ಮಂಗಳವಾರ, ಜನವರಿ 31, 2023
18 °C

ಕನ್ನಡ ನಮಗಿಂತಲೂ ದೊಡ್ಡದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನ್ನಡ ನಮಗಿಂತಲೂ ದೊಡ್ಡದು

ಶಿಕ್ಷಣ ವ್ಯಾಪಾರೀಕರಣವಾಗಿದೆ. ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ದೊರೆಯುವ ಎಲ್ಲ ಸವಲತ್ತುಗಳು ಕನ್ನಡ ಮಾಧ್ಯಮ ಶಾಲೆಗಳಿಗೆ ಸಿಗಬೇಕು. ಸರಿಯಾದ ಕಟ್ಟಡ, ಸಾಮಗ್ರಿ ದೊರೆಯಬೇಕು. ಕನ್ನಡ ಶಾಲೆಗಳ ಬಗ್ಗೆ ಕೀಳರಿಮೆ ಹೋಗಲಾಡಿಸಬೇಕು. ಕನ್ನಡ ಮಾಧ್ಯಮದಲ್ಲಿಯೇ ಶಿಕ್ಷಣ ನೀಡಬೇಕು, ಶಿಕ್ಷಣದ ಜೊತೆಗೆ ಅನ್ನವನ್ನು ಸಹ ನೀಡಬೇಕು. ಅಂದರೆ ಖಾಸಗಿ ಸಂಸ್ಥೆಗಳಲ್ಲಿ ಕನ್ನಡ ಮಾಧ್ಯಮದವರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಲೇಬೇಕು.ಐಟಿ-ಬಿಟಿ ಕಂಪೆನಿಗಳು ಬಂದಿರುವುದರಿಂದ ಇಂಗ್ಲಿಷ್ ವ್ಯಾಮೋಹ ಹೆಚ್ಚಾಗಿದೆ. ಇಂಥ ಖಾಸಗಿ ಕಂಪೆನಿಗಳು ಕನ್ನಡ ಮಾಧ್ಯಮದವರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಬೇಕು ಎಂದು ಸರ್ಕಾರ ಷರತ್ತು ಹಾಕಬೇಕು. ಕನ್ನಡಿಗರ ಅಭಿವೃದ್ಧಿ ಆದರೆ ಮಾತ್ರ ಕರ್ನಾಟಕದ ಅಭಿವೃದ್ಧಿ. ಅಂತರಂಗದ ಅಭಿವೃದ್ಧಿ ಬಗ್ಗೆ ಕಳಕಳಿ ಇರಬೇಕು. ಆದರೆ ಈಗಿರುವ ರಾಜಕಾರಣಿಗಳಿಗೆ ಬಹಿರಂಗ ಅಭಿವೃದ್ಧಿ ಮಾತ್ರ ಬೇಕಾಗಿದೆ.ಕನ್ನಡಪರ ಹೋರಾಟಗಾರರು ಸಮಾನತೆಗಾಗಿ ಏಕರೂಪದ ಶಿಕ್ಷಣದ ಮಾತೃಭಾಷಾ ಮಾಧ್ಯಮ ಎಂಬ ಧ್ಯೇಯವಿಟ್ಟುಕೊಂಡು ಹೋರಾಟ ನಡೆಸಬೇಕು. ಕನ್ನಡಿಗರಿಗೆ ಇದೇ ಮೂಲಮಂತ್ರವಾಗಬೇಕು. ಯುವಕರಿಗೆ ಯೋಗ್ಯವಾದಂಥ ಮಾರ್ಗದರ್ಶನ ಸಿಗಬೇಕು. ಕೇವಲ ಭಾಷೆ ಬಗ್ಗೆ ಅಭಿಮಾನ ವ್ಯಕ್ತಪಡಿಸಿದರೆ ಸಾಲದು. ಅದರ ಬಗ್ಗೆ ನಿಜವಾದ ಪ್ರಜ್ಞೆ ಇರಬೇಕು. ಭಾಷೆಯಿಂದ ಕಲಿಯುವುದು ಬಹಳವಿದೆ ಎನ್ನುವುದನ್ನು ಉದಯೋನ್ಮುಖ ಲೇಖಕರು, ಯುವಕರು ತಿಳಿದುಕೊಳ್ಳಬೇಕು.ಕನ್ನಡ ಭಾಷೆ ನಮಗಿಂತಲೂ ದೊಡ್ಡದು ಎಂದು ಎಲ್ಲರಲ್ಲಿಯೂ ಭಾವನೆ ಇರಬೇಕು. ಕನ್ನಡದಿಂದಲೇ ನಮ್ಮ ಉದ್ಧಾರ, ನಮ್ಮ ರಕ್ಷಣೆ ಎಂಬುದನ್ನು ಎಲ್ಲರೂ ಮನಗಾಣಬೇಕು. ಕನ್ನಡವನ್ನು ಶ್ರೀಸಾಮಾನ್ಯನು ಉಳಿಸಿದ್ದಾನೆ, ಬೆಳೆಸಿದ್ದಾನೆ. ಪಾರಂಪರಿಕವಾಗಿ ಸಾಂಸ್ಕೃತಿಕ ಸತ್ವ ಸಾಮಾನ್ಯರಲ್ಲಿ ಇರುತ್ತದೆ.