ಶುಕ್ರವಾರ, ಮೇ 20, 2022
21 °C

ಕಲುಷಿತ ನೀರು: ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಲಹಂಕ: ಸುಧಾರಿತ ಸೌಲಭ್ಯ ಕಲ್ಪಿಸುವ ಭರದಲ್ಲಿ ಇನ್ನೊಂದು ಸಮಸ್ಯೆ ಸೃಷ್ಟಿಯಾಗುವ ಮೂಲಕ ಜನರು ಇಕ್ಕಟ್ಟಿಗೆ ಸಿಲುಕುವಂತಾಗಿದೆ. ಬಿಬಿಎಂಪಿ ಮತ್ತು ಬೆಂಗಳೂರು ಜಲಮಂಡಳಿ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಜನರು ಕಲುಷಿತ ನೀರನ್ನು ಕುಡಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ಬ್ಯಾಟರಾಯನಪುರ ಕ್ಷೇತ್ರ ವ್ಯಾಪ್ತಿಯ ಜಕ್ಕೂರು ಬಡಾವಣೆಯ ನಾಗರಿಕರು ಇಂತಹ ಸಮಸ್ಯೆಯನ್ನು ಎದುರಿಸುತ್ತಿದ್ದು, ಈ ಬಗ್ಗೆ ಎಷ್ಟೇ ಮನವಿ ಮಾಡಿದರೂ ಸಹ ಸಮಸ್ಯೆಯನ್ನು ಬಗೆಹರಿಸದ ಅಧಿಕಾರಿಗಳ ವಿರುದ್ಧ ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸುಮಾರು ಒಂದು ವರ್ಷದ ಹಿಂದೆ ಜಕ್ಕೂರು ಗ್ರಾಮದಿಂದ ಬಳ್ಳಾರಿ ಮುಖ್ಯ ರಸ್ತೆಯ ಜಿಕೆವಿಕೆ ಕ್ರಾಸ್‌ವರೆಗೆ ಬಿಬಿಎಂಪಿ ವತಿಯಿಂದ 80 ಅಡಿ ರಸ್ತೆ ವಿಸ್ತರಣೆ ಹಾಗೂ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳಲಾಯಿತು.ಇದರಿಂದ ಜಕ್ಕೂರು ಬಡಾವಣೆಯ ಮುಖ್ಯ ರಸ್ತೆಯ ಮೇಲ್ಭಾಗದಲ್ಲಿದ್ದ ಕೊಳವೆ ಬಾವಿಗಳ ಎತ್ತರವನ್ನು ತಗ್ಗಿಸಿ, ಅದರ ಮೇಲೆ ರಸ್ತೆಯನ್ನು ನಿರ್ಮಿಸುವ ಸಲುವಾಗಿ ಚೇಂಬರ್ ನಿರ್ಮಿಸಲಾಗಿದೆ. ಆದರೆ ಮೇಲ್ಭಾಗದಲ್ಲಿ ಸ್ಲ್ಯಾಬ್ ಅಳವಡಿಸದೆ ಹಾಗೆಯೆ ಬಿಡಲಾಗಿದೆ.ಚೇಂಬರ್ ಮೇಲೆ ಸ್ಲ್ಯಾಬ್ ಅಳವಡಿಸದ ಪರಿಣಾಮ ಬಾರಿಮಳೆ ಬೀಳುವ ಸಂದರ್ಭದಲ್ಲಿ ಬಳ್ಳಾರಿ ಮುಖ್ಯರಸ್ತೆಯ ಕಡೆಯಿಂದ ತ್ಯಾಜ್ಯವಸ್ತುಗಳು ಹಾಗೂ ಕೊಳಚೆ ನೀರಿನ ಸಮೇತ ಹರಿದುಬರುವ ಮಳೆ ನೀರು, ನೇರವಾಗಿ ಈ ಚೇಂಬರ್‌ನಲ್ಲಿ ಸಂಗ್ರಹವಾಗುತ್ತಿದೆ. ಕೊಳವೆ ಬಾವಿಯ ನೀರಿನ ಜೊತೆಗೆ ಈ ಕಲುಷಿತನೀರು ಮಿಶ್ರಣವಾಗಿ ಇಲ್ಲಿಂದ ಓವರ್‌ಹೆಡ್ ಟ್ಯಾಂಕ್‌ಗೆ, ನಂತರ ಸಾರ್ವಜನಿಕ ನಲ್ಲಿಗಳಿಗೆ ಪೂರೈಕೆಯಾಗುತ್ತಿದೆ ಎಂದು ಸ್ಥಳೀಯ ನಿವಾಸಿ ಉದಯ್‌ಕುಮಾರ್ ಉಪಾಧ್ಯಾಯ ದೂರಿದ್ದಾರೆ.ಸುಮಾರು ಮೂರು ತಿಂಗಳಿಂದ ಇದೇ ನೀರನ್ನು ಇಲ್ಲಿನ ಸಾರ್ವಜನಿಕರು ಕುಡಿಯಲು ಹಾಗೂ ಇತರೆ ಕೆಲಸಗಳಿಗೆ ಉಪಯೋಗಿಸುತ್ತಿದ್ದಾರೆ. ಸಮಸ್ಯೆ ಬಗೆಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಇದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.