ಶುಕ್ರವಾರ, ಫೆಬ್ರವರಿ 26, 2021
31 °C
ಜಿಐಎಸ್‌ ಆಧಾರಿತ ಡಿಜಿಟಲ್‌ ನಕ್ಷೆ ಅಳವಡಿಸಲೂ ಸಿದ್ಧತೆ: ಆಯುಕ್ತ

ಕಾಲುವೆ ಒತ್ತುವರಿ: ನಕ್ಷೆಗಳು ವೆಬ್‌ಸೈಟ್‌ನಲ್ಲಿ ಪ್ರಕಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಲುವೆ ಒತ್ತುವರಿ: ನಕ್ಷೆಗಳು ವೆಬ್‌ಸೈಟ್‌ನಲ್ಲಿ ಪ್ರಕಟ

ಬೆಂಗಳೂರು: ನಗರದ  ರಾಜಕಾಲುವೆಗಳ ಒತ್ತುವರಿ ಸಂಬಂಧ ಭೂಮಾಪನ ಮತ್ತು ಭೂ ದಾಖಲೆಗಳ ಇಲಾಖೆ ಸಮೀಕ್ಷೆ ನಡೆಸಿ ಸಿದ್ಧಪಡಿಸಿದ ನಕ್ಷೆಗಳನ್ನು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಶನಿವಾರ ತನ್ನ ವೆಬ್‌ಸೈಟ್‌ನಲ್ಲಿ ಹಾಕಿದೆ.‘ಬೆಂಗಳೂರು ಪೂರ್ವ’, ‘ಉತ್ತರ’, ‘ಉತ್ತರ ಹೆಚ್ಚುವರಿ’ ಎಂಬ ಮೂರು ಫೋಲ್ಡರ್‌ಗಳಲ್ಲಿ (ಭೂ ದಾಖಲೆಗಳ ಇಲಾಖೆ ನಗರವನ್ನು ತನ್ನ ಅನುಕೂಲಕ್ಕಾಗಿ 3 ವಿಭಾಗ ಮಾಡಿದೆ) ನಕ್ಷೆಗಳನ್ನು ಹಾಕಲಾಗಿದೆ. ಯಾವ ರಾಜಕಾಲುವೆ ಎಷ್ಟು ಪ್ರಮಾಣದಲ್ಲಿ ಒತ್ತುವರಿಯಾಗಿದೆ, ಯಾವ ಸರ್ವೆ ಸಂಖ್ಯೆಯಿಂದ ಈ ಅತಿಕ್ರಮಣ ನಡೆದಿದೆ ಎಂಬ ವಿವರವನ್ನು ಅದರಲ್ಲಿ ಹಾಕಲಾಗಿದೆ.ಸದ್ಯದ ವ್ಯವಸ್ಥೆಯಲ್ಲಿ ವಾರ್ಡ್‌ವಾರು ವಿವರ ಸುಲಭವಾಗಿ ವೀಕ್ಷಣೆಗೆ ಸಿಗುತ್ತಿಲ್ಲ. ಪ್ರತಿಯೊಂದು ನಕ್ಷೆಯನ್ನೂ ಹುಡುಕುತ್ತಾ ಹೋಗಬೇಕು. ಇದರಿಂದ ಯಾವುದೇ ಒಂದು ನಿಶ್ಚಿತ ಸರ್ವೆ ಸಂಖ್ಯೆಯ ಸದ್ಯದ ಸ್ಥಿತಿ ತಿಳಿಯುವುದು ಕಷ್ಟವಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.ಈ ಸಂಬಂಧ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್‌ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ, ‘ಭೂದಾಖಲೆ ಇಲಾಖೆಯಿಂದ ಸಿಕ್ಕ ವಿವರವನ್ನು ಶನಿವಾರ ಯಥಾವತ್ತಾಗಿ ವೆಬ್‌ಸೈಟ್‌ನಲ್ಲಿ ಹಾಕಿದ್ದೇವೆ. ನಮ್ಮ ಕಂದಾಯ ವಿಭಾಗದ ಅಧಿಕಾರಿಗಳು ಪ್ರತಿಯೊಂದು ವಾರ್ಡ್‌ಗೆ ಸಂಬಂಧಿಸಿದ ವಿವರವನ್ನು ಪ್ರತ್ಯೇಕ ಮಾಡುತ್ತಿದ್ದಾರೆ. ಭಾನುವಾರ ಸಂಜೆ ವೇಳೆಗೆ ಈ ಕಾರ್ಯ ಮುಗಿಯಲಿದ್ದು, ಸೋಮವಾರದಿಂದ ವಾರ್ಡ್‌ವಾರು ಮಾಹಿತಿ ಸಹ ಲಭ್ಯವಾಗಲಿದೆ’ ಎಂದು ವಿವರಿಸಿದರು.ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್‌) ಆಧಾರದಿಂದ ಸಿದ್ಧಪಡಿಸಲಾದ ರಾಜಕಾಲುವೆಗಳ ಡಿಜಿಟಲ್‌ ನಕ್ಷೆಯನ್ನೂ ವೆಬ್‌ಸೈಟ್‌ಗೆ ಹಾಕಲಾಗುತ್ತಿದ್ದು, ಇದರಿಂದ ಸಾರ್ವಜನಿಕರು ಆಸ್ತಿ ಖರೀದಿಸುವಾಗ ಅದರ ಸಾಚಾತನ ಪರೀಕ್ಷಿಸುವುದು ಸುಲಭವಾಗಲಿದೆ. ಯಾವುದೇ ಸರ್ವೆ ಸಂಖ್ಯೆಗೆ ಸಂಬಂಧಿಸಿದ ಆಸ್ತಿ ಎಲ್ಲಿದೆ, ಯಾವುದಾದರೂ ಒತ್ತುವರಿ ಆಗಿದೆಯೇ ಎಂಬುದನ್ನು ಜನ ನೇರವಾಗಿ ಪರೀಕ್ಷಿಸಬಹುದು’ ಎಂದರು.‘ಪ್ರತಿ ರಾಜಕಾಲುವೆಯ ಸಮಗ್ರ ದಾಖಲೆಗಳನ್ನು ಜಿಐಎಸ್‌ನಲ್ಲಿ ಹಾಕಲಾಗುತ್ತದೆ. ಖರೀದಿ ಮಾಡಲು ಉದ್ದೇಶಿಸಿರುವ ಆಸ್ತಿ ಮೇಲ್ನೋಟಕ್ಕೆ ರಾಜಕಾಲುವೆ ಸರಹದ್ದಿನಲ್ಲಿ ಬರುತ್ತದೆ ಎಂದೆನಿಸಿದರೆ ಕಂದಾಯ ವಿಭಾಗದ ಅಧಿಕಾರಿಗಳನ್ನು ಸಂಪರ್ಕಿಸಿ ಹೆಚ್ಚಿನ ವಿವರ ಪಡೆಯಬಹುದು. ಆಗ ಆಸ್ತಿಗೆ ಸಂಬಂಧಿಸಿದ ಸ್ಪಷ್ಟತೆ ಸಿಗುತ್ತದೆ.ನಕ್ಷೆ ನೋಡುವುದು ಹೇಗೆ?

ಬಿಬಿಎಂಪಿ ವೆಬ್‌ಸೈಟ್‌ನಲ್ಲಿ http://164.100.133.91/rajkalve ಎಂಬ ಲಿಂಕ್‌ ನೀಡಲಾಗಿದೆ. ಆ ಲಿಂಕ್‌ ಪ್ರವೇಶಿಸಿದರೆ ನಕ್ಷೆಗಳಿರುವ ಫೋಲ್ಡರ್‌ಗಳು ತೆರೆದುಕೊಳ್ಳುತ್ತವೆ. ನಮಗೆ ಬೇಕಾದ ಪ್ರದೇಶದ ನಕ್ಷೆಯನ್ನು ತೆರೆದರೆ, ಆ ರಾಜಕಾಲುವೆಯಲ್ಲಿ ಯಾವ ಪ್ರದೇಶ ಒತ್ತುವರಿ ಆಗಿದೆ ಎಂಬುದನ್ನು ಗುರುತಿಸಲಾಗಿದೆ.

ನಗರದ ಎಲ್ಲ ರಾಜಕಾಲುವೆಗಳಿಗೆ ಸಂಬಂಧಿಸಿದ ನಕ್ಷೆಗಳು ಇಲ್ಲಿದ್ದು, ಒತ್ತುವರಿಯನ್ನು ಸಾರ್ವಜನಿಕರು ಸ್ವಯಂಪ್ರೇರಣೆಯಿಂದ ತೆರವುಗೊಳಿಸಬೇಕು. ಇಲ್ಲದಿದ್ದರೆ ಬಿಬಿಎಂಪಿಯೇ ಕಾರ್ಯಾಚರಣೆ ನಡೆಸಲಿದೆ ಎಂದು ಆಯುಕ್ತರು ಮಾಹಿತಿ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.