ಕಷ್ಟಗಳ ವಿರುದ್ಧ ಹೋರಾಟ...!

7

ಕಷ್ಟಗಳ ವಿರುದ್ಧ ಹೋರಾಟ...!

Published:
Updated:
ಕಷ್ಟಗಳ ವಿರುದ್ಧ ಹೋರಾಟ...!

ಕೊಲಂಬೊ: ಕಾಡುವ ಕೊರತೆಗಳನ್ನು ಲೆಕ್ಕ ಮಾಡಲಾಗದು. ಅವೇ ಬಾಣ ಮೊನೆ ಚುಚ್ಚಿದಂತಾಗಿ ಮನದ ತುಂಬಾ ನೋವು. ಕಷ್ಟ ಕೋಟಲೆಗಳು ಅದೆಷ್ಟೊಂದು ಎದುರಾಗಿ ಬಂದವು. ಆದರೂ ಹೋರಾಟ ನಿಲ್ಲಲಿಲ್ಲ. ಈಗ ಮಾಡು-ಇಲ್ಲವೆ ಮಡಿ ಎನ್ನುವ ಹಂತದಲ್ಲಿ ಬಂದು ನಿಂತಾಗಿದೆ. ಗೆದ್ದರೆ ವಿಶ್ವಕಪ್ ವಿಜಯದ ಸನಿಹಕ್ಕೆ ಇನ್ನೊಂದು ಅಡಿ ಹತ್ತಿರ. ಸೋತರೆ ಮಹಾ ಬುದ್ಧಿವಂತರಾದ ಇಂಗ್ಲೆಂಡಿನ ಕ್ರಿಕೆಟ್ ಪಂಡಿತರ ಟೀಕೆಗಳ ನಡುವೆ ಸಿಲುಕಿ ತತ್ತರಿಸಬೇಕು.ಇಂಗ್ಲೆಂಡ್ ತಂಡದ ನಾಯಕ ಆ್ಯಂಡ್ರ್ಯೂ ಸ್ಟ್ರಾಸ್ ಮುಂದಿರುವ ವಾಸ್ತವವಿದು. ವಿಶ್ವಕಪ್ ಕ್ರಿಕೆಟ್ ಕ್ವಾರ್ಟರ್ ಫೈನಲ್‌ನಲ್ಲಿ ಶನಿವಾರ ಆತಿಥೇಯ ಶ್ರೀಲಂಕಾ ತಂಡವನ್ನು ಎದುರಿಸಬೇಕು. ಲೀಗ್ ಹಂತದಲ್ಲಿ ಒಂದು ಪಂದ್ಯದಲ್ಲಿ ಮಾಡಿದ ತಪ್ಪನ್ನು ಇನ್ನೊಂದರಲ್ಲಿ ಸರಿದೂಗಿಸಿಕೊಂಡು ಹೋಗಲು ಅವಕಾಶವಿತ್ತು. ಆದರೆ ಮುಂದಿರುವುದು ‘ನಾಕ್‌ಔಟ್’. ಎಡವಿದರೆ ಬೀಳುವುದು ನೇರವಾಗಿ ನಿರಾಸೆಯ ಮಡುವಿನೊಳಗೆ.ಸಿಂಹಳೀಯರ ನಾಡಿನಲ್ಲಿ ಆಡಬೇಕಾದ ಮಹತ್ವದ ಪಂದ್ಯದಲ್ಲಿ ಆತಿಥೇಯರ ಕಡೆಗೇ ತಕ್ಕಡಿಯು ತೂಗುವ ಭಾರ ಹೆಚ್ಚು. ಆದ್ದರಿಂದಲೇ ಇಂಗ್ಲೆಂಡ್ ಗೆಲುವಿನ ಸಾಧ್ಯತೆ ಅಧಿಕವೆಂದು ಹೇಳುವುದಕ್ಕೆ ಕ್ರಿಕೆಟ್ ಪಂಡಿತರಿಗೂ ಅನುಮಾನ. ಇದು ಈಗಿನ ಪರಿಸ್ಥಿತಿ. ಆದರೂ ಇಂಗ್ಲೆಂಡ್ ಬೆಂಬಲಕ್ಕೆ ಇತಿಹಾಸದ ಪುಟಗಳಲ್ಲಿ ಲೆಕ್ಕಾಚಾರವಂತೂ ಇದೆ. ಲಂಕಾ ಎದುರು ಹೆಚ್ಚು ಪಂದ್ಯಗಳನ್ನು ಗೆದ್ದಿರುವ ಅಂಕಿ-ಅಂಶವನ್ನೇ ಪ್ರೇರಣೆಯಾಗಿ ಸ್ವೀಕರಿಸಿ, ಮತ್ತೊಂದು ವಿಜಯ ಪಡೆಯುವ ಕಡೆಗೆ ಮುನ್ನುಗ್ಗಬೇಕು.ಏಕದಿನ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ಹಾಗೂ ಶ್ರೀಲಂಕಾ ಎದುರಾಗಿದ್ದು 44 ಬಾರಿ. ಸೋಲು-ಗೆಲುವಿನ ಆಧಾರದಲ್ಲಿ ತೂಗಿ ನೋಡಿದಾಗ ಇಂಗ್ಲೆಂಡ್ ಪರ ಎರಡು ಹೆಚ್ಚು ಗೆಲುವಿನ ಬಲ. ವಿಜಯದ ಸವಿ 23ರಲ್ಲಿ ಸೋಲಿನ ಕಹಿ 21 ಪಂದ್ಯಗಳಲ್ಲಿ. ಆದರೆ ಇದನ್ನೇ ಉಭಯ ಕ್ರಿಕೆಟ್ ಪಡೆಗಳ ಸಾಮರ್ಥ್ಯ ಅಳೆಯುವ ಮಾನದಂಡವಾಗಿಸಲು ಸಾಧ್ಯವಿಲ್ಲ. ಸದ್ಯದ ಪರಿಸ್ಥಿತಿ ಹಾಗೂ ಈಗ ಎದುರಾಗುವ ಎರಡೂ ತಂಡಗಳ ಆಟಗಾರರ ಸತ್ವ ಹಾಗೂ ಶಕ್ತಿ ಏನೆಂದು ಅರಿಯಬೇಕು. ಅದೇ ಗೆಲುವಿನ ಸಾಧ್ಯತೆಯನ್ನು ನಿರ್ಧರಿಸಲು ಸಹಕಾರಿ ಆಗುವ ಸೂಕ್ತ ಮಾಪನ.ಹಿಂದಿನ ಅಂಕಿ-ಸಂಖ್ಯೆಗಳು ನಿರ್ಣಾಯಕ ಅಲ್ಲ ಎನ್ನುವ ಅರಿವಿದ್ದರೂ, ವಿಶ್ವಕಪ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ತಂಡದವರು ಲಂಕಾ ಎದುರು ಪಡೆದಿರುವ ಯಶಸ್ಸಿನ ಇತಿಹಾಸ ಗಮನ ಸೆಳೆಯುವುದಂತೂ ನಿಜ. ಏಕದಿನ ಕ್ರಿಕೆಟ್‌ನ ಮಹಾಉತ್ಸವದಲ್ಲಿ ಲಂಕಾದವರಿಗಿಂತ ಇಂಗ್ಲೆಂಡ್ ಹೆಚ್ಚುಬಾರಿ ವಿಜಯೋತ್ಸವ ಆಚರಿಸಿದೆ. ವಿಶ್ವಕಪ್ ವೇದಿಕೆಯಲ್ಲಿ ಮುಖಾ-ಮುಖಿ ಆಗಿದ್ದು ಎಂಟು ಬಾರಿ. ಇಂಗ್ಲೆಂಡ್ ಗೆಲುವು ಆರು; ಸೋಲು ಕೇವಲ ಎರಡು. ವಿಶ್ವಕಪ್ ವೇದಿಕೆಯಲ್ಲಿ ಸಿಂಹಳೀಯರನ್ನು ಹೆಚ್ಚು ಸಾರಿ ಸೋಲಿನ ಪ್ರಪಾತಕ್ಕೆ ನೂಕಿರುವ ಇಂಗ್ಲೆಂಡ್ ಈಗಲೂ ಅಷ್ಟೇ ವಿಶ್ವಾಸದಿಂದ ಹೋರಾಡಲು ಸಾಧ್ಯವೇ? ಇದೇ ಕ್ರಿಕೆಟ್ ಪ್ರೇಮಿಗಳ ಮುಂದಿರುವ ಸವಾಲು.ಲೀಗ್ ಹಂತದಲ್ಲಿ ಐರ್ಲೆಂಡ್ ಹಾಗೂ ಬಾಂಗ್ಲಾದೇಶದಂಥ ತಂಡಗಳಿಗೆ ತಲೆಬಾಗಿದ ಆ್ಯಂಡ್ರ್ಯೂ ಸ್ಟ್ರಾಸ್ ನೇತೃತ್ವದ ಪಡೆಯು ಲಂಕಾ ಎದುರು ಗೆಲುವಿನ ಕಡೆಗೆ ನಡೆಯುವುದು ಕಷ್ಟ ಎನ್ನುವುದು ಸ್ಪಷ್ಟ. ಇಂಗ್ಲೆಂಡ್ ತಾನಾಡಿದ ‘ಬಿ’ ಗುಂಪಿನಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾದಂಥ ಬಲಾಢ್ಯ ತಂಡಗಳಿಗೆ ನಿಕಟ ಪೈಪೋಟಿ ನೀಡಿದ್ದರೂ, ಬೌಲಿಂಗ್ ದಾಳಿಯಲ್ಲಿ ಬಲವಾಗಿರುವ ಕುಮಾರ ಸಂಗಕ್ಕಾರ ಬಳಗಕ್ಕೆ ಸೋಲಿನ ಆಘಾತ ನೀಡಲು ಸಮರ್ಥವೆಂದು ಹೇಳಲಾಗದು.