ಭಾನುವಾರ, ಜೂನ್ 13, 2021
25 °C

ಕಾಡಾನೆ ಸ್ಥಳಾಂತರಿಸಿ-ನಿರ್ಭೀತಿಯಿಂದ ಬದುಕಲು ಬಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಕಲೇಶಪುರ: `ಕಾಡಾನೆಗಳನ್ನು ಸ್ಥಳಾಂತರ ಮಾಡಿ ನಿರ್ಭೀತಿಯಿಂದ ಬದುಕಲು ಅವಕಾಶ ಮಾಡಿಕೊಡಿ~ ಎಂದು ಪ್ರಗತಿಪರ ರೈತ ಕೊತ್ನಹಳ್ಳಿ ತಮ್ಮಣ್ಣಗೌಡ ಕಾಡಾನೆ ಸಮಸ್ಯೆ ಅರಿಯಲು ಬಂದಿದ್ದ ಟಾಸ್ಕ್ ಪೋರ್ಸ್ ಸಮಿತಿ ಸದಸ್ಯರಲ್ಲಿ ಮನವಿ ಮಾಡಿದರು.ಕಾಡಾನೆ ಸಮಸ್ಯೆಗಳಿಂದ ರೈತರ ಬೆಳೆ, ಆಸ್ತಿ ಹಾಗೂ ಪ್ರಾಣ ಹಾನಿ ಬಗ್ಗೆ  ಪರಿಶೀಲನೆ ನಡೆಸಲು ಟಾಸ್ಕ್ ಫೋರ್ಸ್ (ಕಾಡಾನೆ ಕಾರ್ಯಪಡೆ ಸಮಿತಿ) ಸದಸ್ಯರು ಚಿಕ್ಕಲ್ಲೂರು ಗ್ರಾಮಕ್ಕೆ ಮಂಗಳವಾರ ಭೇಟಿ ನೀಡಿದ್ದರು.ದಶಕದಿಂದ ಕಾಡಿನಲ್ಲಿ ಇರಬೇಕಾದ ಸುಮಾರು 32 ಕಾಡಾನೆಗಳು ಯಸಳೂರು ಹಾಗೂ ಹೆತ್ತೂರು ಹೋಬಳಿ ವ್ಯಾಪ್ತಿಯ ಗ್ರಾಮಗಳ ರೈತರ ಜಮೀನುಗಳಲ್ಲಿಯೇ ವಾಸ್ತವ್ಯ ಹೂಡಿವೆ.ಹಾಡ ಹಗಲೇ ರೈತರ ಮನೆ ಅಂಗಳಕ್ಕೆ ಬಂದು ಜೀವ ತೆಗೆಯುತ್ತಿವೆ. ಐದು ವರ್ಷಗಳಿಂದ ಭತ್ತದ ಬೆಳೆಯನ್ನು ಸಂಪೂರ್ಣವಾಗಿ ನಾಶ ಮಾಡುತ್ತಿದ್ದು, ತಿನ್ನುವುದಕ್ಕೆ ಅನ್ನ ಇಲ್ಲದೆ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.ಐಗೂರು ಗ್ರಾಮದ  ಅರ್ಜುನ್ ಮಾತನಾಡಿ, ಮಳೆ ಕಾಡುಗಳನ್ನು ನಾಶ ಮಾಡಿ ತಲೆ ಎತ್ತುತ್ತಿರುವ ಜಲ ವಿದ್ಯುತ್ ಯೋಜನೆಗಳೇ ಕಾಡಾನೆ ಸಮಸ್ಯೆಗೆ ಮೂಲ ಕಾರಣ ಎಂದರು. ಕೇರಳ-ಕರ್ನಾಟಕ ಗಡಿ ಭಾಗದಲ್ಲಿ ಗ್ರಾನೈಟ್ ತೆಗೆಯುವ ಕೆಲಸ ನಡೆಯುತ್ತಿರುವುದರಿಂದಲೂ ಮಲೆನಾಡು ಭಾಗದತ್ತ ಆನೆಗಳು ವಲಸೆ ಬರಲು ಕಾರಣವಾಗಿದೆ ಎಂದರು.ಶಾಸಕ ಎಚ್.ಕೆ.ಕುಮಾರಸ್ವಾಮಿ, ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್ ತಂಡದ ಸದಸ್ಯರಿಗೆ ಆನೆಗಳ ಸಮಸ್ಯೆ ಬಗ್ಗೆ  ವಿವರಿಸಿದರು.ಡಿಸಿ ಮೋಹನ್‌ರಾಜ್, ಎಸಿ ಪಲ್ಲವಿ ಆಕುರಾತಿ, ಅರಣ್ಯ ಸಂರಕ್ಷಣಾಧಿಕಾರಿ ನಾಗರಾಜ್, ರಾಜ್ಯ ಕಾನೂನು ಸೇವೆಗಳ ತಂಡವು ಚಿಕ್ಕಲ್ಲೂರು, ಅತ್ತೀಹಳ್ಳಿ, ವನಗೂರು ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿತು.ವನ್ಯ ಜೀವಿ ಪ್ರಧಾನ ಸಂರಕ್ಷಣಾಧಿಕಾರಿ ಬಿ.ಕೆ.ಸಿಂಗ್, ರಾಜ್ಯ ಕಾನೂನು ಸೇವೆಗಳ ಅಧ್ಯಕ್ಷ ನ್ಯಾಯಮೂರ್ತಿ ವಿಶ್ವನಾಥ್ ಅಂಗಡಿ, ಬೆಂಗಳೂರಿನ ಭಾರತೀಯ ವಿಜ್ಞಾನ ಸಮಿತಿಯ ಡಾ.ರಾಮನ್ ಸುಕುಮಾರ್, ಆನೆ ಕಾರ್ಯಪಡೆ ಸಮಿತಿ ಸದಸ್ಯ ಅಜಯ್ ದೇಸಾಯ್, ಸಾಮಾಜಿಕ ಅರಣ್ಯ ನಿವೃತ್ತ ಅಧಿಕಾರಿ ಶರತ್‌ಚಂದ್ರಲೇಲೆ, ನಿವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಸಿ.ಎಸ್.ಬಸಪ್ಪ, ಆನೆ ತಜ್ಞ ಎಸ್.ಎನ್.ಬಿಷತ್, ಆನೆ ಜೀವ ತಜ್ಞ ಎನ್.ಕೆ.ಮಧುಸೂದನ್, ಹೈಕೋರ್ಟ್ ವಕೀಲ ಬಿ.ಆರ್.ದೀಪಕ್ ಮುಂತಾದವರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.