ಸೋಮವಾರ, ಜೂನ್ 21, 2021
27 °C

ಕಲಾಂ ಸರ್‌ಗೆ ಸಲಾಂ...!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಾಂ ಸರ್‌ಗೆ ಸಲಾಂ...!

ಧಾರವಾಡ: ಮಿಸಾಯಿಲ್ ಮ್ಯಾನ್ ಆಫ್ ಇಂಡಿಯಾ, ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ.ಅಬ್ದುಲ್ ಕಲಾಂ ಶನಿವಾರ ಧಾರವಾಡಕ್ಕೆ ಭೇಟಿ ನೀಡುವ ಮೂಲಕ ಯುವಕರಲ್ಲಿ ಮಿಂಚಿನ ಸಂಚಲನವನ್ನುಂಟು ಮಾಡಿದರು. ಸಹಸ್ರಾರು ಯುವಕರು, ಸಾವಿರಾರು ಅಭಿಮಾನಿಗಳು ನೆಚ್ಚಿನ ಕಲಾಂ ಸರ್ ಅವರನ್ನು ಕಣ್ಣಾರೆ ಕಂಡು ಖುಷಿಪಟ್ಟರು.ನಾಲ್ಕು ಸಮಾರಂಭಗಳಲ್ಲಿ ಭಾಗವಹಿಸುವ ಮೂಲಕ ಧಾರವಾಡ ನಗರದ ಅರ್ಧ ಪ್ರದೇಶದಲ್ಲಿ ಅವರು ಸಂಚರಿಸಿದರು. ಪೇಢೆ ನಗರಿಯ ಜನರಿಗೆ ಕಲಾಂ ದರುಶನದ ಭಾಗ್ಯ ಎರಡನೇ ಬಾರಿ ಲಭಿಸಿದಂತಾಯಿತು.ಭ್ರಷ್ಟಾಚಾರದ ವಿರುದ್ಧ ಯುವಕರನ್ನು ಜಾಗೃತಿಗೊಳಿಸುವ ಉದ್ದೇಶ ಹಾಗೂ ಅವರ 2020ರ ಹೊತ್ತಿಗೆ ಬಲಿಷ್ಠ ರಾಷ್ಟ್ರ ನಿರ್ಮಾಣದ ಕನಸು ನನಸಾಗಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.ಕೃಷಿ ವಿಶ್ವವಿದ್ಯಾಲಯದಲ್ಲಿ `ನಾನು ರೆಕ್ಕೆಗಳೊಂದಿಗೆ ಜನಿಸಿರುವೆ (ಐ ಯಾಮ್ ಬಾರ್ನ್ ವಿತ್ ವಿಂಗ್ಸ್) ಎಂಬ ಕಾವ್ಯವಾನಚದೊಂದಿಗೆ ವಿದ್ಯಾರ್ಥಿಗಳ ಕನಸುಗಳಿಗೆ ರೆಕ್ಕೆ ನೀಡಿ ಸಾಮರ್ಥ್ಯ ನಿಮ್ಮಲ್ಲಿ ಖಂಡಿತವಾಗಿಯೂ ಇದೆ~ ಎಂದು ಡಾ. ಕಲಾಂ, ಹಾಲಭಾವಿ ಆರ್ಟ್ ಸ್ಕೂಲ್‌ನಲ್ಲಿ ಮಕ್ಕಳು ಕೇಳಿದ ಪ್ರಶ್ನೆಗಳಿಗೆ ತರ್ಕಬದ್ಧ ಜಾಣ್ಮೆಯ ಉತ್ತರ ನೀಡಿ ಅವರ ಜ್ಞಾನದ ಹಸಿವಿನ ವಿಸ್ತಾರ ಹಾಗೂ ವೈಜ್ಞಾನಿಕ ಕುತೂಹಲ ಅರಳಿಸುವಲ್ಲಿ ಯಶಸ್ವಿಯಾದರು.ಜನಪ್ರತಿನಿಧಿಗಳಿಗೆ ಕನಿಷ್ಟ ಶಿಕ್ಷಣದ ಅರ್ಹತೆ ಬೇಕಲ್ಲವೇ ಎಂಬ ಪ್ರಶ್ನೆಗೆ, ಅದು ಮತದಾರರ ಆಯ್ಕೆಯಲ್ಲಿಯೇ ಅಡಗಿದೆ. ಯೋಗ್ಯ ವ್ಯಕ್ತಿ ಆಯ್ಕೆಯಾದಲ್ಲಿ ಇಂಥ ಸಮಸ್ಯೆ ಇರುವುದಿಲ್ಲ. ಯುವಕರು ಸಹ ರಾಜಕಾರಣಕ್ಕೆ ಬರಬೇಕು. ಇದರಿಂದ ದೇಶದ ಪ್ರಗತಿಗೆ ಸಹಾಯವಾಗುತ್ತದೆ ಎಂದರು.ಯುವಜನತೆ ದೇಶಕ್ಕಾಗಿ ಏನನ್ನಾದರೂ ಮಾಡಬೇಕು ಎಂಬ ಹುಮ್ಮಸ್ಸಿನಲ್ಲಿದ್ದಾರೆ. ಆದ್ದರಿಂದ ದೇಶವು 2020ರ ಹೊತ್ತಿಗೆ ಜಗತ್ತಿನ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮುವುದರಲ್ಲಿ ಸಂದೇಹವಿಲ್ಲ ಎಂದು ಹೇಳುವ ಮೂಲಕ ವಾಟ್ ಕ್ಯಾನ್ ಐ ಗಿವ್ ಎಂಬ ಅವರ ಮಿಶನ್ ಉದ್ದೇಶವನ್ನು ಸಾದರಪಡಿಸಿದರು.ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜಿನಲ್ಲಂತೂ ಡಾ. ಕಲಾಂ ಅವರಿಗೆ ಅದ್ಭುತ ಸ್ವಾಗತ ಸಿಕ್ಕಿತು. ಸಾವಿರಾರು ವಿದ್ಯಾರ್ಥಿಗಳು ಕಲಾಂ ಅವರ ವಾಹನ ಕಾಲೇಜಿನ ರತ್ನವರ್ಮ ಕ್ರೀಡಾಂಗಣದೊಳಗೆ ಪ್ರವೇಶಿಸುತ್ತಿದ್ದಂತೆ ತಮ್ಮ ನೆಚ್ಚಿನ ಸರ್ ಅವರನ್ನು ಹರ್ಷೋದ್ಘಾರಗಳ ಮೂಲಕ ಬರಮಾಡಿಕೊಂಡರು.ಐ ಯಾಮ್ ಬಾರ್ನ್ ವಿತ್ ವಿಂಗ್ಸ್ ಕಾವ್ಯದ ಜೊತೆಗೆ ಭ್ರಷ್ಟಾಚಾರ ಮುಕ್ತ ರಾಷ್ಟ್ರ ನಿರ್ಮಾಣ ಮಾಡುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಡಾ. ಕಲಾಂ ಅವರ 2020ರ ಕನಸನ್ನು ನನಸನ್ನಾಗಿಸುವ ಜವಾಬ್ದಾರಿ ತಮ್ಮದು ಎಂದು ವಿದ್ಯಾರ್ಥಿಗಳು ಹೇಳಿದರು.ಈ ದೇಶ ಜನರನ್ನು ಪ್ರೀತಿಸಬೇಕು. ಭ್ರಷ್ಟಾಚಾರ ಮುಕ್ತ ಹಾಗೂ ಬಲಿಷ್ಠ ರಾಷ್ಟ್ರವಾಗಬೇಕು ಎಂಬ ಸಂದೇಶವನ್ನು ಮಕ್ಕಳ, ಯುವಕರ ಹೃದಯದಲ್ಲಿ ಡಾ. ಕಲಾಂ ಸರ್ ಬಿತ್ತಿದರು.ಜನಲೋಕಪಾಲದಿಂದ ಭ್ರಷ್ಟಾಚಾರ ನಿಯಂತ್ರಣ ಸಾಧ್ಯ

ಧಾರವಾಡ: “ಭ್ರಷ್ಟಾಚಾರ ನಿಯಂತ್ರಣಕ್ಕೆ ರೂಪಿಸಲಾಗಿರುವ ಅಣ್ಣಾ ಹಜಾರೆ ಅವರ ಜನಲೋಕಪಾಲ ಮಸೂದೆ ಬಲಿಷ್ಠವಾಗಿದ್ದು, ಇದನ್ನು ಜಾರಿಗೆ ತಂದರೆ ಭ್ರಷ್ಟಾಚಾರ ತೊಡೆದು ಹಾಕಲು ಸಾಧ್ಯ” ಎಂದು ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ.ಅಬ್ದುಲ್ ಕಲಾಂ ಹೇಳಿದರು.ಶನಿವಾರ ಇಲ್ಲಿನ ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಸಮಾರಂಭದ ನಂತರ ತಮ್ಮನ್ನು ಬೇಟಿಯಾದ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈ ಮಸೂದೆ ಜಾರಿಗೆ ನಾಗರಿಕರ ಸಹಭಾಗಿತ್ವ ಅಗತ್ಯವಿದೆ ಎಂದರು. ವಾಟ್ ಕ್ಯಾನ್ ಐ ಗಿವ್ ಮಿಶನ್ ಮೂಲಕ ಯುವಕರಲ್ಲಿ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸಲಾಗುತ್ತಿದೆ. ಈಗಾಗಲೇ ದೇಶದ ವಿವಿಧ ಭಾಗಗಳಲ್ಲಿ ಇದರ ಘಟಕಗಳನ್ನು ಆರಂಭಿಸಲಾಗಿದೆ. 2020 ಹೊತ್ತಿಗೆ ಭ್ರಷ್ಟಾಚಾರ ಮುಕ್ತ ಬಲಿಷ್ಠ ರಾಷ್ಟ್ರ ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ ಎಂದು ಹೇಳಿದರು. ಪ್ರಸಕ್ತ ಕೇಂದ್ರದ ಬಜೆಟ್‌ನಲ್ಲಿ ಕೃಷಿ ಅಭಿವೃದ್ಧಿಗಾಗಿ ಒಂದು ಲಕ್ಷ ಕೋಟಿ ರೂಪಾಯಿಗಳಿಗೂ ಹೆಚ್ಚಿನ ಅನುದಾನ ಕಲ್ಪಿಸಿರುವುದು ರೈತ ಸಮುದಾಯಕ್ಕೆ ಒಳ್ಳೆಯ ಅಂಶವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.