ಕಪ್ಪು ಹಣ ವಾಪಸ್ ತನ್ನಿ; ಭ್ರಷ್ಟಾಚಾರ ನಿಯಂತ್ರಿಸಿ

7

ಕಪ್ಪು ಹಣ ವಾಪಸ್ ತನ್ನಿ; ಭ್ರಷ್ಟಾಚಾರ ನಿಯಂತ್ರಿಸಿ

Published:
Updated:
ಕಪ್ಪು ಹಣ ವಾಪಸ್ ತನ್ನಿ; ಭ್ರಷ್ಟಾಚಾರ ನಿಯಂತ್ರಿಸಿ

ಬೆಂಗಳೂರು: ವಿದೇಶಿ ಬ್ಯಾಂಕ್‌ಗಳಲ್ಲಿ ಇಟ್ಟಿರುವ ಕಪ್ಪು ಹಣವನ್ನು ವಾಪಸ್ ತರಬೇಕು ಮತ್ತು ಭ್ರಷ್ಟಾಚಾರವನ್ನು ನಿಯಂತ್ರಿಸಬೇಕು ಎಂದು ಆಗ್ರಹಿಸಿ ಪತಂಜಲಿ ಯೋಗ ಸಮಿತಿ ಮತ್ತು ಭಾರತ ಸ್ವಾಭಿಮಾನ ಟ್ರಸ್ಟ್‌ನ ಸದಸ್ಯರು ನಗರದ ಪುರಭವನದಿಂದ ಕಾವೇರಿ ಭವನದವರೆಗೆ ಬುಧವಾರ ಪ್ರತಿಭಟನಾ ರ್ಯಾಲಿ ನಡೆಸಿದರು.

 

ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿಯ ರಾಜ್ಯ ಸಂಚಾಲಕ ಪ್ರದೀಪ್, ‘ಕಪ್ಪು ಹಣ ಮತ್ತು ಭ್ರಷ್ಟಾಚಾರಕ್ಕೆ ಅನಧಿಕೃತ ಗಣಿಗಾರಿಕೆ, ಲಂಚಕೋರತನ, ತೆರಿಗೆ ವಂಚನೆಗಳೇ ಮುಖ್ಯ ಕಾರಣ. ಅಲ್ಲದೇ ಅಭಿವೃದ್ಧಿ ಯೋಜನೆಗಳಿಗಾಗಿ ಮೀಸಲಿಡುವ ಹಣವನ್ನು ಲೂಟಿ ಮಾಡಲಾಗುತ್ತಿದೆ. ಇದನ್ನು ಕೂಡಲೇ ನಿಲ್ಲಿಸಬೇಕು’ ಎಂದು ಒತ್ತಾಯಿಸಿದರು.

 

‘ಭಾರತದಲ್ಲಿ 10 ಲಕ್ಷ ಕೋಟಿ ರೂಪಾಯಿ ಬೆಲೆ ಬಾಳುವ ಸುಮಾರು 89 ಅದಿರು ನಿಕ್ಷೇಪಗಳಿವೆ. ಕಾನೂನು ಬಾಹಿರವಾಗಿ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಗಣಿಗಾರಿಕೆ ನಡೆಸುತ್ತಿದ್ದು, ರಾಷ್ಟ್ರದ ಅರಣ್ಯ ಸಂಪತ್ತನ್ನು ಲೂಟಿ ಹೊಡೆಯುತ್ತಿದ್ದಾರೆ ಎಂದರು. ತೆರಿಗೆ ವಂಚಕರು ಆದಾಯ ತೆರಿಗೆ ಪಾವತಿಸದೆ ನೇರವಾಗಿ ವಿದೇಶಿ ಬ್ಯಾಂಕ್‌ಗಳಲ್ಲಿ 400 ಲಕ್ಷಕ್ಕೂ ಹೆಚ್ಚು ಹಣವನ್ನು ಜಮೆ ಮಾಡಿದ್ದಾರೆ. ಇದನ್ನು ಕೂಡಲೇ ವಾಪಸ್ ತರಿಸಬೇಕು’ ಎಂದು ಆಗ್ರಹಿಸಿದರು.

ಕಪ್ಪು ಹಣ ಮತ್ತು ಭ್ರಷ್ಟಾಚಾರ ನಿಯಂತ್ರಣಕ್ಕೆ ಕಠಿಣ ಕಾನೂನುಗಳನ್ನು ರೂಪಿಸಬೇಕು. ಮಾರಿಷಸ್ ಮಾರ್ಗವಾಗಿ ಸಾಗಿಸುತ್ತಿರುವ ಅಕ್ರಮ ಹಣದ ಸಾಗಾಣಿಕೆಯನ್ನು ನಿರ್ಬಂಧಿಸಬೇಕು. ವಿದೇಶಿ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುವ ವ್ಯಕ್ತಿಗಳ ಸಂಪತ್ತನ್ನು ಜಪ್ತಿ ಮಾಡಬೇಕು ಎಂದು ಪ್ರತಿಭಟನಾನಿರತರು ಒತ್ತಾಯಿಸಿದರು.

ಭಾರತೀಯರ ಹಣ ಇಟ್ಟುಕೊಳ್ಳುವ ಸ್ವಿಟ್ಜರ್‌ಲ್ಯಾಂಡ್ ಮತ್ತು ಇಟಲಿಯ ಬ್ಯಾಂಕ್‌ಗಳನ್ನು ಮುಚ್ಚಿಸಬೇಕು. ಪಾರದರ್ಶಕ ವಿದೇಶಿ ಹಣಕಾಸು ವಹಿವಾಟು ಯೋಜನೆಯನ್ನು ತಕ್ಷಣ ಜಾರಿಗೆ ತರಬೇಕು. ವಿದೇಶಿ ಬ್ಯಾಂಕ್‌ಗಳಲ್ಲಿ ಇಟ್ಟಿರುವ ಹಣದ ಲೆಕ್ಕ ನೀಡದ ವ್ಯಕ್ತಿಗಳನ್ನು ಭ್ರಷ್ಟರೆಂದು ಘೋಷಿಸಿ, ಅವರ ಸಂಪತ್ತನ್ನು ರಾಷ್ಟ್ರೀಯ ಸಂಪತ್ತು ಎಂದು ಘೋಷಿಸಬೇಕು ಎಂದು ಆಗ್ರಹಿಸಿದರು.

ಸಮಿತಿಯ ಸದಸ್ಯ ಸುಧಾಕರ್ ಶರ್ಮಾ, ಸ್ವಾತಂತ್ರ್ಯ ಹೋರಾಟಗಾರ ಎನ್.ವಿ.ಕೃಷ್ಣಮಾಚಾರ್, ವಕೀಲ ಎಂ.ಪಿ.ಕೃಷ್ಣಪ್ಪ ಮತ್ತಿತರರು ಪ್ರತಿಭಟನಾ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry