ಕಾಡುವ ಹಣ್ಣುಗಳು

7

ಕಾಡುವ ಹಣ್ಣುಗಳು

Published:
Updated:
ಕಾಡುವ ಹಣ್ಣುಗಳು

ವಿವಿಧ ಋತುಮಾನ ಹಾಗೂ ಹವಾಗುಣಕ್ಕೆ ತಕ್ಕಂತೆ ಕಾಡಿನ ಹಣ್ಣುಗಳು ಪ್ರಕೃತಿಯಲ್ಲಿ ಲಭ್ಯವಾಗುತ್ತವೆ. ಬುಕ್ಕೆ, ಕವಳೆ, ನಕರಿ, ಕೋರೆ, ಬ್ಯಾಲರಿ, ಉಲುಪಿ, ಲೇಬಿ, ಕಾರೆ, ಜಾನಿ, ಹತ್ತಿ, ನೇರಳೆ, ತುಂಬ್ರಿ, ಸೀತಾಫಲ, ಬೆಳವಲ, ಜಾಜರೆ, ಬಿಳಿಹೂಲೆ, ಕರಿ ಹೂಲೆ, ಕೇರು (ಕಾಡು ಗೇರು) ಹಣ್ಣು, ಸಕ್ಕರೆ ಚಳ್ಳಿಹಣ್ಣು ಹೀಗೆ ಇದರ ಪಟ್ಟಿ ಬೆಳೆಯುತ್ತಾ ಸಾಗುತ್ತದೆ.ಯಾವುದೇ ಆರೈಕೆಯಿಲ್ಲದೆ ನಿಸರ್ಗದತ್ತವಾಗಿ ಸಿಗುವ ಈ ಕಾಡು ಹಣ್ಣುಗಳು ಹೆಚ್ಚು ಸ್ವಾದಿಷ್ಟಕರವಾಗಿರುವುದು ವಿಶೇಷ. ಕುರುಚಲು ಕಾಡುಗಳ ಸುತ್ತ ವಾಸಿಸುವವರಿಗೆ ಇವು ಚಿರಪರಿಚಿತ. ಅದರಲ್ಲೂ ಹಳ್ಳಿಗಾಡಿನ ಮಕ್ಕಳಿಗೆ ಈ ಹಣ್ಣುಗಳೆಂದರೆ ಪಂಚಪ್ರಾಣ.

 

ಚಿಣ್ಣರಿಗೆ ಬೇಸಿಗೆ ರಜೆ ಕಳೆದು ಶಾಲೆಗೆ ಮರಳುವುದು ಒಂದು ರೀತಿಯ ಸಜೆ. ಆದರೆ ಕಾಡುಹಣ್ಣುಗಳು ಮಕ್ಕಳ ಈ ಬೇಸರವನ್ನು ದೂರಮಾಡುತ್ತವೆ. ಶಾಲೆ ಕೋಣೆಯ ತುಂಬಾ ನಿಸರ್ಗದತ್ತ ಹಣ್ಣುಗಳ ಸುಗಂಧವಿರುತ್ತದೆ. ಇತ್ತ ಮಕ್ಕಳನ್ನು ಕೋಣೆಯೊಳಗೆ ಕೂಡಿಟ್ಟರೂ ಚಿತ್ತ ಮಾತ್ರ ಶಾಲೆಯ ಆಚೆ ಹಣ್ಣಿನ ಬುಟ್ಟಿ ಇಟ್ಟುಕೊಂಡ ಅಜ್ಜಿಯತ್ತ ಕೇಂದ್ರೀಕೃತವಾಗಿರುತ್ತದೆ.ಕಾಡಿನ ಹಣ್ಣುಗಳಿಗೂ ಹಾಗೂ ಹಳ್ಳಿ ಮಂದಿಗೂ ಭಾರೀ ನಂಟು. ಗ್ರಾಮೀಣ ಜನರು ಕಾಡಿನ ಹಣ್ಣುಗಳ ಬಗ್ಗೆ ಅಗಾಧ ಜ್ಞಾನ ಹೊಂದಿದ್ದು, ಇವುಗಳ ಸದುಪಯೋಗ ಪಡೆದುಕೊಳ್ಳುವಲ್ಲಿ ನಿಪುಣರು. ಜಾನುವಾರು ಕಾಯುವ ಗುಂಪಿಗೆ ಈ ಹಣ್ಣುಗಳೇ ನಿತ್ಯದ ಫಲಹಾರ.ಇವುಗಳಲ್ಲಿ ರೋಗ ನಿರೋಧಕ ಗುಣ ಇದ್ದು, ಅನೇಕ ಕಾಯಿಲೆಗಳಿಗೆ ದಿವ್ಯ ಔಷಧವಾಗಿವೆ.

ಕೆಲವು ಕಾಡಿನ ಹಣ್ಣುಗಳನ್ನು ಖಾದ್ಯವಾಗಿಯೂ ಉಪಯೋಗಿಸುತ್ತಾರೆ. ಕವಳೆ ಹಣ್ಣಾಗುವುದಕ್ಕಿಂತ ಮುಂಚೆ ಚಟ್ನಿ, ಉಪ್ಪಿನಕಾಯಿ ತಯಾರಿಸುತ್ತಾರೆ.ತೊಂಡೆಕಾಯಿಯಿಂದ ಪಲ್ಯ, ಉಪ್ಪಿನಕಾಯಿ ಮಾಡುತ್ತಾರೆ. ಅತಿಸಾರ ನಿಯಂತ್ರಣಕ್ಕೆ ಬುಕ್ಕೆ ಮತ್ತು ಕಾರೆ ಸೇವಿಸುತ್ತಾರೆ. ಕಾರೆ ಹಣ್ಣು ಲೈಂಗಿಕ ಶಕ್ತಿ ಹೆಚ್ಚಿಸುತ್ತದೆ. ಬೆಳವಲ ದೇಹವನ್ನು ತಂಪಾಗಿಡುತ್ತದೆ. ಜಂಬು ನೇರಳೆ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಅತ್ಯಂತ ಉಪಯುಕ್ತ.ಕವಳೆ ಹಣ್ಣಿನ ಸೇವನೆಯಿಂದ ಕಫ ಇಲ್ಲವಾಗುತ್ತದೆ. ಲೇಬಿ ಹಣ್ಣು ದೇಹದ ಅಂಗಗಳ ಶುದ್ಧೀಕರಣ ಮಾಡುತ್ತದೆ. ಜಾನಿ ಹಣ್ಣು ಜೀರ್ಣಕಾರಕ.  ಕಾಕಮಾಜಿಗೆ ಜ್ವರವನ್ನು ಬಡಿದೋಡಿಸುವ ಶಕ್ತಿ ಇದೆ. ಮುರಕಿ ಹಣ್ಣು ಕೋಕಂ ಹಣ್ಣಿನ ಸಣ್ಣ ರೂಪವಾಗಿದ್ದು ಶಕ್ತಿವರ್ಧಕವಾಗಿ ಬಳಸುತ್ತಾರೆ.ಅಳಲೆಕಾಯಿಯನ್ನು ಸರ್ವರೋಗಗಳಿಗೂ ಬಳಸಲಾಗುತ್ತದೆ. ನೆಲ್ಲಿಕಾಯಿ ಸಿಹಿ ಮೂತ್ರ ರೋಗವನ್ನು ಶಮನ ಮಾಡುತ್ತದೆ. ಕರಿ ಹೂಲೆಹಣ್ಣಿನ ರಸವನ್ನು ಪೆನ್ನಿಗೆ ಮಸಿಯಾಗಿ ಬಳಸಲಾಗುತ್ತದೆ. ನಕರಿ ಹಣ್ಣಿನಲ್ಲಿ ಸಣ್ಣ ಪ್ರಮಾಣದ ಅಮಲು ಅಂಶವಿದೆ. ಅದನ್ನು ಕುಟ್ಟಿ ನೀರಿನಲ್ಲಿ ಹಾಕಿದರೆ ಮೀನುಗಳು ಅಮಲಿನಿಂದ ತೇಲುತ್ತವೆ. ಇದರ ಬೀಜವನ್ನು ಸುಟ್ಟು ತಿಂದರೆ ಬಾದಾಮಿಯ ಅನುಭವವಾಗುತ್ತದೆ.ಈ ಹಣ್ಣುಗಳೆಲ್ಲ ಮಾನವನಿಗೆ ಮಾತ್ರವಲ್ಲದೆ ಪ್ರಾಣಿ- ಪಕ್ಷಿಗಳಿಗೂ ಆಹಾರವಾಗಿವೆ. ಉದಾಹರಣೆಗೆ ಕರೆ ಕಾರೆಹಣ್ಣು ಮೇಕೆಗಳಿಗೆ ಪಂಚಪ್ರಾಣ.ಪ್ರಮುಖವಾಗಿ ಕಿರು ಅರಣ್ಯ ಉತ್ಪನ್ನ ಸಂಗ್ರಾಹಕರು ಇವುಗಳನ್ನು ಕಾಡಿನಿಂದ ನಾಡಿಗೆ ಪರಿಚಯಿಸುತ್ತಾರೆ. ಆದರೆ ಕಾಡಿನ ನಾಶದಿಂದ ಈ ಹಣ್ಣಿನ ಗಿಡಗಳು ನಿಧಾನವಾಗಿ ಕಣ್ಮರೆಯಾಗುತ್ತಿವೆ. ಇವನ್ನು ಉಳಿಸಿಕೊಳ್ಳಲು ಏನಾದರೂ ಮಾಡಲೇಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry