ಭಾನುವಾರ, ಮೇ 16, 2021
22 °C

ಕನ್ನಡ ಸಾಹಿತ್ಯ ಪರಿಷತ್ತು ಹೇಗಿರಬೇಕು?

ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ Updated:

ಅಕ್ಷರ ಗಾತ್ರ : | |

ಕನ್ನಡ ಸಾಹಿತ್ಯ ಪರಿಷತ್ತು ಈಗ ನೂರರ ಅಂಚಿನಲ್ಲಿದೆ. ಇದೀಗ ಪರಿಷತ್ತಿನ ಇತಿಹಾಸದ ಮುಖ್ಯ ಘಟ್ಟದಲ್ಲಿ ಅದರ ನೇತೃತ್ವ ವಹಿಸಲು ಚುನಾವಣೆ ನಡೆಯುತ್ತಿದೆ. ಚುನಾವಣೆಗೆ ಸಂಬಂಧಿಸಿದ ವರದಿಗಳನ್ನು ಗಮನಿಸಿದರೆ ಮಹತ್ವದ ಸಾಂಸ್ಕೃತಿಕ ಸಂಸ್ಥೆಗೆ ನಡೆಯುವ ಚುನಾವಣೆಯ ಸ್ವರೂಪ ಇದ್ದಂತಿಲ್ಲ.ಇಂತಹ ಸಂಸ್ಥೆಗೆ ನಡೆಯುವ ಚುನಾವಣೆಯೆಂದರೆ ಜವಾಬ್ದಾರಿಯುತ ಸದಸ್ಯರು ತಮ್ಮ ಆಯ್ಕೆಯ ಅಭ್ಯರ್ಥಿಗೆ ಮತ ನೀಡುವ ಸರಳ ವಿಧಾನ. ಇಲ್ಲಿ ಆಮಿಷಗಳಿಗೆ ಅವಕಾಶವಿಲ್ಲ. ಆದರೆ ವರದಿಗಳು ಭಿನ್ನ ಕತೆ ಹೇಳುತ್ತವೆ. ನೇರ ಆಯ್ಕೆಗೆ ಪ್ರಕ್ರಿಯೆಗಿಂತ `ಒಳದಾರಿ~ಗಳ ತಂತ್ರ ಇಲ್ಲಿಯೂ ಕೆಲಸ ಮಾಡುತ್ತಿದೆ. ರಾಜಕಾರಣಿಗಳು, ಉದ್ಯಮಿಗಳು, ಮಠಾಧೀಶರು - ಹಿನ್ನೆಲೆಯಲ್ಲಿ ಆಸಕ್ತಿ ವಹಿಸಿದ್ದಾರೆ.ಸಾಂಸ್ಕೃತಿಕ ಸಂಘಟನೆಯ ನೇತೃತ್ವ ವಹಿಸುವುದಕ್ಕಿಂತ ಭಿನ್ನ ಆಶಯಗಳು ಚುನಾವಣೆಯ ಸಿದ್ಧತೆಯ ಸ್ವರೂಪದಲ್ಲಿ ಧ್ವನಿಸುತ್ತಿವೆ. ಯಾಕೆ ಹೀಗೆ? ಏನಿದರ ಮರ್ಮ?

ಕನ್ನಡ ಸಾಹಿತ್ಯ ಪರಿಷತ್ತಿನ ಮೂಲ ಆಶಯ - ಕನ್ನಡ ಸಂಸ್ಕೃತಿಯನ್ನು ಪೋಷಿಸುವ, ಬೆಳೆಸುವ, ದನಿಯಾಗುವ ಹಂಬಲ.

 

ನಂತರದಲ್ಲಿ ಈ ಆಶಯವನ್ನಿಟ್ಟುಕೊಂಡು ಅನೇಕ ಸಂಸ್ಥೆಗಳು ರೂಪುಗೊಂಡವು. ಸಂಸ್ಕೃತಿ ಇಲಾಖೆ, ಅಕಾಡೆಮಿಗಳು, ಪ್ರಾಧಿಕಾರಗಳು, ವಿಶ್ವವಿದ್ಯಾಲಯದ ಕನ್ನಡ ವಿಭಾಗಗಳು, ಕನ್ನಡ ವಿಶ್ವವಿದ್ಯಾಲಯ - ಹೀಗೆ ಕನ್ನಡಕ್ಕಾಗಿ `ದುಡಿಯುವ~ ಸರ್ಕಾರೀ ಕೃಪಾಪೋಷಿತ ಅನೇಕ ಸಂಸ್ಥೆಗಳು ಇಂದು ಚಾಲ್ತಿಯಲ್ಲಿವೆ.ಇವುಗಳ ಜೊತೆಗೆ ಅನೇಕ ಖಾಸಗಿ ಸಂಸ್ಥೆಗಳು, ವ್ಯಕ್ತಿಗಳು ತಮ್ಮ ಪಾಡಿಗೆ ತಾವು ಕನ್ನಡ ಸಂಸ್ಕೃತಿಯನ್ನು ಬೆಳೆಸುವ ಕಾಯಕ ಮಾಡುತ್ತಿದ್ದಾರೆ. ಅನೇಕ ಸಂದರ್ಭಗಳಲ್ಲಿ ಈ ಖಾಸಗಿ ಸಂಸ್ಥೆಗಳೇ ಅರ್ಥಪೂರ್ಣ ಕೆಲಸ ಮಾಡುತ್ತಿವೆ ಎಂದೂ ಅನ್ನಿಸುವುದುಂಟು. ಅದು ನಿಜವೂ ಹೌದು. ಈ ಹಿನ್ನೆಲೆಯಲ್ಲಿ ನಾಡಿನ ಹಿರಿಯ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನ ಇವತ್ತಿನ ಪಾತ್ರವೇನು? ಪ್ರಸ್ತುತತೆಯೇನು? ಈ ಚುನಾವಣೆಗೆ ಯಾಕಿಷ್ಟು ಮಹತ್ವ?ಇಂದು ಕನ್ನಡದ ಬೆಳವಣಿಗೆಗಾಗಿಯೇ ನಿಯೋಜಿತವಾಗಿರುವ ಅನೇಕ ಸಂಸ್ಥೆಗಳಿದ್ದರೂ ಸಾಹಿತ್ಯ ಪರಿಷತ್ತಿಗೆ ಇಂದಿಗೂ ಅದರದೇ ಆದ ಸ್ಥಾನವಿದೆ, ಮಹತ್ವವಿದೆ. ಅದರ ಮಹತ್ವಕ್ಕೆ ಚ್ಯುತಿ ಬಂದಿಲ್ಲ. ಇದಕ್ಕೆ ಪ್ರಮುಖವಾಗಿ ಎರಡು ಕಾರಣಗಳಿವೆ.ಮೊದಲನೆಯದು: ಕನ್ನಡ ಸಾಹಿತ್ಯ ಪರಿಷತ್ತು, ಒಂದು ಸ್ವಾಯತ್ತ ಸಂಸ್ಥೆ. ಅದಕ್ಕೆ ಅದರದೇ ಆದ ನೀತಿ ನಿಯಮಾವಳಿ ಇದೆ; ಸಂವಿಧಾನವಿದೆ. ಸರ್ಕಾರದ ಅನುದಾನ ಪಡೆದರೂ ಅದು ಸರ್ಕಾರದ ಅಧೀನ ಸಂಸ್ಥೆಯಲ್ಲ. ತನ್ನದೇ ಆದ ವ್ಯಕ್ತಿತ್ವ ಪರಿಷತ್ತಿಗಿದೆ.ಉಳಿದ ಸಂಸ್ಥೆಗಳು ಸರ್ಕಾರದ ನೇರ ಆಡಳಿತಕ್ಕೆ ಒಳಪಟ್ಟಂತಹವು; ಅಧೀನ ಸಂಸ್ಥೆಗಳು, ಒಂದು ರೀತಿಯಲ್ಲಿ ಸರ್ಕಾರೀ ಇಲಾಖೆಗಳು. ಇವುಗಳ ನೇತೃತ್ವ ವಹಿಸುವಂಥವರು ಸರ್ಕಾರದಿಂದ ನೇಮಿಸಲ್ಪಡುವವರು. ಪ್ರಭುತ್ವ ಮತ್ತು ಸೃಜನಶೀಲತೆಯ ಸಂಬಂಧದ ಸೂಕ್ಷ್ಮವನ್ನು ನಾವಿಲ್ಲಿ ಗಮನಿಸಬೇಕು. ಪ್ರಭುತ್ವಕ್ಕೆ ಸೃಜನಶೀಲ ಪ್ರತಿಭೆಯ ಬಗ್ಗೆ ಸದಾ ಒಂದು ರೀತಿಯ ಭಯವಿರುತ್ತದೆ.ಲೋಹಿಯಾ ಹೇಳುವಂತೆ ಸೃಜನಶೀಲತೆಯೆಂದರೆ ಯಥಾಸ್ಥಿತಿವಾದವನ್ನು, ಜಡತೆಯನ್ನು, ಪ್ರಭುತ್ವವನ್ನು ವಿರೋಧಿಸುವುದು. ಪ್ರಭುತ್ವವನ್ನು ಅಧೀನದ ಇಂತಹ ಸಂಸ್ಥೆಗಳ ಮೂಲಕ ಸೃಜನಶೀಲ ಪ್ರತಿಭೆಯನ್ನು ನಿಯಂತ್ರಿಸುವ, ದಮನ ಮಾಡುವ, ಪ್ರಶ್ನಿಸುವ ಮನೋಭಾವವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿರುತ್ತದೆ.

