ಕಾಳ್ಗಿಚ್ಚು

ದಟ್ಟವಾದ ಒಂದು ಕಾಡಿನಲ್ಲಿ ಅಕ್ಕಪಕ್ಕ ಬೆಳೆದ ಎರಡು ದೊಡ್ಡ ಮರಗಳು ತುಂಬಾ ಸ್ನೇಹಿತರಾಗಿದ್ದವು. ತಮ್ಮ ರೆಂಬೆ ಕೊಂಬೆಗಳನ್ನು ಒಂದಕ್ಕೊಂದು ಬೆಸೆದುಕೊಂಡು ಅನ್ಯೋನ್ಯವಾಗಿರುತ್ತಿದ್ದವು.
ಹೊಟ್ಟೆಕಿಚ್ಚಿನ ಗಾಳಿರಾಯರಿಗೆ ಇವರಿಬ್ಬರ ಸ್ನೇಹವನ್ನು ಕಂಡು ಸಹಿಸಲಾಗಲಿಲ್ಲ. ಇವರ ಸಂಬಂಧವನ್ನು ಹೇಗಾದರೂ ಮಾಡಿ ಕೆಡಿಸಬೇಕೆಂದು, ಆ ಮರಗಳ ಬಳಿ ಒಬ್ಬರ ಮೇಲೆ ಒಬ್ಬರಿಗೆ ಗುಟ್ಟಾಗಿ ಚಾಡಿ ಹೇಳಿ ಮರಗಳ ಮನಸ್ಸಿನಲ್ಲಿ ಹುಳಿ ಹಿಂಡಿದ.
ಹೀಗಾಗಿ ಗಾಳಿರಾಯ ಬೀಸಿ ಬಂದ ಕೂಡಲೇ ಮರಗಳು ಪರಸ್ಪರ ಜಗಳವಾಡಲಾರಂಭಿಸಿದವು. ಅನ್ಯೋನ್ಯವಾಗಿ ಹೆಣೆದುಕೊಂಡಿದ್ದ ಕೊಂಬೆಗಳು ಈಗ ದ್ವೇಷದಿಂದ ಒಂದಕ್ಕೊಂದು ತಿಕ್ಕಿ ತಳ್ಳಾಡಿಕೊಳ್ಳುತ್ತಾ ಬಿಸಿಯಾಗತೊಡಗಿದವು.
ಗಾಳಿರಾಯ ಇಷ್ಟಕ್ಕೇ ಸುಮ್ಮನಾಗಲಿಲ್ಲ ಕಾಡಿನ ಉಳಿದ ಮರಗಳ ಬಳಿಯೂ ಹೋಗಿ ಇವರಿಬ್ಬರ ಜಗಳದ ಸುದ್ದಿಯನ್ನು ಬಿತ್ತರಿಸಿದ. ಈಗ ಕಾಡಿನ ಮರಗಳಲ್ಲೂ ಎರಡು ಬಣಗಳಾಗಿ, ತಮ್ಮಳಗೆ ತಾವೇ ಒಂದೊಂದು ಮರಗಳ ಪರವಹಿಸಿ ಜಗಳವಾಡಿಕೊಳ್ಳಲಾರಂಭಿಸಿದವು.
ಒಂದು ಬೇಸಗೆಯ ದಿನ, ಮಟ ಮಟ ಮಧ್ಯಾಹ್ನದ ಉರಿಬಿಸಿಲಿನಲ್ಲಿ ಗಾಳಿರಾಯ ಜೋರಾಗಿ ಬೀಸಿಕೊಂಡು ಬಂದು ಈ ಮರಗಳ ಕಿವಿ ಊದಿದ. ಮೊದಲೇ ದ್ವೇಷದಿಂದ ಕುದಿಯುತ್ತಿದ್ದ ಮರಗಳು ಈಗ ಪರಸ್ಪರ ಘರ್ಷಿಸುತ್ತಾ ಜೋರಾಗಿ ಹೊಡೆದಾಡಲಾರಂಭಿಸಿದವು.
ಅವುಗಳ ಘರ್ಷಣೆಯಿಂದ, ಒಂದಕ್ಕೊಂದು ತಾಗಿಕೊಂಡಿದ್ದ ಕೊಂಬೆಗಳ ಮಧ್ಯೆ ಬಿಸಿಯೇರಿ ಕಿಡಿಗಳೆದ್ದವು. ಸ್ವಲ್ಪ ಹೊತ್ತಿನಲ್ಲಿಯೇ ಕಿಡಿ ಜೋರಾಗಿ ಸಿಡಿದು ಮರಗಳಿಗೆ ಬೆಂಕಿ ಹೊತ್ತಿಕೊಂಡಿತು. ಗಾಳಿರಾಯ ಖುಶಿಯಿಂದ ಕಾಡಿನ ತುಂಬಾ ಬೀಸಿಕೊಂಡು ನಡೆದ.
ಮೊದಲೇ ಜಗಳದಿಂದ ಬಿಸಿಯೇರಿಕೊಂಡಿದ್ದ ಉಳಿದ ಮರಗಳಿಗೂ ಬೆಂಕಿಯ ಜ್ವಾಲೆಯನ್ನು ತಾಗಿಸಿಬಿಟ್ಟ. ಬೆಂಕಿ ಈಗ ಇಡೀ ಕಾಡಿಗೇ ವ್ಯಾಪಿಸಿಕೊಂಡು ಕಾಡು ಜೋರಾಗಿ ಹೊತ್ತಿಕೊಂಡು ಉರಿಯತೊಡಗಿತು. ದಿನ ಕಳೆಯುವಷ್ಟರಲ್ಲಿ ಎಲ್ಲಾ ಮರಗಳೂ ಸುಟ್ಟು ಕರಕಲಾಗಿ ಕಾಡು ಒಣಗಿ ನಿಂತಿತ್ತು.
ತಂಪಾಗಿದ್ದ ಕಾಡಿನಡಿಯಲ್ಲಿ ದ್ವೇಷದ ಬೆಂಕಿ ಹೊತ್ತಿಸಿ, ಇಡೀ ಕಾಡನ್ನೇ ಸುಟ್ಟು ಬೂದಿ ಮಾಡಿದ ಹೊಟ್ಟೆಕಿಚ್ಚಿನ ಗಾಳಿರಾಯ ಈಗ ಇನ್ನೊಂದು ಕಾಡನ್ನು ಹುಡುಕಿಕೊಂಡು ಹೊರಟಿದ್ದಾನೆ. ಪರಸ್ಪರ ಸ್ನೇಹದಿಂದ ಬಾಳುತ್ತಿರುವ ಮರಗಳೇ.... ಹುಷಾರಾಗಿರಿ....! ಈ ಗಾಳಿರಾಯನ ಸಲ್ಲದ ಸುದ್ದಿಗಳಿಗೆ ಕಿವಿಗೊಟ್ಟು, ಮನಸ್ಸು ಕೆಡಿಸಿಕೊಂಡು, ದ್ವೇಷದ ಬೆಂಕಿಗೆ ಸಿಲುಕಿ ಬೂದಿಯಾಗದಿರಿ!
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.