ಸೋಮವಾರ, ಸೆಪ್ಟೆಂಬರ್ 20, 2021
23 °C

ಕಷ್ಟವಾದರೂ ಅಸಾಧ್ಯವಲ್ಲ

ಕೆ.ಓಂಕಾರ ಮೂರ್ತಿ/ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಷ್ಟವಾದರೂ ಅಸಾಧ್ಯವಲ್ಲ

ಬೆಂಗಳೂರು: `ನಾನು ಎರಡು ವರ್ಷಗಳಲ್ಲಿ ಅನುಭವಿಸಿದ ಯಾತನೆ ಅಷ್ಟಿಷ್ಟಲ್ಲ. ಸಾಧನೆಯನ್ನು ಸಂಭ್ರಮಿಸಲೂ ಸಾಧ್ಯವಾಗಿರಲಿಲ್ಲ. ಇದಕ್ಕೆ ಕಾರಣ ನನ್ನ ಜೀವನದಲ್ಲಿ ನಡೆಯಬಾರದು ಕೆಲ ಘಟನೆಗಳು ನಡೆದು ಹೋದವು. ಆದರೆ ಅದನ್ನೆಲ್ಲಾ ಮರೆಯುವ ಕಾಲ ಈಗ ಬಂದಿದೆ. ಒಲಿಂಪಿಕ್ಸ್‌ನಲ್ಲಿ ಸಿಗುವ ಯಶಸ್ಸು ಅದನ್ನು ಮರೆಸುತ್ತದೆ ಎಂಬ ವಿಶ್ವಾಸದಲ್ಲಿ ನಾನಿದ್ದೇನೆ~-ಬ್ಯಾಡ್ಮಿಂಟನ್ ಡಬಲ್ಸ್ ಹಾಗೂ ಮಿಶ್ರ ಡಬಲ್ಸ್ ವಿಭಾಗದಲ್ಲಿ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿರುವ ಭಾರತದ ಮೊದಲ ಆಟಗಾರ್ತಿ ಜ್ವಾಲಾ ಗುಟ್ಟಾ ಅವರ ನೋವಿನ ಮಾತುಗಳಿವು.

28 ವರ್ಷ ವಯಸ್ಸಿನ ಜ್ವಾಲಾ ಈ ಮಾತು ಹೇಳಲು ಕಾರಣವಿದೆ.ಏಕೆಂದರೆ 2011ರಲ್ಲಿ ಪತಿ ಹಾಗೂ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್ ಚೇತನ್ ಆನಂದ್ ಅವರಿಂದ ವಿಚ್ಛೇದನಾ ಪಡೆದ ಕಾರಣ ಏಳು ವರ್ಷಗಳ ದಾಂಪತ್ಯ ಜೀವನಕ್ಕೆ ತೆರೆ ಬಿದ್ದಿತ್ತು. ಆಟದ ವೇಳೆ ಇವರ ನಡುವೆ ಪ್ರೇಮಾಂಕುರವಾಗಿತ್ತು. 2005ರ ಜುಲೈ 17ರಂದು ಆನಂದ್ ಹಾಗೂ ಜ್ವಾಲಾ ವಿವಾಹವಾಗಿದ್ದರು. ಜೊತೆಗೆ ಹಲವು ವಿವಾದಗಳು ಅಂಟಿಕೊಂಡವು.

 

ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಜೊತೆ ಇವರ ಹೆಸರನ್ನು ಥಳಕು ಹಾಕಲಾಗಿತ್ತು. ಆ ವದಂತಿಗಳನ್ನು ಅವರು ಸ್ಪಷ್ಟವಾಗಿ ನಿರಾಕರಿಸಿದ್ದರು ಕೂಡ. ನವದೆಹಲಿಯಲ್ಲಿ ನಡೆದ 2010ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಹಾಗೂ 2011ರ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಡಬಲ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಅವರೀಗ ಒಲಿಂಪಿಕ್ಸ್‌ನಲ್ಲೂ ತಮ್ಮ ಹೆಜ್ಜೆ ಗುರುತು ಮೂಡಿಸುವ ವಿಶ್ವಾಸದಲ್ಲಿದ್ದಾರೆ.

