ಬುಧವಾರ, ಮೇ 12, 2021
26 °C

ಕಾಲುವೆ ನೀರಿಗಾಗಿ ಐದನೇ ದಿನವೂ ಮುಂದುವರಿದ ಸತ್ಯಾಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕೋಡಿ: ಕಬ್ಬೂರ ಉಪಕಾಲುವೆಯ ಕೊನೆಯಂಚಿನ ಗ್ರಾಮಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ಇಲ್ಲಿನ ಕರ್ನಾಟಕ ನೀರಾವರಿ ನಿಗಮದ ಕಚೇರಿ ಎದುರು ಕೃಷಿಕರು ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಐದನೇ ದಿನಕ್ಕೆ ಕಾಲಿಟ್ಟಿದ್ದು, ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಶನಿವಾರದಿಂದ ಕಚೇರಿಗೆ ಬೀಗ ಹಾಕಿ ಉಗ್ರ ಪ್ರತಿಭಟನೆ ಆರಂಭಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ನಿಗಮದ ಜಿಆರ್‌ಬಿಸಿ ವಿಭಾಗ ನಂ-4ರ ಎಇ ಎಸ್.ಜೆ. ಧಣೇಂದ್ರಕುಮಾರ, ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಮಳೆಗಾಲ ವಿಫಲವಾದ ಹಿನ್ನೆಲೆಯಲ್ಲಿ ಕಾಲುವೆಯ ಕೊನೆಯ ಗ್ರಾಮಗಳಿಗೆ ನಿಯಮಿತವಾಗಿ ನೀರು ಸರಬರಾಜು ಮಾಡಲು ಆಗುತ್ತಿಲ್ಲ. ಆದರೂ, ರೈತರ ಬೇಡಿಕೆಯಂತೆ ಕಾಲುವೆಯ 38ನೇ ಕಿ.ಮೀ.ವರೆಗೆ ನೀರು ಹರಿಸಲಾಗುತ್ತಿದೆ ಎಂದರು. ಕಾಲುವೆಯುದ್ದಕ್ಕೂ ರಾತ್ರಿ ವೇಳೆ ರೈತರೇ ಅನಧಿಕೃತವಾಗಿ ಪಂಪಸೆಟ್‌ಗಳನ್ನು ಅಳವಡಿಸಿ ನೀರು ಎತ್ತುತ್ತಿರುವ ಹಿನ್ನೆಲೆಯಲ್ಲಿ ಕೊನೆಯಂಚಿನ ಗ್ರಾಮಗಳಿಗೆ ನೀರು ತಲುಪುತ್ತಿಲ್ಲ. ಸದ್ಯ ಪೊಲೀಸ್ ಸಿಬ್ಬಂದಿ ಗಣೇಶ ಉತ್ಸವ ಬಂದೋಬಸ್ತ್‌ನಲ್ಲಿ ಇದ್ದು, ಹಬ್ಬ ಮುಗಿದ ತಕ್ಷಣವೇ ಪೊಲೀಸರು ಮತ್ತು ಹೆಸ್ಕಾಂ ಅಧಿಕಾರಿಗಳ ಸಹಯೋಗದೊಂ ದಿಗೆ ಅನಧಿಕೃತ ಪಂಪಸೆಟ್‌ಗಳನ್ನು ತೆರವುಗೊಳಿಸಿ, ಕಾಲುವೆಯ ಕೊನೆಯ ಗ್ರಾಮಗಳಿಗೂ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.ಆದರೆ, ಕಾಲುವೆಯ 38ನೇ ಕಿ.ಮೀ. ವರೆಗೆ ನೀರು ಹರಿಸಲಾಗುತ್ತಿದೆ ಎಂಬ ಎಂಜಿನಿಯರ್ ಹೇಳಿಕೆ ಸತ್ಯಕ್ಕೆ ದೂರವಾಗಿದ್ದು, ಅಲ್ಲಿಯವರೆಗೆ ನೀರು ಹರಿಸಲಾಗುತ್ತಿಲ್ಲ. ತಮ್ಮ ಬೇಡಿಕೆಯನ್ನು ಈಡೇರಿಸುವ ತನಕ ಪ್ರತಿಭಟನೆ ಮುಂದುವರಿಯಲಿದೆ. ಅಧಿಕಾರಿಗಳು ಸಮರ್ಪಕವಾಗಿ ನೀರು ಹರಿಸುವ ನಿಟ್ಟಿನಲ್ಲಿ ಕಾಳಜಿ ಪೂರ್ವಕವಾಗಿ ಕೆಲಸ ಮಾಡುತ್ತಿಲ್ಲ. ಅಧಿಕಾರಿಗಳ ಕುಮ್ಮಕ್ಕಿನಿಂದಲೇ ಕೆಲವು ರೈತರು ಕಾಲುವೆಗೆ ಅನಧಿಕೃತವಾಗಿ ಪಂಪಸೆಟ್‌ಗಳನ್ನು ಅಳವಡಿಸಿದ್ದಾರೆ. ಕೊನೆಯ ಕೊನೆವರೆಗೆ ನೀರು ಹರಿಸಲು ಆಗದಿದ್ದಲ್ಲಿ ಕಾಲುವೆಗಳನ್ನು ಮುಚ್ಚಿ ಹಾಕಬೇಕು ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.ರಾಮಗೌಡ ಪಾಟೀಲ, ನಿಂಗಪ್ಪಾ ಮಗದುಮ್ಮ, ಬಾಳಪ್ಪ ಮಗದುಮ್ಮ, ಬಸಪ್ಪ ಪಾಟೀಲ, ಈರಪ್ಪ ಸದಲಗಿ, ಈರಪ್ಪ ಮಗದುಮ್ಮ, ಸಂಗಪ್ಪ ದೇಸಾಯಿ, ರೇವಪ್ಪಾ ಪಾಟೀಲ, ಸದಾಶಿವ ಮಗದುಮ್ಮ, ನಿಂಗಪ್ಪ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.