ಶುಕ್ರವಾರ, ಫೆಬ್ರವರಿ 26, 2021
30 °C

ಕಾನೂನು ಅರಿವು ಮೂಡಿಸಲು ಮುಂದಾಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾನೂನು ಅರಿವು ಮೂಡಿಸಲು ಮುಂದಾಗಿ

ಕೋಲಾರ: ‘ಕಾನೂನು ತಿಳಿಯದವರಿಗೆ ವಿದ್ಯಾರ್ಥಿಗಳು ಅರಿವು ಮೂಡಿಸಲು ಮುಂದಾಗಬೇಕು’ ಎಂದು  ಡಿವೈಎಸ್ಪಿ ಅಬ್ದುಲ್ ಸತ್ತಾರ್ ತಿಳಿಸಿದರು.

ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಪೊಲೀಸ್ ಇಲಾಖೆ, ತಾಲ್ಲೂಕು ತ್ರಿಚಕ್ರ ವಾಹನ ಚಾಲಕರ ಸಂಘ ಹಾಗೂ ಅಸಂಘಟಿತ ಕಾರ್ಮಿಕರ ಸಾಮಾಜಿಕ ಮಂಡಳಿ ಆಶ್ರಯದಲ್ಲಿ ವಾಹನ ಚಾಲಕರಿಗೆ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಅರಿವು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.ಕಾನೂನಿನ ಅರಿವಿದ್ದರೆ ಸರ್ಕಾರದ ಸೌಕರ್ಯಗಳನ್ನು ಕೇಳಿ ಪಡೆಯಲು ಸಾಧ್ಯವಾಗುತ್ತದೆ. ಆದ ಕಾರಣ ಪ್ರತಿ ವ್ಯಕ್ತಿಯು ಕಾನೂನು ತಿಳಿದುಕೊಳ್ಳಬೇಕು. ಖಾಸಗಿ ವಾಹನ ಚಾಲಕರು ಅಪಘಾತ ಪರಿಹಾರ ಯೋಜನೆಗೆ ಕಡ್ಡಾಯವಾಗಿ ತಮ್ಮ ಹೆಸರು ನೋಂದಣಿ ಮಾಡಿಸಬೇಕು. ಜತೆಗೆ ವಿಮಾ ಭದ್ರತೆ, ಚಿಕಿತ್ಸಾ ವೆಚ್ಚ ಹಾಗೂ ಪಿಂಚಣಿ ಯೋಜನೆಯ ಸದುಪಯೋಗ ಪಡೆಯಬೇಕು ಎಂದು ಕಿವಿಮಾತು ಹೇಳಿದರು.ಪ್ರಾದೇಶಿಕ ಸಾರಿಗೆ ಅಧಿಕಾರಿ ಸತೀಶ್ ಮಾತನಾಡಿ, ‘ವಾಹನ ಚಾಲನೆ ಮಾಡುವುದನ್ನು ಕಲಿತ ಮಾತ್ರಕ್ಕೆ ಒಳ್ಳೆಯ ಚಾಲಕರಾಗಲು ಸಾಧ್ಯವಿಲ್ಲ. ಸಂಚಾರ ನಿಯಮಗಳು ಮತ್ತು ಕಾನೂನಿನ ಅರಿವು, ಚಾಲನಾ ಪರವಾನಗಿ ಪಡೆದಿರಬೇಕು’ ಎಂದು ಸಲಹೆ ನೀಡಿದರು.ರಸ್ತೆ ಸುರಕ್ಷತೆ ಬಗ್ಗೆ ಅರಿವು ಪಡೆದು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದಲ್ಲಿ ಅಪಘಾತ ಪ್ರಮಾಣ ತಗ್ಗಿಸಬಹುದು. ಕೇಂದ್ರ ಸರ್ಕಾರದ ನಿಯಮದ ಪ್ರಕಾರ ಚಾಲಕರು ಕನಿಷ್ಠ ಎಂಟನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು ಪ್ರಾದೇಶಿಕ ಭಾಷಾ ಜ್ಞಾನ ಹೊಂದಿರಬೇಕು. ಈ ಅರ್ಹತೆ ಇದ್ದವರಿಗೆ ಚಾಲನಾ ಪರವಾನಗಿ ನೀಡಬೇಕೆಂದು ಸರ್ಕಾರ 2008ರಲ್ಲಿ ಆದೇಶ ಹೊರಡಿಸಿದೆ ಎಂದು ಹೇಳಿದರು.ನಗರದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಆಟೊಗಳಿವೆ. ಈ ಪೈಕಿ 500 ಆಟೊಗಳ ಮಾಲೀಕರು ಚಾಲನಾ ಪರವಾನಗಿ ಮತ್ತು ನೋಂದಣಿ ದಾಖಲೆಪತ್ರ ಪಡೆದುಕೊಂಡಿದ್ದಾರೆ. ಉಳಿದ 1,500 ಆಟೊ ಮಾಲೀಕರ ಬಳಿ ಯಾವುದೇ ದಾಖಲೆಪತ್ರಗಳಿಲ್ಲ. ಹೀಗಾಗಿ ಅವರಿಗೆ ಸರ್ಕಾರದ ಸವಲತ್ತುಗಳ ಪ್ರಯೋಜನ ಪಡೆಯಲು ಸಾಧ್ಯವಾಗುವುದಿಲ್ಲ ಎಂದರು.ಸರ್ಕಾರಿ ವಾಹನಗಳ ಚಾಲಕರಿಗೆ ಭವಿಷ್ಯ ನಿಧಿ ಮತ್ತು ಇಎಸ್ಐ ಸೌಲಭ್ಯ ಕಲ್ಪಿಸಲಾಗಿದೆ. ಖಾಸಗಿ ವಾಹನ ಚಾಲಕರಿಗೆ ಈ ಸೌಲಭ್ಯಗಳನ್ನು ವಿಸ್ತರಿಸಲು ಸರ್ಕಾರ ಚಿಂತನೆ ನಡೆಸಿದೆ. ಚಾಲಕರು ಸರ್ಕಾರ ನಿಗದಿಪಡಿಸಿದ ದಾಖಲೆಪತ್ರಗಳನ್ನು ಹೊಂದಿದ್ದರೆ ಈ ಸೌಲಭ್ಯಗಳನ್ನು ಪಡೆಯಬಹುದು ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಬಾಲಾಜಿ ಮಾಹಿತಿ ನೀಡಿದರು.ರಾಜ್ಯ ಪ್ರದೇಶ ಅಸಂಘಟಿತ ಕಾರ್ಮಿಕರ ಪರಿಷತ್‌ ಅಧ್ಯಕ್ಷ ಕೆ.ವಿ.ಸುರೇಶ್‌ಕುಮಾರ್‌, ಆಟೊ ಚಾಲಕರ ಒಕ್ಕೂಟದ ಮಾಜಿ ಅಧ್ಯಕ್ಷ ವಿ.ಮಂಜುನಾಥ್, ಸದಸ್ಯರಾದ ಜಬೀವುಲ್ಲಾ, ನಂದೀಶ್ ಮತ್ತಿತರರು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.