ಸ್ಟ್ರಾಸ್ ಬಳಗದವರು ಒತ್ತಡದಲ್ಲಿ ಸಿಲುಕಿ ತೊಳಲಾಡುತ್ತಿದ್ದಾರೆ ಎನ್ನುವುದೂ ನಿಜ. ಅದಕ್ಕೆ ಮೈಕಲ್ ಯಾರ್ಡಿ ಪ್ರಕರಣವೇ ಸಾಕ್ಷಿ. ಅವರು ಒತ್ತಡವನ್ನು ನಿಭಾಯಿಸಲು ಸಾಧ್ಯವಾಗದಂಥ ಮನೋದೌರ್ಬಲ್ಯದಿಂದ ತಂಡವನ್ನು ತೊರೆದರು. ಪ್ರದರ್ಶನದಲ್ಲಿ ಗುಣಮಟ್ಟ ತೋರದ ಕಾರಣ ಅವರನ್ನು ತಂಡದಿಂದ ಕೈಬಿಟ್ಟಿರಬಹುದು ಎಂದು ತೆರೆ ಮರೆಯಲ್ಲಿನ ಕಾರಣವನ್ನು ಕೆಲವರು ಬಹಿರಂಗಗೊಳಿಸಿದ್ದಾರೆ. ಅದು ಏನೇ ಇರಲಿ; ಇಂಗ್ಲೆಂಡ್ ತಂಡದ ಡ್ರೆಸಿಂಗ್ ಕೋಣೆಯಲ್ಲಿನ ವಾತಾವರಣ ಹಿತವಾಗಿಲ್ಲ ಎನ್ನುವುದಂತೂ ಗೋಡೆ ಮೇಲೆ ಬರೆದ ಬರಹದಷ್ಟೇ ದಿಟವಾದದ್ದು.ಆದರೂ ತಂಡದ ಆಟಗಾರರ ಮನದಲ್ಲಿ ವಿಶ್ವಕಪ್ ಗೆಲ್ಲಬೇಕು ಎನ್ನುವ ಆಸೆಯ ಚಿಲುಮೆ ಇನ್ನೂ ಚಿಮ್ಮುತ್ತಿದೆ. ‘ಬಿ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದ ದಕ್ಷಿಣ ಆಫ್ರಿಕಾವನ್ನು ಸೋಲಿಸಿರುವ ತಾವು ಶ್ರೀಲಂಕಾವನ್ನು ಸೋಲಿನ ಪೆಟ್ಟಿಗೆಯಲ್ಲಿ ಸೇರಿಸಿ ಮೊಳೆ ಹೊಡೆಯುವುದು ಕಷ್ಟವೇನಲ್ಲವೆಂದು ಇಂಗ್ಲೆಂಡ್ ಆಟಗಾರರು ಯೋಚಿಸುತ್ತಿದ್ದಾರೆ. ಇಂಥದೊಂದು ಸಕಾರಾತ್ಮಕ ಯೋಚನೆಯೇ ಸ್ಟ್ರಾಸ್ ನಾಯಕತ್ವದ ತಂಡಕ್ಕೆ ಚೈತನ್ಯ ನೀಡಿದೆ. ಗುರುವಾರ ಪಂಚತಾರಾ ಹೋಟೆಲ್‌ನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಇಂಗ್ಲೆಂಡ್‌ನ ಎಲ್ಲ ಆಟಗಾರರು ‘ಪಾಸಿಟೀವ್’ ಯೋಚನೆ ತಮ್ಮದೆಂದು ಒತ್ತಿ ಹೇಳಿದ್ದು ವಿಶೇಷ.ಸಿಂಹಳೀಯರು ತಮ್ಮ ನಾಡಿನಲ್ಲಿ ಆಡುವಾಗ ಭಾರಿ ಅಪಾಯಕಾರಿ ಎನ್ನುವುದನ್ನು ಸ್ಟ್ರಾಸ್ ಕೂಡ ಅಲ್ಲಗಳೆಯಲಿಲ್ಲ. ಆದರೆ ಸೂಕ್ತ ಯೋಚನೆ ಹಾಗೂ ಯೋಜನೆಯೊಂದಿಗೆ ಆಡಿದರೆ ಆರ್.ಪ್ರೇಮದಾಸಾ ಕ್ರೀಡಾಂಗಣದಲ್ಲಿ ಗೆಲುವು ತಮ್ಮದಾಗುತ್ತದೆ ಎಂದರು. ಆಡಿದ ಮಾತಿನಂತೆ ಸರಿಯಾದ ಯೋಚನೆ-ಯೋಜನೆಯೊಂದಿಗೆ ಹೋರಾಡಿ ಇಂಗ್ಲೆಂಡ್ ಗೆದ್ದರೆ ಅದೊಂದು ಅನಿರೀಕ್ಷಿತ ಫಲಿತಾಂಶವೆಂದು ಖಂಡಿತ ಒಪ್ಪಬಹುದು!


ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry