ಗೀತ ರಚನೆಕಾರ ಕವಿರಾಜ್ ಪಾಲಿಗೆ ‘ಮದುವೆಯ ಮಮತೆಯ ಕರೆಯೋಲೆ’ ಸಿನಿಮಾ ನಿರ್ದೇಶನದ ಅನುಭವ ಒಂದು ಸವಿ ಸ್ವಪ್ನ. ‘ಗುರಿಗಿಂತಲೂ ಪಯಣವೇ ರೋಚಕ’ ಎನ್ನುವುದು ಅವರ ಅನುಭವದ ಮಾತು.

ಸುಮಾರು 15 ವರ್ಷದಿಂದ ಸಿನಿಮಾ ಹಾಡುಗಳ ಸಾಂಗತ್ಯದಿಂದ ಹೆಸರು ಮಾಡಿದ ಕವಿರಾಜ್ ನಿರ್ದೇಶನದ ಮೊದಲ ಚಿತ್ರ ‘ಮದುವೆಯ ಮಮತೆಯ ಕರೆಯೋಲೆ’ ಇಂದು (ಜ.8) ತೆರೆಕಾಣುತ್ತಿದೆ. ಚೊಚ್ಚಲ ಚಿತ್ರದ ಬಿಡುಗಡೆ ಎಂಬ ಭಯ, ಉದ್ವೇಗ ಅವರಲ್ಲಿಲ್ಲ. ಆರಂಭದ ಕೆಲವು ದಿನಗಳನ್ನು ಹೊರತುಪಡಿಸಿ ನಿರ್ದೇಶನದುದ್ದಕ್ಕೂ ಅವು ಕಾಡಿಯೂ ಇಲ್ಲ. ಆದರೆ ಅವರೇ ಹೇಳುವಂತೆ ಒಂದು ತೆರನಾದ ವಿಚಿತ್ರ ಕಾತರವಿದೆ.

ಒಂದು ಸಣ್ಣ ಕೆಲಸ ಮಾಡಿದಾಗ ದೊಡ್ಡವರು ನೋಡಿ ಏನು ಹೇಳುತ್ತಾರೋ ಎಂದು ಚಡಪಡಿಕೆಯಿಂದ ಕಾಯುತ್ತೇವಲ್ಲ, ಆ ಬಗೆಯ ಕಾತರ. ರಾಜ್ಯದ ಯಾವುದೋ ಮೂಲೆಯ, ತಮ್ಮೊಂದಿಗೆ ಸಂಬಂಧವೇ ಹೊಂದಿಲ್ಲದ ಜನರು, ತಮ್ಮ ಹಣ ಖರ್ಚು ಮಾಡಿ, ಎರಡೂವರೆ ಗಂಟೆ ಸಮಯ ಮೀಸಲಿಟ್ಟು ಸಿನಿಮಾ ನೋಡುತ್ತಾರೆ. ಹೀಗೆ ನೋಡುವವರಿಗೆ ಖುಷಿ ನೀಡಬೇಕು, ಅವರು ಮೆಚ್ಚಬೇಕು ಎನ್ನುವ ಹಂಬಲ ಕವಿರಾಜ್ ಅವರದು. ‘ಮೆಚ್ಚುತ್ತಾರೆ ಎಂಬ ಆತ್ಮವಿಶ್ವಾಸ ಇದೆ. ಆದರೆ ಮೆಚ್ಚುಗೆಯ ಮಟ್ಟ ಎಷ್ಟು ಎಂಬುದಷ್ಟೇ ತಿಳಿಯಬೇಕು’ ಎನ್ನುತ್ತಾರೆ ಕವಿರಾಜ್.

ತಮ್ಮ ಮೊದಲ ನಿರ್ದೇಶನದ ಅನುಭವವನ್ನು ಅವರು ವರ್ಣಿಸುವುದು– ‘ಮಜವಾಗಿತ್ತು’ ಎಂದು. ಹಾಡುಗಳನ್ನು ಬರೆಯಲು ಏಕಾಂತ ಬಯಸುತ್ತಿದ್ದ ಅವರ ಮನಸು ಈಗ ಸುತ್ತಲೂ ಜನರಿರಬೇಕು ಎಂದು ಬಯಸತೊಡಗಿದೆ. ಲೈಟ್ಬಾಯ್, ಕ್ಯಾಮೆರಾ ಸಹಾಯಕ, ಅಡುಗೆ ಮಾಡುವವರು, ಜೂನಿಯರ್ ಆರ್ಟಿಸ್ಟ್– ಹೀಗೆ ನೂರಾರು ಜನರು ದಿನವೂ ದುಡಿಮೆಗೆ ಒಡ್ಡಿಕೊಳ್ಳುತ್ತಾ ಇರುವುದು ತಮ್ಮ ನಿರ್ದೇಶನದ ಕನಸನ್ನು ಸಾಕಾರಗೊಳಿಸುವ ಸಲುವಾಗಿ.

‘ನಿರ್ದೇಶಕ’ನನ್ನಾಗಿಸುವುದರಲ್ಲಿ ಇಂತಹ ನೂರಾರು ಕೆಲಸಗಾರರ ಕಾಣಿಕೆ ಹಿರಿದು. ಹೀಗಾಗಿ ಸಿನಿಮಾ ಸೃಷ್ಟಿಯ ಪ್ರಕ್ರಿಯೆಯೇ ರೋಚಕ ಎಂದು ಅವರಿಗನಿಸಿದೆ. ಚಿತ್ರೀಕರಣ ಮುಗಿದ ಬಳಿಕ ಈ ಪ್ರಕ್ರಿಯೆಯ ರೋಚಕತೆಯನ್ನು ‘ಮಿಸ್’ ಮಾಡಿಕೊಳ್ಳುತ್ತಿರುವ ಅನುಭವ ಅವರಿಗಾಗಿದೆ. ಮತ್ತೆ ಆ್ಯಕ್ಷನ್ ಕಟ್ ಹೇಳುವ ದಿನ ಯಾವಾಗ ಬರುವುದೋ ಎಂದು ಕಾಯುವ ತವಕ ಅವರದು.

ಅಪ್ಪಟ ಮನರಂಜನೆ
‘ಈ ಚಿತ್ರದಲ್ಲಿ ಕೊಳಕು ಹಾಸ್ಯ ಸನ್ನಿವೇಶಗಳಿಲ್ಲ, ಕರುಳು ಕಿವುಚುವ ವೇದನೆಗಳಿಲ್ಲ, ಕ್ರೌರ್ಯವಿಲ್ಲ. ಪ್ರೀತಿ ಪ್ರೇಮ ಇಲ್ಲಿ ಎರಡನೆಯ ವಸ್ತು. ಮಾನವೀಯ ಸಂಬಂಧಗಳು, ಜೀವನಪ್ರೀತಿಯ ಮೌಲ್ಯಗಳೇ ಇಲ್ಲಿ ಪ್ರಧಾನ. ಒಂದು ಗುಣಮಟ್ಟದ ಸಂದೇಶ ಸಹಿತ ಪರಿಪೂರ್ಣ ಮನರಂಜನೆ ದಕ್ಕುವುದು ಖಚಿತ’ ಎಂದು ಕವಿರಾಜ್ ಭರವಸೆ ನೀಡುತ್ತಾರೆ. ಅವರ ಪ್ರಕಾರ ಚಿತ್ರದ ನಾಯಕ ಅನಂತ್ನಾಗ್. ಅವರ ಸುತ್ತಲೂ ಉಳಿದ ಪಾತ್ರಗಳು ಸಾಗುತ್ತದೆ. ಜೀವನಕ್ಕೆ ಅತಿ ಹತ್ತಿರವಾದ ಪಾತ್ರವಿದು. ತಪ್ಪು ಮಾಡಿದಾಗ ಗದರುವ, ತಾನೂ ತಪ್ಪು ಮಾಡಿ ಸರಿಪಡಿಸಿಕೊಳ್ಳಲು ಹೆಣಗಾಡುವ ನಮ್ಮ ಜೊತೆಗಿರುವ ಅಪ್ಪನಂತೆ ಅವರು ಕಾಣಿಸಿಕೊಂಡಿದ್ದಾರೆ.

‘ನಾನು ಅನಂತ್ನಾಗ್ ಅವರನ್ನು ಇಷ್ಟಪಟ್ಟಿದ್ದು, ‘ಗಣೇಶ ಸುಬ್ರಹ್ಮಣ್ಯ’, ‘ಗೋಲ್ಮಾಲ್ ರಾಧಾಕೃಷ್ಣ’, ‘ಉಂಡೂಹೋದ ಕೊಂಡೂಹೋದ’ ಮುಂತಾದ ಚಿತ್ರಗಳ ಮೂಲಕ. ಸುಮಾರು 20 ವರ್ಷದ ಬಳಿಕ ಅದೇ ರೀತಿಯ ಅನಂತ್ನಾಗ್ ಇಲ್ಲಿ ಬಂದಿದ್ದಾರೆ. ಅವರಿಗೆ ಆ್ಯಕ್ಷನ್ ಕಟ್ ಹೇಳುವಾಗ ತುಸು ಭಯವಿತ್ತು. ಆದರೆ ಎರಡು ಮೂರು ಸನ್ನಿವೇಶಗಳಲ್ಲೇ, ಮೊದಲ ಸಿನಿಮಾ ಎಂದು ಅನಿಸುತ್ತಿಲ್ಲ. ಚೆನ್ನಾಗಿ ಮಾಡುತ್ತಿದ್ದೀರಿ ಎಂದು ಅವರು ಬೆನ್ನುತಟ್ಟಿದ್ದು ಆತ್ಮವಿಶ್ವಾಸ ಹುಟ್ಟಿಸಿತು’ ಎಂದು ಕವಿರಾಜ್ ಹೇಳುತ್ತಾರೆ.

ನಿರ್ದೇಶನದತ್ತ ಗಮನ
‘ಸುಮಾರು 15 ವರ್ಷಗಳಿಂದ ಸಾಕಷ್ಟು ಹಾಡುಗಳನ್ನು ಬರೆದಿದ್ದೇನೆ. ಚಿತ್ರಸಾಹಿತ್ಯದ ಈಗಿನ ಪರಂಪರೆಯನ್ನು ಗಮನಿಸಿದಾಗ ಕೆಲವೇ ಹೆಸರುಗಳು ನಿಲ್ಲುತ್ತಿವೆ. ಇಲ್ಲಿ ಹೊಸ ನೀರು ಬರಬೇಕಿದೆ. ನಿರ್ದೇಶನದ ಆಸಕ್ತಿಯೂ ಹೆಚ್ಚಿರುವುದರಿಂದ ಹಾಡುಗಳ ಸಂಖ್ಯೆ ಕಡಿಮೆ ಮಾಡಲಿದ್ದೇನೆ. ಸಾಕಷ್ಟು ಕಥೆಗಳಿವೆ. ಅವುಗಳನ್ನು ಬೆಳೆಸುವ ಮತ್ತು ನಿರ್ದೇಶನದ ಹೊಸ ಆಯಾಮಗಳಿಗೆ ತೆರೆದುಕೊಳ್ಳುವ ಗುರಿ ನನ್ನದು’ ಎನ್ನುತ್ತಾರೆ ಕವಿರಾಜ್.

ಚಿತ್ರರಂಗದಲ್ಲಿ ನಡೆಯುತ್ತಿರುವ ಪ್ರಯೋಗಗಳು ಅವರಿಗೆ ಇಷ್ಟವಾಗಿದೆ. ‘ಮದುವೆಯ...’ ಚಿತ್ರ ಕೂಡ ಸಿದ್ಧಸೂತ್ರಗಳನ್ನು ದೂರವಿಡುವ ಒಂದು ಪ್ರಯೋಗ. ಆದರೆ ಪ್ರಯೋಗಾತ್ಮಕ ಚಿತ್ರವಲ್ಲ. ನಿರ್ದೇಶಕನಾಗಿ ಮೊದಲು ಗುರುತಿಸಿಕೊಳ್ಳಲು ಜನಪ್ರಿಯ ಮಾದರಿಯಲ್ಲಿಯೇ ಪ್ರಯೋಗಗಳನ್ನು ಮಾಡಲು ಪ್ರಯತ್ನಿಸುತ್ತೇನೆ. ವಿಭಿನ್ನ ವಸ್ತು, ವಿಶಿಷ್ಟ ನಿರೂಪಣೆಯ ಚಿತ್ರಗಳಿಗೆ ಒಲವು ಇದ್ದೇ ಇದೆ’ ಎನ್ನುತ್ತಾರೆ ಅವರು.

ಶೀರ್ಷಿಕೆಯಲ್ಲಿದೆ ಸಸ್ಪೆನ್ಸ್
‘ಮದುವೆಯ ಮಮತೆಯ ಕರೆಯೋಲೆ’ ಶೀರ್ಷಿಕೆಯಲ್ಲಿಯೇ ನಮ್ಮ ಬದುಕಿಗೆ ಸಂಬಂಧಿಸಿದ ಆಪ್ತತೆ ಇದೆ. ಆದರೆ ಈ ಕರೆಯೋಲೆಯನ್ನು ಯಾರು ಯಾರಿಗೆ ನೀಡುತ್ತಾರೆ ಎನ್ನುವುದು ಪ್ರೇಕ್ಷಕರು ಊಹಿಸಿದಂತೆ ಇರುವುದಿಲ್ಲ. ಅಲ್ಲಲ್ಲಿ ನೀಡುವ ಚಿಕ್ಕ ತಿರುವು ಕಲ್ಪನೆಗಳನ್ನು ಬದಲಿಸುತ್ತದೆ. ಖಡಾಖಂಡಿತವಾಗಿ ಈ ಸಿನಿಮಾ ಒಂದು ಸುಂದರ ಅನುಭವ ನೀಡುವುದರಲ್ಲಿ ಅನುಮಾನವೇ ಬೇಡ’ ಎಂದು ಆತ್ಮವಿಶ್ವಾಸದಿಂದ ನುಡಿಯುತ್ತಾರೆ ಅವರು.

ಅದ್ಭುತ ಕಾಲ
‘ಮದುವೆಯ...’ ಚಿತ್ರಕ್ಕೆ ಅಂದುಕೊಂಡಷ್ಟು ಚಿತ್ರಮಂದಿರಗಳು ಸಿಗುತ್ತಿಲ್ಲ. ‘ಮಾಸ್ಟರ್ಪೀಸ್’, ‘ರಥಾವರ’, ‘ಕಿಲ್ಲಿಂಗ್ ವೀರಪ್ಪನ್’, ‘ಫಸ್ಟ್ ರ್ಯಾಂಕ್ ರಾಜು’ ಮುಂತಾದ ಚಿತ್ರಗಳೇ ಬಹುತೇಕ ಚಿತ್ರಮಂದಿರಗಳನ್ನು ಆವರಿಸಿಕೊಂಡಿದೆ. ಇದನ್ನು ಚಿತ್ರರಂಗದ ಅದ್ಭುತ ಯಶಸ್ಸಿನ ಕಾಲ ಎಂದು ಕವಿರಾಜ್ ಬಣ್ಣಿಸುತ್ತಾರೆ.

ಪರಭಾಷೆಯ ಚಿತ್ರಗಳಿಂದ ನಮಗೆ ಚಿತ್ರಮಂದಿರ ಸಿಗುತ್ತಿಲ್ಲ ಎಂಬ ಹಳಹಳಿಕೆ ಕೇಳುತ್ತಿದ್ದ ಕಿವಿಗಳಿಗೆ, ಕನ್ನಡ ಚಿತ್ರಗಳಿಂದಲೇ ಚಿತ್ರಮಂದಿರ ಸಿಗುತ್ತಿಲ್ಲ ಎಂಬ ಸಂಕಟವೇ ಒಂದು ರೀತಿಯ ಖುಷಿ ನೀಡುತ್ತದೆ. ದಕ್ಷಿಣದ ಇತರೆ ಚಿತ್ರರಂಗಗಳಿಗೆ ಹೋಲಿಸಿದಾಗ ಕಳೆದ ಐದು ವರ್ಷದಲ್ಲಿ ಕನ್ನಡ ಚಿತ್ರರಂಗದಲ್ಲಿ ಯಶಸ್ಸಿನ ಮಟ್ಟ ಹೆಚ್ಚೇ ಇದೆ. ಅದು ಈಗ ಮತ್ತಷ್ಟು ಹೆಚ್ಚಿದೆ. ಎಲ್ಲಾ ಬಗೆಯ ಸಿನಿಮಾಗಳಿಗೂ ಜನರು ಮಾನ್ಯತೆ ನೀಡುತ್ತಿದ್ದಾರೆ ಎಂದು ಅವರು ಸಂತಸ ವ್ಯಕ್ತಪಡಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.