ಮಂಗಳವಾರ, ಮೇ 11, 2021
26 °C

ಕಾಟಾಚಾರದ ಕಲಾ ಪ್ರತಿಭೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಅದು ಜಿಲ್ಲಾ ಮಟ್ಟದ ಕಲಾ ಪ್ರತಿಭೋತ್ಸವ. ಅಲ್ಲಿ ಒಂದು ವೇದಿಕೆಯಾಗಲಿ, ಪಾಲ್ಗೊಳ್ಳುವ ಪ್ರತಿಭೆಗಳಿಗಾಗಿ ದೊಡ್ಡ ಸಭಾಂಗಣವಾಗಲಿ ಇರಲಿಲ್ಲ. ಕೇವಲ ತರಗತಿಯ ಕೊಠಡಿಯೊಂದರಲ್ಲಿಯೇ ಎಲ್ಲ ಕಲೆಗಳ ಪ್ರದರ್ಶನ ಆಗಬೇಕು. ಜಿಲ್ಲಾ ಮಟ್ಟದ ಕಲಾ ಪ್ರತಿಭೋತ್ಸವವಾದರೂ, ಪಾಲ್ಗೊಂಡವರು ಮಾತ್ರ ಬೆರಳೆಣಿಕೆಯಷ್ಟು ಸ್ಪರ್ಧಾಳುಗಳು.ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎರಡು ದಿನ ನಡೆದ ಜಿಲ್ಲಾ ಮಟ್ಟದ ಕಲಾಪ್ರತಿಭೋತ್ಸವ ಕಾಟಾಚಾರದ ಕಾರ್ಯಕ್ರಮವಾಗಿ ಪರಿವರ್ತನೆ ಆಗಿದ್ದು, ಪಾಲಕರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.ಬಾಲ ಪ್ರತಿಭೆ, ಕಿಶೋರ ಪ್ರತಿಭೆ, ಯುವ ಪ್ರತಿಭೆ ಸೇರಿದಂತೆ ವಿವಿಧ ವಿಭಾಗಗಳಲ್ಲಿ 19 ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಆದರೆ ಅದರಲ್ಲಿ ಪ್ರಮುಖವಾಗಿ ಬಾಲ ಪ್ರತಿಭೆ ಹಾಗೂ ಕಿಶೋರ ಪ್ರತಿಭೆ ವಿಭಾಗದ ಹಿಂದುಸ್ತಾನಿ ಶಾಸ್ತ್ರೀಯ ಹಾಡುಗಾರಿಕೆ, ಏಕಪಾತ್ರಾಭಿನಯ, ಯುವ ಪ್ರತಿಭೆ ವಿಭಾಗದ ಶಾಸ್ತ್ರೀಯ ನೃತ್ಯ, ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಡುಗಾರಿಕೆ, ಜನಪದ ನೃತ್ಯ ಸ್ಪರ್ಧೆಗಳಿಗೆ ಸ್ಪರ್ಧಾಳುಗಳೇ ಬಂದಿಲ್ಲ!ಇದು ಸೋಜಿಗವಾದರೂ ಸತ್ಯ ಸಂಗತಿ. ಜಿಲ್ಲೆಯಲ್ಲಿರುವ ಪ್ರತಿಭೆಯನ್ನು ಗುರುತಿಸಿ, ನಾಡಿಗೆ ಪರಿಚಯಿಸುವ ಕೆಲಸ ಮಾಡಬೇಕಾಗಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಬಹಳಷ್ಟು ಪ್ರತಿಭೆಗಳು ಅವಕಾಶದಿಂದ ವಂಚಿತರಾದಂತಾಗಿದೆ. ಸಮರ್ಪಕ ಮಾಹಿತಿ ನೀಡದೇ ಇರುವುದರಿಂದ ಬಹಳಷ್ಟು ಯುವಕರು, ಮಕ್ಕಳು, ಸ್ಪರ್ಧೆಯ ನಡೆಯುವ ಬಗ್ಗೆ ತಿಳಿದೇ ಇಲ್ಲ ಎಂದು ಹೇಳುವಂತಾಗಿದೆ. ಜಿಲ್ಲಾ ಮಟ್ಟದ ಕಲಾಪ್ರತಿಭೋತ್ಸವ ಇದಾಗಿದ್ದರೂ, ಸಾಕಷ್ಟು ಮುಂಚಿತವಾಗಿಯೇ ಈ ಬಗ್ಗೆ ಸೂಚನೆಯನ್ನೂ ನೀಡಿಲ್ಲ ಎಂದು ವಿದ್ಯಾರ್ಥಿಗಳು ದೂರುತ್ತಿದ್ದಾರೆ.ಸೆ. 10ರಂದು ಹೆಸರು ನೋಂದಾಯಿಸಲು ಅಂತಿಮ ದಿನವಾಗಿತ್ತು. ಆದರೆ ಪತ್ರಿಕೆಗಳಲ್ಲಿ ವಿಷಯ ಪ್ರಕಟವಾಗಿದ್ದು ಸೆ. 8 ಹಾಗೂ 9ರಂದು. ಹೀಗಾಗಿ ದೂರದ ಊರುಗಳ ಅಭ್ಯರ್ಥಿಗಳು ಸ್ಪರ್ಧೆಯಲ್ಲಿ ಹೆಸರು ನೋಂದಾಯಿಸಲು ಪರದಾಡಬೇಕಾಯಿತು ಎಂದು ಹೆಸರು ಹೇಳಲು ಇಚ್ಛಿಸದ ಪಾಲಕರೊಬ್ಬರು ತಮ್ಮ ಅಳಲು ತೋಡಿಕೊಂಡರು.ಸುಮಾರು 19 ಸ್ಪರ್ಧೆಗಳನ್ನು ಏರ್ಪಡಿಸಿದ್ದರೂ, ಪಾಲ್ಗೊಂಡಿರುವ ಸ್ಪರ್ಧಾಳುಗಳ ಸಂಖ್ಯೆ 100 ರಷ್ಟು. ಇದರಿಂದಾಗಿ ಪ್ರತಿಯೊಂದು ಸ್ಪರ್ಧೆಯಲ್ಲೂ ಕೇವಲ ಐದು ಸ್ಪರ್ಧಿಗಳು ಮಾತ್ರ ಪಾಲ್ಗೊಂಡಿದ್ದರು. ಜಿಲ್ಲೆಯಲ್ಲಿರುವ ಪ್ರತಿಭೆಗಳಿಗೆ ಅವಕಾಶ ಸಿಗುತ್ತಿಲ್ಲ ಎಂಬ ಕೊರಗು ಒಂದೆಡೆಯಾಗಿದ್ದರೆ, ಇನ್ನೊಂದೆಡೆ ಸರ್ಕಾರ ಒದಗಿಸುವ ಅವಕಾಶಗಳು ಈ ರೀತಿ ವ್ಯರ್ಥವಾಗಿ ಹೋಗುತ್ತಿರುವುದು ಬೇಸರ ಮೂಡಿಸುತ್ತಿದೆ.ತರಾತುರಿ ಕಾರ್ಯಕ್ರಮ: ಜಿಲ್ಲಾ ಮಟ್ಟದ ಕಲಾ ಪ್ರತಿಭೋತ್ಸವದಲ್ಲಿನ ಅವ್ಯವಸ್ಥೆಯ ಬಗ್ಗೆ ವಿಚಾರಿಸಿದರೆ, ಇದೊಂದು ತರಾತುರಿಯ ಕಾರ್ಯಕ್ರಮ ಎಂಬುದು ಸ್ಪಷ್ಟವಾಗುತ್ತದೆ. ಅಧಿಕಾರಿಗಳೇ ಹೇಳುವ ಪ್ರಕಾರ ವಿಭಾಗ ಮಟ್ಟದ ಕಲಾ ಪ್ರತಿಭೋತ್ಸವ ಸೆ. 17 ಹಾಗೂ 18ರಂದು ರಾಯಚೂರಿನಲ್ಲಿ ನಡೆಯಲಿದೆ.ಅದಕ್ಕಾಗಿಯೇ ಆದಷ್ಟು ಬೇಗನೆ ಜಿಲ್ಲಾ ಮಟ್ಟದ ಕಲಾಪ್ರತಿಭೋತ್ಸವ ಮುಗಿಸುವ ತರಾತುರಿಯನ್ನು ಅಧಿಕಾರಿಗಳು ತೋರಿಸುತ್ತಿರುವುದು ಸ್ಪಷ್ಟವಾಗುತ್ತದೆ ಎಂದು ವಿದ್ಯಾರ್ಥಿಗಳು ಆರೋಪಿಸುತ್ತಿದ್ದಾರೆ.ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ಪ್ರತಿಭೆಗಳ ಹೆಸರನ್ನು ಎರಡು ದಿನದಲ್ಲಿ ವಿಭಾಗ ಮಟ್ಟದ ಸ್ಪರ್ಧೆಗೆ ಕಳುಹಿಸಬೇಕಾಗಿದೆ. ಇದಕ್ಕಾಗಿಯೇ ಸ್ಪರ್ಧಿಗಳು ಬರಲಿ, ಬರದೇ ಇರಲಿ ಇದ್ದಷ್ಟು ಮಕ್ಕಳಿಗೆ ಸ್ಪರ್ಧೆಗಳನ್ನು ಏರ್ಪಡಿಸಿ ಕೈತೊಳೆದುಕೊಳ್ಳಲಾಗಿದೆ ಎಂಬ ದೂರುಗಳು ಕೇಳಿ ಬರುತ್ತಿವೆ. ಖಂಡನೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಜಿಲ್ಲೆಯಲ್ಲಿರುವ ಪ್ರತಿಭೆಗಳು ಅವಕಾಶ ಸಿಗದೇ ಸೊರಗುವಂತಾಗಿದೆ. ಎರಡು ದಿನ ಜಿಲ್ಲಾ ಮಟ್ಟದ ಕಲಾ ಪ್ರತಿಭೋತ್ಸವವನ್ನು ನಡೆಸಲಾಗಿದ್ದು, ಅದು ಕೇವಲ ಕಾಟಾಚಾರಕ್ಕೆ ಎಂಬಂತಾಗಿದೆ. ಇಲಾಖೆಯ ಈ ರೀತಿಯ ವರ್ತನೆ ಖಂಡನೀಯ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಎನ್. ಭೀಮುನಾಯಕ, ಕರವೇ ವಿದ್ಯಾರ್ಥಿ ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷ ಕರಬಸಪ್ಪ ಬಿರಾಳ ತಿಳಿಸಿದ್ದಾರೆ.ಅವಕಾಶಗಳೇ ಸಿಗುತ್ತಿಲ್ಲ ಎಂಬ ನೋವು ಈ ಭಾಗದ ಮಕ್ಕಳದ್ದು. ಸರ್ಕಾರವೇ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸಲು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಆದರೆ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇರುವ ಅವಕಾಶವೂ ಜಿಲ್ಲೆಯ ಮಕ್ಕಳಿಗೆ ತಪ್ಪಿ ಹೋಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.