ಗುರುವಾರ , ಏಪ್ರಿಲ್ 22, 2021
30 °C

ಕಾರ್ಖಾನೆಗಳಿಗೆ ಫಲವತ್ತಾದ ಭೂಮಿ ಮಾರಬೇಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ:  ಮಿತ್ತಲ್, ಜಿಂದಾಲ್, ಪೋಸ್ಕೊದವರು ಕಾರ್ಖಾನೆ ಸ್ಥಾಪಿಸುವ ಸಲುವಾಗಿ ಭೂಮಿ ಕೊಳ್ಳಲು ಬರುತ್ತಾರೆ. ಉದ್ಯೋಗ ನೀಡುತ್ತೇವೆ ಎಂದು ಹೇಳುವ ಅವರು ಗಾಳಿ, ನೀರು ಕೆಡಿಸುತ್ತಾರೆ. ಜೊತೆಗೆ ಹುಡುಗರನ್ನು ಉಡಾಳರನ್ನಾಗಿ ಮಾಡುತ್ತಾರೆ. ಯಾವುದೇ ಕಾರಣಕ್ಕೂ ಕಾರ್ಖಾನೆಗಳಿಗೆ ಫಲವತ್ತಾದ ಭೂಮಿಯನ್ನು ಮಾರಿಕೊಳ್ಳಬೇಡಿ ಎಂದು ಗದಗ ತೋಂಟದಾರ್ಯ ಸಂಸ್ಥಾನಮಠದ ಡಾ. ಸಿದ್ದಲಿಂಗ ಮಹಾಸ್ವಾಮಿ ಸಲಹೆ ನೀಡಿದರು.ಜಿಲ್ಲಾ ಕುರುಬರ ಸಂಘದ ವತಿಯಿಂದ ವಿದ್ಯಾಗಿರಿಯ ಗೌರಿಶಂಕರ ಕಲ್ಯಾಣ ಮಂಟದಲ್ಲಿ ಗುರುವಾರ ಹಮ್ಮಿಕೊಂಡಿದ್ದ `ಹಾಲುಮತ ಸಂಸ್ಕೃತಿ ಜಾಗೃತ ಯಾತ್ರೆ~ಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ಜಗತ್ತಿನ ಯಾವ ವಿಜ್ಞಾನಿಗೂ ಹಿಡಿ ಮಣ್ಣನ್ನು ತಯಾರಿಸಲು ಸಾಧ್ಯವಿಲ್ಲ ಎಂದು ಹೇಳಿದರು.ಭವಿಷ್ಯದಲ್ಲಿ ಕುಡಿಯುವ ನೀರಿಗಾಗಿ ಜನತೆ ಬಡಿದಾಡುವ ಪರಿಸ್ಥಿತಿ ತಲೆದೋರಲಿದೆ ಎಂದು ಅವರು, ನೀರಿನ ಸಂಗ್ರಹಕ್ಕೆ ಪ್ರಥಮ ಆದ್ಯತೆ ನೀಡಬೇಕಿದೆ ಎಂದು ಹೇಳಿದರು.ಓಡುವ ಮಳೆ ನೀರನ್ನು ನಡೆಯುವಂತೆ, ನಡೆಯುವ ನೀರನ್ನು ನಿಲ್ಲುವಂತೆ, ನಿಲ್ಲುವ ನೀರನ್ನು ಇಂಗುವಂತೆ ಮಾಡಬೇಕಿದೆ ಎಂದರು.ಕೀಳರಿಮೆ ಬೇಡ: ರಾಮಾಯಣ, ಮಹಾಭಾರತ, ಸಂವಿಧಾನ ರಚಿಸಿದವರು ಹಿಂದುಳಿದ ಮತ್ತು ದಲಿತ ಜನಾಂಗದವರು. ಹೀಗಿರುವಾಗ ಕೀಳರಿಮೆ ಬಿಟ್ಟು, ಸೊಕ್ಕಿನಿಂದ ತಲೆಯೆತ್ತಿ ನಡೆಯಿರಿ ಎಂದು ಹೇಳಿದರು.ದುಡ್ಡು ದೊಡ್ಡಪ್ಪ, ವಿದ್ಯೆ ಅದರಪ್ಪ, ವಿದ್ಯೆ ದೊಡ್ಡ ಸಂಪತ್ತು, ವಿದ್ಯೆ ಯಾರ ಸ್ವತ್ತಲ್ಲ, ಹಿಂದುಳಿದ ವರ್ಗಗಳು ವಿದ್ಯೆಗೆ ಪ್ರಾಶಸ್ತ್ಯ ನೀಡಬೇಕು ಎಂದು ತಿಳಿಸಿದರು.