 

ನಮ್ಮ ಅನೇಕ ಕ್ರಾಂತಿಕಾರಿ ಪ್ರತಿಭೆಗಳು ಇಂಥ ಸಂಸ್ಥೆಗಳ `ಪದವಿ~ ಆಸೆಗೆ ಬಲಿಯಾಗಿಯೇ ಪ್ರಭುತ್ವವನ್ನು ಓಲೈಸುವ ಹಾದಿ ಹಿಡಿದದ್ದು, ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಪದವಿ ಇನ್ನೂ ಈ ಹಂಗಿಗೆ ಒಳಗಾಗಿಲ್ಲ. ಅವರ ಸ್ವಾತಂತ್ರ್ಯ ಹರಣಗೊಂಡಿಲ್ಲ. ಅದು ಸರ್ಕಾರೀ ಕೃಪಾಪೋಷಿತ ಪದವಿಯಲ್ಲ. ಅದು ಕನ್ನಡ ಮನಸ್ಸಿನ ಆಯ್ಕೆ. ಸಮರ್ಥ, ಸ್ವಂತ ವ್ಯಕ್ತಿತ್ವದ ಅಧ್ಯಕ್ಷರು ಸಮಸ್ತ ಕನ್ನಡಿಗರ ದನಿಯಾಗಿ, ಜನಸಾಮಾನ್ಯರ ಪ್ರತಿನಿಧಿಯಾಗಿ ಪ್ರಭುತ್ವಕ್ಕೆ, ಸರ್ಕಾರಕ್ಕೆ ಸಮವಾಗಬಲ್ಲ ಶಕ್ತಿ ಈ ಸ್ಥಾನಕ್ಕಿದೆ.

 

ಇದು ಸಾಧ್ಯತೆ; ವಾಸ್ತವ ಚಿತ್ರವೇ ಬೇರೆ ಎಂಬುದನ್ನು ನಾನು ಬಲ್ಲೆ. ಆದರೆ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಈ ಸಾಧ್ಯತೆ ಇದೆ ಎಂಬುದೇ ಆ ಸ್ಥಾನದ ಮಹತ್ವವನ್ನು ಸೂಚಿಸುತ್ತದೆ.ಎರಡನೆಯದು: ಪರಿಷತ್ತು ನಾಡಿನ ಜನಸಾಮಾನ್ಯರೊಡನೆ ಹೊಂದಿರುವ ನೇರ ಸಂಬಂಧ. ಇನ್ನು ಯಾವ ಕನ್ನಡಪರ ಸಂಸ್ಥೆಗೂ ಜನತೆಯೊಡನೆ ಈ ಬಗೆಯ ನೇರ ಸಂಪರ್ಕವಿಲ್ಲ.ಇದರಲ್ಲೂ ಮುಖ್ಯವಾದುದೆಂದರೆ ಪರಿಷತ್ತಿನೊಡನೆ ಕನ್ನಡಿಗರಿಗಿರುವ ಭಾವನಾತ್ಮಕ ಬೆಸುಗೆ. ಕಳೆದ ಒಂದು ಶತಮಾನದಿಂದ ಕನ್ನಡ ಜನತೆ ಪರಿಷತ್‌ನೊಡನೆ ನಿಕಟ ಒಡನಾಟವಿಟ್ಟುಕೊಂಡಿದ್ದಾರೆ. ಪರಿಷತ್ತಿನ ಸಾಹಿತ್ಯ ಸಮ್ಮೇಳನಕ್ಕೆ ಲಕ್ಷಾಂತರ ಜನ ಸೇರುವುದೇ ಇದಕ್ಕೆ ಅತ್ಯುತ್ತಮ ನಿದರ್ಶನ.ಪರಿಷತ್ತು ನಮ್ಮದು ಎಂಬ ಭಾವ ಕನ್ನಡದ ಮನಸ್ಸಿಗಿದೆ. ಇನ್ನು ಯಾವ ಸಮ್ಮೇಳನಗಳಿಗೂ ಪರಿಷತ್ತಿನ ಸಮ್ಮೇಳನಕ್ಕಿರುವ ಸಾಂಸ್ಕೃತಿಕ, ಸಾಮಾಜಿಕ ಮಹತ್ವವಿಲ್ಲ. ಇದರ ಮಹತ್ವವನ್ನು ಅರಿತೇ ಸರ್ಕಾರ ಸಮ್ಮೇಳನದ ಸ್ವರೂಪದ ಮೇಲೂ ನಿಯಂತ್ರಣ ಸಾಧಿಸಿದೆ. ಇತ್ತೀಚಿನ ಯಾವುದೇ ಸಮ್ಮೇಳನ ರಾಜಕಾರಣಿಗಳು, ಧರ್ಮಾಧಿಕಾರಿಗಳು ಇವರ ಆಶ್ರಯದಲ್ಲಿಯೇ ನಡೆಯುತ್ತವೆ.ಇವೆರಡೂ ಅಧಿಕಾರ ಕೇಂದ್ರಗಳು. ಈ ಎರಡೂ ಅಧಿಕಾರ ಕೇಂದ್ರಗಳು `ಸಂಸ್ಕೃತಿ~ಯನ್ನೂ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿವೆ. ಪರಿಷತ್ತು ತನ್ನನ್ನು ತಾನು ಈ ಅಧಿಕಾರ ಕೇಂದ್ರಗಳಿಂದ ರಕ್ಷಿಸಿಕೊಳ್ಳಬೇಕಾದುದು ಈಗಿನ ತುರ್ತು ಅಗತ್ಯ. ಈ ಹಂತದಲ್ಲಿಯೇ ಸಂಸ್ಕೃತಿ ಚಿಂತಕರು ಪರಿಷತ್ತನ್ನು ಈ ಆಕ್ರಮಣಗಳಿಂದ ಕಾಪಾಡುವ ಬಗ್ಗೆ ಗಂಭೀರವಾಗಿ ಚಿಂತಿಸಬೇಕಾಗಿದೆ; ಸಮ್ಮೇಳನದ ಸ್ವರೂಪದಲ್ಲಿಯೂ ಮಹತ್ವದ ಬದಲಾವಣೆಗಳು ಆಗಬೇಕಾಗಿದೆ. ಸಾಹಿತ್ಯ ಸಮ್ಮೇಳನಗಳು ಖಂಡಿತಾ ಬೇಕು, ಆದರೆ ಈಗಿನ ಸ್ವರೂಪದಲ್ಲಲ್ಲ.ಕನ್ನಡ ಸಾಹಿತ್ಯ ಪರಿಷತ್ತಿನ ಶಾಖೆಗಳು ಪ್ರತಿ ಜಿಲ್ಲೆ, ತಾಲ್ಲೂಕು ಮಟ್ಟದಲ್ಲಿ ರಾಜ್ಯದಾದ್ಯಂತ ಇವೆ. ಯಾವ ಸಂಸ್ಥೆಗೂ ಈ ಬಗೆಯ ವ್ಯಾಪಕ ಜಾಲವಿಲ್ಲ. ಈ ಎಲ್ಲ ಜಿಲ್ಲಾ ಶಾಖೆಗಳಿಗೂ ಪ್ರಜಾಪ್ರಭುತ್ವ ಮಾದರಿಯಲ್ಲಿಯೇ ಚುನಾವಣೆ ನಡೆದು ಜಿಲ್ಲಾಧ್ಯಕ್ಷರು ಆಯ್ಕೆಯಾಗುತ್ತಾರೆ.

 

ಪ್ರಸ್ತುತ, ಸಾಹಿತ್ಯ ಪರಿಷತ್ತಿನ ಚುನಾವಣೆ ವಿಶೇಷ ಮಹತ್ವ ಪಡೆದುಕೊಂಡಿರುವುದರ ಹಿನ್ನೆಲೆಯಲ್ಲಿ ಈ ಅಂಶವೂ ಅತ್ಯಂತ ಮಹತ್ವದ್ದು. ಆಯ್ಕೆಯಾಗುವ ಜಿಲ್ಲಾ ಅಧ್ಯಕ್ಷರು, ಅವರು ನೇಮಿಸಿಕೊಳ್ಳುವ ತಾಲ್ಲೂಕು ಅಧ್ಯಕ್ಷರು, ಪ್ರತಿ ಜಿಲ್ಲೆ, ತಾಲ್ಲೂಕು ಹಂತದಲ್ಲಿ ಕಾರ್ಯಕಾರಿ ಸಮಿತಿ, ಪದಾಧಿಕಾರಿಗಳು - ಹೀಗೆ ಸಾಹಿತ್ಯ ಪರಿಷತ್ತು ಎನ್ನುವುದು ರಾಜ್ಯದಲ್ಲಿ ಒಂದು ಬೃಹತ್ ವ್ಯವಸ್ಥೆಯಾಗಿ ರೂಪ ತಾಳಿದೆ.ಈ ವ್ಯವಸ್ಥೆಯ ಅಥವಾ ರಾಜಕೀಯ ಪರಿಭಾಷೆಯಲ್ಲಿ ಹೇಳುವುದಾದರೆ ಈ ಕನ್ನಡ ಸಾಮ್ರಾಜ್ಯದ ಅತ್ಯುನ್ನತ ಸ್ಥಾನದಲ್ಲಿ ರಾಜ್ಯದ ಅಧ್ಯಕ್ಷರಿರುತ್ತಾರೆ.ಪ್ರತಿ ಜಿಲ್ಲೆಯಲ್ಲೂ ಇವರಿಗೆ `ಸಾಮಂತ~ರಿರುತ್ತಾರೆ (ಜಿಲ್ಲಾ ಅಧ್ಯಕ್ಷರು); ಅವರಿಗೆ ತಾಲ್ಲೂಕು, ಹೋಬಳಿ ಹಂತದಲ್ಲಿ ಸಣ್ಣ ಪುಟ್ಟ `ಪಾಳೆಯಗಾರ~ರಿರುತ್ತಾರೆ. (ತಾಲ್ಲೂಕು ಅಧ್ಯಕ್ಷರು, ಪ್ರತಿನಿಧಿಗಳು).ಈಗ ಈ `ವ್ಯವಸ್ಥೆ~ - ಎಷ್ಟು ವ್ಯವಸ್ಥಿತವಾಗಿ ಸಮರ್ಥವಾಗಿ ರೂಪುಗೊಂಡಿದೆ ಗಮನಿಸಿ: ಈ ವ್ಯವಸ್ಥೆಯಲ್ಲಿ ಅನೇಕ ನೆಲೆಗಳಲ್ಲಿ `ಅಧಿಕಾರ~ ನೀಡಲ್ಪಟ್ಟಿವೆ. ಅಥವಾ `ಕನ್ನಡ~ದ ಹೆಸರಿನಲ್ಲಿ ಅಧಿಕಾರ ಚಲಾಯಿಸಲ್ಪಡುತ್ತದೆ. ತಾಲ್ಲೂಕು, ಜಿಲ್ಲೆ - ಈ ಎಲ್ಲ ಹಂತಗಳಲ್ಲಿ ಪರಿಷತ್ತು ಅಧಿಕಾರ ಕೇಂದ್ರವಾಗಿ ರೂಪುಗೊಳ್ಳುತ್ತಿದೆ.ಪರಿಷತ್ತಿಗಿರುವ ಮಹತ್ವದಿಂದಾಗಿ ಜಿಲ್ಲೆ, ತಾಲ್ಲೂಕುಗಳಲ್ಲಿ ಪರಿಷತ್ತಿನ ಪ್ರತಿನಿಧಿಗಳು ಸಮಾಜದಲ್ಲಿ, ಸರ್ಕಾರದ ನೆಲೆಯಲ್ಲಿ ಒಂದು ರೀತಿಯ `ಸ್ಥಾನ~ ಪಡೆಯುತ್ತಾರೆ. ಪ್ರಮುಖ ವೇದಿಕೆಗಳಲ್ಲಿ ಪಾಲು ಪಡೆಯುತ್ತಾರೆ. ಸಾಂಸ್ಕೃತಿಕ ಸಂಸ್ಥೆಯ ಪ್ರತಿನಿಧಿಗಳು ರಾಜಕೀಯ ನಾಯಕರ ಜೊತೆ, ಧಾರ್ಮಿಕ ಪ್ರಭುಗಳ ಜೊತೆ ನಿಕಟ ಒಡನಾಟವಿಟ್ಟುಕೊಂಡಿರುವುದು ಸಾಹಿತ್ಯ ಪರಿಷತ್ತೂ ಸಹ ಒಂದು ರೀತಿಯ ಅಧಿಕಾರ ಕೇಂದ್ರವಾಗುತ್ತಿರುವುದರ ದ್ಯೋತಕ.ಈ `ವ್ಯವಸ್ಥೆ~ - ಕನ್ನಡಿಗರ ಹಿತಕ್ಕಾಗಿ, ನಾಡು ನುಡಿಯ ಒಳಿತಿಗಾಗಿ ರೂಪುಗೊಂಡಿರುವಂಥದು. ಆದರೆ ಎಲ್ಲ ವ್ಯವಸ್ಥೆಗಳಂತೆಯೇ ಈ `ವ್ಯವಸ್ಥೆ~ ಯೂ ಮೂಲ ಆಶಯದಿಂದ ದೂರ ಸರಿದು `ಜಡ~ ವಾಗಿದೆ; ರೋಗಗ್ರಸ್ತವಾಗಿದೆ. ಒಂದು ಸಣ್ಣ ನಿದರ್ಶನದ ಮೂಲಕ ಇದನ್ನು ವಿವರಿಸಲು ಪ್ರಯತ್ನಿಸುತ್ತೇನೆ. ಕೆಲಕಾಲ ನಾನು ಕೇಂದ್ರ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದೆ.

