ಶುಕ್ರವಾರ, ಮೇ 27, 2022
31 °C

ಕರ್ನಾಟಕ ಶ್ರೇಷ್ಠನಾಡು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಇಡೀ ದೇಶದಲ್ಲೇ ಕರ್ನಾಟಕ ಶ್ರೇಷ್ಠವಾದ ನಾಡು. ಹಣ ಗಳಿಸುವ ಉದ್ದೇಶದಿಂದ ನಾನು ಇಲ್ಲಿಗೆ ಬಂದಿಲ್ಲ. ಹಲವು ಧಾರ್ಮಿಕ ಮುಖಂಡರು, ನಿಷ್ಠಾವಂತ ಅಧಿಕಾರಿಗಳು, ಸನ್ನಡತೆಯ ಜನರ ನಡುವೆ ಇರುವ ಬಯಕೆಯಿಂದ ಇಲ್ಲಿಗೆ ಬಂದಿದ್ದೇನೆ’ ಎಂದು ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಹೇಳಿದರು.

‘ಪ್ರಧಾನಿಯವರು ಉನ್ನತ ಹುದ್ದೆ ನಿರ್ವಹಿಸುವಂತೆ ನೀಡಿದ ಆಹ್ವಾನವನ್ನು ನಯವಾಗಿಯೇ ತಿರಸ್ಕರಿಸಿದ್ದೆ. ವಕೀಲಿ ವೃತ್ತಿಯನ್ನೇ ಮುಂದುವರಿಸಿ ಯುವ ಜನತೆಗೆ ಮಾರ್ಗದರ್ಶನ ನೀಡಬೇಕೆಂದಿದ್ದೆ. ಆದರೆ ಕರ್ನಾಟಕದ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸುವಂತೆ ಪ್ರಧಾನಿ ಸೂಚನೆ ನೀಡಿದಾಗ ಸಂತೋಷದಿಂದ ಒಪ್ಪಿಕೊಂಡೆ. ಕರ್ನಾಟಕ ಎಂದರೆ ನನಗೆ ಅಚ್ಚುಮೆಚ್ಚು’ ಎಂದರು.

‘ರಾಜಭವನ ದಂತ ಗೋಪುರದಂತಾಗಿದೆ. ಜನರೊಂದಿಗೆ ಒಡನಾಟವಿರದಿದ್ದರೆ ಪ್ರಜಾಸತ್ತಾತ್ಮಕವಾಗಿ ಕಾರ್ಯ ನಿರ್ವಹಿಸಲು ಸಾಧ್ಯವೇ ಇಲ್ಲದಂತಾಗುತ್ತದೆ. ಹಾಗಾಗಿ ರಾಜ್ಯಪಾಲರಾದವರು ಮಾಧ್ಯಮಗಳೊಂದಿಗೆ ಮಾತನಾಡಲು ಅವಕಾಶವಿದೆ. ಇದಕ್ಕೆ ಕಡಿವಾಣ ಹಾಕುವುದು ಪ್ರಜಾಪ್ರಭುತ್ವ ವಿರೋಧಿ ಎನಿಸುತ್ತದೆ’ ಎಂದರು.

ನೀತಿ ಪಾಠ ಹೇಳುವ ಕೆಲಸ ನನ್ನದಲ್ಲ: ‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ನೀತಿ ಪಾಠ ಹೇಳುವ ಕೆಲಸ ನನ್ನದಲ್ಲ’ ಎಂದು ಎಚ್.ಆರ್. ಭಾರದ್ವಾಜ್ ಹೇಳಿದರು.

ಮುಖ್ಯಮಂತ್ರಿಗಳ ವಿರುದ್ಧ ಭೂಕಬಳಿಕೆ ಆರೋಪದ ಹಿನ್ನೆಲೆಯಲ್ಲಿ ವಿಚಾರಣೆಗೆ ಆದೇಶ ನೀಡಿರುವುದರಿಂದ ಯಡಿಯೂರಪ್ಪ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡದಿರುವ ಕುರಿತು ಪತ್ರಕರ್ತರ ಪ್ರಶ್ನೆಗೆ ಅವರು ಪ್ರತಿಕ್ರಿಯೆ ನೀಡಿದರು.

‘ಮುಖ್ಯಮಂತ್ರಿಗಳು ಜನರಿಂದ ನೇರವಾಗಿ ಆಯ್ಕೆಯಾಗಿದ್ದಾರೆ. ಹಾಗಾಗಿ ಅವರ ರಾಜೀನಾಮೆ ನೀಡದಿರುವ ಕುರಿತು ನಾನು ಚಿಂತಿಸುವುದಿಲ್ಲ. ಅಲ್ಲದೇ ಅವರಿಗೆ ನೀತಿಪಾಠ ಹೇಳುವ ಕೆಲಸವೂ ನನ್ನದಲ್ಲ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.