ಸೋಮವಾರ, ಮಾರ್ಚ್ 1, 2021
31 °C
ಕಲಾಪ

ಕಲಾರ್ಥಿಗಳ ಸಾಣೆ

–ಸುಮಲತಾ ಎನ್‌. Updated:

ಅಕ್ಷರ ಗಾತ್ರ : | |

ಕಲಾರ್ಥಿಗಳ ಸಾಣೆ

ಅನನ್ಯ ಭಾವ, ಆಲೋಚನೆ ಹಾಗೂ ಘಟನೆಗಳ ಸಾರದಿಂದ ಸ್ಫುರಿಸುವ ಕಲೆ ಸುಪ್ತ ಸಂವೇದನಾ ಮಾಧ್ಯಮ. ಈ ಸೂಕ್ಷ್ಮ ಸಂವೇದನೆಯನ್ನೇ ನೆಚ್ಚಿಕೊಂಡಿರುವ ಒಂದಿಷ್ಟು ವಿದ್ಯಾರ್ಥಿಗಳು ಎಂ.ಜಿ.ರಸ್ತೆಯ ವಿಸ್ಮಯ ಮೆಟ್ರೊ ಕಲಾ ಕೇಂದ್ರದಲ್ಲಿ ಪ್ರದರ್ಶನ ಏರ್ಪಡಿಸಿದ್ದರು.ಈಗಷ್ಟೇ ಅಂತಿಮ ವರ್ಷದ ಕಲಾಭ್ಯಾಸ ಮುಗಿಸಿರುವ ಕರ್ನಾಟಕ ಚಿತ್ರಕಲಾ ಪರಿಷತ್ತಿನ 16 ವಿದ್ಯಾರ್ಥಿಗಳು ತಮ್ಮ ಹಲವು ಕಲಾ ಪ್ರಕಾರಗಳ ಪ್ರದರ್ಶನ ಹಮ್ಮಿಕೊಂಡಿದ್ದರು. ಶಿಲ್ಪಕಲೆ, ಚಿತ್ರಕಲೆ, ಛಾಯಾಚಿತ್ರಗಳು, ಸಮಕಾಲೀನ ಕಲಾ ಮಾಧ್ಯಮ ಹೀಗೆ ಸಾಕಷ್ಟು ಕಲಾ ಪ್ರಕಾರಗಳು ಒಂದೆಡೆ ಬಿತ್ತರಗೊಂಡಿದ್ದವು. ‘ಸ್ಟೊಕಾಸ್ಟಿಕ್’ (ಬಗೆ ಬಗೆ) ಎಂಬ ಶೀರ್ಷಿಕೆಯಲ್ಲಿ ಮೂಡಿಬಂದ ವಿವಿಧ ಕಲಾ ಪ್ರಕಾರಗಳು ಒಬ್ಬೊಬ್ಬ ವಿದ್ಯಾರ್ಥಿಯ ವಿಭಿನ್ನ ಆಲೋಚನೆಗಳನ್ನು ಅಲ್ಲಿ ಬಿಂಬಿಸಿದ್ದವು.ಪ್ರದರ್ಶನದಲ್ಲಿ ಮೊತ್ತ ಮೊದಲು ಕಾಣಸಿಗುವುದು ಕುಲಕರ್ಣಿ ವಿಭಾ ಅವರ ‘ಸ್ಟಕ್ ಇನ್ ಟೈಮ್ ರ್‍ಯಾಪ್’ ಎಂಬ ಶಿಲ್ಪಕಲೆ. ಗಡಿಯಾರದೊಟ್ಟಿಗೆ ಕಾಲ ನೂಕುವ ಮಹಿಳೆಯ ಬದುಕನ್ನು ಇಡಿಯಾಗಿ ಅದರಲ್ಲಿ ಅಡಗಿಸಲಾಗಿದೆ. ವೆಂಕಟೇಶ್ ಅವರ ರಾಕ್ ಆರ್ಟ್ ಮಾಧ್ಯಮದ ಉದ್ದೇಶ ಪ್ರಾಣಿಗಳ ಮೇಲಿನ ಪ್ರೀತಿಯೊಂದಿಗೆ ಸಮಾಜಕ್ಕೆ ಸಂದೇಶ ನೀಡುವುದಾಗಿತ್ತು. ‘ಸ್ಕಿಪಿಂಗ್ ಗರ್ಲ್‌ ವಿತ್ ಎ ಮಂಗಳ ಸೂತ್ರ’ ಮನುಷ್ಯನೊಳಗಿನ ವಿಭಿನ್ನ ಭಾವಗಳ ತೊಳಲಾಟವನ್ನು ಅನಾವರಣಗೊಳಿಸಿತ್ತು. ಮಹಿಳೆಯ ಬದುಕಿನ ಆಟವನ್ನೂ ಸೂಚಿಸುತ್ತಿದ್ದ ಈ ಕಲಾಕೃತಿ ಸಂಬಂಧಗಳ ಸೂಕ್ಷ್ಮ ಸಂಕೇತದಂತಿತ್ತು. ಅಮೂಲ್ಯ ಅವರು ಮೂಡಿಸಿದ ಈ ಶಿಲ್ಪ ಭಾರತೀಯ ಮಹಿಳೆಯರ ಸ್ಥಿತಿಗತಿಯನ್ನೂ ಪ್ರತಿನಿಧಿಸುವಂತಿದೆ.ರೂಪಾ ಕುಂಗೋವಿ ಅವರ ‘ಹ್ಯಾಂಡ್ಸ್‌ ವಿತ್ ಆ್ಯನ್ ಅಂಬ್ರೆಲ್ಲಾ’ವನ್ನು ಲೋಹ, ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ರೂಪಿಸಿದ್ದು, ಯಾವುದೇ ವಸ್ತುವನ್ನು ಸುಲಭವಾಗಿ ಸೆರೆಹಿಡಿಯಬಹುದು; ಆದರೆ ಅದರ ಭಾವವನ್ನಲ್ಲ ಎನ್ನುವುದನ್ನು ಸಾರಿ ಹೇಳುವ ಕಲಾಕೃತಿ ಅದಾಗಿತ್ತು. ಇವರ ಇನ್ನೊಂದು ಕಲಾಕೃತಿ ಕೆಂಪು ದಾರ ಹಾಗೂ ಲೋಹವನ್ನು ಉಪಯೋಗಿಸಿ ಮಾಡಿದ ‘ಡೈನಮಿಕ್ಸ್‌ ಬಿಹೈಂಡ್ ಹ್ಯೂಮನ್ ಮೂವ್‌ಮೆಂಟ್ಸ್‌’ ಪ್ರತಿಯೊಬ್ಬ ಮನುಷ್ಯನ ವಾಸ್ತವ ಹಾಗೂ ಕಲ್ಪನೆಯ ನಡುವಿನ ದಾರಿಯನ್ನು ಪ್ರತಿನಿಧಿಸುವಂತಿತ್ತು.ಗುರೇಂದಿರನ್ ಅವರ ‘ಕ್ವೀನ್ ಆಫ್ ಸೀ’ ಮೀನು, ಶಂಖ, ಏಡಿ, ಇನ್ನಿತರ ಜಲಚರಗಳನ್ನು ಬಣ್ಣಗಳಲ್ಲಿ ರೂಪಿಸಿದ ರಾಣಿಯ ಚಿತ್ರ ಹಾಗೂ ‘ಎಂಬ್ರೇಸಿಂಗ್ ಆಫ್ ಬ್ರಹ್ಮ’ ಮತ್ತು ‘ಆಕ್ಷನ್’ ಕಲಾಕೃತಿಗಳು ಭಿನ್ನವಾಗಿ ಮೂಡಿಬಂದಿದ್ದವು.ಮಮತಾ ಅವರು ರೂಪಿಸಿದ್ದ ಸೈಕಲ್ ತುಳಿಯುವ ಮನುಷ್ಯನನ್ನು ಒಳಗೊಂಡ ‘ಬ್ಯಾಲೆನ್ಸಿಂಗ್’ ಶಿಲ್ಪವು ಏಳು ಬೀಳುಗಳನ್ನು ಮೀರಿ ಮನುಷ್ಯ ಹೇಗೆ ಕೊನೆಗೆ ಗುರಿ ಮುಟ್ಟುತ್ತಾನೆ ಎನ್ನುವುದನ್ನು ಹೇಳುತ್ತದೆ. ಸರಿದೂಗಿಸಿಕೊಂಡು ಹೋಗುವುದರಲ್ಲಿಯೇ ಬದುಕಿನ ಯಶಸ್ಸು ಅಡಗಿದೆ ಎಂಬ ಸಂದೇಶ ಅದರಲ್ಲಿ ಇತ್ತು. ಫೈಬರ್ ಮತ್ತು ಲೋಹವನ್ನು ಬಳಸಿಕೊಂಡು ಈ ಕಲಾಕೃತಿಯನ್ನು ಸೃಷ್ಟಿಸಲಾಗಿತ್ತು.ಛಾಯಾಚಿತ್ರಗಳ ವಿಷಯಕ್ಕೆ ಬಂದರೆ, ಪವನ್ ಗುಣಶೇಖರ್ ಅವರ ‘ದಿ ಲೋನ್‌ಸಮ್ ವೇಟ್, ‘ಯುನೈಟೆಡ್ ವಿ ಹ್ಯಾಂಗ್’, ‘ಸೈಲೆಂಟ್ ಸ್ನೀಕರ್ಸ್‌’, ‘ಮೆಜೆಸ್ಟಿಕ್’, ‘ದಿ ಫ್ಲೈಟ್, ‘ಹೋಪ್’, ‘ಇನೊಸೆಂಟ್ ಕ್ಯೂರಿಯಾಸಿಟಿ’ ಚಿತ್ರಗಳು ಮನಸೆಳೆಯುವಂತಿದ್ದವು.ಕಲಾವಿದನೊಬ್ಬನಿಗೆ ಅಗತ್ಯವಾದ ಪರಿಕರಗಳನ್ನೆಲ್ಲ ಇಟ್ಟುಕೊಳ್ಳಬಹುದಾದ ‘ಡ್ರೀಮ್ ಕ್ಯೂಬ್’ ಕನಸುಗಳಿಗೆ ಬಣ್ಣ ತುಂಬುವ ಸುಂದರ ಆಲೋಚನೆಯಂತಿತ್ತು.ವಿದ್ಯಾಶ್ರೀ ಅವರ ‘ವುಮೆನ್ ಈಸ್ ಎವ್ರಿಥಿಂಗ್’ ಮಹಿಳೆಯ ಶಕ್ತಿ ಮತ್ತು ಎಂಥ ಸಂದರ್ಭದಲ್ಲೂ ಆಕೆಯ ಮುಖದ ಮೇಲೆ ಮೂಡುವ ನಗೆ ಗೆರೆಗಳನ್ನು ಸೂಕ್ಷ್ಮವಾಗಿ ತೋರುತ್ತಿತ್ತು. ವಿದ್ಯಾಶ್ರೀ ಅವರ ಮತ್ತೊಂದು ಕೈಚಳಕ ಎದ್ದು ಕಾಣಿಸಿದ್ದು ತುಕ್ಕು ಹಿಡಿದ ಮಷಿನರಿಗಳಿಂದ ಮಾಡಿದ ಗಿಟಾರ್‌ನಲ್ಲಿ. ತ್ಯಾಜ್ಯವಾದ ಲೋಹಗಳಿಂದ ಸುಂದರ ಗಿಟಾರ್ ರೂಪಿಸುವುದರೊಂದಿಗೆ ಫೈಬರ್‌ನಿಂದ ಹಾಡುಗಾರನ ‘ಎಂ’ ಶಿಲ್ಪಕೃತಿಯನ್ನೂ ಮೂಡಿಸಿದ್ದರು.

ಅಭಿಷೇಕ್ ಕೆಂಪರಾಜ್ ಅವರು ಸಾಂಪ್ರದಾಯಿಕ ಮೈಸೂರು ಕಲೆ ಶೈಲಿಯಲ್ಲಿ ಲಕ್ಷ್ಮಿಯನ್ನು ಬಿಡಿಸಿದ್ದು, ಅದಕ್ಕೆ ಚಿನ್ನದ ಲೇಪ ಮಾಡಿದ್ದು ವಿಶೇಷವೆನಿಸಿತ್ತು. ಪ್ರಶಾಂತ್ ಬಿ.ಎಲ್. ಅವರ ‘ನೋ ದಿ ಸೆಲ್ಫ್‌’ ಮನುಷ್ಯ ತನ್ನೊಳಗೆ ತಾನು ಕಂಡುಕೊಳ್ಳುವ ಪ್ರಯತ್ನದ ಬಿಂಬದಂತೆ ಇತ್ತು.ಕನ್ನಡಿಯ ಚಿಕ್ಕ ಮನೆಯಂತಿರುವ ಕಲಾಕೃತಿಯ ಹೆಸರು ‘ಪ್ಯಾರಡಾಕ್ಸ್‌ ರಿಯಾಲಿಟಿ’. ಮನುಷ್ಯ ಯಾವುದನ್ನು ನಂಬುತ್ತಾನೆ– ವಾಸ್ತವವನ್ನೋ? ಕಲ್ಪನೆಯನ್ನೋ ಅಥವಾ ವಾಸ್ತವ ಎನ್ನುವಂತಿರುವ ಕಲ್ಪನೆಯನ್ನೋ? ಹೀಗೆ ಹಲವು ಗೊಂದಲಗಳೊಂದಿಗೆ ಕೊನೆಗೆ ಉಳಿಯುವುದೇ ವಿರೋಧಾಭಾಸ. ಅದೇ ವಾಸ್ತವ.ಕಿರಣ್ ಕೆ.ಬಿ. ಅವರದ್ದು ಇನ್ನೊಂದು ವಿಭಿನ್ನ ಮಾಧ್ಯಮ. ಸೋಪ್ ಸ್ಟೋನ್‌ನಲ್ಲಿ ನಿರ್ಮಿಸಿರುವ ಡಾಗ್, ಟ್ರೈಬಲ್ ಕಲಾಕೃತಿಗಳು ಇಷ್ಟವೆನಿಸುತ್ತವೆ.

ಅನಂತ ಪದ್ಮನಾಭ್ ಅವರ ‘ಎಕ್ಸ್‌ಎಕ್ಸ್‌ಎಲ್‌ ಗಾಸಿಪ್’ ಇಬ್ಬರು ದಡೂತಿ ಮಹಿಳೆಯರ ಕಾಲಕ್ಷೇಪವನ್ನು ಸೂಚಿಸಿದರೆ, ‘ಮೆನ್ ಕೆನಾಟ್‌ ಬಿ ಮೆಷರೆಬಲ್’ ಮನುಷ್ಯನ ಸಾಮರ್ಥ್ಯದ ಎಲ್ಲೆಯನ್ನು ತಿಳಿಸುತ್ತದೆ. ಪ್ರಾಂಜಲ್ ಅವರ ‘ಆರಿಗಾಮಿ ಕ್ರೇನ್’ ಜಪಾನಿನ ಸಾಂಪ್ರದಾಯಿಕ ನಂಬಿಕೆಯನ್ನು ದೃಢೀಕರಿಸುತ್ತಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.