ಕಪ್ಪುಹಣ ಮುಟ್ಟುಗೋಲು: ಎಡಪಕ್ಷಗಳ ಆಗ್ರಹ

7

ಕಪ್ಪುಹಣ ಮುಟ್ಟುಗೋಲು: ಎಡಪಕ್ಷಗಳ ಆಗ್ರಹ

Published:
Updated:

ನವದೆಹಲಿ (ಪಿಟಿಐ): ಸ್ವಿಸ್ ಬ್ಯಾಂಕ್‌ನಲ್ಲಿ ಬಚ್ಚಿಡಲಾಗಿದೆ ಎನ್ನಲಾದ ಕಪ್ಪು ಹಣವನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು ಮತ್ತು ಖಾತೆದಾರರ ಹೆಸರನ್ನು ಬಹಿರಂಗಗೊಳಿಸಬೇಕು ಎಂದು ಎಡಪಕ್ಷಗಳು ಶುಕ್ರವಾರ ಸರ್ಕಾರವನ್ನು ಆಗ್ರಹಿಸಿದವು.ಸುದ್ದಿಗಾರರ ಜತೆ ಮಾತನಾಡಿದ ಪಕ್ಷದ ಮುಖಂಡ ಸೀತಾರಾಂ ಯೆಚೂರಿ, ‘ಈ ಖಾತೆಗಳ ಪೂರ್ಣ ವಿವರ ಪಡೆಯುವುದರ ಜೊತೆಗೆ ಖಾತೆದಾರರ ಹೆಸರನ್ನು ಬಹಿರಂಗಪಡಿಸಬೇಕು ಮತ್ತು ಸಾಮಾಜಿಕ ಯೋಜನೆಗಳಿಗೆ ಹಣ ತೊಡಗಿಸಲು ಕಪ್ಪುಹಣವನ್ನು ವಾಪಸ್ಸು ತರಿಸಿಕೊಳ್ಳಬೇಕು’ ಎಂದು ಹೇಳಿದರು.ಸಿಪಿಎಂ ಪಾಲಿಟ್‌ಬ್ಯೂರೊ ಹೇಳಿಕೆಯೊಂದನ್ನು ನೀಡಿ, ‘ಸ್ವಿಸ್ ಬ್ಯಾಂಕ್ ನಲ್ಲಿ ಅಡಗಿಸಿಟ್ಟ ಕಪ್ಪು ಹಣ ಪ್ರಕರಣಗಳನ್ನು ಬೆಳಕಿಗೆ ತರುವಲ್ಲಿನ  ಯುಪಿಎ ಸರ್ಕಾರದ ‘ಅಲಕ್ಷ್ಯ’ ಸುಪ್ರೀಂಕೋರ್ಟ್‌ನ ಇತ್ತೀಚಿನ ಹೇಳಿಕೆಯಿಂದ ಬಯಲಾಗಿದೆ’ ಎಂದು ಹೇಳಿದೆ.‘ಸ್ವಿಸ್ ಬ್ಯಾಂಕ್‌ನ ಖಾತೆಗಳಿಂದ ಈ ಹಣವನ್ನು ಕೇಂದ್ರ ಸರ್ಕಾರ ನೇರವಾಗಿ ಮುಟ್ಟುಗೋಲು ಹಾಕಿಕೊಳ್ಳಬೇಕು. ಖಾತೆದಾರರ ಹೆಸರು ಸಾರ್ವಜನಿಕರಿಗೆ ತಿಳಿಯಬೇಕು. ಈ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಯಾವುದೇ ವಿಳಂಬ ಆದರೂ ಅದು ಒಪ್ಪಿಕೊಳ್ಳುವಂಥದ್ದಲ್ಲ’ ಎಂದೂ ಅದು ತಿಳಿಸಿದೆ.ಇದಕ್ಕೂ ಮೊದಲು ಸಿಪಿಐ ಪ್ರಧಾನ ಕಾರ್ಯದರ್ಶಿ ಎ.ಬಿ. ಬರ್ಧನ್ ಅವರು, ‘ಕಪ್ಪು ಹಣದ ಬಗೆಗಿನ ರಹಸ್ಯ ಏನು? ಯಾಕೆ ಅವರು ಹೆಸರನ್ನು ಬಹಿರಂಗ ಪಡಿಸುವುದಿಲ್ಲ? ಯಾಕೆ ಹೆಸರನ್ನು ಅವರು ಮುಚ್ಚಿದ ಲಕೋಟೆಯಡಿ ಬಚ್ಚಿಡುತ್ತಾರೆ. ಖಾತೆದಾರರು ಯಾರು ಎಂಬುದು ನಮಗೆ ತಿಳಿಯಬೇಕು ಎಂದು ಹೇಳಿದ್ದರು.‘ತೆರಿಗೆ ತಪ್ಪಿಸಿಕೊಳ್ಳಲು ಸ್ವಿಸ್ ಬ್ಯಾಂಕ್‌ನಲ್ಲಿ ಹಣ ಇಡಲಾಗಿದ್ದು ಅದನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು’ ಎಂದೂ ಆಗ್ರಹಿಸಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry