ಶುಕ್ರವಾರ, ಮೇ 20, 2022
25 °C

ಕಳಪೆ ರಸ್ತೆ ಕಾಮಗಾರಿ: ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಜೇಂದ್ರಗಡ: ಸ್ಥಳೀಯ ಜಗಜ್ಯೋತಿ ಕೃಷಿ ಉತ್ಪನ್ನ ಉಪ ಮಾರುಕಟ್ಟೆಯಲ್ಲಿ ಕೈಗೊಂಡಿರುವ ರಸ್ತೆ ಸುಧಾರಣೆ ಕಾಮಗಾರಿಯು ಅತ್ಯಂತ ಕಳಪೆಯಾಗಿದೆ ಎಂದು ಆರೋಪಿಸಿ ಅಲ್ಲಿನ ವರ್ತಕರು ಮತ್ತು ಶ್ರಮಿಕರ ಸಂಘದ ಸದಸ್ಯರು ಪ್ರತಿಭಟನೆ ನಡೆಸಿ ಕಾಮಗಾರಿ ಸ್ಥಗಿತಗೊಳಿಸಿದ ಘಟನೆ ಸೋಮವಾರ ಮಧ್ಯಾಹ್ನ ನಡೆಯಿತು.ರೈತರು ಮತ್ತು ವರ್ತಕರ ನಿರಂತರ ಒತ್ತಾಯದ ಮೇರಿಗೆ ಅನೇಕ ವರ್ಷಗಳ ನಂತರ ಕೈಗೊಂಡಿರುವ ರಸ್ತೆ ಸುಧಾರಣೆ ಕಾಮಗಾರಿಯನ್ನು ಗುತ್ತಿಗೆದಾರರು ತೀರಾ ಕಡಿಮೆ ಗುಣಮಟ್ಟದಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಇದರಿಂದ ಕಾಮಗಾರಿ ಮಾಡಿಯೂ ಮಾಡದಂತಾಗುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.ಒಂದೇ ದಿನದಲ್ಲಿಯೇ ಕಿತ್ತು ಹೋದ ಡಾಂಬರ್: ಎ.ಪಿ.ಎಂ.ಸಿ.ಯ ಮುಖ್ಯ ದ್ವಾರದಲ್ಲಿ ಭಾನುವಾರ ಮಾರುಕಟ್ಟೆ ರಜೆ ಇದ್ದು, ಆ ದಿನ  ರಸ್ತೆಗೆ ಕಳಪೆಯಾಗಿ ಡಾಂಬರು ಹಾಕಲಾಗಿದೆ. ಸೋಮವಾರ ಮಧ್ಯಾಹ್ನ ಒಂದೆರಡು ವಾಹನಗಳು ಓಡಾಟದಿಂದಾಗಿ ಡಾಂಬರು ಕಿತ್ತುಹೋಗಿ ಮಣ್ಣು ಕಾಣಿಸುತ್ತಿತ್ತು. ಮೊದಲಿದ್ದ ಮಣ್ಣಿನ ರಸ್ತೆಯ ಮೇಲೆ ಗುತ್ತಿಗೆದಾರರು ಬರೀ ಡಾಂಬರ್ ಸುರಿದು ಕೈತೊಳೆದುಕೊಂಡಿದ್ದಾರೆ. ಹೀಗಾಗಿ ರಸ್ತೆಯ ಮೇಲೆ ಚಕ್ಕಡಿ, ಲಘು ವಾಹನಗಳ ಸಂಚರಿಸಿದರೂ ಡಾಂಬರ್ ಕಿತ್ತು ಹೋಗಲಿದೆ.ಕಾಮಗಾರಿ ಅಷ್ಟೊಂದು ಕಳಪೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸ್ಥಳಕ್ಕೆ ಬಾರದ ಅಧಿಕಾರಿಗಳು: ಕಾಮಗಾರಿ ಗುಣಮಟ್ಟದಲ್ಲಿ ಇಲ್ಲವೆಂದು ಆರೋಪಿಸಿ ವರ್ತಕರು ಮತ್ತು ಶ್ರಮಿಕರು ಪ್ರತಿಭಟನೆ ನಡೆಸಿ ಕಾಮಗಾರಿ ಸ್ಥಗಿತಗೊಳಿಸಲು ಮುಂದಾದರೂ ಸಹ ಎ.ಪಿ.ಎಂ.ಸಿ. ಅಧಿಕಾರಿಗಳು ಮಾತ್ರ ಸ್ಥಳಕ್ಕೆ ಭೇಟಿ ನೀಡಿ ಗುಣಮಟ್ಟ ಪರೀಕ್ಷಿಸಲಿಲ್ಲ. ಇದರಿಂದ ಮತ್ತಷ್ಟು ಕುಪಿತಗೊಂಡ ಪ್ರತಿಭಟನಾಕಾರರು, ಅಧಿಕಾರಿಗಳು ಇಲ್ಲಿಗೆ ಬಂದು ಗುಣಮಟ್ಟ ಪರಿಶೀಲಿಸುವವರೆಗೂ ಕಾಮಗಾರಿ ನಡೆಯಲು ಬಿಡುವುದಿಲ್ಲ ಎಂದು ಬಿಗಿಪಟ್ಟು ಹಿಡಿದರು.ಮಾಹಿತಿ ಕೊಡದ ಗುತ್ತಿಗೆದಾರರು: ರಸ್ತೆ ಡಾಂಬರೀಕರಣದ ಅಂದಾಜು ಮೊತ್ತ ಮತ್ತು ಕೈಗೊಳ್ಳಬೇಕಾದ ಗುಣಮಟ್ಟದ ಬಗ್ಗೆ ಮಾಹಿತಿ ಕೊಡುವಂತೆ ಪ್ರತಿಭಟನಾಕಾರರು ಸ್ಥಳದಲ್ಲಿದ್ದ ಕೆಲಸದ ಉಸ್ತುವಾರಿ ನೋಡಿಕೊಳ್ಳುತ್ತಿದ್ದವರಿಗೆ ಕೇಳಿದರು. ಆದರೆ, ಈ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ. ನೀವೇನಿದ್ದರೂ ಹೊಳೆಆಲೂರಿಗೆ ಹೋಗಿ ಮೇಲಾಧಿಕಾರಿಗಳನ್ನು ಕೇಳಿಕೊಳ್ಳಿ ಎಂದು ನಿರ್ಲಕ್ಷ್ಯದ ಉತ್ತರ ನೀಡಿದರು.ವರ್ತಕರ ಸಂಘದ ಅಧ್ಯಕ್ಷ ಅಂಬರೀಶ ಬಳಿಗೇರ, ಚನ್ನಬಸಪ್ಪ ವಾಲಿ, ಪರಪ್ಪ ಸಂಗನಾಳ, ಭೀಮಣ್ಣ ಮ್ಯಾಗೇರಿ, ಸಂಗಣ್ಣ ಗೊಂಗಡಶೆಟ್ಟಿ, ಈರಣ್ಣ ಸಂಗಮದ, ಅಶೋಕ ಮ್ಯಾಗೇರಿ, ಶರಣಪ್ಪ ಪುರ್ತಗೇರಿ ಅಂದಪ್ಪ ಸಂಗನಾಳ, ಶ್ರಮಿಕರ ಸಂಘದ ಅಧ್ಯಕ್ಷ ಹನಮಂತಪ್ಪ ಹೆಳವರ, ಈಶಪ್ಪ ಕುಂಬಾರ, ಸೋಮಣ್ಣ ಅಜ್ಮೀರ, ಹನಮಂತ ಅಜ್ಮೀರ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.