆ. ಮಕ್ಕಳಿಗೆ ಕನ್ನಡದಲ್ಲಿಯೇ ಕಂಪ್ಯೂಟರ್ ಪ್ರೋಗ್ರಾಂ ಕಲಿಸಲು ‘ಕನ್ನಡ ಲೋಗೊ’ ಉಚಿತವಾಗಿ ಲಭ್ಯವಿದೆ.ಎಂ.ಎಸ್. ಆಫೀಸ್‌ಗೆ ಪರ್ಯಾಯವಾದ ಹಾಗೂ ಮುಕ್ತ ತಂತ್ರಾಂಶವಾದ ‘ಓಪನ್ ಆಫೀಸ್’ ಸೂಟ್ ಈಗ ಕನ್ನಡದಲ್ಲೂ ಲಭ್ಯವಿದೆ. ಕೇಂದ್ರ ಸರ್ಕಾರದ ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯು ಜನಸಾಮಾನ್ಯರಿಗೆ ಮಾಹಿತಿ ತಂತ್ರಜ್ಞಾನ ಯೋಜನೆಯ ಅಡಿಯಲ್ಲಿ ಇದನ್ನು ಉಚಿತವಾಗಿ ವಿತರಿಸಿದೆ. ಕನ್ನಡದ ‘ಭಾರತೀಯ ಓಪನ್ ಆಫೀಸ್’- ಇದು ಕೇಂದ್ರ ಸರ್ಕಾರೀ ಸ್ವಾಮ್ಯದ ಸಿ-ಡ್ಯಾಕ್ ಸಂಸ್ಥೆಯ ಪ್ರಯತ್ನವಾಗಿದ್ದು, ಕನ್ನಡ ಭಾಷಾಂತರ ಕಾರ್ಯವನ್ನು ಕನ್ನಡ ಗಣಕ ಪರಿಷತ್ತು ನಿರ್ವಹಿಸಿದೆ. ಕನ್ನಡದ ಭಾಷಾಂತರ ಉತ್ತಮವಾಗಿದೆ.ಲಿನಕ್ಸ್‌ನ ಮೇಲೆ ಕಾರ್ಯನಿರ್ವಹಿಸುವ, ಹಲವಾರು ಉದ್ದೇಶಗಳಿಗೆ ಬಳಸಲಾಗುವ, ಕನ್ನಡದ ಆನ್ವಯಿಕ ತಂತ್ರಾಂಶಗಳು ಲಭ್ಯವಿವೆ. ಎಕ್ಸ್‌ಎಫ್‌ಸಿಇ ಹೆಸರಿನ ವಿಂಡೋ ಮೇನೇಜರ್ 2004ರಿಂದಲೇ ಬಳಕೆಗೆ ಲಭ್ಯವಿದೆ. ಎಂ.ಎಸ್. ಔಟ್‌ಲುಕ್ ರೀತಿಯ ಇ-ಮೇಲ್ ಕಳಿಸುವ ಮತ್ತು ಸ್ವೀಕರಿಸುವ ‘ಥಂಡರ್ ಬರ್ಡ್’ ಹೆಸರಿನ ಒಂದು ತಂತ್ರಾಂಶವು ಸಹ ಬಳಕೆಗೆ ಲಭ್ಯವಿದೆ. ಇ-ಮೇಲ್ ಕ್ಲೈಂಟ್ ಎಂದೂ ಕರೆಯಲಾಗುವ ಈ ತಂತ್ರಾಂಶದ ಸಂಪೂರ್ಣ ಇಂಟರ್‌ಫೇಸ್ ಕನ್ನಡದಲ್ಲೇ ಇದೆ. ಲಿನಕ್ಸ್‌ನಲ್ಲಿ ಕಾರ್ಯನಿರ್ವಹಿಸುವ ‘ಫೈರ್‌ಫಾಕ್ಸ್’ ವೆಬ್ ಬ್ರೌಸರ್ ಸಂಪೂರ್ಣ ಕನ್ನಡದ ಇಂಟರ್‌ಫೇಸ್‌ನೊಂದಿಗೆ ಬಳಕೆಗೆ ಲಭ್ಯವಿದೆ. ‘ಗೈಮ್’ ಎಂಬ ಮೆಸೆಂಜರ್ ತಂತ್ರಾಂಶ ಸಹ ಬಳಕೆಗೆ ದೊರೆಯುತ್ತದೆ.ಮಾಹಿತಿ-ಇಚ್ಛಾಶಕ್ತಿ ಕೊರತೆ

ವಿಂಡೋಸ್ ಆಪರೇಟಿಂಗ್ ಸಿಸ್ಟಂ ಮತ್ತು ಎಂ.ಎಸ್. ಆಫೀಸ್‌ನ ಬಿಡಿ ಆನ್ವಯಿಕ ತಂತ್ರಾಂಶಗಳಾದ ವರ್ಡ್, ಎಕ್ಸೆಲ್, ಪವರ್‌ಪಾಯಿಂಟ್ ಇತ್ಯಾದಿಗಳ ಬಳಕೆದಾರರ ಇಂಟರ್‌ಫೇಸ್ ಸಂಪೂರ್ಣವಾಗಿ ಕನ್ನಡದಲ್ಲಿ ಲಭ್ಯವಿರುವ ಬಗ್ಗೆ, ಅದಕ್ಕಾಗಿ ಎಲ್‌ಐಪಿ ಎಂಬ ಭಾಷಾ ಹೊದಿಕೆಯನ್ನು ಅಳವಡಿಸಿಕೊಳ್ಳಬೇಕು ಎಂಬ ಪ್ರಾಥಮಿಕ ಮಾಹಿತಿಗಳೇ ಹೆಚ್ಚಿನ ಕನ್ನಡಿಗ ಕಂಪ್ಯೂಟರ್ ಬಳಕೆದಾರರಿಗೆ ತಿಳಿದಿಲ್ಲ.ಬಹುತೇಕ ಬಳಕೆದಾರರಿಗೆ ಕಂಪ್ಯೂಟರಿನಲ್ಲಿ ಕನ್ನಡ ಲಿಪಿಯು ಸಮರ್ಥವಾಗಿ ಬಳಸಲು ಸಾಧ್ಯವಾದರೆ ಅಷ್ಟೇ ಸಾಕು.  ಇಂಗ್ಲಿಷ್ ಬಾರದ ಕಂಪ್ಯೂಟರ್ ಬಳಕೆದಾರರಿಗೆ ಮಾತ್ರವೇ ಈ ಎಲ್‌ಐಪಿ ಎಂಬ ಭಾಷಾ ಹೊದಿಕೆಯ ಅವಶ್ಯಕತೆ ಇದೆ ಎನ್ನುವುದು ಸಾಮಾನ್ಯ ಭಾವನೆಯಾಗಿದೆ. ಕನ್ನಡಿಗರು ತಾವು ಬಳಸುವ ಎಲ್ಲ ಆನ್ವಯಿಕ ತಂತ್ರಾಂಶಗಳ ಬಳಕೆದಾರ ಇಂಟರ್‌ಫೇಸ್ ಕನ್ನಡವೇ ಆಗಿರಬೇಕು ಎಂಬುದು ಕೇವಲ ಆಶಯವಾಗಿಯೇ ಉಳಿದಿದೆ. ಈಗ ಬಂದಿರುವ ಯುನಿಕೋಡ್ ವ್ಯವಸ್ಥೆಯಿಂದಾಗಿ  ಕನ್ನಡ ಭಾಷಾ ಬಳಕೆಯಲ್ಲಿ ತಾಂತ್ರಿಕ ಸಮಸ್ಯೆಗಳೇನಿಲ್ಲ. ಏನಿದ್ದರೂ, ಕನ್ನಡ ಆನ್ವಯಿಕ ತಂತ್ರಾಂಶಗಳದ್ದೇ ಸಮಸ್ಯೆ. ಉತ್ತಮವಾದ ಯುನಿಕೋಡ್ ಫಾಂಟ್ ಇರುವ ಕನ್ನಡದ ಆನ್ವಯಿಕ ತಂತ್ರಾಂಶಗಳನ್ನು ಸಿದ್ಧಪಡಿಸಿ ನೀಡುವುದು ತಂತ್ರಜ್ಞರ, ತಂತ್ರಾಂಶ ತಯಾರಿಕಾ ಕಂಪನಿಗಳ ಕರ್ತವ್ಯವಾಗಿದೆ.ಏಕರೂಪ ಕನ್ನಡ ಪದಕೋಶದ ಅಲಭ್ಯತೆ

ಅನೇಕ ಕಾರಣಗಳಿಂದ, ಆಸಕ್ತರು, ಆನ್ವಯಿಕ ತಂತ್ರಾಂಶ ತಯಾರಕರು, ತಂತ್ರಾಂಶಗಳ ಕನ್ನಡೀಕರಣದ ಕಾರ್ಯಕ್ಕೆ ಕೈಹಾಕಲು ಹಿಂಜರಿದಿರುವುದು ಕಂಡುಬಂದಿದೆ. ಬಳಕೆದಾರ ಇಂಟರ್‌ಫೇಸ್‌ನಲ್ಲಿ ಬಳಸಲಾಗಿರುವ ಇಂಗ್ಲಿಷ್ ಪದಗಳಿಗೆ ಸಂವಾದಿಯಾಗಿ ಏಕರೂಪದ ಕನ್ನಡದ ಪದಗಳು ಅಧಿಕೃತವಾಗಿ ಗುರುತಿಸಲಾಗಿಲ್ಲ. ಸರಕಾರವಾಗಲಿ, ಕನ್ನಡದ ಪ್ರಾತಿನಿಧಿಕ ಸಂಸ್ಥೆಗಳಾಗಲಿ ಅಂತಹವುಗಳನ್ನು ಪ್ರಕಟಿಸಿಲ್ಲದ ಕಾರಣ, ಪದಗಳ ಬಳಕೆ ಸಹ ವಿವಾದಗಳನ್ನು ಸೃಷ್ಟಿಸುತ್ತಿದೆ ಎನ್ನುತ್ತಾರೆ ಮೈಕ್ರೋಸಾಫ್ಟ್‌ನ ಪ್ರಾದೇಶಿಕ ಮುಖ್ಯಸ್ಥರು.ಇದಕ್ಕಾಗಿ ಕನ್ನಡದ ಭಾಷಾ ಹೊದಿಕೆಯ ಭಾಷಾಂತರವನ್ನು ಸುಧಾರಿಸಲು ಮೈಸೂರಿನಲ್ಲಿರುವ ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆಯ ಸಹಕರಿಸಿದೆ. ಇಂಟರ್‌ಫೇಸ್‌ನಲ್ಲಿ ಬಳಕೆಯಲ್ಲಿರುವ ಇಂಗ್ಲಿಷ್‌ನ ಪದಗಳಿಗೆ ಸಂವಾದಿಯಾಗಿ ಏಕರೂಪದ ಕನ್ನಡದ ಪದಗಳನ್ನು ಅಧಿಕೃತವಾಗಿ ಪ್ರಕಟಿಸುವ ಕೆಲಸವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಥವಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ವಹಿಸುವುದು ಅಗತ್ಯವಾಗಿದೆ. ತೆಲುಗು, ತಮಿಳುಗಳಲ್ಲಿ ಇಂತಹ ಕೋಶಗಳು ಪ್ರಕಟಗೊಂಡಿವೆ.ಮುಕ್ತ ತಂತ್ರಾಂಶಗಳ ಕನ್ನಡೀಕರಣದ ಸಮಸ್ಯೆಗಳು

ಇತರೆ ಭಾರತೀಯ ಭಾಷೆಗಳಲ್ಲಿ ವೇಗವಾಗಿ ನಡೆದಿರುವ ‘ಲಿನಕ್ಸ್’ನ ಕೆಲಸವು ಕನ್ನಡದ ಅಳವಡಿಕೆಯು ನಿಧಾನಗತಿಯಲ್ಲಿ ಇರುವುದಕ್ಕೆ ಕಾರಣಗಳಿವೆ. ಸರ್ಕಾರದ ಪ್ರೋತ್ಸಾಹ ಇದಕ್ಕಿಲ್ಲ. ಕನ್ನಡಿಗರಲ್ಲಿ ಉತ್ಸಾಹ ಇಲ್ಲ. ಐಟಿ ಕಂಪನಿಗಳಲ್ಲಿನ ಕನ್ನಡಿಗರೂ ಇದರೆಡೆಗೆ ಮನಸ್ಸು ಮಾಡುತ್ತಿಲ್ಲ. ಭಾರತೀಯ ವಿಜ್ಞಾನ ಸಂಸ್ಥೆಗೆ ಪ್ರಾದೇಶಿಕ ಭಾಷೆಗಳಲ್ಲಿ ತಂತ್ರಜ್ಞಾನ ಅಭಿವೃದ್ಧಿ ಮಾಡಲೆಂದು ಕೇಂದ್ರ ಸರ್ಕಾರ ಕೋಟ್ಯಂತರ ರೂಪಾಯಿಗಳನ್ನು ಯೋಜನೆಗಳ ರೂಪದಲ್ಲಿ ನೀಡಿದೆ. ಆದರೆ ಆ ಹಣ ಮೂಲ ತಂತ್ರಜ್ಞಾನಗಳ ಅಭಿವೃದ್ಧಿಗೆ ಬಳಕೆಯಾಗದೆ, ವೆಬ್‌ಸೈಟ್‌ಗಳು, ಇ-ಕಲಿಕಾ ಪುಸ್ತಕಗಳು ಮತ್ತು ಕೆಲವು ಇತರ ಕಥೆಗಳ ಇ-ಬುಕ್‌ಗಳನ್ನು ಸಿದ್ಧಪಡಿಸಲು ಬಳಕೆಯಾಗಿದೆ.ಇಂಗ್ಲಿಷ್ ಭಾಷಾ ಬಳಕೆ ಇರುವ, ವಿವಿಧ ಉದ್ದೇಶಗಳಿಗಾಗಿ ಬಳಕೆಯಾಗುವ, ಹಲವು ಆನ್ವಯಿಕ ತಂತ್ರಾಂಶದ ಆಕರ ಕ್ರಮವಿಧಿಯು ಲಭ್ಯವಿದೆ. ಅವುಗಳನ್ನು ಅನುವಾದದ ಮೂಲಕ ಕನ್ನಡೀಕರಿಸಿದರೆ, ಉತ್ತಮವಾದ ಆನ್ವಯಿಕ ತಂತ್ರಾಂಶಗಳು ಕನ್ನಡಿಗರ ಬಳಕೆಗೆ ದೊರೆಯುತ್ತವೆ. ಇವುಗಳ ಕನ್ನಡೀಕರಣ ಕಾರ್ಯಕ್ಕೆ ಅನುವಾದವಷ್ಟೇ ಅಲ್ಲದೆ, ತಾಂತ್ರಿಕ ಪರಿಣತಿ ಇರುವ ತಂತ್ರಜ್ಞರ ನೆರವೂ ಸಹ ಅಗತ್ಯವಾಗಿದೆ.ಮುಕ್ತ ತಂತ್ರಾಂಶದಲ್ಲಿ ಆಕರಮೂಲವು ಮುಕ್ತವಾಗಿ, ಉಚಿತವಾಗಿ ದೊರೆಯುವುದರಿಂದ, ಕನ್ನಡದ ಭಾಷಾಂತರ ಸರಿಯಾಗಿಲ್ಲ ಎಂದಾದರೆ, ಬಳಕೆದಾರರೇ ಅದನ್ನು ಬದಲಾಯಿಸಿಕೊಳ್ಳುವ ಸೌಲಭ್ಯ ಇರುತ್ತದೆ. ಆದರೆ, ಮೈಕ್ರೋಸಾಫ್ಟ್ ಕಾರ್ಪೊರೇಷನ್ ತನ್ನ ಎಂ.ಎಸ್. ಆಫೀಸ್‌ಗೆ ನೀಡಿರುವ ಕನ್ನಡದ ಎಲ್‌ಐಪಿಯಲ್ಲಿ ಬಳಕೆದಾರನು ಏನನ್ನೂ ಬದಲಾಯಿಸಿಕೊಳ್ಳಲು ಸಾಧ್ಯವಿಲ್ಲ. ಅನುವಾದ ಕಾರ್ಯಕ್ಕಿಂತ ಹೆಚ್ಚಾಗಿ ತಂತ್ರಜ್ಞಾನವನ್ನು ಬಲ್ಲ ಸ್ವಯಂಸೇವಕರು ಮುಕ್ತ ಅನುವಾದದಲ್ಲಿ ಪರಿಣಿತಿ ಉಳ್ಳವರು ಈ ಯೋಜನೆಯಲ್ಲಿ ಭಾಗವಹಿಸಿದರೆ ಕನ್ನಡಕ್ಕೊಂದು ಮುಕ್ತ ಕಾರ್ಯಾಚರಣೆ ವ್ಯವಸ್ಥೆಯನ್ನು ರೂಪಿಸಬಹುದು.ಕನ್ನಡ ತಂತ್ರಾಂಶಗಳ ಸ್ಥಿತಿಗತಿ

ಅಂತರರಾಷ್ಟ್ರೀಯ ತಂತ್ರಾಂಶ ತಯಾರಕರು ಕನ್ನಡದ ಆನ್ವಯಿಕಗಳನ್ನು ನೀಡಿಲ್ಲ. ಬೇಡಿಕೆ ಇಲ್ಲದ ಕಾರಣ ಸರಬರಾಜು ಸಹ ಇಲ್ಲವಾಗಿದೆ. ಕನ್ನಡದ ತಂತ್ರಾಂಶಗಳ ಬಹುದೊಡ್ಡ ಗ್ರಾಹಕ ಕರ್ನಾಟಕ ಸರ್ಕಾರವೇ, ಆದುದರಿಂದ, ತನ್ನ ವಿವಿಧ ಇಲಾಖೆಗಳ ಬಳಕೆಗಾಗಿ ಕನ್ನಡದ ಆನ್ವಯಿಕ ತಂತ್ರಾಂಶಗಳನ್ನು ನೀಡುವಂತೆ ಸರ್ಕಾರವು ಕಂಪನಿಗಳಿಗೆ ಕೇಳಬೇಕಾಗಿದೆ. ಅದಾಗದಿದ್ದರೆ, ಕನ್ನಡೀಕರಣಕ್ಕಾಗಿ ಸ್ಥಳೀಯ ತಂತ್ರಾಂಶ ತಯಾರಕರ ಸೇವೆಯನ್ನು ಬಳಸಿಕೊಳ್ಳಬಹುದಾಗಿದೆ.ಸರ್ಕಾರಕ್ಕೆ ಸಲಹೆ ನೀಡುವ ತಜ್ಞರೂ ಕನ್ನಡಪರ ನಿಲುವು ಹೊಂದಿರುವುದು ಅಗತ್ಯ. ಪ್ರಸ್ತುತ, ಕನ್ನಡ ತಂತ್ರಾಂಶ ಕ್ಷೇತ್ರವು ನಿರೀಕ್ಷಿಸಿದಷ್ಟು ಪ್ರಗತಿ ಸಾಧಿಸಿಲ್ಲ. ಕನ್ನಡ ಆನ್ವಯಿಕ ತಂತ್ರಾಂಶಗಳನ್ನು ಅಳವಡಿಸಿ ಬಳಸಿಕೊಳ್ಳುವಲ್ಲಿ ಸರ್ಕಾರದ ನೀತಿಯು ಪ್ರಕಟವಾಗಿಲ್ಲ. ಬಹುತೇಕ ಇಲಾಖೆಗಳಲ್ಲಿ ಕನ್ನಡವು ಕಂಪ್ಯೂಟರಿನಲ್ಲಿ ಬಳಕೆಯಲ್ಲಿದರೂ, ಉದ್ಯೋಗಿಗಳಿಗೆ ಸೂಕ್ತ ತರಬೇತಿಯಿಲ್ಲ. ಕನ್ನಡ ತಂತ್ರಾಂಶ ಸಲಹಾ ಸಮಿತಿಯ ವರದಿಯು ಅನುಷ್ಠಾನಗೊಂಡಿಲ್ಲ. ಕನ್ನಡ ತಂತ್ರಾಂಶ ತಯಾರಿಕೆಗೆ ರಾಜ್ಯ ಸರ್ಕಾರ ಆಯವ್ಯಯದಲ್ಲಿ ಪ್ರತಿವರ್ಷ ಸುಮಾರು ಎರಡು ಕೋಟಿ ರೂಪಾಯಿ ಮೀಸಲಿಡುತ್ತಿದ್ದರೂ ಅದು ಬಳಕೆಯಾಗುತ್ತಿಲ್ಲ. ಇದಕ್ಕೆ ಕಾರಣವೇನು ಎಂಬುದು ಚಿದಂಬರ ರಹಸ್ಯವಾಗಿದೆ. ಹೀಗಾಗಿ, ಈ ಬಾರಿಯ ಆಯವ್ಯಯದಲ್ಲಿ ಕನ್ನಡ ತಂತ್ರಾಂಶಕ್ಕೆ ಯಾವುದೇ ಹಣ ಮೀಸಲಾಗಿರಿಸಿಲ್ಲ.ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡವನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇಂದು ಹೆಚ್ಚಾಗಿದೆ. ಈ ಕುರಿತು ಪೂರ್ಣಚಂದ್ರ ತೇಜಸ್ವಿಯವರ ಮಾತು ವಿಶ್ವಕನ್ನಡ ಸಮ್ಮೇಳನದ ಸಂದರ್ಭದಲ್ಲಿ ಹೆಚ್ಚು ಪ್ರಸ್ತುತ. ತೇಜಸ್ವಿ ಅವರು ಹೀಗೆ ಹೇಳಿದ್ದಾರೆ:‘...ಒಂದು ಭಾಷೆಯ ಅಳಿವು ಉಳಿವನ್ನು ನೇರವಾಗಿ ನಿರ್ಧರಿಸುವುದು ಅದರ ಜನಬಳಕೆ. ಜನ ಬಳಸುವುದು ಕಡಿಮೆಯಾದಂತೆ, ಆ ಭಾಷೆ ಅವಸಾನಕ್ಕೆ ಹತ್ತಿರವಾಗುತ್ತದೆ. ಆ ಭಾಷೆಯ ಸಾಹಿತ್ಯ ಸಮ್ಮೇಳನಗಳು, ಭಾವನಾತ್ಮಕ ಭಾಷಾಭಿಮಾನ, ಚಳವಳಿ ಇತ್ಯಾದಿಗಳು ಯಾವುವೂ ಅದನ್ನು ಉಳಿಸಲಾರವು. ಇದಕ್ಕೆ ಸಂಸ್ಕೃತವೇ ಜ್ವಲಂತ ಉದಾಹರಣೆ.ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ಕಂಪ್ಯೂಟರ್ ಸರ್ವವ್ಯಾಪಿಯಾಗಿ ಆವರಿಸುತ್ತಿದೆ. ನಾವು ಕಂಪ್ಯೂಟರಿನಲ್ಲಿ ಇಂಗ್ಲೀಷ್ ಭಾಷೆಯಷ್ಟೇ ಸರ್ವ ಸಮರ್ಥವಾಗಿ ನಮ್ಮ ಭಾಷೆಯನ್ನು ಬಳಸಲು ಸಾಧ್ಯವಾಗದಿದ್ದರೆ ನಮ್ಮ ಭಾಷೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ’. ಈ ಅರಿವು ನಮ್ಮೆಲ್ಲರದೂ ಆಗಬೇಕಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.