ಕಬ್ಬಿನ ನಡುವೆ ತರಕಾರಿ

7

ಕಬ್ಬಿನ ನಡುವೆ ತರಕಾರಿ

Published:
Updated:

ನೀರಾವರಿ ಅಚ್ಚುಕಟ್ಟು ಪ್ರದೇಶದ ಬಹುತೇಕ ರೈತರಿಗೆ ಕಬ್ಬು ಬೆಳೆಯುವುದು ಅನಿವಾರ್ಯ. ಇತ್ತೀಚಿನ ವರ್ಷಗಳಲ್ಲಿ ಕಬ್ಬಿನ ಬೇಸಾಯ ಲಾಭದಾಯಕ ಅಲ್ಲ ಎನ್ನುವುದು ಅನೇಕ ರೈತರ ಅನುಭವಕ್ಕೆ ಬಂದಿದೆ. ಬಹುತೇಕ ಕಬ್ಬು ಬೆಳೆಗಾರರು ಸಾಲದ ಸುಳಿಗೆ ಸಿಲುಕಿದ್ದಾರೆ.ಕಬ್ಬಿನ ಬೆಳೆಯೊಂದನ್ನೇ ನೆಚ್ಚಿಕೊಂಡರೆ ಹೀಗಾಗುತ್ತದೆ. ಮಂಡ್ಯ ಜಿಲ್ಲೆಯ ಕೀಲಾರ ಗ್ರಾಮದ ಕೆ.ಸಿ.ಶಿವರಾಮೇಗೌಡರು ಕಬ್ಬಿನ ಜತೆಯಲ್ಲಿ ಹಲವು ತರಕಾರಿ ಬೆಳೆಗಳನ್ನು ಬೆಳೆಯುವ ಮೂಲಕ ಕಬ್ಬಿನ ಬೇಸಾಯ ಲಾಭದಾಯಕ ಎನ್ನುವುದನ್ನು  ತೋರಿಸಿಕೊಟ್ಟಿದ್ದಾರೆ.ಶಿವರಾಮೇಗೌಡರಿಗೆ 2.12 ಎಕರೆ ನೀರಾವರಿ ಭೂಮಿ ಇದೆ. ಅವರು ಮೊದಲು ಕಬ್ಬು ಮತ್ತು ಭತ್ತ ಮಾತ್ರ ಬೆಳೆಯುತ್ತಿದ್ದರು. ಕಬ್ಬಿನಿಂದ ಹೆಚ್ಚು ಲಾಭ ಇಲ್ಲ ಎನ್ನುವುದು ಅನುಭವಕ್ಕೆ ಬಂದನಂತರ ಕಬ್ಬಿನ ಜತೆಯಲ್ಲಿ ಹಲವು ಬೆಳೆಗಳನ್ನು ಬೆಳೆಯುವ ಪ್ರಯೋಗಕ್ಕೆ ಮುಂದಾದರು. ಅವರು ಸಿ.ಒ.62175 ತಳಿಯ ಕಬ್ಬು ಬೆಳೆಯುತ್ತಾರೆ.

 

ಸುಮಾರು ಆರು ಅಡಿಗಳ ಅಂತರದ ಸಾಲುಗಳ ಕಬ್ಬು ನಾಟಿ ಮಾಡಿ ನಡುವಿನ ಜಾಗದಲ್ಲಿ ಮೊದಲ ಮೂರು ತಿಂಗಳಲ್ಲಿ ಕೊಯ್ಲಿಗೆ ಬರುವಂತೆ ಈರುಳ್ಳಿ, ಗೆಡ್ಡೆಕೋಸು, ಮೂಲಂಗಿ ಹಾಗೂ ಸೋಯಾ ಅವರೆ ಬೆಳೆಯುತ್ತಾರೆ.ಆ ನಂತರದ ಮೂರು ತಿಂಗಳಲ್ಲಿ ಕೊಯ್ಲಿಗೆ ಬರುವಂತೆ  ಸಿಹಿ ಕುಂಬಳ, ಬೂದುಕುಂಬಳ, ಪಪ್ಪಾಯಿ, ಹೀರೆ, ಕಲ್ಲಂಗಡಿ, ಸೌತೆ ಹಾಗೂ ಗದ್ದೆಯ ಬದುಗಳಲ್ಲಿ ಮರಗೆಣಸು, ಸುವರ್ಣಗೆಡ್ಡೆ, ಕರಿಬೇವು, ಸೀಮೆಬದನೆ ಬೆಳೆಯುತ್ತಾರೆ.ನಂಜನಗೂಡು ರಸಬಾಳೆ, ನುಗ್ಗೆ, ತೆಂಗು, ತೇಗ, ಬೇವಿನ ಮರಗಳನ್ನು ಬೆಳೆಸಿದ್ದಾರೆ. ಇದರ ನಡುವೆ ನೆರಳು ಬಳಸಿಕೊಂಡು ಕೆಲವು ಕಾಫಿ ಗಿಡಗಳನ್ನು ಬೆಳೆದಿದ್ದಾರೆ. ಗದ್ದೆಯ ಸ್ವಲ್ಪ ಭಾಗದಲ್ಲಿ ಕೀರೆ, ಕಿತ್ಕೀರೆ, ದಂಟು, ಮೆಂತೆ, ಪಾಲಕ್, ಬೆಂಡೆ, ಬೀನ್ಸ್, ಬದನೆ ಮತ್ತಿತರ ತರಕಾರಿಗಳನ್ನು ಬೆಳೆಯುತ್ತಾರೆ. ಕಬ್ಬು ಕೊಯ್ಲಿಗೆ ಬರುವ ಮೊದಲು ಈ ತರಕಾರಿಗಳ ಆದಾಯ ಅವರಿಗೆ ಸಿಗುತ್ತದೆ. ದೈನಂದಿನ ಖರ್ಚುಗಳಿಗೆ ತರಕಾರಿಗಳಿಂದ ಬರುವ ಆದಾಯ ಅವರ ಕೈ ಹಿಡಿದಿದೆ.ಕಬ್ಬಿನ ಜತೆ ಕುಂಬಳ: ಶಿವರಾಮೇಗೌಡರು ಕಳೆದ 5 ವರ್ಷಗಳಿಂದ ಕಬ್ಬು ನಾಟಿ ಮಾಡಿದ ನಂತರ 90 ರಿಂದ 110 ದಿನಗಳ ನಂತರ ಅಥವಾ ಕಬ್ಬು ಕಟಾವಾದ 3 ತಿಂಗಳ ನಂತರ ಮಿಶ್ರ ಬೆಳೆಯಾಗಿ ಸಿಹಿಕುಂಬಳ ಮತ್ತು ಬೂದಕುಂಬಳ ಬೆಳೆಯುತ್ತಾರೆ. ಉತ್ತರ-ದಕ್ಷಿಣವಾಗಿ ಕಬ್ಬಿನ ಸಾಲುಗಳ ನಡುವೆ ಒಂದು ಕುಣಿಯಲ್ಲಿ ಎರಡು ಕುಂಬಳ ಬೀಜ ಬಿತ್ತನೆ ಮಾಡುತ್ತಾರೆ.ಒಂದು ತಿಂಗಳ ನಂತರ ಚೆನ್ನಾಗಿ ಬೆಳೆದ ಒಂದು ಕುಂಬಳ ಬಳ್ಳಿಯನ್ನು ಉಳಿಸಿಕೊಂಡು ಇನ್ನೊಂದನ್ನು ಕಿತ್ತು ಹಾಕುತ್ತಾರೆ. 