ಶನಿವಾರ, ಫೆಬ್ರವರಿ 27, 2021
28 °C
ಅಕ್ರಮ ಗಣಿಗಾರಿಕೆ, ರೆಸಾರ್ಟ್‌ ದಂಧೆ ವಿರುದ್ಧ ಮಾತಿನ ಕತ್ತಿ ಝಳಪಿಸಿದ ಪ್ರೊ.ಮಲೆಯೂರು ಗುರುಸ್ವಾಮಿ

ಕನ್ನಡ ಜಾರಿಗೆ ದಿಟ್ಟ ಹೋರಾಟ ಅನಿವಾರ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನ್ನಡ ಜಾರಿಗೆ ದಿಟ್ಟ ಹೋರಾಟ ಅನಿವಾರ್ಯ

ಶ್ರೀಪದ್ಮರಾಜ ಪಂಡಿತ ವೇದಿಕೆ (ಚಾಮರಾಜನಗರ): ‘ಪ್ರಾಥಮಿಕ ಹಂತದಲ್ಲಿ ಮಾತೃಭಾಷೆ ಕನ್ನಡದ ಜಾರಿ ಸಂಬಂಧ ರಾಜ್ಯ ಸರ್ಕಾರ ಕಾನೂನಾತ್ಮಕವಾಗಿ ದಿಟ್ಟ ಹೋರಾಟ ಮಾಡಬೇಕು’ ಎಂದು ಸಮ್ಮೇಳನಾಧ್ಯಕ್ಷ ಪ್ರೊ.ಮಲೆಯೂರು ಗುರುಸ್ವಾಮಿ ಒತ್ತಾಯಿಸಿದರು.ನಗರದ ಪೇಟೆ ಪ್ರೈಮರಿ ಶಾಲಾ ಆವರಣದಲ್ಲಿ ಸೋಮವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ ನಡೆದ 5ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.ಅವರ ಭಾಷಣದಲ್ಲಿ ಜಿಲ್ಲಾ ವ್ಯಾಪ್ತಿ ನಡೆಯುತ್ತಿರುವ ಅಕ್ರಮ ಕರಿಕಲ್ಲು ಗಣಿಗಾರಿಕೆ, ಕನಕಗಿರಿ ಕ್ಷೇತ್ರದ ಸುತ್ತಮುತ್ತ ನಡೆಯುತ್ತಿರುವ ಅಕ್ರಮ ಬಿಳಿಕಲ್ಲು ಗಣಿಗಾರಿಕೆ ವಿರುದ್ಧ ಆಕ್ರೋಶ ಮೊಳಗಿತು. ಬಂಡೀಪುರ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿ ತಲೆ ಎತ್ತುತ್ತಿರುವ ರೆಸಾರ್ಟ್‌ ದಂಧೆ ವಿರುದ್ಧ ಮಾತಿನ ಕತ್ತಿ ಝಳಪಿಸಿದರು.ಈ ಮಾತುಗಳ ನಡುವೆಯೇ ಕಾಡಿನಲ್ಲಿರುವ ಬುಡಕಟ್ಟು ಜನರ ಬದುಕಿಗೆ ಕೊಡಲಿ ಪೆಟ್ಟು ಹಾಕಬೇಡಿ ಎಂಬ ಕರುಣೆಯೂ ಮಾರ್ದನಿಸಿತು. ಗಿರಿಜನರ ಮೂಲ ಸಂಸ್ಕೃತಿಗೆ ಧಕ್ಕೆ ತರುವುದು ಸಲ್ಲದು. ಅವರನ್ನು ಕಾಡಿನಿಂದ ಒಕ್ಕಲೆಬ್ಬಿಸದೆ ಅವರಿಗೆ ಸೌಲಭ್ಯ ಕಲ್ಪಿಸಿ ನಾಗರಿಕರನ್ನಾಗಿಸುವ ಕಾರ್ಯಕ್ರಮ ರೂಪಿಸಬೇಕು ಎಂದರು ಮಲೆಯೂರು ಗುರುಸ್ವಾಮಿ.‘ಪ್ರಸ್ತುತ ಪ್ರಾಥಮಿಕ ಹಂತದಲ್ಲಿ ಕನ್ನಡ ಭಾಷೆ ಜಾರಿ ವಿವಾದ ಸುಪ್ರೀಂ ಕೋರ್ಟ್‌ನಲ್ಲಿದೆ. ನ್ಯಾಯಾಲಯ ಕೇಳಿರುವ ಪ್ರಶ್ನೆಗಳನ್ನು ಗಮನಿಸಿದರೆ ನಮಗೆ ಹಿನ್ನಡೆಯಾಗುವ ಸಂಭವ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಕಾನೂನಾತ್ಮಕವಾಗಿ ಭಾಷೆಯ ಉಳಿವಿಗೆ ಸರ್ಕಾರ ದಿಟ್ಟ ಹೋರಾಟ ನಡೆಸಬೇಕು’ ಎಂದು ಸಲಹೆ ನೀಡಿದರು.ಮಲೆಮಹದೇಶ್ವರ ಬೆಟ್ಟದ ಅಭಿವೃದ್ಧಿ ಪ್ರಾಧಿಕಾರ ರಚನೆ ಆಶಾದಾಯಕ ಬೆಳವಣಿಗೆ. ಈ ಪ್ರಾಧಿಕಾರದ ವ್ಯಾಪ್ತಿಯೊಳಗೆ ಜಿಲ್ಲೆಯ ಎಲ್ಲ ಧಾರ್ಮಿಕ ಕ್ಷೇತ್ರಗಳ ಸೇರ್ಪಡೆ ಸರಿಯಲ್ಲ. ಮಲೆಮಹದೇಶ್ವರ ಬೆಟ್ಟಕ್ಕೆ ಮಾತ್ರ ಪ್ರಾಧಿಕಾರವನ್ನು ಸೀಮಿತಗೊಳಿಸಬೇಕು ಎಂದು ಆಗ್ರಹಿಸಿದರು.ಸರ್ಕಾರಿ ನೌಕರರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸಂತೇಮರಹಳ್ಳಿಯನ್ನು ಉಪಗ್ರಹ ಕೇಂದ್ರವಾಗಿ ಅಭಿವೃದ್ಧಿಪಡಿಸಬೇಕು. ಜಿಲ್ಲೆಯಲ್ಲಿ ಅಕ್ರಮವಾಗಿ ಕರಿಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು. ಕನಕಗಿರಿ ಕ್ಷೇತ್ರದ ಸುತ್ತಮುತ್ತ ನಡೆಯುತ್ತಿರುವ ಅಕ್ರಮ ಕರಿಕಲ್ಲು ಗಣಿಗಾರಿಕೆಯಿಂದ ಜೈನ ಧರ್ಮದ ದೇವತಾ ವಿಗ್ರಹಗಳು, ಶಾಸನಗಳು ನಾಶವಾಗುವ ಹಂತ ತಲುಪುತ್ತಿವೆ. ಜೈನ ಸಮುದಾಯ ಅಲ್ಪಸಂಖ್ಯಾತರಾಗಿದ್ದಾರೆ. ಅಧಿಕಾರಿಗಳು ಸುಮ್ಮನಿದ್ದಾರೆ. ಗೂಂಡಾಗಿರಿಯ ಪ್ರದರ್ಶನ ನಡೆಯುತ್ತಿದೆ. ಕೂಡಲೇ, ಗಣಿಗಾರಿಕೆ ತಡೆಗೆ ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಮಲೆಮಹದೇಶ್ವರ ಬೆಟ್ಟದಲ್ಲಿ ತೆರೆದಿರುವ ಜಾನಪದ ವಿವಿಯ ಅಧ್ಯಯನ ಕೇಂದ್ರಕ್ಕೆ ಸೂಕ್ತ ಸೌಲಭ್ಯ ಒದಗಿಸಬೇಕು. ಕೂಡಲೇ, ನಿವೇಶನ ಮಂಜೂರು ಮಾಡಿಕೊಡಬೇಕು. ತುರ್ತಾಗಿ ಸರ್ಕಾರಿ ಕಟ್ಟಡವನ್ನು ಒದಗಿಸಿಕೊಟ್ಟು ಕೇಂದ್ರವು ಕಾರ್ಯ ನಿರ್ವಹಿಸಲು ಅನುವು ಮಾಡಬೇಕು ಎಂದರು.ಜಿಲ್ಲೆಯ ಹೆಮ್ಮೆಯ ಪುತ್ರರಾದ ಡಾ.ರಾಜ್‌ಕುಮಾರ್‌ ಅವರ ನೆನಪನ್ನು ಶಾಶ್ವತವಾಗಿ ಉಳಿಸಲು ಜಿಲ್ಲಾ ಕೇಂದ್ರದಲ್ಲಿ ಅವರ ಸ್ಮಾರಕ ನಿರ್ಮಿಸಬೇಕು. ಡಿವಿಯೇಷನ್‌ ರಸ್ತೆಗೆ ಅವರ ಹೆಸರಿಡಬೇಕು. ಜಿಲ್ಲೆಯಲ್ಲಿ ಕೇಂದ್ರೀಯ ಕೃಷಿ ವಿಶ್ವ ವಿದ್ಯಾಲಯ ಸ್ಥಾಪನೆಗೆ ಜನಪ್ರತಿನಿಧಿಗಳು ಶ್ರಮವಹಿಸಿ ಅದು ಕೈತಪ್ಪಿ ಹೋಗದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.ಬಿಳಿಗಿರಿರಂಗನ ಬೆಟ್ಟದಲ್ಲಿ ಅಪರೂಪದ ಔಷಧೀಯ ಸಸ್ಯಗಳಿವೆ, ಜನಪದ ಔಷಧಿಗಳ ಭಂಡಾರವೇ ಸೋಲಿಗ ಸಮುದಾಯದಲ್ಲಿದೆ. ಇದನ್ನು ಉಳಿಸಲು ಆಯುರ್ವೇದ ಸಂಶೋಧನಾ ಕೇಂದ್ರ ಸ್ಥಾಪಿಸಬೇಕು ಎಂದರು.ಕಣ್ಮುಂದೆ ಜಿಲ್ಲಾ ದರ್ಶನ

ಸಮ್ಮೇಳನಾಧ್ಯಕ್ಷ ಪ್ರೊ.ಮಲೆಯೂರು ಗುರುಸ್ವಾಮಿ ಅವರ ಭಾಷಣದಲ್ಲಿ ಗಡಿ ಜಿಲ್ಲೆಯ ಚಿತ್ರಣ ಸಭಿಕರ ಕಣ್ಮುಂದೆ ಸುಳಿದು ಮನದಲ್ಲಿ ದಾಖಲಾಯಿತು.ಅವರ ಹೇಳಿದ ಹಲವು ವಿಷಯ ಸಭಿಕರ ಮನದಲ್ಲಿ ಅಚ್ಚಳಿಯದೆ ಉಳಿದವು. ಜಿಲ್ಲೆಯ ಇತಿಹಾಸ, ಭೌಗೋಳಿಕೆ ಹಿನ್ನಡೆಯ ಚಿತ್ರಣ ನೀಡುತ್ತಲೇ ಅವರು, ಕತ್ತಲ ರಾಜ್ಯದ ಮಹತ್ವವನ್ನು ಬಿಚ್ಚಿಟ್ಟರು. ಜಿಲ್ಲೆಯ ಕವಿಗಳು, ಸಾಹಿತಿಗಳು, ಕಲಾವಿದರನ್ನು ಸ್ಮರಿಸಿದರು.‘ಮೇಲಾಗಲೊಲ್ಲೆನು ಕೀಳಗಲಲ್ಲದೆ/ ಕೀಳಿಂಗಲ್ಲದೆ ಹಯನು ಕರೆಯದು/ ಎನಗಿಂತ ಕಿರಿಯರಿಲ್ಲ’ ಎಂಬ ಮನೋಭಾವವನ್ನು ನಾನು ಹೊಂದಿದ್ದೇನೆ ಎಂದ ಅವರು, ಅಖಿಲ ಭಾರತಮಟ್ಟದಲ್ಲಿ 80 ಸಾಹಿತ್ಯ ಸಮ್ಮೇಳನ ನಡೆದರೂ ಕನ್ನಡ ನೆಲ, ಜಲ, ಭಾಷಾ ವಿವಾದ ಬಗೆಹರಿದಿಲ್ಲ. ಸಾಮಾಜಿಕರಲ್ಲಿ ಇಂಗ್ಲಿಷ್‌ ವ್ಯಾಮೋಹದ ವಿಷಗಾಳಿ ಸೇರಿಕೊಂಡಿದೆ ಎಂದು ಕಳವಳಪಟ್ಟರು.ಕನ್ನಡ ಕಟ್ಟುವಲ್ಲಿ ಮಾಧ್ಯಮಗಳ ಪಾತ್ರವೂ ಮಹತ್ತರವಾದುದು. ಆದರೆ, ಕೆಲವು ಕನ್ನಡ ವಾಹಿನಿಗಳಲ್ಲಿ ಬಳಕೆಯಾಗುವ ಭಾಷೆ ಬಗ್ಗೆ ಮಾತನಾಡಬಾರದು ಅನಿಸುತ್ತದೆ. ಕನ್ನಡವನ್ನು ಕೊಲ್ಲುತ್ತಿರುವ ಇಂತಹ ವಾಹಿನಿಗಳಿಗೆ ಕಡಿವಾಣ ಹಾಕಬೇಕಿದೆ ಎಂದು ಒತ್ತಾಯಿಸಿದರು.

ಹೊಸ ರೈಲು ಮಾರ್ಗ ಸ್ಥಾಪನೆ, ಕೆರೆಗಳಿಗೆ ನೀರು ತುಂಬಿಸುವುದು, ವೈದ್ಯಕೀಯ ಕಾಲೇಜು ಸ್ಥಾಪನೆ, ಕೇಂದ್ರೀಯ ವಿವಿ ಸ್ಥಾಪನೆಗೆ ಸಂಬಂಧ ಕೈಗೊಂಡಿರುವ ಪೂರ್ವ ಸಿದ್ಧತೆ ಬಗ್ಗೆ ಸಮ್ಮೇಳನಾಧ್ಯಕ್ಷರು ಮೆಚ್ಚುಗೆ ವ್ಯಕ್ತಪಡಿಸಿದರು.ಜಿಲ್ಲೆಯು ಹಲವು ಪವಾಡ ಪುರುಷರು, ಮಹಾಸಂತರ ಕರ್ಮಭೂಮಿಯಾಗಿದೆ. ಕೆಲವರು ಈ ಜಿಲ್ಲೆಯನ್ನು ಶಾಪಗ್ರಸ್ತವೆಂದು ಪರಿಗಣಿಸಿ ಇಲ್ಲಿಗೆ ಬರುತ್ತಿಲ್ಲ. ಅಂತಹವರಿಗೆ ನನ್ನ ಧಿಕ್ಕಾರವಿದೆ ಎಂದ ಅವರು, ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿಗಳನ್ನು ಅಭಿನಂದಿಸುವುದನ್ನು ಮರೆಯಲಿಲ್ಲ. ಜತೆಗೆ, ಜಿಲ್ಲೆಯ ಜನಪ್ರತಿನಿಧಿಗಳ ಕಾರ್ಯವೈಖರಿ ಬಗ್ಗೆ ಮೆಚ್ಚುಗೆಯೂ ಹೊರಬಿದ್ದಿತು.

ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ಡಾ.ಸಿ. ನಾಗಣ್ಣ ಮಾತನಾಡಿ, ‘ಕನ್ನಡ ಭಾಷೆ ಉತ್ಕೃಷ್ಟವಾದುದು. ಅದರ ಸತ್ವ ಅರಿತುಕೊಳ್ಳಬೇಕಿದೆ’ ಎಂದರು.ನಗರಸಭೆ ಅಧ್ಯಕ್ಷ ಎಸ್‌. ನಂಜುಂಡಸ್ವಾಮಿ ಮಾತನಾಡಿ, ‘ಲೋಕಸಭಾ ಚುನಾವಣೆಯ ನಂತರ ಜಿಲ್ಲಾ ಕೇಂದ್ರದ ರಸ್ತೆಗಳಿಗೆ ಡಾ.ರಾಜ್‌ಕುಮಾರ್‌ ಸೇರಿದಂತೆ ಸಾಂಸ್ಕೃತಿಕ ನಾಯಕರ ಹೆಸರನ್ನು ನಾಮಕರಣ ಮಾಡಲು ಕ್ರಮಕೈಗೊಳ್ಳಲಾಗುವುದು’ ಎಂದರು.ಸಂಸದ ಆರ್‌. ಧ್ರುವನಾರಾಯಣ ಅಧ್ಯಕ್ಷತೆವಹಿಸಿದ್ದರು. ಬೊಪ್ಪೇಗೌಡನಪುರದ ಮಂಟೇಸ್ವಾಮಿ ಮಠದ ಬಿ.ಎಲ್‌. ಪ್ರಭುದೇವರಾಜೇ ಅರಸ್‌ ನೇತೃತ್ವವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಜಿ. ನಾಗಶ್ರೀ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಪಾರ್ವತಮ್ಮ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಸೋಮಶೇಖರ ಬಿಸಲ್ವಾಡಿ, ನಿಕಟಪೂರ್ವ ಅಧ್ಯಕ್ಷ ಎ.ಎಂ. ನಾಗಮಲ್ಲಪ್ಪ ಹಾಜರಿದ್ದರು. ಇದೇ ವೇಳೆ ‘ಅಮೃತಭೂಮಿ’ ಸ್ಮರಣ ಸಂಚಿಕೆ ಮತ್ತು ‘ಹೊಂಬಾಳೆ’ ಕೃತಿಯನ್ನು ಬಿಡುಗಡೆಗೊಳಿಸಲಾಯಿತು.ಸಮಾರಂಭದ ಆರಂಭಕ್ಕೂ ಮೊದಲು ಪ್ರವಾಸಿ ಮಂದಿರದಿಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಆರಂಭಗೊಂಡಿತು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಪಿ. ಮಹಾಲಿಂಗಸ್ವಾಮಿ ಮೆರವಣಿಗೆಗೆ ಚಾಲನೆ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.