ಗುರುವಾರ , ಜನವರಿ 23, 2020
28 °C

ಕಾಲೇಜು ರಂಗ ಚಳವಳಿಗೆ ಹೊಸ ಆಯಾಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ರಾಷ್ಟ್ರದಲ್ಲಿಯೇ ಕಾಲೇಜು ರಂಗಭೂಮಿಯ ದೊಡ್ಡ ಚಳವಳಿಯನ್ನು ರೂಪಿಸಿದ ಕೀರ್ತಿ ಭಾರತ ಯಾತ್ರಾ ಕೇಂದ್ರಕ್ಕೆ ಸಲ್ಲುತ್ತದೆ~ ಎಂದು ಹಿರಿಯ ಸಾಹಿತಿ ಎಚ್.ಎಸ್.ಶಿವಪ್ರಕಾಶ್ ಹೇಳಿದರು.ನಗರದ ಸಂಸ ಬಯಲು ರಂಗ ಮಂದಿರದಲ್ಲಿ ಬುಧವಾರ ನಡೆದ ಭಾರತ ಯಾತ್ರಾ ಕೇಂದ್ರದ ಅಂತರ ಕಾಲೇಜು ರಂಗಸ್ಪರ್ಧೆಗಳ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, `ಕೇಂದ್ರವು 25 ವರ್ಷಗಳಿಂದ ಕಾಲೇಜು ರಂಗಭೂಮಿಗೆ ಪೋಷಣೆ ನೀಡುತ್ತಾ ಬಂದಿದೆ. ನಾನು ಕಂಡಂತೆ ಭಾರತದಲ್ಲಷ್ಟೇ ಅಲ್ಲ, ವಿದೇಶಗಳಲ್ಲಿಯೂ ಈ ರೀತಿಯ ಕಾಲೇಜು ರಂಗ ಚಳವಳಿ ಇಷ್ಟು ಯಶಸ್ಸನ್ನು ಕಂಡಿಲ್ಲ. ಇಂತಹ ಅಪರೂಪದ ಕೆಲಸವನ್ನು ಭಾರತ ಯಾತ್ರಾ ಕೇಂದ್ರ ಮಾಡುತ್ತಾ ಬಂದಿದೆ. ಅದೆಷ್ಟೋ ಉತ್ತಮ ಪ್ರತಿಭೆಗಳು ಈ ಕಾಲೇಜು ರಂಗ ಸ್ಪರ್ಧೆಗಳ ಮೂಲಕ ಬೆಳೆದು ಬಂದಿದ್ದಾರೆ~ ಎಂದರು.ಜೆಡಿ(ಎಸ್) ನಾಯಕ ಪಿ.ಜಿ.ಆರ್.ಸಿಂಧ್ಯ ಮಾತನಾಡಿ, `ಅಲ್ಪ ಕಾಲ ಪ್ರಧಾನಿಯಾಗಿದ್ದ ಚಂದ್ರಶೇಖರ್ ಅವರು ಕಟ್ಟಿದ ಭಾರತ ಯಾತ್ರಾ ಕೇಂದ್ರ ಅನೇಕ ಯುವ ಪ್ರತಿಭೆಗಳ ಬೆಳೆವಣಿಗೆಗೆ ನೀರೆರೆದಿದೆ. ಅದನ್ನು ಕರ್ನಾಟಕದಲ್ಲಿ ಯಶಸ್ವಿಯಾಗಿ ಮುಂದುವರೆಸಿಕೊಂಡು ಹೋಗಲಾಗುತ್ತಿದೆ. ಯುವ ಪ್ರತಿಭೆಗಳಿಗೆ ವೇದಿಕೆ ಒದಗಿಸಿ ಕೊಡುವ ಕಾಲೇಜು ರಂಗಭೂಮಿಯ ಕಾರ್ಯ ಉತ್ತಮವಾದದ್ದು~ ಎಂದರು.ಚಲನಚಿತ್ರ ನಿರ್ದೇಶಕ ಟಿ.ಎನ್.ಸೀತಾರಾಮ್ ಮಾತನಾಡಿ, `ಭ್ರಷ್ಟಾಚಾರದ ಬಗ್ಗೆ ದೇಶವೇ ಭ್ರಮನಿರಸನಗೊಂಡ ಸಂದರ್ಭದಲ್ಲಿ ನಡೆದ ಅಣ್ಣಾ ಹಜಾರೆ ಹೋರಾಟಕ್ಕೆ ಹೆಚ್ಚಿನ ಬೆಂಬಲ ವ್ಯಕ್ತವಾಗಿದ್ದು ಯುವ ಜನರಿಂದ. ಯುವ ಜನತೆ ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಹುದು. ಎಲ್ಲಾ ಕ್ಷೇತ್ರಗಳೂ ಭ್ರಷ್ಟಗೊಳ್ಳುತ್ತಿರುವ ಸಂದರ್ಭದಲ್ಲಿ ಇಂದಿನ ಯುವ ಜನತೆ ಮೌಲ್ಯಗಳನ್ನು ಉಳಿಸಿಕೊಳ್ಳುವ ಭರವಸೆಯಾಗಿದ್ದಾರೆ. ದೇಶದಲ್ಲಿ ಹೊಸ ಕಾಮನಬಿಲ್ಲು ಯುವ ಜನತೆಯಿಂದ ಮೂಡುತ್ತಿದೆ~ ಎಂದರು.ವಿಜಯನಗರ ಎಎಸ್‌ಸಿ ಕಾಲೇಜಿನ ವಿದ್ಯಾರ್ಥಿಗಳು ವಿವಿಧ ಜನಪದ ರೂಪಕಗಳನ್ನು ಬಳಸಿ ಸಂಸ ಬಯಲು ಮಂದಿರವನ್ನು ಕಿನ್ನರ ಲೋಕವನ್ನಾಗಿಸಿದರು. ಕಂಸಾಳೆ, ಡೊಳ್ಳು ಕುಣಿತ, ಕೀಲು ಕುದುರೆ, ನಂದಿಧ್ವಜ, ಸೋಮನ ಕುಣಿತ, ಪೂಜಾ ಕುಣಿತಗಳ ಮೂಲಕ ಜಾನಪದ ಕೊಲಾಜ್ ರೂಪಿಸಿದರು. ಬಸವನಗುಡಿಯ ಬಿಎಂಎಸ್ ಕಾಲೇಜಿನ ವಿದ್ಯಾರ್ಥಿಗಳು `ಮಲೆಮಹದೇಶ್ವರ ಕಾವ್ಯ~ದ ಸಾಲು ಹಾಡಿದರು.ಇದೇ ತಿಂಗಳ 9 ರಿಂದ 25 ರ ವರೆಗೆ ನಡೆದ ಅಂತರ ಕಾಲೇಜು ರಂಗ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಪ್ರಮುಖವಾಗಿ ನಾಟಕ ಸೇರಿದಂತೆ ಗಾಯನ, ಚಿತ್ರಕಲೆ, ಚರ್ಚಾ ಸ್ಪರ್ಧೆ, ನೃತ್ಯ ವಿಭಾಗಗಳಲ್ಲಿ ಸ್ಪರ್ಧೆ ನಡೆಸಲಾಗಿತ್ತು.ಮಲ್ಲೇಶ್ವರಂನ ಎಂಇಎಸ್ ಕಾಲೇಜಿನ ವಿದ್ಯಾರ್ಥಿಗಳು ಅಭಿನಯಿಸಿದ `ಮೂರು ಕಾಸಿನ ಸಂಗೀತ ನಾಟಕ~ ನಾಟಕಕ್ಕೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಪಾರಿತೋಷಕ ಲಭಿಸಿತು. ಪ್ರಯೋಗರಂಗ ಪಾರಿತೋಷಕವನ್ನು ಶೇಷಾದ್ರಿಪುರಂ ಕಾಲೇಜು ವಿದ್ಯಾರ್ಥಿಗಳು ಅಭಿನಯಿಸಿದ `ಮೀಡಿಯಾ~ ನಾಟಕಕ್ಕೆ ಹಾಗೂ ಶಂಕರ್‌ನಾಗ್ ಪಾರಿತೋಷಕ ಮಲ್ಲೇಶ್ವರಂನ ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಕಾಲೇಜು ವಿದ್ಯಾರ್ಥಿಗಳು ಅಭಿನಯಿಸಿದ `ರಾಮಧಾನ್ಯ~ ನಾಟಕಕ್ಕಾಗಿ ಪಡೆದುಕೊಂಡರು.ಜ್ಞಾನಭಾರತಿ ಪಾರಿತೋಷಕವನ್ನು ಎಂಇಎಸ್ ಕಾಲೇಜು ವಿದ್ಯಾರ್ಥಿಗಳು ಹಾಗೂ ಉಮೇಶ್‌ರುದ್ರ ಪಾರಿತೋಷಕವನ್ನು ವಿಜಯನಗರದ ಎಎಸ್‌ಸಿ ಕಾಲೇಜಿನ ವಿದ್ಯಾರ್ಥಿಗಳು ಪಡೆದುಕೊಂಡರು.

ಸಮಾರಂಭದಲ್ಲಿ ಚಲನಚಿತ್ರ ನಿರ್ದೇಶಕ ಬಿ.ಸುರೇಶ್, ನೃತ್ಯ ಕಲಾವಿದೆ ವೈಜಯಂತಿ ಕಾಶಿ, ಭಾರತ ಯಾತ್ರಾ ಕೇಂದ್ರದ ಪ್ರಧಾನ ಕಾರ್ಯದರ್ಶಿ ಕೆ.ವಿ.ನಾಗರಾಜಮೂರ್ತಿ, ಶೈಲಜಾ ವಿ. ಸೋಮಣ್ಣ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)