ಅನ್ಯಾಯ: 1904ರಲ್ಲಿ ಗದಗ ಜಿಲ್ಲೆಯ ಕಣಗಿನಹಾಳದಲ್ಲಿ ಏಷ್ಯದಲ್ಲೇ ಪ್ರಥಮ ಭಾರಿಗೆ ಗ್ರಾಮ ಮಟ್ಟದಲ್ಲಿ ಸಹಕಾರಿ ಸಂಘವನ್ನು ಆರಂಭಿಸಿದ ಸಿದ್ದನಗೌಡ ಅವರ ಜನ್ಮ ಶತಮಾನೋತ್ಸವ ಸಂದರ್ಭದಲ್ಲಿ ಅವರನ್ನು  ನೆನಪಿಸಿಕೊಳ್ಳುವ ಕಾರ್ಯ ನಡೆದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಹಿಂದುಳಿದ ಕುರುಬ ಸಮಾಜದವರಾದ ಸಿದ್ದನಗೌಡರ ಹೆಸರಲ್ಲಿ ಅಂಚಿಚೀಟಿ ಹೊರತರಬೇಕಿತ್ತು. ಆದರೆ,  ಕಣಗಿನಹಾಳ ಗ್ರಾಮ ರಸ್ತೆ, ಚರಂಡಿಯಂತಹ ಮೂಲ ಸೌಲಭ್ಯಗಳಿಲ್ಲದೇ ಕಡೆಗಣಿಸಲ್ಪಟ್ಟಿದೆ. ಸಿದ್ದನಗೌಡ  ಪ್ರಬಲ ಜಾತಿಗೆ ಸೇರಿರದಿರುವ ಕಾರಣ ಅವರ ಸಾಧನೆಯನ್ನು ಗುರುತಿಸುವಲ್ಲಿ ಅನ್ಯಾಯವಾಗಿದೆ ಎಂದು ಹೇಳಿದರು.ಹಿಂದುಳಿದ ವರ್ಗಗಳಿಗೆ ಮೀಸಲಾತಿ ಒದಗಿಸುವ ಸಂಬಂಧದ ಎಲ್.ಜಿ.ಹಾವನೂರ ವರದಿ ಬರುವ 20 ವರ್ಷಗಳ ಮೊದಲೇ ಕುರುಬ ಸಮಾಜದಿಂದ ಬಂದಂತ ನಾಗನಗೌಡ ಅವರು ಜನಾಂಗವಾರು ಮೀಸಲಾತಿ ತರಲು ಯತ್ನಿಸಿದ್ದರು ಎಂದು ಸ್ಮರಿಸಿದರು. ದೇಶೀ ಸಂಸ್ಕೃತಿ ಮತ್ತು ದೇಶೀ ದೇವರನ್ನು ಆರಾಧಿಸುವ ಕುರುಬರು ಶೈವರು ಎಂದು ಅವರು, ಮೂಲತಃ ಕುರಿ ಸಾಕಾಣಿಕೆ, ಒಕ್ಕಲುತನವನ್ನು ಪ್ರಧಾನವಾಗಿ ಅವಲಂಭಿಸಿರುವ ಕುರುಬರು, ಜಾಣ್ಮೆ ಮತ್ತು ಪರಿಶ್ರಮಕ್ಕೆ ಹೆಸರಾದವರು ಎಂದರು.ಕುರುಬರು ಮತ್ತು ಬೇಡರು ಕರ್ನಾಟಕದ ಮೂಲ ನಿವಾಸಿಗಳೇ ಹೊರತು, ಲಿಂಗಾಯತರಲ್ಲ, ಬಸವಣ್ಣ ಮೂಲತಃ ಬ್ರಾಹ್ಮಣನಾಗಿದ್ದ ಎಂದು ಹೇಳಿದರು.ಮರ ಕಡಿಯಬೇಡಿ: ಪ್ರಾಸ್ತಾವಿಕವಾಗಿ ಮಾತನಾಡಿದ ಮಾಜಿ ಸಚಿವ ಎಚ್.ವೈ.ಮೇಟಿ, ಕುರಿಗಳ ಆಹಾರಕ್ಕಾಗಿ ಮರಗಳನ್ನು ಕಡಿಯುವುದನ್ನು ಕುರುಬರು ನಿಲ್ಲಿಸಬೇಕು. ಹರಕೆ ಹೊರುವಂತಹ ಮೂಢನಂಬಿಕೆಗಳನ್ನು ಬಿಡಬೇಕು ಎಂದು ಹೇಳಿದರು.ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ ಮಾತನಾಡಿ,  ಸರ್ಕಾರ ಹಸಿರು ಮತ್ತು ನೀರಿನ ಬಗ್ಗೆ ಮುತುರ್ವರ್ಜಿ ವಹಿಸುತ್ತಿಲ್ಲ ಎಂದು ಹೇಳಿದರು. ಅರಣ್ಯ ನಾಶದಿಂದ ಪರಿಸರ ಸಮತೋಲನ ಕಳೆದುಕೊಂಡಿದೆ. ಪ್ರತಿಯೊಬ್ಬರು ಅರಣ್ಯ ರಕ್ಷಣೆಗೆ ಆದ್ಯತೆ ನೀಡಬೇಕು ಎಂದರು.ಸನ್ಮಾನ: `ಬಸವಶ್ರೀ~ ಪ್ರಶಸ್ತಿ ಪುರಸ್ಕೃತ ಇಳಕಲ್ ಚಿತ್ತರಗಿ ಸಂಸ್ಥಾನ ಮಠದ ಡಾ.ವಿಜಯಮಹಾಂತ ಮಹಾಸ್ವಾಮಿ ಮತ್ತು ಗದಗ ತೋಂಟದಾರ್ಯ ಮಠದ ಡಾ.ಸಿದ್ದಲಿಂಗ ಮಹಾಸ್ವಾಮಿ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸಸಿ ನೆಡುವ ಕಾರ್ಯಕ್ರಮ  ಉದ್ಘಾಟಿಸಿದರು. ತಿಂಥಣಿ ಕಾಗಿನೆಲೆ ಗುರುಪೀಠ ಶಾಖಾಮಠದ ಸಿದ್ದರಾಮಾನಂದಪುರಿ ಮಹಾಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಇಳಕಲ್‌ನ ಚಿತ್ತರಗಿ ಸಂಸ್ಥಾನಮಠದ ಗುರು ಮಹಾಂತ ಮಹಾಸ್ವಾಮಿ, ಕಮತಗಿಯ ಹುಚ್ಚೇಶ್ವರ ಮಹಾಸ್ವಾಮಿ, ಟೀಕಿನಮಠದ ರೇವಣಸಿದ್ದ ಮಹಾಸ್ವಾಮಿ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು.ಮಾಜಿ ಶಾಸಕ ಜೆ.ಟಿ.ಪಾಟೀಲ, ಬಸವೇಶ್ವರ ಬ್ಯಾಂಕಿನ ಅಧ್ಯಕ್ಷ  ಪ್ರಕಾಶ ತಪಶೆಟ್ಟಿ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಬಿ.ಸೌದಗರ, ಬಿಟಿಡಿಎ ಮಾಜಿ ಅಧ್ಯಕ್ಷ ಲಿಂಗರಾಜ ವಾಲಿ,  ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಎಂ.ಎಲ್.ಶಾಂತಗೇರಿ, ನಗರಸಭೆ ಸದಸ್ಯ ಹುನುಮಂತ ರಾಕುಂಪಿ, ಜಿ.ಪಂ.ಸದಸ್ಯ ಬಸವಂತಪ್ಪ ಮೇಟಿ, ರಾಜ್ಯ ಕುರುಬರ ಸಂಘದ ಉಪಾಧ್ಯಕ್ಷ ಎಸ್.ಎಚ್. ಗುಳೇದ, ತಾಲ್ಲೂಕು ಕುರುಬರ ಸಂಘದ ಡಿ.ಬಿ.ಸಿದ್ದಾಪುರ, ಮಲ್ಲು ಜಕಾಪಿ, ಮಳಿಯಪ್ಪ ಗುಳಬಾಳ, ಲಕ್ಷ್ಮಣ ದಡ್ಡಿ, ಮುತ್ತಣ್ಣ ಯರಗೊಪ್ಪ ಮತ್ತಿತರರು ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.