ಶನಿವಾರ, ಏಪ್ರಿಲ್ 17, 2021
31 °C

ಕಾರ್ಮಿಕರ ಯೋಜನೆ ಜಾರಿಗೆ ರಾಜ್ಯಗಳ ಹಿಂದೇಟು: ಖರ್ಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ‘ಕಾರ್ಮಿಕರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾರ್ಮಿಕ ಕಾಯಿದೆ ಹಾಗೂ ಯೋಜನೆಗಳನ್ನು ರಾಜ್ಯ ಸರ್ಕಾರಗಳು ಸಮರ್ಪಕವಾಗಿ ಅನುಷ್ಠಾನಕ್ಕೆ ತರುತ್ತಿಲ್ಲ’ ಎಂದು ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು.ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಕಾಗಿನೆಲೆಯಲ್ಲಿ ಮಂಗಳವಾರ ನಡೆದ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ಮೂರನೇ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮುನ್ನ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.ಕೇಂದ್ರ ಸರ್ಕಾರ ಜಾರಿಗೆ ತರುವ ಕಾಯ್ದೆ ಕಾನೂನುಗಳನ್ನು ವ್ಯವಸ್ಥಿತವಾಗಿ ಜಾರಿಗೆ ತಂದು ಕಾರ್ಮಿಕರ ಜೀವನ ರೂಪಿಸಬೇಕಾದ ಜವಾಬ್ದಾರಿ ರಾಜ್ಯ ಸರ್ಕಾರಗಳ ಮೇಲಿದೆ. ಆದರೆ, ಕರ್ನಾಟಕವಷ್ಟೇ ಅಲ್ಲದೇ ದೇಶದ ಬಹುತೇಕ ರಾಜ್ಯಗಳು ಈ ಇಲಾಖೆ ಬಗ್ಗೆ ಹೆಚ್ಚಿನ ಗಮನ ನೀಡುತ್ತಿಲ್ಲ. ಇದು ಅತ್ಯಂತ ದುಃಖದ ಸಂಗತಿ ಎಂದರು.ದೇಶದಲ್ಲಿ 43 ಕೋಟಿ ಅಸಂಘಟಿತ ಕಾರ್ಮಿಕರಿದ್ದಾರೆ. ಅವರ ಯೋಗಕ್ಷೇಮವನ್ನು ನೋಡಿಕೊಳ್ಳಬೇಕಾದ ಸರ್ಕಾರಗಳು ಬೇಜವಾಬ್ದಾರಿತನದಿಂದ ವರ್ತಿಸಿದಾಗ ಭವಿಷ್ಯ ನಿಧಿ, ಇಎಸ್‌ಐ ನಂತಹ ಕಾರ್ಮಿಕ ಪರ ಯೋಜನೆಗಳನ್ನು ಅವರಿಗೆ ತಲುಪಿಸಲು ಸ್ಥಳೀಯ ಮುಖಂಡರು, ಸರ್ಕಾರೇತರ ಸಂಸ್ಥೆಗಳು ಹಾಗೂ ಕಾರ್ಮಿಕರ ಸಂಘಟನೆಗಳು ಹೆಚ್ಚಿನ ಮುತುವರ್ಜಿ ವಹಿಸಬೇಕು. ಆಗ ಮಾತ್ರ ಈ ಇಲಾಖೆಯಲ್ಲಿ ಹಾಗೂ ಕಾರ್ಮಿಕರ ಜೀವನದಲ್ಲಿ ಸುಧಾರಣೆ ಕಾಣಲು ಸಾಧ್ಯ ಎಂದರು.ಕರ್ನಾಟಕ ರಾಜ್ಯದಲ್ಲಿ ಇಎಸ್‌ಐ ಯೋಜನೆ ಜಾರಿಗಾಗಿ ಕೇಂದ್ರ ಸರ್ಕಾರವು 1700 ಕೋಟಿ ರೂ.ಗಳನ್ನು ನೀಡಿದೆ. ಆ ಹಣದಲ್ಲಿ ಧಾರವಾಡ, ದಾವಣಗೆರೆ, ಬೆಳಗಾವಿ, ಗುಲ್ಬರ್ಗಾ, ಯಾದಗಿರಿ, ಮಂಗಳೂರು, ಬೆಂಗಳೂರು ಸೇರಿದಂತೆ ರಾಜ್ಯದ ಇತರ ಕಡೆಗಳಲ್ಲಿ ಇಎಸ್‌ಐ ಆಸ್ಪತ್ರೆ ನಿರ್ಮಾಣ, ಆಧುನೀಕರಣ ಹಾಗೂ ಇನ್ನಿತರ ಸೌಲಭ್ಯಗಳನ್ನು ಒದಗಿಸಲಾಗುತ್ತದೆ ಎಂದರು.ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ಸಂಸದ ಎಚ್.ವಿಶ್ವನಾಥ, ಶಾಸಕ ಬಿ.ಸಿ. ಪಾಟೀಲ, ಮಾಜಿ ಸಚಿವ ಬಸವರಾಜ ಶಿವಣ್ಣನವರ, ಮಾಜಿ ಶಾಸಕ ರುದ್ರಪ್ಪ ಲಮಾಣಿ, ಅಜ್ಜಂಪೀರ್ ಖಾದ್ರಿ, ಜಿ.ಪಂ. ಮಾಜಿ ಅಧ್ಯಕ್ಷ ಪರಮೇಶ್ವರಪ್ಪ ಮೇಗಳಮನಿ ಮತ್ತಿತರರು ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.