ಭಾನುವಾರ, ಮೇ 22, 2022
28 °C

ಕಾಲುವೆಗಳ ಒತ್ತುವರಿ :ಡಿಸೆಂಬರ್‌ನೊಳಗೆ ತೆರವುಗೊಳಿಸಲು ಗಡುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ಒತ್ತುವರಿಯಾಗಿರುವ ಬೃಹತ್ ಮಳೆ ನೀರು ಕಾಲುವೆಗಳ ಒತ್ತುವರಿ ಜಾಗಗಳನ್ನು ಡಿಸೆಂಬರ್ ತಿಂಗಳೊಳಗೆ ತೆರವುಗೊಳಿಸಲು ಪಾಲಿಕೆಯ ವಲಯ ಮಟ್ಟದ ಅಧಿಕಾರಿಗಳಿಗೆ ಅಂತಿಮ ಗಡುವು ನೀಡಿರುವ ಬಿಬಿಎಂಪಿ ಆಯುಕ್ತ ಸಿದ್ದಯ್ಯ, ಈ ಸೂಚನೆ ಪಾಲಿಸದವರ ವಿರುದ್ಧ ಶಿಸ್ತಿನ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.ಈ ಸಂಬಂಧ ಪಾಲಿಕೆ ವಲಯ ಮಟ್ಟದ ಹೆಚ್ಚುವರಿ/ ಜಂಟಿ ಆಯುಕ್ತರು ಹಾಗೂ ಮುಖ್ಯ ಎಂಜಿನಿಯರ್‌ಗಳ ಸಭೆ ನಡೆಸಿದ ಅವರು, ಇದುವರೆಗೆ ಬೃಹತ್ ಮಳೆ ನೀರು ಕಾಲುವೆಗಳ ಒತ್ತುವರಿ ಜಾಗಗಳನ್ನು ತೆರವುಗೊಳಿಸಿರುವ ಬಗ್ಗೆ ಪರಿಶೀಲನೆ ನಡೆಸಿದರು.ಬಿಬಿಎಂಪಿ ವ್ಯಾಪ್ತಿಯಲ್ಲಿ ಈಗಾಗಲೇ 900ಕ್ಕೂ ಹೆಚ್ಚು ಬೃಹತ್ ಮಳೆ ನೀರು ಕಾಲುವೆಗಳ ಒತ್ತುವರಿ ಜಾಗಗಳನ್ನು ಗುರುತಿಸಲಾಗಿದೆ. ಈ ಪೈಕಿ 650 ಒತ್ತುವರಿ ಜಾಗಗಳನ್ನು ತೆರವುಗೊಳಿಸಲಾಗಿದೆ. ಉಳಿದ 250 ಒತ್ತುವರಿ ಜಾಗಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಕೂಡಲೇ ಪ್ರಾರಂಭಿಸಬೇಕು. ಇದು ಅಂತಿಮ ಗಡುವು. ವಲಯ ಮಟ್ಟದ ಅಧಿಕಾರಿಗಳು ಈ ಸೂಚನೆಯನ್ನು ಪಾಲಿಸದಿದ್ದಲ್ಲಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಡಿಸೆಂಬರ್ ತಿಂಗಳವರೆಗೂ ಪದೇ ಪದೇ ಪರಿಶೀಲನಾ ಸಭೆಗಳನ್ನು ನಡೆಸುವುದಿಲ್ಲ. ಬೃಹತ್ ಮಳೆ ನೀರು ಕಾಲುವೆ ಒತ್ತುವರಿಗಳನ್ನು ತೆರವುಗೊಳಿಸುವ ಜವಾಬ್ದಾರಿ ವಲಯ ಅಧಿಕಾರಿಗಳು ಮತ್ತು ಬೃಹತ್ ಮಳೆ ನೀರು ಕಾಲುವೆ ಮುಖ್ಯ ಎಂಜಿನಿಯರ್‌ಗಳ ಮೇಲಿದೆ.ಬಿಎಂಟಿಎಫ್ ಮತ್ತು ಸ್ಥಳೀಯ ಪೊಲೀಸರ ನೆರವಿನೊಂದಿಗೆ ಒತ್ತುವರಿ ಜಾಗಗಳನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಬೇಕು ಎಂದು ಸೂಚಿಸಿದರು.ಪ್ರಾಥಮಿಕ ಮತ್ತು ದ್ವಿತೀಯ ದರ್ಜೆಯ ಮಳೆನೀರು ಕಾಲುವೆಗಳಿಂದ ಹೂಳೆತ್ತುವ ಕಾರ್ಯ ನಡೆಯುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಸೂಕ್ತ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಬೇಕು. ಹೂಳೆತ್ತುವ ಮುನ್ನ ಆ ಸ್ಥಳದ ಪೂರ್ವಳತೆ, ಅಂತಿಮ ಅಳತೆ ಮತ್ತು ಹೂಳು ತೆಗೆಯುತ್ತಿರುವ ಛಾಯಾಚಿತ್ರ, ವಿಡಿಯೋ ಚಿತ್ರೀಕರಣ ಹಾಗೂ ವಾಹನಗಳ ಚಲನ-ವಲನಗಳ ಪುಸ್ತಕ ಮುಂತಾದ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಬೇಕು ಎಂದು ಆಯುಕ್ತರು ನಿರ್ದೇಶನ ನೀಡಿದರು.ಹೂಳೆತ್ತುವ ಕಾರ್ಯ ಪಾರದರ್ಶಕತೆಯಿಂದ ಕೂಡಿರಬೇಕು. ಕಾಮಗಾರಿಯಲ್ಲಿ ಯಾವುದೇ ಲೋಪದೋಷಗಳು ಕಂಡು ಬಂದಲ್ಲಿ ಸಂಬಂಧಪಟ್ಟ ಜಂಟಿ ಆಯುಕ್ತರು, ಮುಖ್ಯ ಎಂಜಿನಿಯರ್ ಮತ್ತು ಕಾರ್ಯಪಾಲಕ ಎಂಜಿನಿಯರ್ ಅವರನ್ನೇ ನೇರ ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದರು.ಕಾಮಗಾರಿಗಳಿಗೆ ಸಂಬಂಧಪಟ್ಟ ಬಿಲ್ಲುಗಳನ್ನು ಪಾವತಿಸುವ ಮುನ್ನ ಕಡತಗಳನ್ನು ಟಿ.ವಿ.ಸಿ.ಸಿ. ವಿಭಾಗಕ್ಕೆ ಕಳುಹಿಸಿ, ಅವರಿಂದ ಸ್ಥಳ ಪರಿಶೀಲನೆ ಮಾಡಿಸಿ ವರದಿಯೊಂದಿಗೆ ಮತ್ತು ಎಲ್ಲ ರೀತಿಯ ದಾಖಲೆಗಳೊಂದಿಗೆ ಬಿಲ್ ಪಾವತಿಗಾಗಿ ಕಳುಹಿಸುವುದು. ಈ ಸಂಬಂಧ ಈಗಾಗಲೇ ಮಾರ್ಗಸೂಚಿಗಳನ್ನು ಹೊರಡಿಸಲಾಗಿದ್ದು, ಅವುಗಳನ್ನು ತಪ್ಪದೇ ಪಾಲಿಸಬೇಕು ಎಂದು ವಲಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.