ಲಂಡನ್‌ಗೆ ಹೊರಡಲು ಸಿದ್ಧವಾಗಿ ನಿಂತಿರುವ ಹೈದರಾಬಾದ್‌ನ ಆಟಗಾರ್ತಿ ಜ್ವಾಲಾ `ಪ್ರಜಾವಾಣಿ~ಗೆ ನೀಡಿದ ಸಂದರ್ಶನದಲ್ಲಿ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅವರು ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ಮಾಜಿ ರಾಷ್ಟ್ರೀಯ ಕೋಚ್ ಸೈಯದ್ ಮೊಹಮ್ಮದ್ ಆರಿಫ್ ಮಾರ್ಗದರ್ಶನದಲ್ಲಿ ಲಾಲ್ ಬಹುದ್ದೂರ್ ಒಳಾಂಗಣ ಕ್ರೀಡಾಂಗಣದಲ್ಲಿ ತರಬೇತಿ ನಡೆಸುತ್ತಿದ್ದಾರೆ.* ಸಾಧನೆಗಳ ಜೊತೆಯಲ್ಲಿ ಕೆಲವೊಂದು ಘಟನೆಗಳು/ವಿವಾದಗಳು ನಿಮ್ಮ ಜೀವನದಲ್ಲಿ ಸಂಭವಿಸಿದವು. ಈಗ ನಿಮ್ಮ ಬದುಕು ಹೇಗಿದೆ? ನಿಜ, ನನ್ನ ಜೀವನದಲ್ಲಿ ಕೆಲವೊಂದು ಕೆಟ್ಟ ಘಟನೆಗಳು ನಡೆದಿವೆ. ತುಂಬಾ ನೋವಿಗೆ ಕಾರಣವಾಗಿವೆ. ಆದರೆ ಅವನ್ನೆಲ್ಲಾ ಈಗ ಮರೆತಿದ್ದೇನೆ. ಆ ಘಟನೆಗಳನ್ನು ನೆನಪಿಸಿಕೊಳ್ಳಲು ನನ್ನ ಪ್ರೀತಿಯ ಬ್ಯಾಡ್ಮಿಂಟನ್ ಆಟ ಅವಕಾಶ ನೀಡುವುದಿಲ್ಲ. ಜೊತೆಗೆ ದುಃಖ ಹಂಚಿಕೊಳ್ಳಲು ಹಾಗೂ ಬೇಸರವಾದಾಗ ಹೆಗಲು ಕೊಡಲು ಪೋಷಕರಿದ್ದಾರೆ. ಅದು ಎಲ್ಲವನ್ನೂ ಮರೆಸಿಬಿಡುತ್ತದೆ.* ಒಲಿಂಪಿಕ್ಸ್‌ನ ಸಿದ್ಧತೆ ಯಾವ ಹಂತಕ್ಕೆ ಬಂದಿದೆ?

ನನ್ನ ಬಾಲ್ಯದ ಕೋಚ್ ಮೊಹಮ್ಮದ್ ಆರಿಫ್ ಹಾಗೂ ಇಂಡೊನೇಷ್ಯಾ ಕೋಚ್ ಎಡ್ವಿನ್ ಇರಿಯವಾನ್ ಮಾರ್ಗದರ್ಶನದಲ್ಲಿ ತರಬೇತಿ ಸಾಗಿದೆ. ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ ಹಾಗೂ ಮಿಶ್ರ ಡಬಲ್ಸ್‌ನಲ್ಲಿ ವಿ.ದಿಜು ಜೊತೆಗೂಡಿ ಕಠಿಣ ಅಭ್ಯಾಸ ನಡೆಸುತ್ತಿದ್ದೇನೆ. ಲಂಡನ್‌ಗೆ ಬೇಗ ತೆರಳಿ ಅಲ್ಲಿಯೂ ಕೆಲದಿನ ಅಭ್ಯಾಸ ನಡೆಸಬೇಕು.* `ಮನೆಯಲ್ಲಿ ಜ್ವಾಲಾ ಇಲ್ಲವೆಂದರೆ, ಲಾಲ್ ಬಹಾದ್ದೂರ್ ಶಾಸ್ತ್ರಿ ಕ್ರೀಡಾಂಗಣದಲ್ಲಿ ಖಂಡಿತ ಸಿಗುತ್ತಾರೆ~ ಎಂಬ ಮಾತಿದೆ. ನಿಜವೇ?

ಖಂಡಿತ, ಲಾಲ್ ಬಹಾದ್ದೂರ್ ಶಾಸ್ತ್ರಿ ಕ್ರೀಡಾಂಗಣ ನನಗೆ ಎರಡನೇ ಮನೆ ಇದ್ದಂತೆ. ನನ್ನ ಬ್ಯಾಡ್ಮಿಂಟನ್ ಜೀವನ ಶುರುವಾಗಿದ್ದು ಇಲ್ಲಿಯೇ. ಕೆಲ ದಿನಗಳ ಹಿಂದೆಯಷ್ಟೇ ನನ್ನ ಹಣದಲ್ಲಿ ಇಲ್ಲೊಂದು ಜಿಮ್ ಸಾಧನಗಳನ್ನು ತಂದಿರಿಸಿದ್ದೇನೆ. ನನಗೆ ಹಾಗೂ ನನ್ನ ಸಹಪಾಠಿಗಳಿಗೆ ಇದರಿಂದ ನೆರವಾಗುತ್ತಿದೆ. ನಾನು ಚಾಂಪಿಯನ್ ಆಗಿ ಹೊರಹೊಮ್ಮಲು ಕಾರಣವಾದ ಕ್ರೀಡಾಂಗಣವಿದು.* ಈ ಹಂತ  ತಲುಪುವ ಭರವಸೆ ಬಂದಿದ್ದು ಯಾವಾಗ?

ಜೂನಿಯರ್ ಆಟಗಾರ್ತಿಯಾಗಿದ್ದಾಗ ಅಪರ್ಣಾ ಪೋಪಟ್ ಅವರನ್ನು ಸೋಲಿಸಬೇಕು ಎಂಬುದು ನನ್ನ ಕನಸಾಗಿತ್ತು. ಆದರೆ ನಾನೀಗ ಒಲಿಂಪಿಕ್ಸ್‌ನಲ್ಲಿ ಆಡಲು ಅರ್ಹತೆ ಪಡೆದಿದ್ದೇನೆ. ಅದರಲ್ಲೂ ಎರಡು ವಿಭಾಗಗಳಲ್ಲಿ ಸ್ಪರ್ಧಿಸುತ್ತಿದ್ದೇನೆ. ಮೂರು ವರ್ಷಗಳ ಹಿಂದೆ ಇದನ್ನು ಊಹಿಸಿಕೊಳ್ಳಲೂ ಕಷ್ಟವಿತ್ತು. ನನ್ನ ಜೀವನದಲ್ಲಿ ಸಂಭವಿಸಿದ ಕೆಲವೊಂದು ಘಟನೆಗಳು ಒಳ್ಳೆಯದನ್ನೇ ಮಾಡಿವೆ ಅನಿಸುತ್ತದೆ.

ಬಾಲ್ಯದ ಕೋಚ್ ಕುರಿತು...

ಜ್ವಾಲಾ ಗುಟ್ಟಾ ಎಂದು ಜನ ಇವತ್ತು ನನ್ನನ್ನು ಗುರುತಿಸಿದರೆ ಇದಕ್ಕೆ ಕಾರಣ ಬಾಲ್ಯದ ಕೋಚ್ ಆರಿಫ್ ಸರ್. ನಾನು ಮಾತ್ರವಲ್ಲ; ಹಲವು ಶ್ರೇಷ್ಠ ಬ್ಯಾಡ್ಮಿಂಟನ್ ಆಟಗಾರರು ಇಂದು ಹೆಸರು ಮಾಡಲು ಕಾರಣ ಆರಿಫ್ ಸರ್. ಅವರಂಥ ಕೋಚ್‌ಗಳಿದ್ದರೆ ಪ್ರತಿ ಕ್ರೀಡೆಯಲ್ಲೂ ಒಬ್ಬ ಜ್ವಾಲಾ ಅವರನ್ನು ಕಾಣಲು ಸಾಧ್ಯ.

ವಿಶ್ವಚಾಂಪಿಯನ್‌ಷಿಪ್...ಒಲಿಂಪಿಕ್ಸ್...

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ತುಂಬಾ ಮಂದಿ ಸ್ಪರ್ಧಿಗಳಿರುತ್ತಾರೆ. ಆದರೆ ಒಲಿಂಪಿಕ್ಸ್‌ನಲ್ಲಿ 16 ಮಂದಿ ಮಾತ್ರ ಪಾಲ್ಗೊಳ್ಳುತ್ತಾರೆ. ಹಾಗಾಗಿ ಇಲ್ಲಿ ಕಠಿಣ ಸ್ಪರ್ಧೆ ಇರುತ್ತದೆ. ಒಂದು ಖುಷಿಯ ವಿಚಾರವೆಂದರೆ ಎರಡು ಪಂದ್ಯ ಗೆದ್ದರೆ ಕ್ವಾರ್ಟರ್ ಫೈನಲ್ ತಲುಪಬಹುದು. ಹಾಗಾಗಿ ಉತ್ತಮ ಪ್ರದರ್ಶನ ತೋರುತ್ತೇವೆ ಎಂಬ ಭರವಸೆ ನೀಡಬಲ್ಲೆ.

* ಪದಕದ ನಿರೀಕ್ಷೆಯ ಒತ್ತಡವಿದೆಯೇ?

ಇಡೀ ದೇಶ ನಮ್ಮ ಮೇಲೆ ನಿರೀಕ್ಷೆ ಭಾರವಿಟ್ಟಿದೆ. ಆದರೆ ಪ್ರತಿ ಟೂರ್ನಿಗೆ ತೆರಳುವಾಗ ಇಂತಹ ಒತ್ತಡ ಸಹಜ. ಅದು ನನಗೆ ಅಭ್ಯಾಸವಾಗಿ ಹೋಗಿದೆ. ಆದರೆ ನನಗೆ ಸೋಲಿನ ಭಯ ಯಾವತ್ತೂ ಕಾಡುವುದಿಲ್ಲ. ಎಲ್ಲರಿಗೂ ಗೊತ್ತಿರುವಂತೆ ಕ್ರೀಡೆಯಲ್ಲಿ ಸೋಲು ಹಾಗೂ ಗೆಲುವು ಸಹಜ. ಸೋಲು ಎದುರಾಗುತ್ತೆ ಎಂದು ಭಯ ಹಾಗೂ ಒತ್ತಡಕ್ಕೆ ಒಳಗಾಗುವ ವ್ಯಕ್ತಿ ನಾನಲ್ಲ.* ನಿಮ್ಮ ಜೊತೆಗಾರ್ತಿ ಅಶ್ವಿನಿ ಪೊನ್ನಪ್ಪ ಹಾಗೂ ವಿ.ದಿಜು ಬಗ್ಗೆ ಹೇಳಿ?

ಅಶ್ವಿನಿ ಹಾಗೂ ದಿಜು ಇಬ್ಬರೂ ಚಾಂಪಿಯನ್ ಆಟಗಾರರು. ಅಂತರರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಸಹಿಸಿಕೊಂಡು ಆಡುವ ತಾಕತ್ತು ಅವರಿಗಿದೆ. ಅಶ್ವಿನಿ ಇನ್ನೂ ಚಿಕ್ಕ ವಯಸ್ಸಿನ ಹುಡುಗಿ. ಆದರೆ ಅವರು ಕಠಿಣ ಶ್ರಮ ಹಾಕಿ ಅಭ್ಯಾಸ ನಡೆಸುವ ರೀತಿ ಮೆಚ್ಚುವಂಥದ್ದು.

`ಸ್ನೇಹಿತರೊಂದಿಗೆ ಪಾರ್ಟಿ ಹಾಗೂ ಸಿನಿಮಾಕ್ಕೆ ಹೋಗುತ್ತೇನೆ. ಗ್ಲಾಮರ್ ಲೋಕವೆಂದರೆ ನನಗಿಷ್ಟ~

 -ಜ್ವಾಲಾ ಗುಟ್ಟಾ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.