 

ಆ ಸಂದರ್ಭದಲ್ಲಿ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಸಲಹೆಯೊಂದನ್ನು ಮಂಡಿಸಿದೆ. ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಎರಡು ಕೆಲಸಗಳು ಅಗತ್ಯ ಆಗಬೇಕಾಗಿವೆ. ಒಂದು - ಕನ್ನಡ ಪುಸ್ತಕಗಳೆಲ್ಲ ಒಂದು ಕಡೆ ಸಿಗುವಂತಹ ಆಕರ ಗ್ರಂಥಾಲಯ. ಅಧ್ಯಯನ ಮಾಡಬಯಸುವವರಿಗೆ ಕನ್ನಡದ ಪ್ರಕಟಿತ ಪುಸ್ತಕಗಳೆಲ್ಲ (ಕಡೆಯ ಪಕ್ಷ ಪ್ರಮುಖವಾದ ಪುಸ್ತಕಗಳು) ಒಂದು ಕಡೆ ದೊರೆಯಬೇಕು.

 

ಅದಕ್ಕಾಗಿ ಸಾಹಿತ್ಯ ಪರಿಷತ್ತು ಒಂದು `ಪರಾಮರ್ಶನ ಆಕರ ಗ್ರಂಥಾಲಯ~ ಸ್ಥಾಪಿಸಬೇಕು. ಪುಸ್ತಕಗಳನ್ನು ವಿತರಿಸಬಾರದು. ಅಲ್ಲಿಯೇ ಕುಳಿತು ಅಧ್ಯಯನ ಮಾಡಲು ಅವಕಾಶವಿರಬೇಕು; ಅಗತ್ಯವಿದ್ದರೆ ಜೆರಾಕ್ಸ್ ಪ್ರತಿ ಮಾಡಿಸಿಕೊಳ್ಳಲು ಅವಕಾಶವಿರಬೇಕು.

 

ಮತ್ತೊಂದು - ರಾಜಧಾನಿ ಬೆಂಗಳೂರಿನಲ್ಲಿ ಇಡೀ ಕನ್ನಡನಾಡಿನ ಬಹುಮುಖೀ ಸಂಸ್ಕೃತಿಯನ್ನು ಪ್ರತಿನಿಧಿಸುವಂಥ `ಸಂಸ್ಕೃತಿ ವಸ್ತುಪ್ರದರ್ಶನಾಲಯ~ ಇಲ್ಲ. ಸರ್ಕಾರದ ಜತೆಗೂಡಿ ಇಂತಹ ವಸ್ತುಪ್ರದರ್ಶನಾಲಯವನ್ನು ಸ್ಥಾಪಿಸಬೇಕು. ಕನ್ನಡದ ಹೆಮ್ಮೆಯನ್ನು ಅನ್ಯರಿಗೆ ಪರಿಚಯಿಸಲು ಇದು ನೆರವಾಗುತ್ತದೆ.ಈ ಎರಡು ಸಲಹೆಗಳನ್ನು ನಾನು ಮಂಡಿಸಿದಾಗ ಸಭೆಯಲ್ಲಿದ್ದ ಡಾ. ವಿವೇಕ ರೈ ಅವರನ್ನು ಹೊರತುಪಡಿಸಿ ಅಧ್ಯಕ್ಷರಾದಿಯಾಗಿ ಯಾರೂ ಇದಕ್ಕೆ ಬೆಂಬಲ ಸೂಚಿಸಲಿಲ್ಲವೆಂಬುದು ಪರಿಷತ್ತಿನ ಆಡಳಿತದ, ಆಲೋಚನಾ ಕ್ರಮದ ಸ್ವರೂಪವನ್ನು ಸೂಚಿಸುತ್ತದೆ.

 

