ಗುರುವಾರ , ಜೂನ್ 24, 2021
27 °C

ಕಾಳಜಿಯಲ್ಲಿ ಪ್ರಾಮಾಣಿಕತೆ ಇರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಲ್ಪಸಂಖ್ಯಾತರ ಕಲ್ಯಾಣದ ಉದ್ದೇಶ ಹೊಂದಿರುವ ಕಾರ್ಯಕ್ರಮಗಳಿಗೇನೂ ಕೊರತೆ ಇಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ರೂಪಿಸಿರುವ ಇಂತಹ ಕಾರ್ಯಕ್ರಮಗಳೆಲ್ಲವೂ ಜಾರಿಗೆ ಬಂದಿದ್ದರೆ ಅಲ್ಪಸಂಖ್ಯಾತರು ಪ್ರಗತಿಯ ತುತ್ತತುದಿಯಲ್ಲಿರಬೇಕಿತ್ತು.

 

ವಾಸ್ತವ ಸ್ಥಿತಿ ಹಾಗೆ ಇಲ್ಲ. ಅಲ್ಪಸಂಖ್ಯಾತರು ಅದರಲ್ಲೂ ಮುಖ್ಯವಾಗಿ ಮುಸ್ಲಿಮರು ಶೈಕ್ಷಣಿಕವಾಗಿ, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ತೀರಾ ಹಿಂದುಳಿದಿದ್ದಾರೆ. ಇದನ್ನು ಕೇಂದ್ರ ಸರ್ಕಾರವೇ ನೇಮಿಸಿದ್ದ ನ್ಯಾ.ರಾಜೇಂದ್ರ ಸಾಚಾರ್ ಸಮಿತಿ ಆಧಾರಗಳ ಸಮೇತ ದೇಶದ ಮುಂದೆ ತೆರೆದಿಟ್ಟಿದೆ. ಅದರ ಪ್ರಕಾರ 6ರಿಂದ 14ರ ವರೆಗಿನ ವಯಸ್ಸಿನ ಮುಸ್ಲಿಂ ಮಕ್ಕಳಲ್ಲಿ ಶೇಕಡಾ 25ರಷ್ಟು ಮಕ್ಕಳು ಶಾಲೆಯ ಮುಖವನ್ನೇ ನೋಡಿಲ್ಲ.ಪದವೀಧರರು ಮತ್ತು ಡಿಪ್ಲೊಮಾ ಶಿಕ್ಷಣ ಪಡೆದವರ ರಾಷ್ಟ್ರೀಯ ಸರಾಸರಿ ಶೇಕಡಾ ಏಳರಷ್ಟಿದ್ದರೆ ಮುಸ್ಲಿಮರಲ್ಲಿ ಇದು ಶೇಕಡಾ ನಾಲ್ಕು ಮಾತ್ರ. 20 ಮುಸ್ಲಿಂ ಯುವಕರಲ್ಲಿ ಒಬ್ಬ ಮಾತ್ರ ಸ್ನಾತಕೋತ್ತರ ಪದವಿ ಪಡೆದಿರುತ್ತಾನೆ. ಈ ವರದಿಯನ್ನು ನ್ಯಾ.ಸಾಚಾರ್ ಅವರು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿ ಆರು ವರ್ಷಗಳಾಗುತ್ತಾ ಬಂದಿದೆ.

 

ಶಿಕ್ಷಣ ಮತ್ತು ಉದ್ಯೋಗದ ಕ್ಷೇತ್ರಗಳಲ್ಲಿ ಮೀಸಲಾತಿ ನೀಡಬೇಕು, ಯುಜಿಸಿ ಹಣವನ್ನು ಬಳಸಿಕೊಳ್ಳುವ ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳ ಪ್ರವೇಶದಲ್ಲಿ ಅಲ್ಪಸಂಖ್ಯಾತರಿಗೆ ಅವಕಾಶ ಕಲ್ಪಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿ ವೇತನಗಳನ್ನು ಸ್ಥಾಪಿಸಬೇಕು ಮೊದಲಾದ ಶಿಫಾರಸುಗಳನ್ನು ನ್ಯಾ.ಸಾಚಾರ್ ಸಮಿತಿ ಮಾಡಿದೆ.ತಾನೇ ನೇಮಿಸಿದ್ದ ಸಮಿತಿಯ ವರದಿಯನ್ನು ಯುಪಿಎ ಸರ್ಕಾರ ಇಲ್ಲಿಯ ವರೆಗೆ ಅನುಷ್ಠಾನಕ್ಕೆ ತಂದಿಲ್ಲ.ಹೀಗಿದ್ದರೂ ಕೇಂದ್ರದ ಯುಪಿಎ ಸರ್ಕಾರ ಆಶ್ವಾಸನೆಗಳನ್ನು ನೀಡುವುದನ್ನಾಗಲಿ, ಅಲ್ಪಸಂಖ್ಯಾತರ ನಿಜವಾದ ಹಿತೈಷಿ ತಾನೆಂಬುದನ್ನು ಪ್ರದರ್ಶಿಸುವುದನ್ನಾಗಲಿ ನಿಲ್ಲಿಸಿಲ್ಲ. ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಅಲ್ಪಸಂಖ್ಯಾತರಿಗೆ ಉದ್ಯೋಗ ಮತ್ತು ಶಿಕ್ಷಣದ ಕ್ಷೇತ್ರಗಳಲ್ಲಿ ಮೀಸಲಾತಿ ನೀಡುವುದಾಗಿ ಘೋಷಿಸಿ ಹೊಸ ವಿವಾದವೊಂದನ್ನು ಸೃಷ್ಟಿಸಿತ್ತು.ಈಗ ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವ ಕಪಿಲ್ ಸಿಬಲ್ ಅವರು ಅಲ್ಪಸಂಖ್ಯಾತರ ಶಿಕ್ಷಣದ ಯೋಜನೆಗಳನ್ನು ಜಾರಿಗೆ ತರುವಲ್ಲಿ ರಾಜ್ಯಸರ್ಕಾರಗಳು ವಿಫಲವಾಗಿವೆ ಎಂಬ ಹೊಸ ಕ್ಯಾತೆ ತೆಗೆದಿದ್ದಾರೆ.  ಇದಕ್ಕಾಗಿ ಅಲ್ಪಸಂಖ್ಯಾತ ಶಿಕ್ಷಣ ಕುರಿತ ರಾಷ್ಟ್ರೀಯ ನಿಗಾ ಮಂಡಳಿ ಐದು ಉಪಸಮಿತಿಗಳನ್ನು ರಚಿಸಲಿದೆ ಎಂದೂ ಅವರು ಹೇಳಿದ್ದಾರೆ.ಶಿಕ್ಷಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಹೆಚ್ಚಿನ ಯೋಜನೆಗಳು ರಾಜ್ಯಸರ್ಕಾರದ ಮೂಲಕವೇ ಜಾರಿಗೊಳ್ಳಬೇಕಾಗಿರುವುದರಿಂದ ಈ ರೀತಿಯ ಮೇಲ್ವಿಚಾರಣೆಯ ಕ್ರಮ ಸರಿಯಾಗಿಯೇ ಇದೆ. ಆದರೆ ಇದು ತಮ್ಮ ವೈಫಲ್ಯದ ಹೊರೆಯನ್ನು ಮತ್ತೊಬ್ಬರ ಹೆಗಲಿಗೆ ವರ್ಗಾಯಿಸುವ ತಂತ್ರ ಆಗಬಾರದು. ಕೇಂದ್ರ ಮತ್ತು ರಾಜ್ಯಸರ್ಕಾರಗಳೆರಡೂ ಕೂಡಿ ಈ ಯೋಜನೆಗಳ ಜಾರಿಗೆ ಪ್ರಯತ್ನಿಸಬೇಕು.

 

ರಾಜ್ಯಗಳಿಗೆ ಬುದ್ದಿಹೇಳುವ ಮೊದಲು ಕೇಂದ್ರ ಸರ್ಕಾruರ ತನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು. ಮುಸ್ಲಿಮರ ಕಲ್ಯಾಣದ ಬಗ್ಗೆ ಕೇಂದ್ರ ಸರ್ಕಾರ ನಿಜವಾದ ಕಾಳಜಿ ಹೊಂದಿದ್ದರೆ ಮೊದಲು ನ್ಯಾ.ರಾಜೇಂದ್ರ ಸಾಚಾರ್ ಸಮಿತಿ ವರದಿಯನ್ನು ಜಾರಿಗೊಳಿಸಬೇಕು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.