ಬುಧವಾರ, ಮೇ 18, 2022
21 °C

ಕಾಂಗ್ರೆಸ್‌ಗೆ ಕಾಂಗ್ರೆಸ್ಸಿಗರೆ ಸವಾಲು

ಕೆ.ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

ಕೋಲಾರ: ಬಂಗಾರಪೇಟೆ ವಿಧಾನಸಭೆ ಉಪಚುನಾವಣೆ ಒಳಗೆ ಹೊಗೆಯೂ ಹೆಚ್ಚು; ಹೊರಗೆ ಬಿಸಿಲೂ ಹೆಚ್ಚು ಎಂಬ ಸನ್ನಿವೇಶವನ್ನು ಕಾಂಗ್ರೆಸ್ ಮುಂದೆ ನಿರ್ಮಿಸಿದೆ. ಒಳಗಿನ ಹೊಗೆಗಿಂತ ಹೊರಗಿನ ಬಿಸಿಲೇ ಮೇಲು ಎನ್ನುವಂತೆಯೂ ಇಲ್ಲ! ಒಳಗೂ- ಹೊರಗೂ ಕಾಂಗ್ರೆಸ್‌ಗೆ ಕಾಂಗ್ರೆಸ್ಸಿಗರಿಂದಲೇ ಸ್ಪರ್ಧೆ ಎದುರಾಗಿರುವುದು ವಿಶೇಷ. ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಎಂ.ನಾರಾಯಣಸ್ವಾಮಿ ಕಾಂಗ್ರೆಸ್‌ನಲ್ಲಿದ್ದವರು. ಇದೀಗ ನಂಬಲರ್ಹ ಮೂಲಗಳಿಂದ ತಿಳಿದುಬಂದಿರುವಂತೆ, ಜೆಡಿಎಸ್‌ನಿಂದ ಟಿಕೆಟ್ ಪಡೆಯಲಿರುವ, ಮಾಜಿ ಶಾಸಕ ಸಿ.ವೆಂಕಟೇಶಪ್ಪ ಕಾಂಗ್ರೆಸ್ ಟಿಕೆಟ್‌ಗಾಗಿ ಕೊನೆ ಕ್ಷಣದವರೆಗೂ ಪ್ರಯತ್ನಿಸಿದವರು.ಸೋಮವಾರ ಅವರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದಾಗಿದೆ. ಹೀಗಾಗಿ ಚುನಾವಣೆಯಲ್ಲಿ ಕಾಂಗ್ರೆಸ್, ತನ್ನ ಮನೆಯೊಳಗಿದ್ದ ಸದಸ್ಯರ ಪ್ರತಿರೋಧವನ್ನೆ ಹೊರಗಿನಿಂದ ಎದುರಿಸಬೇಕಾಗಿದೆ. ಈ ಬಗೆಯಲ್ಲಿ ಚುನಾವಣೆಯು ಕಾಂಗ್ರೆಸ್‌ಗೆ ಪ್ರತಿಷ್ಠೆ ಉಳಿಸಿಕೊಳ್ಳುವ ಸವಾಲನ್ನೂ ಸೃಷ್ಟಿಸಿದೆ. ಬಿಜೆಪಿಯನ್ನು ಸೇರಿದ ಸಂದರ್ಭದಲ್ಲಿ ಎಂ.ನಾರಾಯಣಸ್ವಾಮಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಕಾರ್ಯವೈಖರಿ ವಿರುದ್ಧ ಕಿಡಿ ಕಾರಿದ್ದರು. ಪಕ್ಷದಲ್ಲಿ ಉಸಿರುಗಟ್ಟಿಸುವ ವಾತಾವರಣವಿದೆ ಎಂದು ಆರೋಪಿಸಿದ್ದರು.ಅವರು ಜನತಾದಳ ಪರಿವಾರ ತೊರೆದು ಕಾಂಗ್ರೆಸ್ ಸೇರಿ ಶಾಸಕರಾಗಿದ್ದರು. ಇದೀಗ ಜೆಡಿಎಸ್‌ಗೆ ಸೇರಿರುವ ಸಿ.ವೆಂಕಟೇಶಪ್ಪ ಹಳೇ ಕಾಂಗ್ರೆಸ್ಸಿಗರು. ಮೂರು ಬಾರಿ ಕಾಂಗ್ರೆಸ್‌ನಿಂದಲೇ ವಿಧಾನಸಭೆಗೆ ಆಯ್ಕೆಯಾಗಿದ್ದವರು. ಈಗ ಅವರೂ ಕೆ.ಎಚ್.ಮುನಿಯಪ್ಪ ವಿರುದ್ಧ ಸೆಟೆದು ನಿಂತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಸಿರುವ ಉದ್ಯಮಿ ಕೆ.ಎಂ.ನಾರಾಯಣಸ್ವಾಮಿ ಅವರಿಗೂ ಈ ಸನ್ನಿವೇಶ ಗಂಭೀರ ಸ್ಪರ್ಧೆಯನ್ನೆ ಒಡ್ಡಲಿದೆ. ಅವರೂ, ತಮ್ಮ ಹಳೆಯ ಕಾಂಗ್ರೆಸ್ ಬಂಧುಗಳ ವಿರುದ್ಧವೇ ಸೆಣೆಸಾಡಬೇಕಾಗಿದೆ.ಒಮ್ಮೆ ತಪ್ಪಿದ ಅವಕಾಶ ಈಗ ಕೆ.ಎಂ.ನಾರಾಯಣಸ್ವಾಮಿ ಅವರ ‘ಕೈ’ಗೆ ದೊರಕಿದೆ. 2008ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಎಂ.ನಾರಾಯಣಸ್ವಾಮಿ ಅವರಿಗೆ ದಕ್ಕಿದ್ದ ಕಾಂಗ್ರೆಸ್ ಟಿಕೆಟ್ ಈ ಬಾರಿಯ ಉಪಚುನಾವಣೆ ವೇಳೆ ಕೆ.ಎಂ.ನಾರಾಯಣಸ್ವಾಮಿ ಕೈಯಲ್ಲಿದೆ. ವಿಪರ್ಯಾಸವೆಂದರೆ, ಅಂದು ಟಿಕೆಟ್ ಗಿಟ್ಟಿಸಿದ್ದ ಎಂ.ನಾರಾಯಣಸ್ವಾಮಿ ಅವರೇ ಈಗ ಇಲ್ಲಿ ಬಿಜೆಪಿ ಅಭ್ಯರ್ಥಿ.ಟಿಕೆಟ್ ಕೆ.ಎಂ.ನಾರಾಯಣಸ್ವಾಮಿಗೆ ಲಭ್ಯವಾಗುತ್ತಿದ್ದಂತೆಯೇ, ಕಾಂಗ್ರೆಸ್‌ನಲ್ಲಿದ್ದ ಸಿ.ವೆಂಕಟೇಶಪ್ಪ ಜೆಡಿಎಸ್ ಪಾಳೆಯಕ್ಕೆ ಜಿಗಿದಿದ್ದಾರೆ. ತಮಗೆ ಟಿಕೆಟ್ ದೊರಕುವುದಿಲ್ಲ ಎಂಬ ಸೂಚನೆಗಳು ಕಾಣಿಸುತ್ತಿದ್ದಂತೆಯೇ ಅವರು, ಕೆಲವು ದಿನಗಳ ಹಿಂದೆ ಜೆಡಿಎಸ್ ಮುಖಂಡ, ಮಾಜಿ ಸಚಿವ ಕೆ.ಶ್ರೀನಿವಾಸಗೌಡರನ್ನು ಭೇಟಿ ಮಾಡಿ ಟಿಕೆಟ್‌ಗಾಗಿ ಮನವಿ ಸಲ್ಲಿಸಿದ್ದರು.ಸಿ.ವೆಂಕಟೇಶಪ್ಪ ಹೆಸರನ್ನು ಮಂಗಳವಾರ ಬಂಗಾರಪೇಟೆಯಲ್ಲಿ ನಡೆಯಲಿರುವ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅಥವಾ ಅವರ ಪತ್ನಿ, ಶಾಸಕಿ ಅನಿತಾ ಘೋಷಿಸಲಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.ಹೀಗಾಗಿ ಈ ಬಾರಿಯ ಉಪಚುನಾವಣೆ ಕಾಂಗ್ರೆಸ್ಸಿಗರಾಗಿದ್ದವರ ನಡುವಿನ ಸ್ಪರ್ಧೆಯಾಗಿಯೂ ಗಮನ ಸೆಳೆಯಲಿದೆ. ಮುಂದುವರಿದ ಸೇಡು: ರಾಜಕೀಯವಾಗಿ ಕೆ.ಎಚ್.ಮುನಿಯಪ್ಪ ವಿರುದ್ಧ ಕತ್ತಿ ಮಸೆಯುತ್ತಿರುವ ಮಾಜಿ ಸಚಿವ ಕೆ.ಶ್ರೀನಿವಾಸಗೌಡ ತಮ್ಮ ನಿಲುವನ್ನು ಈ ಚುನಾವಣೆಯಲ್ಲೂ ಮುಂದುವರಿಸಿದ್ದಾರೆ. ಅದರ ಪ್ರಯತ್ನದ ಫಲವಾಗಿಯೇ, ಮುನಿಯಪ್ಪ ವಿರುದ್ಧ ಸಿಟ್ಟುಗೊಂಡಿರುವ ಸಿ.ವೆಂಕಟೇಶಪ್ಪ ಅವರನ್ನು ಜೆಡಿಎಸ್ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ ಎಂಬ ಮಾತುಗಳೂ ಕೇಳಿಬಂದಿವೆ.ಕಾಂಗ್ರೆಸ್ ಸದಸ್ಯರಾಗಿದ್ದ ಇಬ್ಬರನ್ನು ಚುನಾವಣೆ ಕಣದಲ್ಲಿ ಎದುರಿಸುವುದರ ಜೊತೆಗೆ ಶ್ರೀನಿವಾಸಗೌಡರ ತಂತ್ರಗಳನ್ನು ಎದುರಿಸಿ ಕ್ಷೇತ್ರ ಮತ್ತು ಪ್ರತಿಷ್ಠೆ ಉಳಿಸಿಕೊಳ್ಳಬೇಕಾದ ಸವಾಲು ಕಾಂಗ್ರೆಸ್ ಮತ್ತು ಸಚಿವ ಕೆ.ಎಚ್.ಮುನಿಯಪ್ಪ ಮುಂದೆ ನಿರ್ಮಾಣವಾಗಿದೆ. ಟಿಕೆಟ್ ಆಕಾಂಕ್ಷಿಗಳಾಗಿದ್ದು ನಿರಾಶೆಗೊಂಡವರ ಅಸಮಾಧಾನ ಪಕ್ಷಕ್ಕೆ ಪೆಟ್ಟು ನೀಡದಂತೆ ನಿಭಾಯಿಸುವ ಜವಾಬ್ದಾರಿಯೂ ಹೆಗಲೇರಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.