5ರಿಂದ 6 ತಿಂಗಳಲ್ಲಿ ಕುಂಬಳ ಬಳ್ಳಿಗಳಲ್ಲಿ ಕಾಯಿಗಳು ಸಿಗುತ್ತವೆ. ಒಂದು ಎಕರೆಯಲ್ಲಿ ಸಿಹಿ ಕುಂಬಳ ಇನ್ನೊಂದು ಎಕರೆಯಲ್ಲಿ ಬೂದು ಕುಂಬಳ ಬೆಳೆದು ಒಟ್ಟು ಮೂವತ್ತೈದು ಸಾವಿರ ರೂ ಆದಾಯ ಪಡೆದಿದ್ದಾರೆ. ಕುಂಬಳ ಕಾಯಿ ಬೆಳೆಯುವುದರಿಂದ ಅವರಿಗೆ ಕುಂಬಳಕಾಯಿ ಶಿವರಾಮೇಗೌಡರೆಂಬ ಹೆಸರು ಬಂದಿದೆ.ಬದುಗಳಲ್ಲಿ ಬೆಳೆದ ಮರಗೆಣಸು ಮತ್ತು ಸುವರ್ಣಗೆಡ್ಡೆ ಮತ್ತಿತರ ತರಕಾರಿಗಳಿಗೆ ವಿಶೇಷವಾಗಿ ಗೊಬ್ಬರ ಹಾಕುವುದಿಲ್ಲ. ಕಬ್ಬಿಗೆ ಹಾಕಿದ ಗೊಬ್ಬರ ಮತ್ತು ನೀರು ಬಳಸಿಕೊಂಡು ಅವೂ ಬೆಳೆಯುತ್ತವೆ. ಕಬ್ಬಿನ ನಡುವೆ ಬೆಳೆಯುವ ತರಕಾರಿಗಳನ್ನು ಮನೆಗೆ ಬಳಸುತ್ತಾರೆ. ಹೆಚ್ಚಾದರೆ ಮಾರಾಟ ಮಾಡುತ್ತಾರೆ.ತರಕಾರಿ ಗಿಡಗಳ ಎಲೆ, ತರಗನ್ನು ಮಣ್ಣಿಗೆ ಸೇರಿ ಗದ್ದೆಯ  ಫಲವತ್ತತೆ ಹೆಚ್ಚಾಗುತ್ತದೆ. ಕಬ್ಬಿನ ಬೆಳೆಗೆ ನಿಯಮಿತವಾಗಿ ಜೀವಾಮೃತ ಕೊಡುತ್ತಾರೆ ಸಾವಯವ ಪದ್ಧತಿ ಅನುಸರಿಸುತ್ತಾರೆ. ಗೌಡರ ಗದ್ದೆಯಲ್ಲಿ ಈಗ ಇರುವ ಕಬ್ಬಿನ ಬೆಳೆ ಒಂಬತ್ತನೇ ಕೊಳೆ ಬೆಳೆ. ಒಂದು ಎಕರೆಯಲ್ಲಿ 55 ರಿಂದ 60 ಟನ್ ಇಳುವರಿ ಪಡೆಯುತ್ತಿದ್ದೇನೆ ಎಂದು ಗೌಡರು ಆತ್ಮವಿಶ್ವಾಸದಿಂದ ಹೇಳುತ್ತಾರೆ.ಮಂಡ್ಯದ ವಿ.ಸಿ.ಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರಕ್ಕೆ ಬರುವ ರೈತರು ಗೌಡರ ಗದ್ದೆಗೂ ಭೇಟಿ ನೀಡುತ್ತಾರೆ. ಇತ್ತೀಚೆಗೆ ಒರಿಸ್ಸಾದಿಂದ ನಾಲ್ಕು ತಂಡಗಳಲ್ಲಿ ಬಂದಿದ್ದ ರೈತರು ಗೌಡರ ಗದ್ದೆಗೆ ಭೇಟಿ ನೀಡಿ ಕಬ್ಬಿನ ನಡುವೆ ಬೆಳೆದ ಕುಂಬಳ ಬೆಳೆ ನೋಡಿ ಹರ್ಷ ವ್ಯಕ್ತಪಡಿಸಿದರು.ಆಸಕ್ತ ರೈತರು ಶಿವರಾಮೇಗೌಡರ ಜತೆಯಲ್ಲಿ ಸಮಾಲೋಚನೆ ಮಾಡಬಹುದು. ಅವರ ಮೊಬೈಲ್ ನಂಬರ್: 98440 84514.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry