ಭಾನುವಾರ, ಮೇ 16, 2021
28 °C

ಕಲೆ, ಸಂಸ್ಕೃತಿ ಎಲ್ಲೆಡೆ ಹರಡಲಿ-ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲೆ, ಸಂಸ್ಕೃತಿ ಎಲ್ಲೆಡೆ ಹರಡಲಿ-ಸಿದ್ದರಾಮಯ್ಯ

ಬೆಂಗಳೂರು: `ಕಲೆ ಮತ್ತು ಸಂಸ್ಕೃತಿಯು ಕೇಂದ್ರೀಕರಣವಾಗದೆ ಎಲ್ಲೆಡೆ ಹರಡಬೇಕು' ಎಂದು ಸಾಹಿತಿ ಡಾ.  ಎಸ್. ಜಿ.ಸಿದ್ದರಾಮಯ್ಯ ಹೇಳಿದರು.ರಂಗದರ್ಶನ ತಂಡವು ಸೋಮವಾರ ಮಲ್ಲೇಶ್ವರದ ಸೇವಾಸದನದಲ್ಲಿ ಆಯೋಜಿಸಿದ್ದ ಚಲನಚಿತ್ರ ನಟ ಲೋಕೇಶ್ ನೆನಪಿನ `ಕೆಂಪಾದವೊ ಎಲ್ಲ ಕೆಂಪಾದವೊ' ಬಡಾವಣೆ ನಾಟಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.`ಸಾಂಸ್ಕೃತಿಕ ನಗರಿ ಎಂದರೆ ಬೆಂಗಳೂರು, ಸಂಸ್ಕೃತಿ, ಕಲೆಯೆಂದರೆ ರವೀಂದ್ರ ಕಲಾಕ್ಷೇತ್ರ ಎಂಬಂತಾಗಿದೆ. ಆದರೆ, ಕಲೆಯನ್ನು ಯಾವುದೇ ಒಂದು ನಗರ ಅಥವಾ ಒಂದು ಸ್ಥಳಕ್ಕೆ ಕೇಂದ್ರೀಕರಣಗೊಳಿಸಬಾರದು. ಕಲೆಯನ್ನು ವಿಕೇಂದ್ರೀಕರಣಗೊಳಿಸಬೇಕು' ಎಂದು ಅಭಿಪ್ರಾಯಪಟ್ಟರು.`ಲಂಕೇಶ್ ನಿರ್ದೇಶಿಸಿದ ಎಲ್ಲ ಚಿತ್ರಗಳು ಪ್ರಯೋಗಾತ್ಮಕವಾಗಿದ್ದವು. ಅವರ ಚಿತ್ರದ ಕೆಂಪಾದವೋ ಹಾಡು ಚಲನಚಿತ್ರದ ಪೂರ್ಣ ಆಶಯವನ್ನು ವ್ಯಕ್ತಪಡಿಸುತ್ತಿತ್ತು. ಅದು ಇಡೀ    ಚಿತ್ರದ ಚಿತ್ರರೂಪಕವಾಗಿತ್ತು' ಎಂದು ಹೇಳಿದರು.`ಇಂದಿನ ಚಿತ್ರಗಳಲ್ಲಿ ಕೀಳು ಅಭಿರುಚಿ ಹೆಚ್ಚಾಗುತ್ತಿದೆ. ಕೆಟ್ಟ ಗೀತೆಗಳಿಗೆ ಇಂದು ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಗೀತೆಗಳನ್ನು ವಿಕಾರಗೊಳಿಸುವವರಿಗೆ ಮಾನ್ಯತೆ ನೀಡಲಾಗುತ್ತಿದೆ. ಗೀತೆ ವಿಕಾರಗೊಳಿಸಿದವರನ್ನು ಒಳ್ಳೆಯ ಸಂಗೀತ ನಿರ್ದೇಶಕರು, ಗೀತೆ ರಚನಾಕಾರರು ಎಂದು ಕೊಂಡಾಡಲಾಗುತ್ತಿದೆ' ಎಂದು ವಿಷಾದಿಸಿದರು.`ಇಂದಿನ ಯುವ ಪೀಳಿಗೆಯು ಹವ್ಯಾಸಿ ರಂಗ ಭೂಮಿಯ ಕುರಿತು ಆಸಕ್ತಿ ಬೆಳೆಸಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಇಂದು ಹವ್ಯಾಸಿ ರಂಗಭೂಮಿಯು ಒಳ್ಳೆಯ ಗುಣಮಟ್ಟದಲ್ಲಿ ಬೆಳೆಯುತ್ತಿದೆ. ಇದು ಮುಂದಿನ ಭವಿಷ್ಯದ ಕುರಿತು ಆಶಾಕಿರಣವನ್ನು ಮೂಡಿಸಿದೆ' ಎಂದು ಅವರು ತಿಳಿಸಿದರು.`ನಮ್ಮ ನಾಡಿನಲ್ಲಿ ಅನೇಕ ಕಲಾವಿದರಿಗೆ ಯಾವುದೇ ಮಾನ್ಯತೆಯು ದೊರೆಯುತ್ತಿಲ್ಲ. ಇದರಿಂದ, ಎಷ್ಟೋ ಒಳ್ಳೆಯ ಕಲಾವಿದರು ಬೇಲಿಯ ಮೇಲಿನ ಹೂವಿನಂತೆ ಅಲ್ಲೇ ಅರಳಿ ಬಾಡಿ ಹೋಗುತ್ತಿದ್ದಾರೆ. ಇದು ತಪ್ಪಬೇಕು. ಅರ್ಹ ಕಲಾವಿದರಿಗೆ ಮಾನ್ಯತೆ ನೀಡಬೇಕು' ಎಂದು ಒತ್ತಾಯಿಸಿದರು.ಚಲನಚಿತ್ರ ನಿರ್ದೇಶಕ ರವೀಂದ್ರನಾಥ್ ಮಾತನಾಡಿ, `ಲೋಕೇಶ್ ಒಬ್ಬ ಭಾವನಾಜೀವಿ. ನಾನು ಕುಡುಕನಲ್ಲ, ಭಾವನೆಗಳ   ತಿರುಕ ಎಂದು ಅವನೇ ಹಲವು ಬಾರಿ ಹೇಳಿಕೊಳ್ಳುತ್ತಿದ್ದ. ತಾನು ಅಳಿದ ನಂತರವೂ ತಾನು ಉಪಯೋಗವಾಗಬೇಕು ಎಂದು ಬಯಸಿ ತಮ್ಮ ದೇಹದಾನ ಮಾಡಿದ ಮಹಾನುಭಾವ' ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.