ಒಂದು ವರ್ಷ ಸಮ್ಮೇಳನ ನಡೆಸದಿದ್ದರೆ ಇಂಥ ಶಾಶ್ವತ ಕೆಲಸ, ಉಪಯುಕ್ತ ಕೆಲಸ. ಆ ಹಣದಿಂದ ಸಾಧ್ಯವಾಗಿ ಬಿಡುತ್ತದೆ. ಆದರೆ ಪರಿಷತ್ತಿನ ಚುಕ್ಕಾಣಿ ಹಿಡಿಯುವವರಿಗೆ ಈ ಬಗೆಯ ಕನಸು, ಆಶಯ ಇರದಿದ್ದರೆ ಏನು ಮಾಡಬೇಕು?ಇತ್ತೀಚಿನ ವರ್ಷಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸಮ್ಮೇಳನಗಳನ್ನು ಹೊರತುಪಡಿಸಿದರೆ, ಯಾವ ಮಹತ್ವದ ಸಾಂಸ್ಕೃತಿಕ ಯೋಜನೆಗಳನ್ನು ಹಮ್ಮಿಕೊಂಡಿದೆ? ಪ್ರಕಟಣೆಗಳು ಎನ್ನುವುದಾದರೆ ಪುಸ್ತಕ ಪ್ರಾಧಿಕಾರ, ಅಕಾಡೆಮಿ, ಸಂಸ್ಕೃತಿ ಇಲಾಖೆ, ಕನ್ನಡ ವಿಶ್ವವಿದ್ಯಾಲಯ, ಪ್ರಸಾರಾಂಗಗಳು ರಾಶಿ ರಾಶಿ ಪುಸ್ತಕ ಪ್ರಕಟಿಸಿವೆಯಲ್ಲ! ಅವುಗಳಿಗಿಂತ ಭಿನ್ನವಾಗಿ ಪರಿಷತ್ತು ಏನು ಮಾಡುತ್ತಿದೆ?ಸರ್ಕಾರದ ಮಟ್ಟದಲ್ಲಿ ಕನ್ನಡ ಸಮಸ್ಯೆಗಳ ಬಗ್ಗೆ ಆತ್ಮವಿಶ್ವಾಸದಿಂದ ಸಂವಾದ ನಡೆಸುವ ಶಕ್ತಿಯನ್ನಾದರೂ ಪರಿಷತ್ತು ಉಳಿಸಿಕೊಂಡಿದೆಯೇ? ಕರ್ನಾಟಕದ ಜ್ವಲಂತ ಸಮಸ್ಯೆಗಳ ಬಗ್ಗೆ ಜನತೆಯನ್ನು ಎಚ್ಚರಿಸುವ, ಜನಾಭಿಪ್ರಾಯದ ಮೂಲಕ ಜಾಗೃತಿ ಮೂಡಿಸುವ ಕೆಲಸವನ್ನಾದರೂ ಮಾಡುತ್ತಿದೆಯೇ? ಹೊಸ ಶತಮಾನದ ಜಾಗತಿಕ ಸವಾಲುಗಳಿಗೆ ಕನ್ನಡ ಮನಸ್ಸನ್ನು ಸಜ್ಜುಗೊಳಿಸುವತ್ತ ಪರಿಷತ್ತಿನ ಕಾರ್ಯ ಸೂಚಿಗಳೇನು? ಕನ್ನಡ ಎದುರಿಸುತ್ತಿರುವ `ಸಂಕಟ~ಗಳಿಗೆ ತಜ್ಞರ ನೆರವು ಪಡೆದು ಪರಿಹಾರದ ಸಾಧ್ಯತೆಗಳನ್ನು ಅನ್ವೇಷಿಸುತ್ತಿದೆಯೇ?ಪರಿಷತ್ತು ಕನ್ನಡನಾಡಿನ ಘನತೆವೆತ್ತ ಸಂಸ್ಥೆ; ಆದರೆ ಅದರ ನೇತೃತ್ವ ವಹಿಸುವವರಿಗೆ ಆ `ಅರಿವು~ ಇರಲು ಸಾಧ್ಯವಾದರೆ, ಅಂತಹ ಇಚ್ಛಾಶಕ್ತಿ, ಸಂಕಲ್ಪಬಲ ಪ್ರಕಟಿಸುವುದಾದರೆ ಪರಿಷತ್ತು ಮತ್ತೆ ಜನರ `ದನಿ~ ಯಾಗಬಲ್ಲುದು; ಸಂಸ್ಕೃತಿ, ಸೃಜನಶೀಲತೆಯ ಕೇಂದ್ರವಾಗಬಲ್ಲದು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.