ಕನ್ನಡ ಪ್ರಜ್ಞೆ, ಕನ್ನಡಕ್ಕಾಗಿ, ಕನ್ನಡದ ಜನತೆಗಾಗಿ, ಕನ್ನಡವನ್ನು ಪ್ರೀತಿಸುವುದನ್ನು ಕಲಿಸುತ್ತದೆ. ಭಾಷೆ ಅಭಿಮಾನವನ್ನು ಪ್ರಜ್ಞೆಯಾಗಿ ಪರಿವರ್ತಿಸಬೇಕು. ಕನ್ನಡ ಮಾತೃಭಾಷೆಯಾಗಿದ್ದವರಷ್ಟೇ ಕನ್ನಡಿಗರಲ್ಲ, ಮಾತೃಭಾಷೆ ಯಾವುದೇ ಇರಲಿ, ಕನ್ನಡವನ್ನು ಪ್ರೀತಿಯಿಂದ ಕಲಿತು, ಕನ್ನಡಿಗರ ಬದುಕಿನಲ್ಲಿ ಬೆರೆತು, ಕರ್ನಾಟಕದ ಅಭಿವೃದ್ಧಿಯಲ್ಲಿ ತಮ್ಮ ಅಭಿವೃದ್ಧಿ ಇದೆ ಎಂದು ಭಾವಿಸುವವರೆಲ್ಲರೂ ಕನ್ನಡಿಗರು. ಕನ್ನಡಿಗರು ಅಭಿಮಾನ ಶೂನ್ಯರು ಎಂದು ಪದೇ ಪದೇ ಹೇಳುವ ಮೂಲಕ ಅವಮಾನ ಮಾಡಬಾರದು.ಬೆಂಗಳೂರಿನಲ್ಲಿಯೇ ಕನ್ನಡಕ್ಕೆ ಉಳಿಗಾಲವಿಲ್ಲದ ಪರಿಸ್ಥಿತಿ ಇದೆ. ಕನ್ನಡದ ರಾಜ್ಯ ಎಂಬ ಕಳಕಳಿ ಎಲ್ಲ ಮಂತ್ರಿಗಳಲ್ಲಿಯೂ ಬರಬೇಕು. ಕನ್ನಡದ ಹಿತಾಸಕ್ತಿ ಕಾಪಾಡುವುದು ಮುಖ್ಯ ಗುರಿಯಾಗಿರಬೇಕು. ಇಲ್ಲದಿದ್ದರೆ ಕರ್ನಾಟಕ ಒಂದಾದ ಉದ್ದೇಶ ವಿಫಲವಾಗುತ್ತದೆ.ಬೇರೆ ಪ್ರಭಾವಗಳನ್ನು, ಪ್ರತಿಭೆಗಳನ್ನು ಜೀರ್ಣಿಸಿಕೊಳ್ಳುವ ದೊಡ್ಡಗುಣ ಕನ್ನಡಿಗರಲ್ಲಿದೆ. ಅದನ್ನು ಅಗತ್ಯಕ್ಕೆ ಬೇಕಾದಷ್ಟು ಬಳಸಿಕೊಂಡು ಬರಲಾಗಿದೆ. ಒಂದು ಮೂಲೆಯಲ್ಲಿ ರಾಜ್ಯದ ರಾಜಧಾನಿ ಇರುವುದರಿಂದ ಪ್ರತ್ಯೇಕತೆಯ ಕೂಗು, ಆತಂಕ ಉದ್ಭವವಾಗುತ್ತಿದೆ. ಅಪನಂಬಿಕೆಗಳು ಹುಟ್ಟುತ್ತಿವೆ. ಅಭಿವೃದ್ಧಿಯಲ್ಲಿ ಸಮಾನತೆ ಇಲ್ಲ.ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರಕಿದೆ, ಆದರೆ ಕೇಂದ್ರದಿಂದ ಅನುದಾನ ಮಾತ್ರ ದೊರೆಯುತ್ತಿಲ್ಲ. ಅಧ್ಯಯನ, ಸಂಶೋಧನೆ, ಪ್ರಕಟಣೆಗಳಿಗೆ ಅನುದಾನ ಉಪಯೋಗಿಸಬೇಕು. ಈ ಕುರಿತು ಮೈಸೂರು ಭಾಷಾ ಸಂಸ್ಥೆ ಹಾಗೂ ವಿಶ್ವವಿದ್ಯಾಲಯಗಳು ಯೋಜನೆ ಹಾಕಿಕೊಂಡಿವೆ. ಅನುದಾನ ತರುವ ನಿಟ್ಟಿನಲ್ಲಿ ಸರಿಯಾದ ಪ್ರಯತ್ನ ನಡೆಯಬೇಕು.ಕನ್ನಡ, ಕರ್ನಾಟಕತ್ವ ಎಂಬ ಭಾವನೆ ಬೆಳೆಯಬೇಕು. ಪರಸ್ಪರ ವಿಶ್ವಾಸದಿಂದ ದೃಢವಾದ ಸಂಕಲ್ಪದಿಂದ ಮುನ್ನಡೆಯಬೇಕು. ಅಸಮಾನತೆಯ ಕೂಗು ನಿವಾರಿಸಬೇಕು. ಅಂದಾಗ ಮಾತ್ರ ಭವಿಷ್ಯದ ಕರ್ನಾಟಕ ಚಿತ್ರ ಸುಂದರವಾಗಬಹುದು.

-ಚೆನ್ನವೀರ ಕಣವಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.